ಅಂಗಾಂಗ ದಾನ ಮಾಡುವ ಮೂಲಕ ಮಾದರಿಯಾದ 3 ಬಡ ಜೀವಗಳು
ಪಾರ್ಶ್ವವಾಯು ಯಾರಿಗೆ ಹೇಗೆ ಬರುತ್ತದೆ ಎಂಬ ಕಾರಣಗಳು ಗೊತ್ತಿರಲ್ಲ. ಇದು ನಮ್ಮ ಜೀವಕ್ಕೆ ಹಾಗು ಜೀವಕ್ಕೆ ತುಂಬಾ ನಷ್ಟವನ್ನು ಉಂಟು ಮಾಡುತ್ತದೆ. ಈ ಕಾರಣಕ್ಕೆ ವೈದ್ಯರು ಈ ಬಗ್ಗೆ ಮೊದಲೇ ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತ್ತಾರೆ. ಇಲ್ಲಿ ಮೂರು ಜೀವಗಳು ಪಾರ್ಶ್ವವಾಯುನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ತಮ್ಮ ತಮ್ಮ ಅಂಗಾಂಗ ದಾನದ ಮೂಲಕ ಅನೇಕರಿಗೆ ಜೀವನ ದಾನ ಮಾಡಿದ್ದಾರೆ. ಅವರು ಬಗ್ಗೆ ಇಲ್ಲಿದೆ ನೋಡಿ.

ರಾಮನಗರದ ಗ್ರಾಮೀಣ ಪ್ರದೇಶದ 35 ವರ್ಷದ ಕೃಷ್ಣ ಸಿ ಅವರ ಫೆಬ್ರವರಿ 18 ರಂದು ಮೆದುಳಿನ ಹಿಂಭಾಗದಲ್ಲಿ ತೀವ್ರವಾದ ಪಾರ್ಶ್ವವಾಯು ಉಂಟಾಗಿತ್ತು. ಪಾರ್ಶ್ವವಾಯುವಿಗೂ ಮುನ್ನ (Stroke) 4 ರಿಂದ 5 ದಿನಗಳ ಮೊದಲು ಅವರು ತಲೆನೋವು, ತಲೆತಿರುಗುವಿಕೆ ಮತ್ತು ವಾಂತಿಯಿಂದ ಬಳಲುತ್ತಿದ್ದರು. ಕೃಷ್ಣ ಅವರ ಕುಟುಂಬ, ವಿಶೇಷವಾಗಿ ಅವರ ಪತ್ನಿ ಪ್ರಿಯಾಂಕಾ, ಅವರಿಗೆ ಅತ್ಯುತ್ತಮ ವೈದ್ಯಕೀಯ ಆರೈಕೆ ನೀಡಲು ಸಾಧ್ಯವಿರುವ ಎಲ್ಲ ಕೆಲಸವನ್ನು ಮಾಡಿದರು. ಅವರನ್ನು ತುರ್ತು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಹಲವಾರು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು, ಆದರೆ ಅವರ ಸ್ಥಿತಿ ಸುಧಾರಿಸಲಿಲ್ಲ. ಅವರ ರಕ್ತದೊತ್ತಡವನ್ನು ಸುಧಾರಿಸಲು ಅವರಿಗೆ ನಿರಂತರ ಔಷಧಿಗಳ ಅಗತ್ಯವಿತ್ತು ಮತ್ತು ಅವರ ಗ್ಲ್ಯಾಸ್ಗೋ ಕೋಮಾ ಸ್ಕೇಲ್ (ಜಿಸಿಎಸ್) ಸ್ಕೋರ್ ಕುಸಿಯುತ್ತಲೇ ಇತ್ತು, ಇದು ಅವರ ಮೆದುಳು ಕಾಂಡಕ್ಕೆ ಗಂಭೀರ ಹಾನಿಯನ್ನು ಉಂಟು ಮಾಡಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಕೃಷ್ಣ ಅವರನ್ನು ಫೆಬ್ರವರಿ 22 ರಂದು ಹೆಚ್ಚಿನ ವಿಶೇಷ ಆರೈಕೆಗಾಗಿ ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಡಾ. ಸುನಿಲ್ ಕಾರಂತ್ ನೇತೃತ್ವದ ವೈದ್ಯಕೀಯ ತಂಡವು ರಕ್ತದೊತ್ತಡ, ಶ್ವಾಸಕೋಶದ ಆರೈಕೆ ಮತ್ತು ನಿರಂತರ ಮೇಲ್ವಿಚಾರಣೆ ಸೇರಿದಂತೆ ತಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿತು. ಆದರೆ ಇತ್ತೀಚೆಗೆ ಮೆದುಳಿಗೆ ಶಾಶ್ವತ ಹಾನಿಯಾಗಿರುವ ಬಗ್ಗೆ ತಿಳಿಯಿತಿ, ಇದು ಮೆದುಳಿನ ಸಾವಿಗೆ ಕಾರಣವಾಯಿತು.
