‘ಆಟೋಟ್ಯೂನ್’ ಎಂದರೇನು? ಸಂಗೀತ ಲೋಕಕ್ಕಿದು ವರವೋ? ಶಾಪವೋ?
ಸಂಗೀತ ಲೋಕದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ‘ಆಟೋಟ್ಯೂನ್’ ವಿರುದ್ಧ ಇತ್ತೀಚೆಗೆ ಕೆಲ ಗಟ್ಟಿ ದನಿಗಳು ಎದ್ದಿವೆ. ಅಂದಹಾಗೆ ಏನಿದು ಆಟೋಟ್ಯೂನ್? ಇದರ ಬಗ್ಗೆ ಇಷ್ಟು ಚರ್ಚೆ ಏಕೆ? ಇದರ ಬಳಕೆ ಹೇಗೆ? ಏಕೆ? ಆಟೋಟ್ಯೂನ್ ಪರ ವಾದಿಸುತ್ತಿರುವವರು ಯಾರು? ಆಟೋಟ್ಯೂನ್ ಬಗ್ಗೆ ವಿರೋಧಿಗಳಿಗಿರುವ ದೂರುಗಳೇನು? ಇಲ್ಲಿದೆ ಪೂರ್ಣ ವಿವರ ಸಂಗೀತ ಕ್ಷೇತ್ರದ ಅನುಭವಿಗಳ ಹೇಳಿಕೆಗಳ ಜೊತೆಗೆ.
ರಣ್ಬೀರ್ ಕಪೂರ್ (Ranbeer Kapoor) ನಟನೆಯ ‘ಅನಿಮಲ್’ (Animal) ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಕೆಲ ತಿಂಗಳ ಹಿಂದೆ ಹೈದರಾಬಾದ್ನಲ್ಲಿ ನಡೆದಿತ್ತು. ಆ ಸಿನಿಮಾದ ಹಾಡುಗಳು ಅದಾಗಲೇ ಬಿಡುಗಡೆ ಆಗಿ ಗಮನ ಸೆಳೆದಿದ್ದವು. ಅದರಲ್ಲಿ ಒಂದು ‘ಅರ್ಜನ್ ವೆಲ್ಲೆಯಾ’ ಹಾಡು. ಸಿನಿಮಾದಲ್ಲಿ ಆ ಪಂಜಾಬಿ ಜನಪದ ಹಾಡನ್ನು ಹಾಡಿರುವ ಭೂಪಿಂದರ್ ಬಬ್ಬಲ್, ಹೈದರಾಬಾದ್ ಕಾರ್ಯಕ್ರಮದಲ್ಲಿ ವೇದಿಕೆ ಏರಿ ಸಿನಿಮಾ ಬಗ್ಗೆ ಕೆಲ ನಿಮಿಷ ಮಾತನಾಡಿ ‘ಅರ್ಜನ್ ವೆಲ್ಲೆಯಾ’ ಹಾಡು ಹಾಡಲು ಆರಂಭಿಸಿದರು. ನೆರೆದಿದ್ದ ಪ್ರೇಕ್ಷಕರು, ಸೆಲೆಬ್ರಿಟಿಗಳು ಹಾಡನ್ನು ಸಖತ್ ಎಂಜಾಯ್ ಮಾಡುತ್ತಿದ್ದರು. ಗಾಯಕ ಭೂಪಿಂದರ್ ಬಬ್ಬಲ್ ಸಹ ಬಹಳ ಜೋಶ್ನಲ್ಲಿ ಹಾಡುತ್ತಿದ್ದರು, ಆದರೆ ಸಮಯದ ಕೊರತೆಯಿಂದಾಗಿ ನಿರೂಪಕಿ ಹಾಡುಗಾರರನ್ನು ತಡೆಯುವ ಉದ್ದೇಶದಿಂದ ಎರಡು