ಸೀರಿಯಲ್​, ಸಿನಿಮಾ ಬಳಿಕ ಶ್ರೀಮಹದೇವ್ ಇನ್ನೊಂದು ಪ್ರಯತ್ನ; ಹೊಸಬರ ಜತೆ ‘Saturday ನೈಟಲಿ’​ ಸಾಂಗ್​

ಸೀರಿಯಲ್​, ಸಿನಿಮಾ ಬಳಿಕ ಶ್ರೀಮಹದೇವ್ ಇನ್ನೊಂದು ಪ್ರಯತ್ನ; ಹೊಸಬರ ಜತೆ ‘Saturday ನೈಟಲಿ’​ ಸಾಂಗ್​
ಪೂಜಾ, ಶ್ರೀಮಹದೇವ್​. ‘Saturday ನೈಟಲಿ’ ಹಾಡು ಬಿಡುಗಡೆ ಕಾರ್ಯಕ್ರಮ

ನಟ ಶ್ರೀಮಹದೇವ್​ ಅವರು ಇದೇ ಮೊದಲ ಬಾರಿಗೆ ಮ್ಯೂಸಿಕ್​ ವಿಡಿಯೋದಲ್ಲಿ ನಟಿಸಿದ್ದಾರೆ. ‘ಪ್ರಣವ್​ ಆಡಿಯೋ’ ಮೂಲಕ ಈ ಹಾಡು ರಿಲೀಸ್​ ಆಗಿದೆ.

TV9kannada Web Team

| Edited By: Madan Kumar

May 09, 2022 | 4:10 PM

ನಟ ಶ್ರೀಮಹದೇವ್​ (Shri Mahadev) ಅವರು ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ‘ಚಿಟ್ಟೆ ಹೆಜ್ಜೆ’, ‘ಶ್ರೀರಸ್ತು ಶುಭಮಸ್ತು’, ‘ಇಷ್ಟ ದೇವತೆ’ ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾಗಿದೆ. ಹಾಗಂತ ಅವರು ಕೇವಲ ಕಿರುತೆರೆಗೆ ಮಾತ್ರ ಸೀಮಿತ ಆಗಿಲ್ಲ. ಸಿನಿಮಾರಂಗದಲ್ಲೂ ನಟಿಸಿ ಪ್ರೇಕ್ಷಕರ ಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೇಘನಾ ರಾಜ್​ ಜೊತೆ ಅವರು ನಟಿಸಿದ್ದ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಶ್ರೀಮಹದೇವ್​ ನಟನೆಯ ‘ಗಜಾನನ ಆ್ಯಂಡ್​ ಗ್ಯಾಂಗ್​’ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ನಡುವೆಯೇ ಅವರು ಇನ್ನೊಂದು ಹೊಸ ಪ್ರಯತ್ನ ಮಾಡಿದ್ದಾರೆ. ಹೊಸ ತಂಡದ ಜೊತೆ ಸೇರಿಕೊಂಡು ಒಂದು ಮ್ಯೂಸಿಕ್​ ವಿಡಿಯೋ (ಆಲ್ಬಂ ಸಾಂಗ್​) ಮಾಡಿದ್ದಾರೆ. ಇದಕ್ಕೆ ‘Saturday ನೈಟಲಿ’ (Saturday Nightly) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಮ್ಯೂಸಿಕ್​ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಶ್ರೀಮಹದೇವ್​ ಅವರು ಹೊಸ ಹುರುಪಿನೊಂದಿಗೆ ಕ್ಯಾಮೆರಾ ಎದುರಿಸಿದ್ದಾರೆ. ‘ಪ್ರಣವ್​ ಆಡಿಯೋ’ (Pranav Audio) ಮೂಲಕ ಈ ಹಾಡು ಬಿಡುಗಡೆ ಆಗಿದೆ.

