ಬಿಗ್ ಬಾಸ್ ಮುಕ್ತಾಯಕ್ಕೆ ಕ್ಷಣಗಣನೆ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಮುಂದೇನು?
Kannada Serials | Colors Kannada: ಈಗಾಗಲೇ ಅನೇಕ ಸೀರಿಯಲ್ಗಳು ಪ್ರಸಾರ ಆಗುತ್ತಿವೆ. ಅವುಗಳ ನಡುವೆ ಹೊಸ ಧಾರಾವಾಹಿಗಳು ಪೈಪೋಟಿ ನೀಡಲು ಬರುತ್ತಿವೆ.
ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಮುಗಿಯುತ್ತಿದೆ. 18 ಸ್ಪರ್ಧಿಗಳಿಂದ ಶುರುವಾದ ಈ ಕಾರ್ಯಕ್ರಮ ಈಗ ಫಿನಾಲೆ ಹಂತಕ್ಕೆ ಬಂದಿದೆ. ಡಿಸೆಂಬರ್ 30 ಮತ್ತು 31ರಂದು ಫಿನಾಲೆ ಸಂಚಿಕೆಗಳು ಪ್ರಸಾರ ಆಗಲಿವೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ದೀಪಿಕಾ ದಾಸ್ ಅವರ ನಡುವೆ ಅಂತಿಮ ಹಣಾಹಣಿ ಏರ್ಪಟ್ಟಿದೆ. ಪ್ರತಿ ದಿನ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗುತ್ತಿತ್ತು. ಈಗ ಈ ಶೋ ಮುಕ್ತಾಯ ಆಗುತ್ತಿರುವುದರಿಂದ ಮುಂದೇನು ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೂ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಪ್ರಸಾರ ಆಗುತ್ತಿದ್ದ ಸಮಯಕ್ಕೆ ಈಗ ಎರಡು ಹೊಸ ಸೀರಿಯಲ್ಗಳು (Kannada Serials) ಬರುತ್ತಿವೆ.
ದಿವ್ಯಾ ಸುರೇಶ್ ನಟನೆಯ ಹೊಸ ಧಾರಾವಾಹಿ:
‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು ಪ್ರಸಾರಕ್ಕೆ ಸಜ್ಜಾಗಿವೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ‘ತ್ರಿಪುರ ಸುಂದರಿ’ ಸೀರಿಯಲ್ ಪ್ರಸಾರ ಆಗಲಿದೆ. ಇದರಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಫ್ಯಾಂಟಸಿ ಕಥಾಹಂದರ ಹೊಂದಿರುವ ಈ ಧಾರಾವಾಹಿಯ ಪ್ರೋಮೋಗಳು ಗಮನ ಸೆಳೆಯುತ್ತಿವೆ.
‘ಪುಣ್ಯವತಿ’ ಸೀರಿಯಲ್ನಲ್ಲಿ ಡ್ಯಾನ್ಸ್ ಕಹಾನಿ:
ರಾತ್ರಿ 10 ಗಂಟೆಗೆ ‘ಪುಣ್ಯವತಿ’ ಧಾರಾವಾಹಿ ಬಿತ್ತರ ಆಗಲಿದೆ. ಡ್ಯಾನ್ಸ್ ಕಲಿತು ಸಾಧನೆ ಮಾಡಬೇಕು ಎಂಬ ಯುವತಿಗೆ ದಾಂಪತ್ಯದ ಅಡ್ಡಿ ಉಂಟಾದರೆ ಏನಾಗುತ್ತದೆ ಎಂಬ ಕಹಾನಿ ಈ ಸೀರಿಯಲ್ನಲ್ಲಿ ಇದೆ ಎಂಬುದಕ್ಕೆ ಪ್ರೋಮೋನಲ್ಲಿ ಸುಳಿವು ಸಿಕ್ಕಿದೆ. ಈ ಧಾರಾವಾಹಿ ಬಗ್ಗೆಯೂ ವೀಕ್ಷಕರಿಗೆ ಕೌತುಕ ಮೂಡಿದೆ.
ಇದನ್ನೂ ಓದಿ: BBK 9 Finale: ಬಿಗ್ ಬಾಸ್ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್
ಈಗಾಗಲೇ ಅನೇಕ ಸೀರಿಯಲ್ಗಳು ಪ್ರಸಾರ ಆಗುತ್ತಿವೆ. ಅವುಗಳ ನಡುವೆ ಹೊಸ ಧಾರಾವಾಹಿಗಳು ಪೈಪೋಟಿ ನೀಡುವುದು ಸುಲಭದ ಮಾತಲ್ಲ. ಕಿರುತೆರೆಯಲ್ಲಿ ಎಲ್ಲ ಧಾರಾವಾಹಿಗಳ ನಡುವೆ ಟಿಆರ್ಪಿ ವಿಚಾರದಲ್ಲಿ ಸಖತ್ ಹಣಾಹಣಿ ಏರ್ಪಟ್ಟಿದೆ. ಈಗ ‘ಪುಣ್ಯವತಿ’ ಮತ್ತು ‘ತ್ರಿಪುರ ಸುಂದರಿ’ ಧಾರಾವಾಹಿಗಳು ಹೇಗೆ ಪ್ರೇಕ್ಷಕರ ಮನ ಗೆಲ್ಲಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಮುಕ್ತಾಯ ಹಂತದಲ್ಲಿ ‘ಕನ್ನಡತಿ’ ಸೀರಿಯಲ್:
ಜನಪ್ರಿಯ ‘ಕನ್ನಡತಿ’ ಸೀರಿಯಲ್ ಈಗ ಮುಕ್ತಾಯದ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಈ ಸೀರಿಯಲ್ ಅಂತ್ಯವಾಗಲಿದೆ. ಈ ಧಾರಾವಾಹಿಯಿಂದ ರಂಜನಿ ರಾಘವನ್ ಮತ್ತು ಕಿರಣ್ ರಾಜ್ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಜನರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಇಷ್ಟು ಸೀಸನ್ಗಳಲ್ಲಿ ಬಿಗ್ ಬಾಸ್ ಗೆದ್ದ ಸ್ಪರ್ಧಿಗಳಿವರು
ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ ‘ಕನ್ನಡತಿ’ ಪ್ರಸಾರ ಅಂತ್ಯವಾಗುತ್ತಿರುವುದು ವೀಕ್ಷಕರಿಗೆ ಬೇಸರ ಮೂಡಿಸಿದೆ. ಈ ಸೀರಿಯಲ್ ಮುಗಿದ ಬಳಿಕ ರಂಜನಿ ರಾಘವನ್ ಮತ್ತು ಕಿರಣ್ ರಾಜ್ ಯಾವ ಪ್ರಾಜೆಕ್ಟ್ ಒಪ್ಪಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.