ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯಬಹುದೇ? ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳು ಇಲ್ಲಿವೆ!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ನಿಜವಾಗಿಯೂ ಪ್ರಯೋಜನಗಳಿವೆಯೇ? ಇದರ ರಸ ಜೀರ್ಣಕ್ರಿಯೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಇದರಿಂದ ಹೊಟ್ಟೆನೋವು, ಅತಿಸಾರದಂತಹ ಸಮಸ್ಯೆಗಳು ಉಂಟಾಗಬಹುದೇ? ಮಧುಮೇಹ ಇರುವವರು ಮತ್ತು ಗರ್ಭಿಣಿಯರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಅಲೋವೆರಾ ಜ್ಯೂಸ್ ಕುಡಿಯುವ ಮೊದಲು ತಿಳಿದುಕೊಳ್ಳಬೇಕಾದ ಆರೋಗ್ಯ ಮಾಹಿತಿ, ಸಂಭವನೀಯ ಅಡ್ಡಪರಿಣಾಮಗಳು ಮತ್ತು ಸುರಕ್ಷತಾ ಸಲಹೆಗಳು ಈ ಸ್ಟೋರಿಯಲ್ಲಿದೆ.

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಅನೇಕರು ನಂಬುತ್ತಾರೆ. ಲೋಳೆರಸದಲ್ಲಿ ಕೆಲವು ಉಪಯುಕ್ತ ಸಂಯುಕ್ತಗಳಿದ್ದು, ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲಿಯೂ ತೂಕ ಇಳಿಸುವುದು, ಚರ್ಮದ ಕಾಂತಿ ಹೆಚ್ಚಿಸುವುದು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಇಚ್ಚಿಸುವವರು ವೈದ್ಯರ ಸಲಹೆ ಪಡೆದು ಇದರ ರಸದ ಸೇವನೆ ಮಾಡಬಹುದು. ಹಾಗಾದರೆ ಇದನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು, ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಸಿಗುವ ಪ್ರಯೋಜನ?
ಅಲೋವೆರಾದಲ್ಲಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಕೆಲವು ಸಂಯುಕ್ತಗಳಿವೆ. ಇವುಗಳ ಆರೋಗ್ಯ ಪ್ರಯೋಜನಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಇದು ಮಲವಿಸರ್ಜನೆಗೆ ಸಹಾಯ ಮಾಡಬಹುದು. ಆದರೆ ಇದರ ರಸದಲ್ಲಿ ಅಲೋಯಿನ್ ಎಂಬ ಪದಾರ್ಥವಿರಬಹುದು. ಇದು ಅತಿಸಾರ ಮತ್ತು ಹೊಟ್ಟೆನೋವಿಗೆ ಕಾರಣವಾಗಬಹುದು. ಆದ್ದರಿಂದ ಮಲಬದ್ಧತೆ ನಿವಾರಣೆಗಾಗಿ ವೈದ್ಯರ ಸಲಹೆಯಿಲ್ಲದೆ ಬಳಸುವುದು ಸೂಕ್ತವಲ್ಲ. ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಕೊಬ್ಬು ಕರಗುತ್ತದೆ ಅಥವಾ ರಕ್ತ ಶುದ್ಧಿಯಾಗುತ್ತದೆ ಎಂಬ ಹೇಳಿಕೆಗಳಿಗೆ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ತೂಕ ನಿಯಂತ್ರಣಕ್ಕೆ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಮುಖ್ಯವಾಗಿವೆ.
ಇದನ್ನೂ ಓದಿ: ನೋಡಲು ಚಿಕ್ಕದಾಗಿದ್ದರೂ ಪೋಷಕಾಂಶಗಳು ಹೇರಳ! ಕಿವಿ ಹಣ್ಣನ್ನು ವಾರಕ್ಕೊಮ್ಮೆಯಾದರೂ ತಿನ್ನಿ
ಅಲೋವೆರಾ ಜ್ಯೂಸ್‌ನಿಂದ ಉಂಟಾಗುವ ಅಡ್ಡಪರಿಣಾಮಗಳು
ಈ ಜ್ಯೂಸ್ ಕುಡಿಯುವುದರಿಂದ ಕೆಲವರಿಗೆ ಹೊಟ್ಟೆನೋವು, ಹೊಟ್ಟೆಯಲ್ಲಿ ಸೆಳೆತ ಮತ್ತು ಅತಿಸಾರ ಉಂಟಾಗಬಹುದು. ಅಲೋಯಿನ್ ಹೊಂದಿರುವ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ದೇಹದಲ್ಲಿ ನೀರು ಮತ್ತು ಅಗತ್ಯ ಲವಣಗಳ ಕೊರತೆ ಉಂಟಾಗುವ ಅಪಾಯವಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೂ ಪರಿಣಾಮ ಬೀರಬಹುದು. ಮಧುಮೇಹಕ್ಕೆ ಔಷಧಿ ತೆಗೆದುಕೊಳ್ಳುವವರು, ಮೂತ್ರವರ್ಧಕ ಔಷಧಿಗಳನ್ನು ಬಳಸುವವರು ಹಾಗೂ ಮೂತ್ರಪಿಂಡ ಅಥವಾ ಕರುಳಿನ ಸಮಸ್ಯೆ ಇರುವವರು ವೈದ್ಯರ ಸಲಹೆಯಿಲ್ಲದೆ ಇದನ್ನು ಸೇವಿಸಬಾರದು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಇದನ್ನು ಕುಡಿಯುವುದನ್ನು ತಪ್ಪಿಸುವುದು ಉತ್ತಮ.
ಅಲೋವೆರಾ ಜ್ಯೂಸ್ ಕುಡಿಯುವಾಗ ಯಾವ ರೀತಿ ಮುನ್ನೆಚ್ಚರಿಕೆ ಅಗತ್ಯ?
ಮನೆಯಲ್ಲಿರುವ ಅಲೋವೆರಾವನ್ನು ಕತ್ತರಿಸಿ ನೇರವಾಗಿ ರಸ ಕುಡಿಯುವುದಕ್ಕಿಂತ, ಅಲೋಯಿನ್ ತೆಗೆದುಹಾಕಿರುವುದಾಗಿ ಸ್ಪಷ್ಟವಾಗಿ ನಮೂದಿಸಿರುವ ಮತ್ತು ಗುಣಮಟ್ಟದ ಮಾನದಂಡಗಳನ್ನು ಪಾಲಿಸುವ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಉತ್ತಮ. ಮನೆಯಲ್ಲಿ ತಯಾರಿಸುವಾಗ ಹಳದಿ ಬಣ್ಣದ ರಸವನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಮುಖ್ಯ. ಆದರೂ, ತೊಳೆದ ಮಾತ್ರಕ್ಕೆ ಎಲ್ಲ ಹಾನಿಕಾರಕ ಪದಾರ್ಥಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವ ಅಭ್ಯಾಸ ಮಾಡಿಕೊಳ್ಳುವ ಮೊದಲು ಅದರ ಸುರಕ್ಷತೆಯನ್ನು ಪರಿಗಣಿಸಬೇಕು. ಈಗಾಗಲೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ಒಟ್ಟಿನಲ್ಲಿ, ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ಕಡ್ಡಾಯವಾಗಿ ಅಗತ್ಯವಿರುವ ಪಾನೀಯವಲ್ಲ. ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡುವುದು ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