ಬಾರಿ ‘ಥ್ಯಾಂಕ್ಸ್’, ‘ಥ್ಯಾಂಕ್ಸ್’ ಎಂದರು. ನಿರೂಪಕಿ ಕೊಟ್ಟ ಸೂಚನೆ ನಿರ್ಲಕ್ಷಿಸಿ ಭೂಪಿಂದರ್ ಬಬ್ಬಲ್ ಹಾಡು ಮುಂದುವರೆಸಿದರು. ಆಗ ಒಮ್ಮಿಂದೊಮ್ಮೆ ಸ್ಪೀಕರ್ನಲ್ಲಿ ಪ್ರಸಾರವಾಗುತ್ತಿದ್ದ ಹಾಡು ನಿಂತಿತು. ಗಾಯಕ ಭೂಪಿಂದರ್ ಬಬ್ಬಲ್ ಕೈಯಲ್ಲಿದ್ದ ಮೈಕ್ ಆನ್ ಆಗಿಬಿಟ್ಟಿತು. ಭೂಪಿಂದರ್ ಬಬ್ಬಲ್ ಅವರ ನಿಜ ಧ್ವನಿಯಲ್ಲಿ ‘ಅರ್ಜನ್ ವೆಲ್ಲೆಯಾ’ ಹಾಡು ಜನರಿಗೆ ಕೇಳಿಸಿತು, ಹಲವರಿಗೆ ಭೂಪಿಂದರ್ ಅವರ ನಿಜ ಧ್ವನಿ ಕೇಳಿ ಗಾಬರಿಯಾಯ್ತು. ಅಯ್ಯೋ ಇದೇನಾಯ್ತು ಎಂದು ಸ್ವತಃ ಗಾಯಕ ಭೂಪಿಂದರ್ ಬಬ್ಬಲ್ ಗಾಬರಿಯಾಗಿ, ಮುಜುಗರದಿಂದ ಹಾಡು ನಿಲ್ಲಿಸಿ, ವೇದಿಕೆ ಇಳಿದು ಹೊರಟುಬಿಟ್ಟರು.
ಅಂದು ಆಗಿದ್ದಿಷ್ಟು, ಸಿನಿಮಾಕ್ಕೆ ರೆಕಾರ್ಡ್ ಮಾಡಿದ್ದ ಹಾಡನ್ನೇ ಸ್ಪೀಕರ್ನಲ್ಲಿ ಹಾಕಲಾಗಿತ್ತು, ವೇದಿಕೆ ಮೇಲೆ ಭೂಪಿಂದರ್ ಬಬ್ಬಲ್ ತಮ್ಮ ಪಾಡಿಗೆ ತಾವು ಸುಮ್ಮನೆ ಹಾಡು ಗುನುಗುತ್ತಾ ಹಾಡು ಹಾಡುತ್ತಿರುವಂತೆ ನಟಿಸುತ್ತಿದ್ದರಷ್ಟೆ. ಸ್ಪೀಕರ್ ನಿಂತಾಗ ಭೂಪಿಂದರ್ ಅವರ ನಿಜವಾದ ಧ್ವನಿ ನೆರೆದವರಿಗೆ ಕೇಳಿತು. ಭೂಪಿಂದರ್ ನಿಜವಾದ ಧ್ವನಿಗೂ ಸಿನಿಮಾದ ಹಾಡಿನಲ್ಲಿರುವ ಧ್ವನಿಗೂ ಆಕಾಶ ಭೂಮಿಯ ಅಂತರವಿದ್ದುದ್ದು ಥಟ್ಟನೆ ಗೊತ್ತಾಯ್ತು. ಆದರೆ ಸಿನಿಮಾದಲ್ಲಿ ಮಾತ್ರ ಅಷ್ಟು ಅದ್ಭುತವಾಗಿ, ತಾಳ-ರಾಗ ಶೃತಿ ಬದ್ಧವಾಗಿ, ಸಣ್ಣ ಕರ್ಕಶತೆಯೂ ಹಾಡಿನಲ್ಲಿ ಇಲ್ಲದೇ ಇರುವುದು ಹೇಗೆ? ಅದಕ್ಕೆ ಕಾರಣ ಆಟೋಟ್ಯೂನ್ ಎಂಬ ಸಂಗೀತ ನಿರ್ದೇಶಕರ ಕೈಗೆ ಸಿಕ್ಕಿರುವ ಮಾಂತ್ರಿಕ ದಂಡ.
