AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾ ಪದೇ ಪದೇ ಪೋಸ್ಟ್‌ಪೋನ್; ಅಭಿಮಾನಿಗಳ ಬೇಸರದ ಬಗ್ಗೆ ಯಶ್ ಮಾತು

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಪದೇ ಪದೇ ಮುಂದೂಡಲ್ಪಟ್ಟಿದೆ. ಇದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಯಶ್ ಈ ವಿಳಂಬಕ್ಕೆ ಜಾಗತಿಕ ಮಾರುಕಟ್ಟೆ ಮತ್ತು ಚಿತ್ರದ ಗುಣಮಟ್ಟವನ್ನು ಕಾರಣವೆಂದು ಸ್ಪಷ್ಟಪಡಿಸಿದ್ದಾರೆ. ಅಂತರಾಷ್ಟ್ರೀಯ ಸವಾಲುಗಳ ಮಧ್ಯೆಯೂ ಜಾಗತಿಕ ಮಟ್ಟದಲ್ಲಿ ದೊಡ್ಡ ಪರಿಣಾಮ ಬೀರಲು ಈ ಕಠಿಣ ನಿರ್ಧಾರ ಅನಿವಾರ್ಯ ಎಂದು ಅವರು ವಿವರಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಪದೇ ಪದೇ ಪೋಸ್ಟ್‌ಪೋನ್; ಅಭಿಮಾನಿಗಳ ಬೇಸರದ ಬಗ್ಗೆ ಯಶ್ ಮಾತು
ಯಶ್
ರಾಜೇಶ್ ದುಗ್ಗುಮನೆ
|

Updated on:May 18, 2026 | 9:01 AM

Share

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಪದೇ ಪದೇ ಮುಂದೂಡಲ್ಪಡುತ್ತಿದೆ. ಇದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಜೂನ್ 4ಕ್ಕೆ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ, ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತೊಮ್ಮೆ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ. ಈ ವಿಳಂಬದ ಬಗ್ಗೆ ನಟ ಹಾಗೂ ನಿರ್ಮಾಪಕ ಯಶ್ ಅವರು ಅಂತರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದು, ಭಾರತೀಯ ಪ್ರೇಕ್ಷಕರು ಮತ್ತು ಅಭಿಮಾನಿಗಳ ಬೇಸರವನ್ನು ಒಪ್ಪಿಕೊಂಡಿದ್ದಾರೆ.

‘ಸಿನಿಮಾ ಪದೇ ಪದೇ ಮುಂದಕ್ಕೆ ಹೋಗುತ್ತಿರುವುದು ಖಂಡಿತವಾಗಿಯೂ ನನ್ನ ಅಭಿಮಾನಿಗಳಿಗೆ ಅಥವಾ ಭಾರತದ ಸಿನಿ ಪ್ರೇಮಿಗಳಿಗೆ ಇಷ್ಟ ಆಗೋದಿಲ್ಲ. ಅವರು ಬೇಸರ ಮಾಡಿಕೊಳ್ಳುತ್ತಾ ಇದ್ದಾರೆ. ನಮ್ಮಲ್ಲಿ ಒಮ್ಮೆ ಶೂಟಿಂಗ್ ಆರಂಭವಾದರೆ, ಸಿನಿಮಾ ಇದೇ ಸಮಯಕ್ಕೆ ಬರುತ್ತದೆ ಎಂಬ ಒಂದು ಟೈಮ್‌ಲೈನ್ ಜನರ ತಲೆಯಲ್ಲಿ ಫಿಕ್ಸ್ ಆಗಿರುತ್ತದೆ. ಹಾಗಿದ್ದರೂ, ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ತಲುಪಿಸಲು ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು’ ಎಂದು ಯಶ್ ಸಮರ್ಥಿಸಿಕೊಂಡಿದ್ದಾರೆ.

