Vijay Deverakonda Birthday: ಮನೆ ಖರೀದಿಗೆ ಹಣ ಇಲ್ಲದಿದ್ದಾಗ ವಿಜಯ್ ದೇವರಕೊಂಡ ಮಾಡಿದ್ದೇನು?
Vijay Deverakonda: ವಿಜಯ್ ದೇವರಕೊಂಡ ಅವರು ಒಂದು ಮನೆ ಕೊಂಡುಕೊಳ್ಳುವ ಕನಸು ಹೊಂದಿದ್ದರು. ಆ ಕನಸನ್ನು ನನಸು ಮಾಡುವ ಸಲುವಾಗಿ ಅವರು ಹಗಲಿರುಳು ಕಷ್ಟಪಟ್ಟಿದ್ದರು.
ಖ್ಯಾತ ನಟ ವಿಜಯ್ ದೇವರಕೊಂಡ (Vijay Deverakonda) ಅವರು ಈಗ ಸ್ಟಾರ್ ಹೀರೋ ಆಗಿ ಬೆಳೆದಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಗೀತ ಗೋವಿಂದಂ’ ಮುಂತಾದ ಸಿನಿಮಾಗಳಿಂದ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಅವರೀಗ ಬಾಲಿವುಡ್ಗೂ ಕಾಲಿಟ್ಟಿದ್ದಾರೆ. ಅವರಿಗೆ ದೇಶವ್ಯಾಪಿ ಅಭಿಮಾನಿಗಳು ಇದ್ದಾರೆ. ಹಾಗಂತ ವಿಜಯ್ ದೇವರಕೊಂಡ ಅವರು ನಡೆದುಬಂದ ಹಾದಿ ಸುಗಮವಾಗಿ ಇರಲಿಲ್ಲ. ಹಣಕ್ಕಾಗಿ ಅವರು ಕೂಡ ತುಂಬ ಕಷ್ಟಪಟ್ಟಿದ್ದಾರೆ. ತಮಗೆ ಇಷ್ಟ ಇಲ್ಲದಿದ್ದರೂ ಕೂಡ ಕೆಲಸಗಳನ್ನು ಅವರು ಮಾಡಬೇಕಾಗಿತ್ತು. ಇಂದು (ಮೇ 9) ವಿಜಯ್ ದೇವರಕೊಂಡ ಅವರು ಜನ್ಮದಿನ (Vijay Deverakonda Birthday) ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಅವರ ಜೀವನದ ಕುರಿತ ಹಲವು ಘಟನೆಗಳನ್ನು ಮೆಲುಕು ಹಾಕಲಾಗುತ್ತಿದೆ. ವಿಜಯ್ ದೇವರಕೊಂಡ ಅವರಿಗೆ ಈಗ 33 ವರ್ಷ (Vijay Deverakonda Age) ವಯಸ್ಸು. ಜೀವನದಲ್ಲಿ ಒಂದು ಹಂತಕ್ಕೆ ಅವರು ಸೆಟ್ಲ್ ಆಗಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರು ಹಣಕ್ಕಾಗಿ ತುಂಬ ಕಷ್ಟಪಟ್ಟಿದ್ದರು. ಈ ಹಿಂದೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳ ಕುರಿತು ವಿಜಯ್ ದೇವರಕೊಂಡ ಮಾತನಾಡಿದ್ದರು.
2011ರಿಂದಲೂ ವಿಜಯ್ ದೇವರಕೊಂಡ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆರಂಭ ದಿನಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದ ಅವರು 2016ರಲ್ಲಿ ‘ಪೆಳ್ಳಿ ಚೂಪುಲು’ ಚಿತ್ರದ ಮೂಲಕ ಹೀರೋ ಆದರು. ಕೆಲವೇ ವರ್ಷಗಳಲ್ಲಿ ಅವರು ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡರು. 2017ರಲ್ಲಿ ಬಂದ ‘ಅರ್ಜುನ್ ರೆಡ್ಡಿ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ನಂತರ ವಿಜಯ್ ದೇವರಕೊಂಡ ಅವರ ಬದುಕು ಬದಲಾಯಿತು. ಆರಂಭದ ದಿನಗಳಲ್ಲಿ ಅವರು ಒಂದು ಮನೆ ಕೊಂಡುಕೊಳ್ಳುವ ಕನಸು ಹೊಂದಿದ್ದರು. ಆ ಕನಸನ್ನು ನನಸು ಮಾಡುವ ಸಲುವಾಗಿ ಅವರು ಹಗಲಿರುಳು ಕಷ್ಟಪಟ್ಟಿದ್ದರು.
