ನಟಿ ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ; ದಿವ್ಯಾ-ಹೇಮಂತ್ ಕಲ್ಯಾಣ
ನಟಿ ಭವ್ಯಾ ಗೌಡ ಅವರ ಹಿರಿಯ ಸಹೋದರಿ ದಿವ್ಯಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಿಗ್ ಬಾಸ್ ಶೋನ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಕುಮಾರ್ ಜೊತೆ ದಿವ್ಯಾ ಮದುವೆ ನಡೆದಿದ್ದು, ಅದ್ದೂರಿ ರಿಸೆಪ್ಶನ್‌ನಲ್ಲಿ ನಟ ಧನುಷ್ ಗೌಡ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

ಮುಖ್ಯಾಂಶಗಳು
- ಭವ್ಯಾ ಗೌಡ ಮನೆಯಲ್ಲಿ ಕಲ್ಯಾಣ ಸಂಭ್ರಮ
- ಬಿಗ್ ಬಾಸ್ ಕಾಸ್ಟಿಂಗ್ ಡೈರೆಕ್ಟರ್ ವರಿಸಿದ ಅಕ್ಕ ದಿವ್ಯಾ
- ನವಜೋಡಿಗೆ ಶುಭ ಹಾರೈಸಿದ ನಟ ಧನುಷ್ ಗೌಡ
‘ಗೀತಾ’ ಹಾಗೂ ‘ಕರ್ಣ’ ಖ್ಯಾತಿಯ ನಟಿ ಭವ್ಯಾ ಗೌಡ ಅವರ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಭವ್ಯಾ ಗೌಡ ಅವರ ಹಿರಿಯ ಸಹೋದರಿ ದಿವ್ಯಾ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ದಿವ್ಯಾ ಅವರು ಇಷ್ಟಪಟ್ಟಿರುವ ಹುಡುಗ ಹೇಮಂತ್ ಕುಮಾರ್ ಜೊತೆ ಸಪ್ತಪದಿ ತುಳಿದಿದ್ದಾರೆ.
ದಿವ್ಯಾ ಗೌಡ ಮದುವೆಯಾಗುತ್ತಿರುವ ಹೇಮಂತ್ ಕುಮಾರ್ ಅವರು ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಷ್ಠಿತ ‘ಎಂಡಮೋಲ್ ಶೈನ್’ ಸಂಸ್ಥೆಯಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳು ಹಾಗೂ ಸೀರಿಯಲ್‌ಗಳಿಗೆ ಇವರು ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಭವ್ಯಾ ಗೌಡ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿದ್ದಾಗ ಫ್ಯಾಮಿಲಿ ವೀಕ್‌ನಲ್ಲಿ ಅಕ್ಕ ದಿವ್ಯಾ ಗೌಡ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಬಿಗ್ ಬಾಸ್ ತಂಡದ ಜೊತೆ ಕಾಂಟ್ಯಾಕ್ಟ್‌ನಲ್ಲಿದ್ದಾಗ ದಿವ್ಯಾ ಹಾಗೂ ಹೇಮಂತ್ ನಡುವೆ ಪರಿಚಯವಾಗಿ, ಪ್ರೀತಿ ಚಿಗುರೊಡೆದಿತ್ತು ಎನ್ನಲಾಗಿದೆ. ಇದೀಗ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಈ ಜೋಡಿಯ ಮದುವೆ ಕಾರ್ಯಕ್ರಮಗಳು ಸಾಗುತ್ತಿವೆ.
ದಿವ್ಯಾ ಗೌಡ ಹಾಗೂ ಹೇಮಂತ್ ಕುಮಾರ್ ಅವರ ಅದ್ದೂರಿ ರಿಸೆಪ್ಶನ್ ಕಾರ್ಯಕ್ರಮ ಜರುಗಿದೆ. ಈ ಶುಭ ಸಮಾರಂಭದಲ್ಲಿ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನ ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ. ನಟ ಧನುಷ್ ಗೌಡ ಸೇರಿದಂತೆ ಹಲವು ನಟ-ನಟಿಯರು ಮತ್ತು ಆಪ್ತ ಗೆಳೆಯರು ಆಗಮಿಸಿ ವಿವಾಹ ಆರತಕ್ಷತೆ ಸಮಾರಂಭಕ್ಕೆ ಮೆರಗು ತಂದಿದ್ದಾರೆ.
ಇದನ್ನೂ ಓದಿ: ಅಂದು ಮುದ್ದು ಕಂದಮ್ಮ, ಇಂದು ಕಿರುತೆರೆ ಸುಂದರಿ: ಧೂಳೆಬ್ಬಿಸಿದ ಭವ್ಯಾ ಗೌಡ ಬಾಲ್ಯದ ಫೋಟೋ
ಇತ್ತೀಚೆಗೆ ಹಳದಿ ಮತ್ತು ಮೆಹಂದಿ ಶಾಸ್ತ್ರಗಳು ಗ್ರ್ಯಾಂಡ್ ಆಗಿ ನಡೆದಿವೆ. ಅಕ್ಕನ ಹಳದಿ ಶಾಸ್ತ್ರ ಹಾಗೂ ರಿಸೆಪ್ಶನ್‌ನಲ್ಲಿ ನಟಿ ಭವ್ಯಾ ಗೌಡ ಅವರು ವಿಶೇಷ ಡಿಸೈನರ್ ಉಡುಪಿನಲ್ಲಿ ಮಿಂಚಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಜಾಲತಾಣಗಳಲ್ಲಿ ಈ ಸುಂದರ ಕ್ಷಣಗಳ ಫೋಟೋಗಳು ಭಾರೀ ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