​ಸಿನಿಮಾ ಗೀತೆಗಳು ಮಾತ್ರವಲ್ಲದೇ ಈ ರೀತಿ ಮ್ಯೂಸಿಕ್​ ವಿಡಿಯೋಗಳು ಕೂಡ ಜನರನ್ನು ಭರಪೂರ ರಂಜಿಸುತ್ತವೆ. ಆ ಉದ್ದೇಶದಿಂದ ಅನೇಕ ಆಡಿಯೋ ಕಂಪನಿಗಳು ಕಾರ್ಯಾರಂಭ ಮಾಡುತ್ತಿವೆ. ಆ ಸಾಲಿಗೆ ‘ಸಂತೃಪ್ತಿ ಕಂಬೈನ್ಸ್’ ಅವರ ‘ಪ್ರಣವ್ ಆಡಿಯೋ’ ಕಂಪನಿ ಸಹ ಸೇರ್ಪಡೆ ಆಗಿವೆ. ಈ ಆಡಿಯೋ ಕಂಪನಿಯ ಮೊದಲ ಹೆಜ್ಜೆಯಾಗಿ ‘Saturday ನೈಟಲಿ’ ಹಾಡು ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಸಮರ್ಥನಂ ಸಂಸ್ಥೆಯ ಮಹಂತೇಶ್ ಮುಖ್ಯ ಅತಿಥಿಗಳಾಗಿ ಬಂದು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ಹಾಡಿನಲ್ಲಿ ಶ್ರೀ ಮಹದೇವ್​ ಅವರಿಗೆ ಜೋಡಿಯಾಗಿ ಹೊಸ ನಟಿ ಪೂಜಾ ಅವರು ಹೆಜ್ಜೆ ಹಾಕಿದ್ದಾರೆ. ಶ್ರೀ ಮಹದೇವ್​ ಅವರಿಂದ ಅನೇಕ ವಿಷಯಗಳನ್ನು ಕಲಿತಿರುವುದಾಗಿ ಪೂಜಾ ಹೇಳಿದ್ದಾರೆ. ಸಿದ್ದಾರ್ಥ್ ಹಾಡು ಬರೆದು ನಿರ್ಮಾಣ ಮಾಡಿದ್ದಾರೆ.  ಪ್ರೇಮ್ ಭರತ್ ಸಂಗೀತ, ನಾಗರಾಜ್ ಛಾಯಾಗ್ರಹಣ, ಶ್ರೇಯಸ್​ ಭೈರವ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ. ಈ ಗೀತೆಯನ್ನು ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ.

‘Saturday ನೈಟಲಿ’ ಹಾಡಿಗೆ ನಿರ್ದೇಶನ ಮಾಡಿರುವ ರವಿಕುಮಾರ್​ ಸೇರಿದಂತೆ ಇದಕ್ಕಾಗಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಹೊಸಬರು. ಮುಂದೆ ಸಿನಿಮಾ ನಿರ್ದೇಶನ ಮಾಡುವ ಗುರಿಯನ್ನು ರವಿಕುಮಾರ್​ ಇಟ್ಟುಕೊಂಡಿದ್ದಾರೆ. ಅದೇ ರೀತಿ ಸಿನಿಮಾ ನಿರ್ಮಾಪಕನಾಗುವ ಕನಸು ಸಿದ್ದಾರ್ಥ್​ ಅವರಿಗೆ ಇದೆ. ಹವ್ಯಾಸಕ್ಕಾಗಿ ಹಾಡುಗಳಿಗೆ ಸಾಹಿತ್ಯ ಬರೆಯುವ ಅವರು ಈಗ ಮೊದಲ ಹಾಡನ್ನು ಹೊರತಂದಿದ್ದಾರೆ. ಬೆಂಗಳೂರಿನ ಎಂಜಿ ರಸ್ತೆ ಮತ್ತು ಚರ್ಚ್​ ರಸ್ತೆಯಲ್ಲಿ ಈ ಹಾಡಿನ ಶೂಟಿಂಗ್​ ಮಾಡಲಾಗಿದೆ.

‘ವಿರೂಪಾಕ್ಷ ಅವರು ಹೊಸ ಆಡಿಯೋ ಕಂಪನಿ ಮಾಡಿದ್ದಕ್ಕೆ ಅಭಿನಂದನೆಗಳು. ಇದರಿಂದ ತಮ್ಮಂಥ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಸಹಾಯ ಆಗುತ್ತದೆ. ನನ್ನ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡುಗಳನ್ನು ಕೂಡ ಉಮೇಶ್​ ಬಣಕಾರ್​ ಅವರು ಬಿಡುಗಡೆ ಮಾಡಿದ್ದರು. ಈಗ ಮತ್ತೆ ಅವರಿಂದ ನನ್ನ ಮೊದಲ ಆಲ್ಬಂ ಸಾಂಗ್​ ರಿಲೀಸ್​ ಆಗಿದೆ. ಈ ಹೊಸಬರ ತಂಡಕ್ಕೆ ತುಂಬ ಪ್ಯಾಷನ್​ ಇದೆ ಎಂಬುದು ಗೊತ್ತಾಯಿತು. ಹಾಗಾಗಿ ಈ ಟೀಮ್​ ಜೊತೆ ಕೆಲಸ ಮಾಡಲು ಒಪ್ಪಿಕೊಂಡೆ. ಯಾವುದೇ ಕೆಲಸ ಒಬ್ಬರಿಂದ ಸಾಧ್ಯವಾಗಲ್ಲ. ಇಡೀ ಟೀಮ್​ನಿಂದ ಇದೆಲ್ಲವೂ ಸಾಧ್ಯವಾಗಿದೆ. ಪ್ರೇಮ್​ ಭರತ್ ಅವರ ಸಂಗೀತ ನನಗೆ ಇಷ್ಟ ಆಯಿತು. ನಾನು ಒಪ್ಪಿಕೊಳ್ಳಲು ಇದು ಕೂಡ ಒಂದು ಮುಖ್ಯ ಕಾರಣ’ ಎಂದಿದ್ದಾರೆ ಶ್ರೀ ಮಹದೇವ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಇದನ್ನೂ ಓದಿ

Follow us on

Most Read Stories

Click on your DTH Provider to Add TV9 Kannada