1990 ರ ಡಾಟ್ ಕಾಮ್ ಬೂಮ್ ಸಮಯದಲ್ಲಿ ಹುಟ್ಟಿಕೊಂಡ ಆಟೋಟ್ಯೂನಿಂಗ್ ಸಾಫ್ಟ್ವೇರ್ ಇಂದು ಇಡೀ ವಿಶ್ವದಾದ್ಯಂತ ಸಂಗೀತ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಹಾಡುಗಾರರ, ಸಂಗೀತ ನಿರ್ದೇಶಕರ ಶ್ರಮವನ್ನು ಬಹುಪಾಲು ತಗ್ಗಿಸಿಬಿಟ್ಟಿದೆ ಈ ಸಾಫ್ಟ್ವೇರ್. ಶೃತಿ ಇಲ್ಲದ, ಕರ್ಕಶ ದನಿಯಲ್ಲಿ ಹಾಡಿದ ಹಾಡನ್ನೂ ಸಹ ಈ ತಂತ್ರಜ್ಞಾನ ಸರಿ ಮಾಡಿಬಿಡುತ್ತದೆ. ಭಾರತದಲ್ಲಿ ಈ ಆಟೋಟ್ಯೂನ್ ಅನ್ನು ಮೊದಲು ಬಳಸಿದ್ದು ಸಂಗೀತ ನಿರ್ದೇಶಕ ಎಆರ್ ರೆಹಮಾನ್. ಸಂಗೀತದಲ್ಲಿ ತಂತ್ರಜ್ಞಾನ ಬಳಸಲು ಪ್ರಾರಂಭ ಮಾಡಿದ ಶ್ರೇಯ ಭಾರತದಲ್ಲಿ ರೆಹಮಾನ್ ಅವರಿಗೇ ಸಲ್ಲಬೇಕು. ‘ರೋಜಾ’, ‘ಬಾಂಬೆ’ ಇನ್ನಿತರೆ ಸಿನಿಮಾದ ಹಾಡುಗಳನ್ನು, ಹಾಡುಗಳಲ್ಲಿ ಇರುತ್ತಿದ್ದ ರಾಗಗಳ ಏರಿಳಿತವನ್ನು ನೆನಪಿಗೆ ತಂದುಕೊಳ್ಳಿ, ಅದೆಲ್ಲ ಸಾಧ್ಯವಾಗಿದ್ದು ಆಟೋಟ್ಯೂನ್ನಿಂದಲೇ. ಸಂಗೀತಗಾರರ 75% ಶ್ರಮಕ್ಕೆ 100% ಫಲಿತಾಂಶವನ್ನು ಆಟೋಟ್ಯೂನ್ ಆಗ ನೀಡುತ್ತಿತ್ತು. ಈಗ ಅನುಪಾತ ಉಲ್ಟಾ ಆಗಿದೆ. ಹಾಡುಗಾರ 25% ಶ್ರಮ ಹಾಕಿದರೆ ಸಾಕು ಉಳಿದಿದ್ದನ್ನು ಆಟೋಟ್ಯೂನ್ ನೋಡಿಕೊಳ್ಳುತ್ತದೆ.
ಬಾದ್ಶಾ, ಯೋ ಯೋ ಹನಿ ಸಿಂಗ್ ಸೇರಿದಂತೆ ಇತ್ತೀಚೆಗೆ ಜನಪ್ರಿಯವಾಗಿರುವ ಕೆಲವು ಯೂಟ್ಯೂಬ್, ಸ್ಪೋಟಿಫೈ ಆಡಿಯೋ ಸ್ಟಾರ್ಗಳ ಹಾಡುಗಳನ್ನು ಆಟೋಟ್ಯೂನ್ ಇಲ್ಲದೆ ಕೇಳುವುದು ಬಹುತೇಕ ಸಾಧ್ಯವೇ ಇಲ್ಲ. ಕೆಲವು ಹಾಡುಗಾರರ ನಿಜ ಧ್ವನಿಯ ಹಾಡು, ಆಟೋಟ್ಯೂನ್ ತಂತ್ರಜ್ಞಾನ ಬಳಸಿದ ಹಾಡುಗಳ ಹೋಲಿಕೆಯ ವಿಡಿಯೋಗಳು ಯೂಟ್ಯೂಬ್ನಲ್ಲಿ ಲಭ್ಯವಿದ್ದು, ಆಟೋಟ್ಯೂನ್ ಇಲ್ಲದಿದ್ದರೆ ಕೆಲವರನ್ನು ಹಾಡುಗಾರರು ಎಂದು ಹೇಳಲು ಸಾಧ್ಯವೇ ಇಲ್ಲ ಎನ್ನುವಂತಿದೆ ಪರಿಸ್ಥಿತಿ. ಆಟೋಟ್ಯೂನ್ನಿಂದ ಕರ್ಕಶ ದನಿಯ, ಶೃತಿ ಇಲ್ಲದ ಹಾಡುಗಳನ್ನು ಶೃತಿ ಬದ್ಧವಾದ ಹಾಡಾಗಿ ಬದಲಾವಣೆ ಮಾಡಬಹುದಾಗಿದೆ. ಹಾಡುಗಳ ಪಿಚ್ ಬದಲಿಸುವ, ಹಾಡುಗಾರ ಹಾಡಿರುವ ಪ್ರತಿ ಪದಕ್ಕೂ ಭಿನ್ನ ಲಯಗಳನ್ನು ಸೇರಿಸುವ ಅವಕಾಶವನ್ನು ಈ ಸಾಫ್ಟ್ವೇರ್ ನೀಡುತ್ತದೆ.
