AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ವೇತಾ ಮೆನನ್ ವಿರುದ್ಧ ಮತ್ತೊಮ್ಮೆ ಪಿತೂರಿ? ‘ಅಮ್ಮ’ ಸಂಘಟನೆಯ ಸಾಮೂಹಿಕ ರಾಜೀನಾಮೆಗೆ ಅಸಲಿ ಕಾರಣ ಬಯಲು

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಅಧ್ಯಕ್ಷೆ ಶ್ವೇತಾ ಮೆನನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸ್ವಗೌರವಕ್ಕಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ, ಯಾರ ಕೈಗೊಂಬೆಯಾಗಲು ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣೆಗೆ ಮುನ್ನ ಸುಳ್ಳು ಆರೋಪಗಳು ಎದುರಾಗಿದ್ದರೂ ಬಹುಪಾಲು ಸದಸ್ಯರ ಬೆಂಬಲ ಗಳಿಸಿದ್ದರು. ಹಳೆಯ ಸಮಿತಿಯ ಆರ್ಥಿಕ ಲೆಕ್ಕಾಚಾರಗಳನ್ನು ಸಂಪೂರ್ಣ ಮರುಪರಿಶೀಲಿಸಿ, ಫೋರೆನ್ಸಿಕ್ ಆಡಿಟ್ ನಡೆಸುವಂತೆ ಶ್ವೇತಾ ಒತ್ತಾಯಿಸಿದ್ದಾರೆ.

ಶ್ವೇತಾ ಮೆನನ್ ವಿರುದ್ಧ ಮತ್ತೊಮ್ಮೆ ಪಿತೂರಿ? ‘ಅಮ್ಮ’ ಸಂಘಟನೆಯ ಸಾಮೂಹಿಕ ರಾಜೀನಾಮೆಗೆ ಅಸಲಿ ಕಾರಣ ಬಯಲು
ಶ್ವೇತಾ ಮೆನನ್
ರಾಜೇಶ್ ದುಗ್ಗುಮನೆ
|

Updated on: Jun 24, 2026 | 2:47 PM

Share

ಮುಖ್ಯಾಂಶಗಳು

  • ಯಾರ ಕೈಗೊಂಬೆಯಾಗಲು ಇಷ್ಟವಿಲ್ಲದೆ ಶ್ವೇತಾ ರಾಜೀನಾಮೆ
  • ಹಣಕಾಸು ವ್ಯವಹಾರಗಳ ಫೋರೆನ್ಸಿಕ್ ಆಡಿಟ್‌ಗೆ ಆಗ್ರಹ
  • ಚುನಾವಣೆ ಸಮಯದಿಂದಲೇ ಇವರ ವಿರುದ್ಧ ಪಿತೂರಿ ನಡೆದಿತ್ತು

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಅಧ್ಯಕ್ಷೆ ಶ್ವೇತಾ ಮೆನನ್ ಸೇರಿದಂತೆ ಇಡೀ ಕಾರ್ಯಕಾರಿ ಸಮಿತಿ ಜೂನ್ 21ರ ಭಾನುವಾರ ಒಟ್ಟಿಗೆ ರಾಜೀನಾಮೆ ನೀಡಿತ್ತು. ಈ ಹಠಾತ್ ಬೆಳವಣಿಗೆಯ ನಂತರ ನಟಿ ಶ್ವೇತಾ ಮೆನನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಸ್ವಗೌರವಕ್ಕಾಗಿ ರಾಜೀನಾಮೆ ನೀಡಿದ್ದೇನೆಯೇ ಹೊರತು ದೌರ್ಬಲ್ಯದಿಂದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು. ಆದರೆ ನನ್ನ ಮಾತುಗಳನ್ನು ಸಾರ್ವಜನಿಕರ ಮುಂದೆ ಇಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ಯಾರ ಕೈಗೊಂಬೆಯಾಗಲು ಇಷ್ಟಪಡದ ಕಾರಣ ರಾಜೀನಾಮೆ ನೀಡಿದ್ದೇನೆ. ಚುನಾವಣೆಗೂ ಮುನ್ನವೇ ಕೆಲವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹರಡಿದ್ದರು. ಆದರೂ ಬಹುಪಾಲು ಸದಸ್ಯರ ಬೆಂಬಲದಿಂದ ನಾನು ಚುನಾವಣೆಯಲ್ಲಿ ಗೆದ್ದಿದ್ದೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಕೆಲಸ ಮಾಡಿದ್ದೇನೆ’ ಎಂದು ಶ್ವೇತಾ ಬರೆದುಕೊಂಡಿದ್ದಾರೆ.