ವೈದ್ಯರು ಹೇಳಿದ ಈ ಸುದ್ದಿಯನ್ನು ಕೇಳಿ, ಕೃಷ್ಣ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ಆ ಕುಟುಂಬಕ್ಕೆ ಕೃಷ್ಣ ಅವರೇ ಆಸರೆಯಾಗಿದ್ದರು. ಪತ್ನಿ ಪ್ರಿಯಾಂಕಾ ತಮ್ಮ 5 ವರ್ಷದ ಮಗನೊಂದಿಗೆ ಹೇಗೆ ಮುಂದಿನ ಜೀವನವನ್ನು ಸಾಗಿಸುವುದು ಚಿಂತೆಯಾಗಿದೆ. ಇದರ ಮಧ್ಯೆ ಅವರು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಸಮಾಜಕ್ಕೆ ಸ್ಪೂರ್ತಿಯಾಗಿದ್ದಾರೆ. ಅವರು ತಮ್ಮ ಪತಿಯ ಅಂಗಗಳನ್ನು ದಾನ ಮಾಡಲು ಮುಂದಾದಾರು.ಈ ಮೂಲಕ ಹಲವಾರು ಜನರ ಜೀವಗಳನ್ನು ಉಳಿಸುವ ನಿಸ್ವಾರ್ಥ ಕಾರ್ಯವನ್ನು ಮಾಡಲು ನಿರ್ಧರಿಸಿದರು. ಅಂಗಾಂಗ ದಾನ ಮಾಡುವುದು ಸುಲಭದ ಮಾತಲ್ಲ, ಅದರಲ್ಲೂ ಗ್ರಾಮೀಣ ಭಾಗದ ವ್ಯಕ್ತಿಗಳು ಇದಕ್ಕೆ ಒಪ್ಪುದಿಲ್ಲ.ಅದರೂ ಅವರು ಮತ್ತೊಬ್ಬರ ಜೀವನ ಉಳಿಸಲು ದಾನ ಮಾಡಿದ್ದಾರೆ. ಎರಡು ಮೂತ್ರಪಿಂಡಗಳು, ಹೃದಯ, ಯಕೃತ್ತು ಮತ್ತು ಕಾರ್ನಿಯಾಗಳು ಸೇರಿದಂತೆ ದಾನ ಮಾಡಿದ ಅಂಗಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಯಿತು ಮತ್ತು ಹಲವಾರು ಜೀವಗಳನ್ನು ಉಳಿಸಲು ಸಹಾಯವಾಹಿದೆ.
ಈ ಬಗ್ಗೆ ಮಾತನಾಡಿದ ಕನ್ಸಲ್ಟೆಂಟ್ – ಕ್ರಿಟಿಕಲ್ ಕೇರ್ ಮತ್ತು ಐಸಿಯು ವಿಭಾಗದ ವೈದ್ಯ ಡಾ. ನಾರಾಯಣ ಸ್ವಾಮಿ ಮೂಲ, “ತೀವ್ರವಾದ ಮಿದುಳಿನ ಗಾಯದ ಸಂದರ್ಭಗಳಲ್ಲಿ, ಕುಟುಂಬಗಳು ಆಗಾಗ್ಗೆ ಆಘಾತಕ್ಕೊಳಗಾಗುತ್ತಾರೆ ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ಅವರಿಗೆ ಹೆಚ್ಚು ಸಮಯವಿರುವುದಿಲ್ಲ. ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸುವುದು ಉದಾರವಾದ ಕಾರ್ಯ ಮಾತ್ರವಲ್ಲದೆ ಅಪಾರ ಧೈರ್ಯದ ಕಾರ್ಯವಾಗಿದೆ. ತನ್ನ ದುಃಖದ ಹೊರತಾಗಿಯೂ, ಅವರ ಪತ್ನಿಯ ನಿರ್ಧಾರವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಏಕೆಂದರೆ ಅವರು ತಮ್ಮ ನಷ್ಟವನ್ನು ಇತರರಿಗೆ ಬದುಕಲು ಒಂದು ಅವಕಾಶವಾಗಿ ಪರಿವರ್ತಿಸಿದರು.”