‘ಸುಧಾರಿತ’ ಹಾಡುಗಳನ್ನು ಜನರಿಗೆ ಆಟೋಟ್ಯೂನ್ ತಲುಪಿಸುತ್ತಿದೆ ಎಂದಾದಮೇಲೆ ಆಟೋಟ್ಯೂನ್ ಒಳ್ಳೆಯದೇ ಎಂಬ ಅಭಿಪ್ರಾಯಕ್ಕೆ ಬಂದುಬಿಡುವುದು ಆತುರವಾಗುತ್ತದೆ. ಈ ಆಟೋಟ್ಯೂನ್ನಿಂದ ಅಪಾಯವೂ ಸಾಕಷ್ಟಿದೆ. ಇದೇ ಕಾರಣಕ್ಕೆ ಈಗ ಒಬ್ಬೊಬ್ಬರಾಗಿ ಆಟೋಟ್ಯೂನ್ನ ಅಪಾಯಗಳ ಬಗ್ಗೆ ತುಸು ಗಟ್ಟಿ ದನಿ ಎತ್ತಲು ಆರಂಭಿಸಿದ್ದಾರೆ. ಆಟೋಟ್ಯೂನ್ನಿಂದಾಗಿ ವೃತ್ತಿಪರ ಹಾಡುಗಾರರಲ್ಲದವರು ಹಾಡುಗಾರರಾಗಿಬಿಟ್ಟಿದ್ದಾರೆ. ಆಟೋಟ್ಯೂನ್ ಪಿಚ್, ಟೋನ್, ತಾಳ ಇನ್ನಿತರೆಗಳನ್ನು ‘ಕರೆಕ್ಟ್’ ಮಾಡಬಲ್ಲದು ಆದರೆ ಪದಗಳಿಗೆ, ಹಾಡಿಗೆ ಭಾವ ತುಂಬಲಾರದು. ಈ ಕಾರ್ಯವನ್ನು ನುರಿತ ಹಾಡುಗಾರರೇ ಮಾಡಬೇಕು. ಯೋಚಿಸಿ, ಆಟೋಟ್ಯೂನ್ ಸಹಾಯದಿಂದ ಹಾಡುಗಳನ್ನು ಹಾಡುಗಾರರಲ್ಲದವರು ಹಾಡಲು ಆರಂಭಿಸಿದರೆ ಸಿನಿಮಾದಲ್ಲಿ ಸಂಗೀತ ಕಲೆಯ ಪರಿಸ್ಥಿತಿ ಏನಾಗಬಹುದು.