‘ಪಾಶ್ಚಿಮಾತ್ಯ ದೇಶಗಳಲ್ಲಿ ಸಿನಿಮಾ ಸಂಪೂರ್ಣ ಮುಗಿದ ನಂತರವೇ ವಿತರಕರಿಗೆ ತೋರಿಸಿ ವ್ಯಾಪಾರ ಮಾಡಲಾಗುತ್ತದೆ. ಅಲ್ಲಿ ದೊಡ್ಡ ಮಟ್ಟದ ಹಣ ಹೂಡಿಕೆಯಾಗುವುದರಿಂದ ಪ್ರತಿಯೊಬ್ಬರೂ ಔಟ್‌ಪುಟ್ ನೋಡಲು ಬಯಸುತ್ತಾರೆ. ಆದರೆ ಭಾರತದಲ್ಲಿ ಸಿನಿಮಾ ಅನೌನ್ಸ್ ಆದ ದಿನದಿಂದಲೇ ಪ್ರಮೋಷನ್, ಮಾರ್ಕೆಟಿಂಗ್ ಶುರುವಾಗುತ್ತದೆ’ ಎಂದು ಯಶ್ ಭಾರತೀಯ ಚಿತ್ರರಂಗದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

‘ಸಿನಿಮಾ ಮುಹೂರ್ತವಾದ ದಿನದಿಂದಲೇ ಜನರು ಅದರ ಬಗ್ಗೆ ಬರೆಯಲು ಆರಂಭಿಸುತ್ತಾರೆ, ಇದು ದೊಡ್ಡ ಸವಾಲು. ಆದರೆ ನನಗೆ ನನ್ನ ಜನರ ಮೇಲೆ ನಂಬಿಕೆಯಿದೆ. ನಾವು ಮಾಡುತ್ತಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತರುವ ಕೆಲಸ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ಯಶ್ ಹೇಳಿದ್ದಾರೆ.

‘ಕೆಲವು ಕಥೆಗಳು ತಾಳ್ಮೆಯನ್ನು ಬೇಡುತ್ತವೆ. ಭಾರತೀಯ ಸಿನಿಮಾ ಜಾಗತಿಕ ಮಟ್ಟಕ್ಕೆ ಹೆಜ್ಜೆ ಇಡುತ್ತಿರುವಾಗ, ಅದರ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲಿದೆ. ಜಾಗತಿಕ ಮಾರುಕಟ್ಟೆಗೆ ಸರಿ ಹೊಂದು ಹೊಸ ದಿನಾಂಕದೊಂದಿಗೆ ಟಾಕ್ಸಿಕ್ ಶೀಘ್ರದಲ್ಲೇ ಪ್ರಪಂಚದಾದ್ಯಂತ ತೆರೆಗೆ ಬರಲಿದೆ’ ಎಂದು ಯಶ್ ವಿವರಿಸಿದರು.

ಇದನ್ನೂ ಓದಿ: ಹೇಗಿತ್ತು ‘ಟಾಕ್ಸಿಕ್’ ಸೆಟ್: ನಟಿಯ ಮಾತು ಕೇಳಿ ಯಶ್ ಬಗ್ಗೆ ಹೆಮ್ಮೆ ಆಗದೇ ಇರದು

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಸಂಘರ್ಷದಿಂದ ಹಾಗೂ ಇತ್ತೀಚೆಗೆ ‘ಸಿನಿಮಾಕಾನ್’ನಲ್ಲಿ ಜಾಗತಿಕ ವಿತರಕರಿಂದ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್‌ನಿಂದಾಗಿ ‘ಟಾಕ್ಸಿಕ್’ ತನ್ನ ಬಿಡುಗಡೆಯ ದಿನಾಂಕವನ್ನು ಬದಲಿಸಿಕೊಳ್ಳುತ್ತಾ ಬಂದಿದೆ. ಆದಷ್ಟು ಬೇಗ ಜಾಗತಿಕ ಮಟ್ಟದಲ್ಲಿ ದೊಡ್ಡ ಇಂಪ್ಯಾಕ್ಟ್ ಸೃಷ್ಟಿಸಲು ಯಶ್ ತಂಡ ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:59 am, Mon, 18 May 26

Follow Us