ಲೈಂಗಿಕ ದೌರ್ಜನ್ಯ ಆರೋಪ: ವಿಜಯ್ ಸೇತುಪತಿ ಹೇಳಿದ್ದೇನು?
Vijay Sethupathi: ಖ್ಯಾತ ನಟ ವಿಜಯ್ ಸೇತುಪತಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ವಿಜಯ ಸೇತುಪತಿಗೆ ಈ ಆರೋಪದ ಬಗ್ಗೆ ಪ್ರಶ್ನೆ ಮಾಡಲಾಗಿದ್ದು, ವಿಜಯ್ ಸೇತುಪತಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯ್ ಸೇತುಪತಿ (Vijay Sethupathi) ದಕ್ಷಿಣ ಭಾರತದ ಬಲು ಜನಪ್ರಿಯ ನಟ. ಯಾವುದೇ ಹಿನ್ನೆಲೆ ಇಲ್ಲದೆ ಕೇವಲ ನಟನಾ ಪ್ರತಿಭೆಯಿಂದಲೇ ಸ್ಟಾರ್ ಪಟ್ಟಕ್ಕೆ ಏರಿರುವ ನಟ. 47 ವರ್ಷ ವಯಸ್ಸಿನ ವಿಜಯ್ ಸೇತುಪತಿ ಭಾರತದ ಬಲು ಬ್ಯುಸಿ ನಟರಲ್ಲಿ ಒಬ್ಬರು. ಹೀರೋ, ವಿಲನ್, ಪೋಷಕ ಪಾತ್ರ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದೀಗ ವಿಜಯ್ ಸೇತುಪತಿ ವಿರುದ್ಧ ಎಕ್ಸ್ ಖಾತೆ ಬಳಕೆದಾರರೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಆರೋಪದ ಬಗ್ಗೆ ವಿಜಯ್ ಸೇತುಪತಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಸೇತುಪತಿ ತಮ್ಮ ಮೇಲೆ ಮಾಡಲಾಗಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರ ಎಂದಿದ್ದಾರೆ. ಅಲ್ಲದೆ, ಈ ಆರೋಪಗಳಿಂದಾಗಿ ತಮ್ಮ ಕುಟುಂಬದವರು, ಆಪ್ತರು ಬೇಸರಗೊಂಡಿದ್ದಾರೆ. ಇದರಿಂದಾಗಿ ನನಗೆ ಬೇಸರವಾಗಿದೆ, ಇಲ್ಲವಾದರೆ ಇಂಥಹುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಮಹಿಳೆಯರ ವಿರುದ್ಧ ತಾವು ಸೈಬರ್ ಪೊಲೀಸರಿಗೆ ದೂರು ನೀಡಿರುವುದಾಗಿಯೂ ಸಹ ವಿಜಯ್ ಸೇತುಪತಿ ಹೇಳಿದ್ದಾರೆ.
ಮಾಧ್ಯಮದೊಟ್ಟಿಗೆ ಮಾತನಾಡಿರುವ ವಿಜಯ್ ಸೇತುಪತಿ, ‘ನನ್ನನ್ನು ಹತ್ತಿರದಿಂದ, ದೂರದಿಂದ ನೋಡಿರುವ ವ್ಯಕ್ತಿಗಳು ಈ ಸುದ್ದಿ ನೋಡಿ ನಗದೇ ಇರರು. ನನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಇಂಥಹಾ ನೀಚ ಆರೋಪಗಳು ನನಗೆ ಬೇಸರ ತರಸಲಾರವು. ಆದರೆ ನನ್ನ ಕುಟುಂಬದವರಿಗೆ, ಆತ್ಮೀಯರಿಗೆ ಬೇಸರವಾಗಿದೆ. ನಾನು ನನ್ನ ಕುಟುಂಬದವರಿಗೆ ಹೇಳಿದ್ದೇನೆ. ಆ ಮಹಿಳೆ ಪ್ರಚಾರಕ್ಕಾಗಿ ಮಾಡುತ್ತಿದ್ದಾಳೆ, ಮಾಡಲಿ ಆಕೆಯ ಖುಷಿಯನ್ನು ಆಕೆ ಅನುಭವಿಸಲಿ, ಇದು ಸಹ ಸರಿದು ಹೋಗುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ:ಪುರಿ ಜಗನ್ನಾಥ್-ವಿಜಯ್ ಸೇತುಪತಿ ಸಿನಿಮಾ ಶುರು, ದುನಿಯಾ ವಿಜಿ ಎಂಟ್ರಿ ಯಾವಾಗ?
‘ಬೆನ್ನ ಹಿಂದೆ ನಡೆಯುವ ಈ ರೀತಿಯ ಆರೋಪಗಳು, ಮೂದಲಿಕೆಗಳು, ರಾಜಕೀಯಗಳನ್ನು ಕಳೆದ ಏಳು ವರ್ಷಗಳಿಂದ ನೋಡುತ್ತಾ, ಅನುಭವಿಸುತ್ತಾ ಬಂದಿದ್ದೇನೆ. ಇಂಥಹುದ್ದೆಲ್ಲ ನನ್ನನ್ನು ಬಾಧಿಸುವುದಿಲ್ಲ, ಇದೀಗ ನಮ್ಮ ತಂಡ ಆ ಮಹಿಳೆಯರ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದಿದ್ದಾರೆ.
ರಮ್ಯಾ ಮೋಹನ್ ಹೆಸರಿನ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಸೇತುಪತಿ ವಿರುದ್ಧ ಆರೋಪ ಮಾಡಿದ್ದರು. ವಿಜಯ್ ಸೇತುಪತಿ, ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹಣದ ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ್ದರು. ಬಳಿಕ ಆ ಪೋಸ್ಟ್ ಅನ್ನು ಮಹಿಳೆ ಡಿಲೀಟ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Thu, 31 July 25