ದಿಗ್ಗಜರೆಂದು ಗುರುತಿಸಿಕೊಂಡಿರುವ ಕೆಲವು ಹಾಡುಗಾರರು ಇತ್ತೀಚೆಗೆ ಆಟೋಟ್ಯೂನ್ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಪ್ರಾರಂಭ ಮಾಡಿದ್ದಾರೆ. ಗಾಯಕ ಸೋನು ನಿಗಂ ಕಳೆದ ಕೆಲವು ವರ್ಷಗಳಿಂದಲೂ ಈ ಆಟೋಟ್ಯೂನ್ ವಿರುದ್ಧ ದನಿ ಎತ್ತುತ್ತಲೇ ಇದ್ದರು. ಇತ್ತೀಚೆಗೆ ತಮ್ಮ ದನಿಯನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಆಟೋಟ್ಯೂನ್ ಅನ್ನು ಭಾರತಕ್ಕೆ ಪರಿಚಯಿಸಿದ ಎಆರ್ ರೆಹಮಾನ್ ಸ್ವತಃ ಈಗ ಆಟೋಟ್ಯೂನ್ ಬಳಸುವುದು ನಿಲ್ಲಿಸಿದ್ದಾರೆ ಎಂದು ಗಾಯಕ ಅರಿಜಿತ್ ಸಿಂಗ್ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಗಾಯಕಿ ಶ್ರೆಯಾ ಘೋಷಾಲ್ ಸಹ ಆಟೋಟ್ಯೂನ್ ವಿರೋಧಿಯಾಗಿದ್ದು, ಪರಭಾಷೆ ಹಾಡುಗಳನ್ನು ಹಾಡುವಾಗ ಆಗುವ ಉಚ್ಛಾರಣೆಯ ತಪ್ಪುಗಳನ್ನು ತಿದ್ದಲು ಟ್ಯೂನಿಂಗ್ ಬಳಸುವುದಾದರೆ ಅಡ್ಡಿಯಿಲ್ಲ ಆದರೆ ಆಟೋಟ್ಯೂನಿಂಗ್ ಎಂಬುದು ಸಂಗೀತ ಕ್ಷೇತ್ರಕ್ಕೆ ಮಾರಕ ಎಂದು ಸ್ಪಷ್ಟ ಅಭಿಪ್ರಾಯ ಹೊರಹಾಕಿದ್ದಾರೆ.
ಟಿವಿ9 ಜೊತೆ ಈ ಬಗ್ಗೆ ಮಾತನಾಡಿದ ಗಾಯಕಿ ಶಮಿತಾ ಮಲ್ನಾಡ್, ‘ಸಂಗೀತಗಾರನಿಗೆ ಒಂದು ಪಯಣ ಇರುತ್ತದೆ. ಆತ ಗುರುವಿನ ಗುಲಾಮನಾಗಿ ವರ್ಷಾನುಗಟ್ಟಲೆ ಸಂಗೀತ ಕಲಿತು, ರಿಯಾಜು ಮಾಡಿ, ರಾಗ-ತಾಳ, ಶ್ರುತಿಗಳನ್ನೆಲ್ಲ ಮನನ ಮಾಡಿ ಹಾಡಲು ಬಂದಿರುತ್ತಾನೆ. ಆತನ ಅಷ್ಟು ವರ್ಷಗಳ ಕಠಿಣ ಶ್ರಮ, ತಪ್ಪಸ್ಸನ್ನು ಜೀವವಿಲ್ಲದ ಸಾಫ್ಟ್ವೇರ್ ಒಂದು ಮಣ್ಣುಪಾಲು ಮಾಡುತ್ತದೆಯೆಂಬುದನ್ನು ಸಹಿಸಲು ಕಷ್ಟ’ ಎಂದಿದ್ದಾರೆ. ಮುಂದುವರೆದು, ‘ಕನ್ನಡ ಚಿತ್ರರಂಗದಲ್ಲಿ ಆಟೋಟ್ಯೂನ್ ಬಳಕೆ ತುಸು ಕಡಿಮೆಯೇ. ಶಾಸ್ತ್ರೀಯ ಹಾಡುಗಾರರಿಗೆ ಸಂಗೀತ ನಿರ್ದೇಶಕರು ಮತ್ತು ಪ್ರೇಕ್ಷಕರು ಇಬ್ಬರೂ ಆದ್ಯತೆ ಮತ್ತು ಗೌರವ ನೀಡುತ್ತಾರೆ. ಪರಿಣಿತ ಗಾಯಕರಿಂದ ಹಾಡಿಸಿದಾಗ ಆಟೋಟ್ಯೂನ್ ಅವಶ್ಯಕತೆ ಇರುವುದಿಲ್ಲ. ಕೆಲವೊಮ್ಮೆ ಸಂಗೀತ ನಿರ್ದೇಶಕರಿಗೆ ಒತ್ತಡವಿರುತ್ತದೆ, ಅವರು ಸ್ಟಾರ್ ನಟರಿಂದ ಹಾಡು ಹಾಡಿಸಬೇಕಾಗಿರುತ್ತದೆ. ಕೆಲವೊಮ್ಮೆ ಪರಭಾಷೆಯ ಹಾಡುಗಾರರಿಂದ ಅಥವಾ ಪರಭಾಷೆಯ ಸ್ಟಾರ್ ನಟರಿಂದ ಇಲ್ಲಿನ ಸಿನಿಮಾಗಳಿಗೆ ಹಾಡು ಹಾಡಿಸಬೇಕಾಗುತ್ತದೆ. ಆಗೆಲ್ಲ ಬೇರೆ ದೆಸೆಯಿಲ್ಲದೆ ಆಟೋಟ್ಯೂನ್ ಬಳಸಬೇಕಾಗುತ್ತದೆ’ ಎಂದಿದ್ದಾರೆ.
