ಒಂದೇ ವಾರಕ್ಕೆ ಹೊರಬಂದು ಸಂಭಾವನೆ ಬಗ್ಗೆ ಮಾತಾಡಿದ ಕರಿಬಸಪ್ಪ, ಆರ್ಜೆ ಅಮಿತ್
ಬಿಗ್ ಬಾಸ್ ಸ್ಪರ್ಧಿಗಳಿಗೆ ಎಷ್ಟು ಸಂಭಾವನೆ ಸಿಗುತ್ತದೆ ಎಂಬ ಕೌತುಕದ ಪ್ರಶ್ನೆ ಎಲ್ಲರ ಮನದಲ್ಲೂ ಮೂಡುತ್ತದೆ. ಸಾಮಾನ್ಯವಾಗಿ ಮೊದಲ ವಾರಗಳಲ್ಲೇ ಎಲಿಮಿನೇಟ್ ಆಗುವ ಸ್ಪರ್ಧಿಗಳಿಗೆ ಹೆಚ್ಚಿನ ಸಂಭಾವನೆ ಸಿಗುವುದಿಲ್ಲ. ತಮಗೆ ಸಿಕ್ಕಿರುವ ಸಂಭಾವನೆ ಬಗ್ಗೆ ಆರ್ಜೆ ಅಮಿತ್, ಬಾಡಿಬಿಲ್ಡರ್ ಕರಿಬಸಪ್ಪ ಅವರು ಮಾತನಾಡಿದ್ದಾರೆ.

ಕೆಲವೇ ದಿನಗಳ ಹಿಂದೆ ಬಹಳ ಅದ್ದೂರಿಯಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಆರಂಭ ಆಗಿತ್ತು. ನೋಡನೋಡುತ್ತಿದ್ದಂತೆಯೇ ಒಂದು ವಾರ ಕಳೆದುಹೋಗಿದೆ. ಮೊದಲ ಎಲಿಮಿನೇಷನ್ ಕೂಡ ನಡೆದಿದೆ. ಜಂಟಿಯಾಗಿ ಬಿಗ್ ಬಾಸ್ ಮನೆಯಲ್ಲಿ ಆಟ ಆರಂಭಿಸಿದ್ದ ಆರ್ಜೆ ಅಮಿತ್ ಹಾಗೂ ಬಾಡಿ ಬಿಲ್ಡರ್ ಕರಿಬಸಪ್ಪ (Karibasappa) ಅವರು ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದೇ ವಾರ ಇದ್ದ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕುತೂಹಲದ ಪ್ರಶ್ನೆ ವೀಕ್ಷಕರ ಮನದಲ್ಲಿ ಇದೆ. ಆ ಬಗ್ಗೆ ಕರಿಬಸಪ್ಪ ಮತ್ತು ಅಮಿತ್ (RJ Amith) ಅವರು ಮಾತನಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಿಂದ ಹೊರಬಂದ ಬಳಿಕ ಟಿವಿ9 ಜೊತೆ ಕರಿಬಸಪ್ಪ ಮತ್ತು ಆರ್ಜೆ ಅಮಿರ್ ಅವರು ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಸಂಭಾವನೆ ಬಗ್ಗೆ ಪ್ರಶ್ನೆ ಎದುರಾಯಿತು. ಕೇವಲ ಒಂದು ವಾರ ಇದ್ದಿದ್ದರಿಂದ ಅವರಿಬ್ಬರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿಲ್ಲ. ಅದನ್ನು ಅವರಿಬ್ಬರು ಒಪ್ಪಿಕೊಂಡಿದ್ದಾರೆ.
‘ಸಂಭಾವನೆ ಸಾಧಾರಣ ಆಗಿದೆ. ಓಕೆ, ಅಷ್ಟೇನೂ ಜಾಸ್ತಿ ಇಲ್ಲ’ ಎಂದು ಆರ್ಜೆ ಅಮಿತ್ ಅವರು ಹೇಳಿದ್ದಾರೆ. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಅಮಿತ್ ಮತ್ತು ಕರಿಬಸಪ್ಪ ಅವರು ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ. ಹಾಗಾಗಿ ಅವರನ್ನು ನಾಮಿನೇಟ್ ಮಾಡಲಾಯಿತು. ಅಂತಿಮವಾಗಿ ಅವರಿಬ್ಬರೇ ಎಲಿಮಿನೇಟ್ ಆಗುವಂತಾಯಿತು. ಒಂದು ವೇಳೆ ಮತ್ತೆ ವೈಲ್ಡ್ ಕಾರ್ಡ್ ಮೂಲಕ ಅವಕಾಶ ಸಿಕ್ಕರೆ ಬಿಗ್ ಬಾಸ್ ಮನೆ ಪ್ರವೇಶಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
‘ಆ ರೀತಿಯ ಸಂಭಾವನೆ ಏನೂ ಇಲ್ಲ. ನನಗೆ ಅವಕಾಶ ಕೊಟ್ಟಿದ್ದೇ ದೊಡ್ಡದು. ನನ್ನ ಪುಣ್ಯ ಅದು’ ಎಂದು ಕರಿಬಸಪ್ಪ ಅವರು ಹೇಳಿದ್ದಾರೆ. ವೈಲ್ಡ್ ಕಾರ್ಡ್ ಸಾಧ್ಯತೆ ಬಗ್ಗೆ ಅವರು ಉತ್ತರಿಸಿದ್ದಾರೆ. ‘ಮತ್ತೆ ಕರೆದರೆ ಖಂಡಿತವಾಗಿ ಹೋಗುತ್ತೇನೆ. ನಾಳೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಚಾನ್ಸ್ ಸಿಕ್ಕರೆ, ಹಳೇ ರೀತಿ ಅಲ್ಲ ಬೇರೆ ರೀತಿ ಭಾಗವಹಿಸುತ್ತೇನೆ’ ಎಂದಿದ್ದಾರೆ ಕರಿಬಸಪ್ಪ.
ಇದನ್ನೂ ಓದಿ: ಬ್ಯೂಟಿ ಪ್ರದರ್ಶನಕ್ಕೆ ಸ್ಪಂದನಾ ಬಿಗ್ ಬಾಸ್ ಮನೆಗೆ ಬಂದಿದ್ದಾರೆ: ಕರಿಬಸಪ್ಪ ಟೀಕೆ
ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದರು. ಆದರೆ ಅವರನ್ನು ಸೀಕ್ರೆಟ್ ರೂಮ್ನಲ್ಲಿ ಇರಿಸಲಾಗಿತ್ತು. ಮೊದಲ ವಾರದ ಕೊನೆಯಲ್ಲಿ ಅವರನ್ನು ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಳಿಸಲಾಯಿತು. ಅವರು ಈಗ 2ನೇ ಚಾನ್ಸ್ ಪಡೆದಿದ್ದು ಹೇಗೆ ಆಟ ಮುಂದುವರಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