ಲೆಕ್ಕಪರಿಶೋಧನೆಗೆ ಆಗ್ರಹ:

‘ಹಳೆಯ ಸಮಿತಿಯ ಕೆಲ ಸದಸ್ಯರ ತಪ್ಪುಗಳನ್ನು ತನಿಖೆ ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮಗೆ ಅವಕಾಶ ನೀಡಲಿಲ್ಲ. ಕಳೆದ ಎರಡು ಅವಧಿಯ ಹಣಕಾಸಿನ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಬೇಕು. ಇದರಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಫೋರೆನ್ಸಿಕ್ ಆಡಿಟ್ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ರಾಜಕೀಯ ಲಿಂಕ್ ಇಲ್ಲ:

ತಮ್ಮ ರಾಜೀನಾಮೆ ಕುರಿತಾದ ವದಂತಿಗಳನ್ನು ಶ್ವೇತಾ ಮೆನನ್ ತಳ್ಳಿಹಾಕಿದ್ದಾರೆ. ತಾವು ಬಿಜೆಪಿ ಅಥವಾ ಎಡಪಂಥೀಯ ಯಾವುದೇ ಪಕ್ಷದ ಪರವಾಗಿಲ್ಲ ಎಂದು ಹೇಳಿದ್ದಾರೆ. ತಮ್ಮ ನಿರ್ಧಾರ ಸ್ವತಂತ್ರವಾದುದು ಎಂದಿದ್ದಾರೆ. ‘ನನ್ನ ನಿರ್ಧಾರ ದೌರ್ಬಲ್ಯದಿಂದ ಬಂದಿದ್ದಲ್ಲ. ಅದು ನನ್ನ ಸ್ವಗೌರವದ ಪ್ರಶ್ನೆ. ಕಥೆ ಇನ್ನು ಮುಗಿದಿಲ್ಲ’ ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ.

ಹಳೆಯ ಪ್ರಕರಣಗಳ ಅಡ್ಡಿ:

ಶ್ವೇತಾ ಮೆನನ್ ಅವರು ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೂ ಕಾನೂನು ಸಂಕಷ್ಟ ಎದುರಿಸುತ್ತಿದ್ದರು. ಅವರ ವಿರುದ್ಧ ಅಶ್ಲೀಲತೆಯ ಪ್ರಕರಣ ದಾಖಲಿಸಲಾಗಿತ್ತು. ಹತ್ತು ವರ್ಷಗಳ ಹಿಂದೆ ಮಾಡಿದ ಕೆಲಸಕ್ಕೆ ಈಗ ಪ್ರಕರಣ ದಾಖಲಿಸಿರುವ ಉದ್ದೇಶದ ಬಗ್ಗೆ ಅವರು ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅಶ್ಲೀಲ ಸಿನಿಮಾದಲ್ಲಿ ನಟಿಸಿದ ಆರೋಪ ಹೊತ್ತರೂ ಚುನಾವಣೆಯಲ್ಲಿ ಗೆದ್ದ ನಟಿ ಶ್ವೇತಾ ಮೆನನ್

ಇತ್ತೀಚೆಗೆ ದೇವಸ್ಥಾನದ ಟ್ರಸ್ಟ್ ಒಂದರ ಪ್ರಾಯೋಜಕತ್ವ ಪಡೆದಿದ್ದಕ್ಕೆ ಈ ಸಂಘಟನೆ ಭಾರಿ ಟೀಕೆ ಎದುರಿಸಿತ್ತು. ಆಗ ಸಂಘಟನೆಯ ಪರವಾಗಿ ಮಾತನಾಡಿದ್ದ ಶ್ವೇತಾ ಮೆನನ್, ಇದು ಚಾರಿಟೇಬಲ್ ಸಂಸ್ಥೆಯಾಗಿರುವುದರಿಂದ ರಾಜಕೀಯ ಅಥವಾ ಧಾರ್ಮಿಕ ಹಿನ್ನೆಲೆ ನೋಡಿ ಧನಸಹಾಯವನ್ನು ತಿರಸ್ಕರಿಸಬಾರದು ಎಂದು ಸಮರ್ಥಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us