ತೆಲುಗಿಗೆ ಕಾಲಿಟ್ಟ ಸಪ್ತಮಿ ಗೌಡ, ಮೊದಲ ಸಿನಿಮಾನಲ್ಲೇ ಪವರ್ಫುಲ್ ಪಾತ್ರ
Sapthami Gowda: ನಟಿ ಸಪ್ತಮಿ ಗೌಡ ‘ಕಾಂತಾರ’ ಸಿನಿಮಾ ಮೂಲಕ ದೇಶದಾದ್ಯಂತ ಖ್ಯಾತಿ ಗಳಿಸಿದರು. ಆ ಬಳಿಕ ಪರಭಾಷೆಗಳಿಂದಲೂ ಅವರಿಗೆ ಆಫರ್ಗಳು ಬರಲು ಆರಂಭವಾದವು. ಸಪ್ತಮಿ ಗೌಡ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಪ್ತಮಿ ಗೌಡ ನಟಿಸಿರುವ ಮೊದಲ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಪ್ತಮಿಗೆ ಪವರ್ಫುಲ್ ಪಾತ್ರವೇ ಅವರಿಗೆ ಸಿಕ್ಕಿದೆ...

ಸಪ್ತಮಿ ಗೌಡ, ‘ಕಾಂತಾರ’ (Kanthara) ಸಿನಿಮಾದಿಂದಾಗಿ ದೇಶದೆಲ್ಲೆಡೆ ಜನಪ್ರಿಯತೆ ಪಡೆದಿದ್ದಾರೆ. ತಮ್ಮ ನಟನೆಯಿಂದ ಸದ್ದು ಮಾಡುತ್ತಿರುವ ಸುಂದರಿ ಸಪ್ತಮಿ ಗೌಡ, ಕನ್ನಡದ ಹೊರತಾಗಿ ಪರಭಾಷೆಗಳಲ್ಲಿಯೂ ಸಹ ನಟಿಸುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಸಿನಿಮಾನಲ್ಲಿ ನಟಿಸಿ ಬಂದಿರುವ ನಟಿ ಸಪ್ತಮಿ ಗೌಡ, ಇದೀಗ ನೆರೆಯ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಸಪ್ತಮಿ ಗೌಡ ನಟನೆಯ ಮೊದಲ ತೆಲುಗು ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಮೊದಲ ಸಿನಿಮಾನಲ್ಲಿಯೇ ಪವರ್ಫುಲ್ ಪಾತ್ರ ಅವರಿಗೆ ದೊರೆತಿದೆ.
‘ಜಯಂ’ ಖ್ಯಾತಿಯ ನಿತಿನ್ ನಟನೆಯ ‘ತಮ್ಮುಡು’ ಸಿನಿಮಾನಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ (ಜೂನ್ 11) ಬಿಡುಗಡೆ ಆಗಿದ್ದು, ಟ್ರೈಲರ್ನಲ್ಲಿ ಸಪ್ತಮಿ ಗೌಡ ಅವರ ಪಾತ್ರವೇ ಸಖತ್ ಹೈಲೆಟ್ ಆಗಿದೆ. ‘ತಮ್ಮುಡು’ ಸಿನಿಮಾನಲ್ಲಿ ಸಪ್ತಮಿ ಗೌಡ, ಬುಡಕಟ್ಟು ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಊರಿನ ಜನರನ್ನು ಕಾಪಾಡಲು ನಾಯಕನಿಗೆ ನೆರವಾಗುವ ಪಾತ್ರದಂತೆ ಟ್ರೈಲರ್ ನಲ್ಲಿ ತೋರುತ್ತಿದೆ. ಸಪ್ತಮಿ ಗೌಡ, ಆಕ್ಷನ್ ದೃಶ್ಯಗಳಲ್ಲಿ ಸಹ ನಟಿಸಿದ್ದು, ಸಪ್ತಮಿಯ ಕೆಲವು ‘ಹೀರೋಯಿಕ್’ ಮಾದರಿಯ ದೃಶ್ಯಗಳು ಟ್ರೈಲರ್ನಲ್ಲಿವೆ.
ಇದನ್ನೂ ಓದಿ:ಲೀಲಾ ಲುಕ್ನಲ್ಲೇ ಟಾಲಿವುಡ್ಗೆ ಹಾರಿದ ನಟಿ ಸಪ್ತಮಿ ಗೌಡ
ಅಕ್ಕ-ತಮ್ಮನ ನಡುವಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಅಕ್ಕ ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗುವ ನಾಯಕ. ಅವನಿಗೆ ಜೊತೆಯಾಗಿ ನಿಲ್ಲುವ ಪಾತ್ರಗಳ ಸುತ್ತ ಕತೆ ನಡೆಯುತ್ತದೆ ಎಂಬುದು ಟ್ರೈಲರ್ನಿಂದ ತಿಳಿದು ಬರುತ್ತಿದೆ. ಅಂದಹಾಗೆ ಈ ಸಿನಿಮಾನಲ್ಲಿ ಇರುವ ಇಬ್ಬರು ನಾಯಕಿಯರೂ ಕನ್ನಡದವರೇ. ಸಪ್ತಮಿ ಗೌಡ ಮಾತ್ರವೇ ಅಲ್ಲದೆ, ಕೊಡಗಿನ ಬೆಡಗಿ ವರ್ಷಾ ಬೊಲ್ಲಮ್ಮ ಸಹ ನಟಿಸಿದ್ದಾರೆ. ಸಪ್ತಮಿ ಹಾಗೂ ವರ್ಷಾ ಇಬ್ಬರೂ ಈ ಸಿನಿಮಾಕ್ಕೆ ನಾಯಕಿಯರು. ನಾಯಕನ ಅಕ್ಕನ ಪಾತ್ರದಲ್ಲಿ ಸಾಸ್ವಿಕಾ ನಟಿಸಿದ್ದಾರೆ.
ಈ ಹಿಂದೆ ಸಿದ್ಧಾರ್ಥ್, ಶ್ರುತಿ ಹಾಸನ್ ನಟನೆಯ ‘ಓ ಮೈ ಫ್ರೆಂಡ್’, ನಾನಿ, ಸಾಯಿ ಪಲ್ಲವಿಯ ‘ಮಿಡಲ್ ಕ್ಲಾಸ್ ಅಬ್ಬಾಯಿ’, ಪವನ್ ಕಲ್ಯಾಣ್ ನಟನೆಯ ‘ವಕೀಲ್ ಸಾಬ್’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವೇಣು ಶ್ರೀರಾಮ್ ಅವರು ‘ತಮ್ಮುಡು’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಕ್ಕೆ ದಿಲ್ ರಾಜು, ಸಿರೀಶ್ ಮತ್ತು ರವಿ ಸುರ್ನಿರೆಡ್ಡಿ ಬಂಡವಾಳ ತೊಡಗಿಸಿದ್ದಾರೆ. ಸಿನಿಮಾ ಜುಲೈ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