ಅನುಪಮಾ ಚೋಪ್ರಾ ಅವರ ಫಿಲ್ಮ್ ಕಂಪಾನಿಯನ್ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ವೃತ್ತಿಜೀವನದ ಶುರುವಿನಲ್ಲಿ ಕೇವಲ ಹಣಕ್ಕೋಸ್ಕರವೇ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರಂತೆ. ‘ಜೀವನದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಹಣ ಎಂಬುದು ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಕೇಳಿದ ಪ್ರಶ್ನೆಗೆ ವಿಜಯ್ ದೇವರಕೊಂಡ ಈ ರೀತಿ ಉತ್ತರಿಸಿದ್ದರು: ‘ಈಗ ಹಣದ ವಿಚಾರ ಜೀರೋ. ಕಂಟೆಂಟ್ ಇಷ್ಟವಾದರೆ ಮಾತ್ರ ನಾನು ಕೆಲಸ ಮಾಡುತ್ತೇನೆ. ಆದರೆ ಈ ಹಿಂದೆ ನಾನು ಕೇವಲ ಹಣಕ್ಕೋಸ್ಕರವೇ ಕೆಲಸ ಮಾಡುತ್ತಿದ್ದೆ. ಸಣ್ಣ ಪುಟ್ಟ ಪಾತ್ರಗಳನ್ನು ಸಹ ಒಪ್ಪಿಕೊಳ್ಳುತ್ತಿದ್ದೆ. ಮನೆ ಖರೀದಿಸಬೇಕು ಎಂದುಕೊಂಡಾಗ ನನಗೆ ಹಣದ ಕೊರತೆ ಆಯಿತು. ಆಗ ಒಂದು ಮ್ಯೂಸಿಕ್ ವಿಡಿಯೋದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದು ವಿಜಯ್ ದೇವರಕೊಂಡ ಹೇಳಿದ್ದರು.
‘ಹಣ ನನಗೆ ತುಂಬ ಮುಖ್ಯವಾಗಿತ್ತು. 10 ಸಾವಿರಕ್ಕಿಂತಲೂ ಹೆಚ್ಚಿನ ಸಂಭಾವನೆ ಸಿಗುವ ಯಾವುದೇ ಕೆಲಸವನ್ನಾದರೂ ನಾನು ಮಾಡುತ್ತಿದ್ದೆ. ಈಗ ನಾನು ಹಣದಿಂದ ಎಗ್ಸೈಟ್ ಆಗುವುದಿಲ್ಲ. ನನ್ನ ಕೆಲವು ಖರ್ಚುಗಳನ್ನು ನಿಭಾಯಿಸಲು ಮಾತ್ರ ನನಗೆ ಈಗ ಹಣ ಬೇಕಾಗುತ್ತದೆ. ಅದರ ಹೊರತಾಗಿ ಎಷ್ಟೇ ಹಣ ಕೊಟ್ಟರೂ ನನಗೆ ಇಷ್ಟ ಇಲ್ಲದ ಕೆಲಸವನ್ನು ನಾನು ಮಾಡುವುದಿಲ್ಲ’ ಎಂದು ವಿಜಯ್ ದೇವರಕೊಂಡ ಹೇಳಿದ್ದರು.
ವಿಜಯ್ ದೇವರಕೊಂಡ ನಟಿಸುತ್ತಿರುವ ‘ಲೈಗರ್’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. ಅತಿಥಿ ಪಾತ್ರದಲ್ಲಿ ಮೈಕ್ ಟೈಸನ್ ಕೂಡ ಅಭಿನಯಿಸುತ್ತಿರುವುದು ವಿಶೇಷ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Mon, 9 May 22