ಪಾರ್ಶ್ವವಾಯುವಿಗೆ ತುತ್ತಾದ ಯುವಕ: ಅಂಗಾಂಗ ದಾನದ ಉದಾತ್ತ ಕಾರ್ಯ ಮಾಡಲು ಸ್ವಯಂ ಮುಂದೆ ಬಂದ ಕುಟುಂಬ.
ಮತ್ತೊಂದು ಇಂತಹದೇ ಒಂದು ಘಟನೆ ನಡೆದಿದೆ. ಪಾರ್ಶ್ವವಾಯು ಎಂಬುದು ಯಾರಿಗೆ ಹೇಗೆಬೇಕಾದರು ಬರಬಹುದು, ಅದರಲ್ಲಿ ಹಿರಿಯರು, ಕಿರಿಯರು ಎಂಬ ಭೇದ ಭಾವವಿಲ್ಲ. ಯುವ ವಯಸ್ಸಿನ ಜನರಿಗೆ, ಪಾರ್ಶ್ವವಾಯುವಿನ ಪರಿಣಾಮಗಳು ಇನ್ನೂ ಕೆಟ್ಟದಾಗಿರಬಹುದು. ಬದುಕುಳಿಯುವ ಅಪಾಯದೊಂದಿಗೆ, ಸಾವಿನ ಸಾಧ್ಯತೆ 30% ರಷ್ಟು ಇರುತ್ತದೆ, ಮತ್ತು ಬದುಕುಳಿದವರು ಸಹ ಹೆಚ್ಚಾಗಿ ದೀರ್ಘಕಾಲದ ಅಂಗವೈಕಲ್ಯವನ್ನು ಎದುರಿಸುತ್ತಾರೆ ಮತ್ತು ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿರುತ್ತದೆ, ಇದು ಅವರ ಕೆಲಸ ಮಾಡುವ ಅಥವಾ ಸ್ವತಂತ್ರವಾಗಿ ಬದುಕುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಪಾರ್ಶ್ವವಾಯು ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಬಹುದು ಮತ್ತು ಸಾವಿಗೆ ಕಾರಣವಾಗಬಹುದು.
ಪಾರ್ಶ್ವವಾಯು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ, ಆದರೆ ಇತ್ತೀಚೆಗೆ, ಯುವಜನರಲ್ಲಿ, ಅಂದರೆ 20 ಮತ್ತು 30ರ ಹರೆಯದವರಲ್ಲಿಯೂ ಸಹ ಪಾರ್ಶ್ವವಾಯು ಹೆಚ್ಚಾಗುತ್ತಿದೆ. ಯುವತಿಯರು ಪಾರ್ಶ್ವವಾಯುವಿಗೆ ಒಳಗಾಗುವುದು ಇನ್ನೂ ಅಪರೂಪ. ಇತ್ತೀಚೆಗೆ ಶಿವಾನಿ (28) ಮತ್ತು ಪ್ರವೀಣ್ ಕುಮಾರ್ (31) ಎಂಬ ಇಬ್ಬರು ಯುವ ರೋಗಿಗಳು ಈ ಅಪಾಯಕ್ಕೆ ತುತ್ತಾಗಿದ್ದರು. ಇವರಿಗೂ ಕೂಡ ಡಾ. ಸುನಿಲ್ ಕಾರಂತ್, ಮತ್ತು ಡಾ. ಮಹೇಶ ಪದ್ಯಾಣ ಅವರು ಅತ್ಯುತ್ತಮ ವೈದ್ಯಕೀಯ ಆರೈಕೆ ಮಾಡಿದರು. ಅದರ ಹೊರತಾಗಿಯೂ ತೀವ್ರ ಪಾರ್ಶ್ವವಾಯುವಿಗೆ ಒಳಗಾಗಿ ನಿಧನರಾದರು. ಇವರ ಕುಟುಂಬವು ಕೂಡ ಈ ಇಬ್ಬರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾದರಿಯಾಗಿದೆ.
