ನಿತಿನ್ ಜೊತೆ ಎರಡು ಗಂಟೆ ಅಷ್ಟೆ ಚಿತ್ರೀಕರಣ: ತೆಲುಗು ಸಿನಿಮಾ ಬಗ್ಗೆ ಸಪ್ತಮಿ ಮಾತು
Sapthami Gowda: ‘ಕಾಂತಾರ’ ಸಿನಿಮಾನಲ್ಲ ನಟಿಸಿ ಜನಪ್ರಿಯತೆಗಳಿಸಿರುವ ನಟಿ ಸಪ್ತಮಿ ಗೌಡ ಈಗಾಗಲೇ ಒಂದು ಬಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ಇದೀಗ ಸಪ್ತಮಿ ಗೌಡ ತೆಲುಗು ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಸಪ್ತಮಿ ಗೌಡ ‘ತಮ್ಮುಡು’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಅವರ ಪಾತ್ರಕ್ಕೆ ಸಾಕಷ್ಟು ಪ್ರಾಧಾನ್ಯತೆ ಇದೆ. ಇದೀಗ ತಮ್ಮ ಮೊದಲ ತೆಲುಗು ಸಿನಿಮಾ ಬಗ್ಗೆ ಸಪ್ತಮಿ ಗೌಡ ಮಾತನಾಡಿದ್ದಾರೆ.

‘ಕಾಂತಾರ’ ಬೆಡಗಿ ಸಪ್ತಮಿ ಗೌಡ (Sapthami Gowda) ಈಗಾಗಲೇ ಬಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾನಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ಸಪ್ತಮಿ ಗೌಡ ಅವರು ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಪ್ತಮಿ ಪಾತ್ರಕ್ಕೆ ಸಾಕಷ್ಟು ಪ್ರಾಧಾನ್ಯತೆ ಇರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ. ಇದೀಗ ನಟಿ ಸಪ್ತಮಿ ಗೌಡ ತಮ್ಮ ಮೊದಲ ತೆಲುಗು ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತೆಲುಗಿನ ಸ್ಟಾರ್ ನಟ ನಿತಿನ್ ನಟನೆಯ ‘ತಮ್ಮುಡು’ ಸಿನಿಮಾನಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಹಳ್ಳಿ ಯುವತಿಯ ಪಾತ್ರ ಅವರದ್ದು. ಸಪ್ತಮಿಯ ಹೊರತಾಗಿ ಸಿನಿಮಾನಲ್ಲಿ ಇನ್ನೂ ಇಬ್ಬರು ನಾಯಕಿಯರಿದ್ದಾರೆ. ವರ್ಷಾ ಬೊಮ್ಮಲ ಮತ್ತು ಲಾಯಲ. ಆದರೆ ಈಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಸಪ್ತಮಿ ಗೌಡ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರುವುದು ತಿಳಿಯುತ್ತಿದೆ. ಇತರೆ ನಾಯಕಿಯರನ್ನು ಹಾಡು, ಗ್ಲಾಮರ್ಗಾಗಿ ಬಳಸಿಕೊಂಡಂತೆ ತೋರುತ್ತಿದೆ. ಸ್ವಸಿಕಾ ವಿಜಯ್, ನಿತಿನ್ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದಾರೆ.
ತಮ್ಮ ಮೊದಲ ತೆಲುಗು ಸಿನಿಮಾ ಬಗ್ಗೆ ಮಾತನಾಡಿರುವ ಸಪ್ತಮಿ ಗೌಡ, ‘ಸಿನಿಮಾದ ನಾಯಕಿ ಆದರೂ ಸಹ ನಟ ನಿತಿನ್ ಜೊತೆಗೆ ನನ್ನ ದೃಶ್ಯಗಳು ಬಹಳ ಕಡಿಮೆ ಇವೆ. ಕೇವಲ ಎರಡು ಗಂಟೆಗಳ ಕಾಲ ಮಾತ್ರವೇ ನಾವಿಬ್ಬರೂ ಒಟ್ಟಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆವು. ನನಗೆ ನಿತಿನ್ ಅವರನ್ನು ಸರಿಯಾಗಿ ಮಾತನಾಡಿಸಲು ಸಹ ಆಗಲಿಲ್ಲ. ಆದರೆ ಸಿನಿಮಾ ಕತೆಯಲ್ಲಿ ನನ್ನದು ಬಹಳ ಪ್ರಮುಖವಾದ ಪಾತ್ರ. ಕತೆಗೆ ತಿರುವು ನೀಡುವ ಪಾತ್ರ ನನ್ನದಾಗಿದೆ’ ಎಂದಿದ್ದಾರೆ ಸಪ್ತಮಿ ಗೌಡ.
ಇದನ್ನೂ ಓದಿ:ತೆಲುಗಿಗೆ ಕಾಲಿಟ್ಟ ಸಪ್ತಮಿ ಗೌಡ, ಮೊದಲ ಸಿನಿಮಾನಲ್ಲೇ ಪವರ್ಫುಲ್ ಪಾತ್ರ
‘ಕಾಂತಾರ’ ಸಿನಿಮಾ ಬಿಡುಗಡೆ ಆದ ಬಳಿಕ ‘ತಮ್ಮುಡು’ ಚಿತ್ರತಂಡದವರು ಅವಕಾಶ ನೀಡಿದ್ದರು. 2022 ರಲ್ಲಿಯೇ ನಾನು ಆ ಸಿನಿಮಾಕ್ಕೆ ಸಹಿ ಹಾಕಿದ್ದೆ. ‘ಕಾಂತಾರ’ ಸಿನಿಮಾ ನೋಡಿ ನನ್ನನ್ನು ಆಯ್ಕೆ ಮಾಡಿದ್ದರೂ ಸಹ ನಾನು ಕಠಿಣವಾದ ಸ್ಕ್ರೀನ್ ಟೆಸ್ಟ್ ಅನ್ನು ನೀಡಿ ಪಾತ್ರಕ್ಕೆ ಆಯ್ಕೆ ಆದೆ. ಆದರೆ ನಾನಾ ಕಾರಣಗಳಿಂದಾಗಿ ಸಿನಿಮಾ ತಡವಾಗುತ್ತಲೇ ಬಂತು. ಅದು ಒಂದು ರೀತಿ ಒಳ್ಳೆಯದೇ ಆಯಿತು. ಈಗ ಬಿಡುಗಡೆಗೆ ಸೂಕ್ತವಾದ ಸಮಯ ಇದೆ.
‘ತಮ್ಮುಡು’ ಸಿನಿಮಾವನ್ನು ಶ್ರೀರಾಮ್ ವೇಣು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದರು. ‘ತಮ್ಮುಡು’ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದ ಬಗ್ಗೆ ಭಾರಿ ಬಜ್ ಸೃಷ್ಟಿ ಆಗಿರಲಿಲ್ಲ ಆದರೆ ಟ್ರೈಲರ್ ಬಿಡುಗಡೆ ಬಳಿಕ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಸಪ್ತಮಿಯ ಮೊದಲ ತೆಲುಗು ಸಿನಿಮಾ ಏನಾಗುತ್ತದೆ ಕಾದು ನೋಡಬೇಕಿದೆ. ಸಿನಿಮಾ ಜುಲೈ 4 ರಂದು ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




