‘ವಾರ್ 2’ ಚಿತ್ರಕ್ಕಿಂತಲೂ ‘ಕೂಲಿ’ ಸಿನಿಮಾದ್ದೇ ಮೇಲುಗೈ; ಇದು ರಜನಿಕಾಂತ್ ಹವಾ
ಒಂದೆಡೆ ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’, ಇನ್ನೊಂದೆಡೆ ಅಯಾನ್ ಮುಖರ್ಜಿ ನಿರ್ದೇಶನದ ‘ವಾರ್ 2’. ಆಗಸ್ಟ್ 14ರಂದು ಈ ಎರಡು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ಪೈಪೋಟಿ ಸಖತ್ ಹೆಚ್ಚಾಗಿದೆ. ಅಮೆರಿಕದಲ್ಲಿ ‘ವಾರ್ 2’ ಚಿತ್ರಕ್ಕಿಂತಲೂ ‘ಕೂಲಿ’ ಸಿನಿಮಾಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಈ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡಲಿದೆ. ಒಂದೇ ದಿನ ಎರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬಾಲಿವುಡ್ನಲ್ಲಿ ‘ವಾರ್ 2’ ಸಿನಿಮಾ (War 2 Movie) ಬಿಡುಗಡೆಯಾದರೆ, ದಕ್ಷಿಣದಲ್ಲಿ ‘ಕೂಲಿ’ ಸಿನಿಮಾ ತೆರೆ ಕಾಣಲಿದೆ. ಈ ಎರಡೂ ಸಿನಿಮಾಗಳು ಆಗಸ್ಟ್ 14ರಂದು ಬಿಡುಗಡೆ ಆಗುತ್ತಿವೆ ಎಂಬುದು ವಿಶೇಷ. ಎರಡೂ ಸಿನಿಮಾದಲ್ಲಿ ದೊಡ್ಡ ತಾರಾಗಣ ಇವೆ. ‘ಕೂಲಿ’ ಮತ್ತು ‘ವಾರ್ 2’ ಸಿನಿಮಾಗಳ ಪೈಕಿ ಯಾವ ಸಿನಿಮಾಗೆ ಹೆಚ್ಚು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಅಮೆರಿಕದಲ್ಲಿ ಈಗಾಗಲೇ ‘ಕೂಲಿ’ (Coolie Movie) ಹೈಪ್ ಜೋರಾಗಿದೆ.
ಹೌದು, ಅಮೆರಿಕದಲ್ಲಿ ‘ವಾರ್ 2’ ಮತ್ತು ‘ಕೂಲಿ’ ಸಿನಿಮಾಗಳ ಬುಕಿಂಗ್ ಶುರುವಾಗಿದೆ. ‘ವಾರ್ 2’ ಚಿತ್ರಕ್ಕೆ ಹೋಲಿಸಿದರೆ ‘ಕೂಲಿ’ ಸಿನಿಮಾದ ಬುಕಿಂಗ್ ಉತ್ತಮವಾಗಿದೆ. ಬಿಡುಗಡೆಗೆ 9 ದಿನಗಳು ಬಾಕಿ ಇರುವಾಗ ‘ವಾರ್ 2’ ಚಿತ್ರಕ್ಕಿಂತಲೂ 6 ಪಟ್ಟು ಅಧಿಕ ಬುಕಿಂಗ್ ‘ಕೂಲಿ’ ಸಿನಿಮಾಗೆ ಆಗಿದೆ. ಆ ಮೂಲಕ ಬಾಕ್ಸ್ ಆಫೀಸ್ ಭವಿಷ್ಯ ಏನಾಗಲಿದೆ ಎಂಬುದರ ಸೂಚನೆ ಸಿಗುತ್ತಿದೆ.
‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರ ಜೊತೆ ಘಟಾನುಘಟಿ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಆಮಿರ್ ಖಾನ್, ನಾಗಾರ್ಜುನ, ಶ್ರುತಿ ಹಾಸನ್, ಉಪೇಂದ್ರ, ಸತ್ಯರಾಜ್ ಮುಂತಾದವರು ನಟಿಸಿದ್ದಾರೆ. ಪೂಜಾ ಹೆಗ್ಡೆ ಡ್ಯಾನ್ಸ್ ಮಾಡಿರುವ ‘ಮೋನಿಕಾ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ.
ಅದೇ ರೀತಿ, ‘ವಾರ್ 2’ ಸಿನಿಮಾ ಕೂಡ ಪಾತ್ರವರ್ಗದ ಕಾರಣದಿಂದ ಹೈಪ್ ಸೃಷ್ಟಿ ಮಾಡಿದೆ. ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್, ಕಿಯಾರಾ ಅಡ್ವಾಣಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದು ಜೂನಿಯರ್ ಎನ್ಟಿಆರ್ ನಟನೆಯ ಮೊದಲ ಹಿಂದಿ ಸಿನಿಮಾ. ಆ ಕಾರಣದಿಂದಲೂ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ.
ಇದನ್ನೂ ಓದಿ: ನನ್ನ ಕೂದಲು ಉದುರಿದೆ, ಆದರೆ ನಾಗಾರ್ಜುನ ಇನ್ನೂ ಯಂಗ್ ಆಗಿದ್ದಾರೆ: ರಜನಿಕಾಂತ್
‘ವಾರ್ 2’ ಮತ್ತು ‘ಕೂಲಿ’ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾಗಳಲ್ಲಿ ನಟಿಸಿರುವ ಎಲ್ಲ ಕಲಾವಿದರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಆದ್ದರಿಂದ ಪೈಪೋಟಿ ಜೋರಾಗಿ ಇರಲಿದೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ‘ವಾರ್ 2’ ಚಿತ್ರಕ್ಕೆ ಬಂಡವಾಳ ಹೂಡಿದೆ. ‘ಕೂಲಿ’ ಸಿನಿಮಾವನ್ನು ‘ಸನ್ ಪಿಕ್ಚರ್ಸ್’ ಸಂಸ್ಥೆ ನಿರ್ಮಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