‘ಆಟೋಟ್ಯೂನ್ ನಿಂದ ಹಾಡುಗಾರರ ಭವಿಷ್ಯಕ್ಕೆ ಹಾನಿ ಇದೆ ಎಂಬುದನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ’ ಎನ್ನುತ್ತಾರೆ ಶಮಿತಾ ಮಲ್ನಾಡ್, ‘ಆಟೋಟ್ಯೂನ್ ಬಳಸುವವರು ಮುಚ್ಚಿದ ಸ್ಟುಡಿಯೋಗಳಲ್ಲಿ, ಕಂಪ್ಯೂಟರ್ ತಂತ್ರಜ್ಞಾನದ ಮೇಲುಸ್ತುವಾರಿಯಲ್ಲಿ ಮಾತ್ರವೇ ಹಾಡಬಲ್ಲರು. ‘ಸ್ಮ್ಯೂಲ್’, ‘ಕ್ಯಾರಿಯೋಕಿ’ ಆಪ್ಗಳಲ್ಲಿ ಪ್ರೀ ಇನ್ಸ್ಟಾಲ್ಡ್ ಆಟೋಟ್ಯೂನ್ ಬಳಸಿ ಹಲವರು ಹಾಡುಗಳನ್ನು ಹಾಡುತ್ತಿದ್ದಾರೆ ಆದರೆ ಅವರ್ಯಾರೂ ವೃತ್ತಿಪರ ಹಾಡುಗಾರರಾಗಲು ಸಾಧ್ಯವಾಗಿಲ್ಲ. ಆಟೋಟ್ಯೂನ್ ಬಳಸಿ ಹಾಡುಗಾರರಾದವರ ಕತೆಯೂ ಇಷ್ಟೆ. ಅವರ ಜನಪ್ರಿಯತೆ ಕ್ಷಣಿಕ್ಕದ್ದಷ್ಟೆ. ಆಟೋಟ್ಯೂನ್, ವೃತ್ತಿಪರ ಹಾಡುಗಾರರ ಅವಕಾಶಗಳನ್ನು ಕಿತ್ತುಕೊಳ್ಳುತ್ತದೆ ಎಂಬುದೂ ಸಹ ನಿಜವಲ್ಲ. ಅಲ್ಲದೆ, ಸಂಗೀತ ಕರಗತ ಮಾಡಿಕೊಂಡ ಹಾಡುಗಾರರು ಎಲ್ಲಿ ಬೇಕಾದರೂ ಹಾಡಬಲ್ಲರು, ಲೈವ್ ಶೋ ಮಾಡಬಲ್ಲರು, ಕಛೇರಿಗಳನ್ನು ನೀಡಬಲ್ಲರು. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ದಶಕಗಳಿಂದಲೂ ನಿಜ ಸಂಗೀತವನ್ನು ಕೇಳಿಕೊಂಡು ಬಂದಿರುವ ಭಾರತದ ಸಂಗೀತ ಪ್ರೇಮಿಗಳು ‘ಸಾಫ್ಟ್ವೇರ್ ಸಂಗೀತ’ವನ್ನು ತಿರಸ್ಕರಿಸುತ್ತಾರೆಂಬುದು ನನ್ನ ನಂಬಿಕೆ’ ಎಂದಿದ್ದಾರೆ.