ಶಿವಾನಿ ಕೇವಲ 28 ವರ್ಷ ವಯಸ್ಸಿನವಳಾಗಿದ್ದಳು, ಆಕೆ ಈ ಸಮಸ್ಯೆಯಿಂದ ಜೀವಿತಾವಧಿಯಲ್ಲಿ ಹೆಚ್ಚು ಕಷ್ಟಗಳನ್ನು ಎದುರಿಸಿದ್ದಳು. ಈಕೆ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಹೆತ್ತವರನ್ನು ಕಳೆದುಕೊಂಡು, ಚಿಕ್ಕಪ್ಪಂದಿರ ಪ್ರೀತಿಯಲ್ಲಿ ಬೆಳೆದರು. ಅವಳಿಗೊಂದು ಒಳ್ಳೆಯ ಹುಡುಗನ್ನು ನೋಡಿ ಮದುವೆ ಮಾಡಿದರು. ಇನ್ನಾದರೂ ಆಕೆ ಸಂತೋಷವಾಗಿರುತ್ತಾಳೆ ಎಂದು ಕುಟುಂಬ ಖುಷಿಯಾಗಿತ್ತು. ಆದರೆ ಅವಳು ಮದುವೆಯಾದ ಸ್ವಲ್ಪ ವರ್ಷದಲ್ಲಿ ಆಕೆಯ ಗಂಡ ಸಾವನ್ನಪ್ಪಿದ್ದಾರೆ. ಅವಳ 3 ವರ್ಷದ ಮಗುವನ್ನು ಒಬ್ಬಂಟಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಳು. ಆದರೆ ಮಾರ್ಚ್ 10ರಂದು ಶಿವಾನಿಗೆ ತೀವ್ರವಾದ ಇಸ್ಕೆಮಿಕ್ ಸ್ಟ್ರೋಕ್ಗೆ ಒಳಗಾದರು. ಆರಂಭಿಕ ಚಿಕಿತ್ಸೆ ಪಡೆದ ನಂತರ, ವಿಶೇಷ ಆರೈಕೆಗಾಗಿ ಮಾರ್ಚ್ 13ರಂದು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್ ಅವಳ ಸ್ಥಿತಿ ಮತ್ತಷ್ಟು ಹದಗೆಟ್ಟಿತು ಮತ್ತು ಮಾರ್ಚ್ 16 ರಂದು ಮೆದುಳು ನಿಷ್ಕ್ರಿಯಗೊಳಿಸಲಾಗಿದೆ ಎಂದು ವೈದ್ಯರು ಹೇಳಿದರು. ಅವಳನ್ನು ಸಣ್ಣ ವಯಸ್ಸಿನಿಂದ ಬೆಳೆಸಿದ ಅವಳ ಚಿಕ್ಕಪ್ಪಂದಿರು ತುಂಬಾ ಕಾಳಜಿಯನ್ನು ವಹಿಸಿದರು. ಇದೀಗ ಅವಳ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡು, ಆಕೆಯ ಳ ಅಂಗಗಳನ್ನು ದಾನ ಮಾಡುವ ಮೂಲಕ ಅವಳ ಸ್ಮರಣೆಯನ್ನು ಗೌರವಿಸಿದರು.
ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ನಿಮಗೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ
ಇನ್ನೊಂದು ಇಂತಹದೇ ಘಟನೆ ಕೋಲಾರದಲ್ಲಿ ನಡೆದಿದೆ. 31 ವರ್ಷದ ಪ್ರವೀಣ್ ಕುಮಾರ್ ಅವರ ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದರು. ಅವರಿಗೆ 4 ವರ್ಷದ ಮತ್ತು 1 ವರ್ಷದ ಮಗು ಇದೆ, ಮತ್ತು ಅವರ ಪತ್ನಿ ಮತ್ತು ವೃದ್ಧ ಪೋಷಕರು ಅವರ ಮೇಲೆ ಅವಲಂಬಿತರಾಗಿದ್ದರು. ಒಂದು ದಿನ, ಪ್ರವೀಣ್ ಅವರ ಮೆದುಳಿನ ಎಡಭಾಗದ ಮೇಲೆ ಪರಿಣಾಮ ಬೀರುವ ತೀವ್ರ ಪಾರ್ಶ್ವವಾಯುವಿಗೆ ಒಳಗಾದರು. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ತುರ್ತು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಹದಗೆಟ್ಟಾಗ, ಹೆಚ್ಚಿನ ಆರೈಕೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ರಕ್ತದೊತ್ತಡಕ್ಕೆ ಸಹಾಯವಾಗಲು ಔಷಧಿಗಳನ್ನು ನೀಡಲಾಯಿತು. ಅವರ ಜೀವ ಉಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಯಿತು. ಮೆದುಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಸೇರಿದಂತೆ ವೈದ್ಯಕೀಯ ತಂಡವು ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಿತು. ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಆ ವ್ಯಕ್ತಿಯ ಕುಟುಂಬದವರು ಅವರ ಹೃದಯ, ಯಕೃತ್ತು, 2 ಮೂತ್ರಪಿಂಡಗಳು, ಮೇದೋಜ್ಜೀರಕ ಗ್ರಂಥಿ ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಯಿತು ಮತ್ತು ತೀವ್ರ ಅಗತ್ಯವಿರುವ ಜನರಿಗೆ ಕಸಿ ಮಾಡಲಾಯಿತು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Fri, 11 April 25