ಗಾಯಕಿ ಶಮಿತಾ ಮಲ್ನಾಡ್ ಮುಂದಿಟ್ಟಿರುವ ಅಭಿಪ್ರಾಯಕ್ಕೆ ಭಿನ್ನವಾದ ಅಭಿಪ್ರಾಯ ಗಾಯಕ ಅಲೋಕ್ ಅಲಿಯಾಸ್ ಆಲ್ ಓಕೆ ಅವರದ್ದು. ಹಲವು ರ್ಯಾಪ್ ಹಾಡುಗಳನ್ನು ಹಾಡಿರುವ ಆಲ್ ಓಕೆ, ತಮ್ಮ ಹಾಡುಗಳಿಗೆ ಆಟೋಟ್ಯೂನ್ ಬಳಸುತ್ತಾರೆ. ಹೊಸ ತಂತ್ರಜ್ಞಾನಗಳನ್ನು ಬಳಸಿ ಹಾಡು ರೆಕಾರ್ಡ್ ಮಾಡುತ್ತಾರೆ. ಟಿವಿ9 ಜೊತೆ ಮಾತನಾಡಿದ ಆಲ್ ಓಕೆ, ‘ಹಾಡುಗಾರರಗಬೇಕು ಎಂದು ಕನಸು ಕಂಡಿರುವ ಹಲವರಿಗೆ ಆಟೋಟ್ಯೂನ್ ಭರವಸೆ ನೀಡಿದೆ. ಧ್ವನಿ ಚೆನ್ನಾಗಿಲ್ಲದವರಿಗೆ, ಶೃತಿ ಸರಿಯಿರದಿಲ್ಲದವರೂ ಸಹ ಆಟೋಟ್ಯೂನ್ ಸಹಾಯದಿಂದ ಹಾಡು ಹಾಡಬಹುದು. ಗಾಯಕರು ಎನಿಸಿಕೊಳ್ಳಬಹುದು. ಆಟೋಟ್ಯೂನ್ ಎನ್ನುವುದು ಥರ್ಡ್ವೀಲ್ ಇದ್ದಂತೆ, ಸೈಕಲ್ ಹೊಡೆಯಲು ಬಾರದ ವ್ಯಕ್ತಿ ಥರ್ಡ್ವೀಲ್ ಇಟ್ಟುಕೊಂಡು ಸೈಕಲ್ ಹೊಡೆಯುವುದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ ಆಲ್ ಓಕೆ.
‘ನುರಿತ ಸಂಗೀತಗಾರರು ಆಟೋಟ್ಯೂನ್ ಒಪ್ಪುವುದಿಲ್ಲ ಅದು ಅವರ ಅಭಿಪ್ರಾಯ ಹಾಗೆಂದು ಆಟೋಟ್ಯೂನ್ ಬಳಸುವವರನ್ನು ಹಾಡುಗಾರರಲ್ಲ ಎನ್ನುವುದು ಸಹ ಸೂಕ್ತವಲ್ಲ. ಅವರಿಗೆ ಸರಿ ಎನಿಸದಿದ್ದರೆ ಬಳಸುವುದು ಬೇಡ. ತಂತ್ರಜ್ಞಾನ ಇರುವುದೇ ಜೀವನವನ್ನು ಸರಳ ಮಾಡಲು. ಮುಂಚೆಯೆಲ್ಲ ಲೈವ್ ರೆಕಾರ್ಡಿಂಗ್ನಲ್ಲಿ ಒಂದೇ ಟೇಕ್ನಲ್ಲಿ ಹಾಡುಗಳ ರೆಕಾರ್ಡ್ ಆಗುತ್ತಿತ್ತು, ಈಗ ಟೇಕ್ಸ್ ತೆಗೆದುಕೊಳ್ಳುತ್ತಾರೆ. ಟೇಕ್ಸ್ ತೆಗೆದುಕೊಳ್ಳುವುದು ಸಹ ತಂತ್ರಜ್ಞಾನವೇ ತಾನೆ. ತಮಗೆ ಅನುಕೂಲವಾದ ತಂತ್ರಜ್ಞಾನವನ್ನು ಒಪ್ಪಿ, ಸರಿಯೆನಿಸದ ತಂತ್ರಜ್ಞಾನವನ್ನು ದೂಷಿಸುವುದು ಸರಿಯಲ್ಲ. ನಾನು ಆಟೋಟ್ಯೂನ್ ಅನ್ನು ಬಳಸುತ್ತೇನೆ. ಅದು ನನ್ನ ಹಾಡುಗಳು ಇನ್ನಷ್ಟು ಬೆಟರ್ ಆಗಲು ಸಹಾಯ ಮಾಡಿದೆ’ ಎಂದು ಯಾವುದೇ ಹಿಂಜರಿಕೆ ಇಲ್ಲದೆ ಹೇಳಿದ್ದಾರೆ ಆಲ್ ಓಕೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Wed, 24 April 24