Corona Warriors: ನಮ್ಮದು ಶಮನವಾಗದ ನೋವು; ವೈದ್ಯರ ಮೇಲಿನ ದೌರ್ಜನ್ಯ ನಿರ್ಲಕ್ಷಿಸಬಹುದಾದಷ್ಟು ನಿಕೃಷ್ಟವಾಯಿತೇ?

Corona Warriors: ನಮ್ಮದು ಶಮನವಾಗದ ನೋವು; ವೈದ್ಯರ ಮೇಲಿನ ದೌರ್ಜನ್ಯ ನಿರ್ಲಕ್ಷಿಸಬಹುದಾದಷ್ಟು ನಿಕೃಷ್ಟವಾಯಿತೇ?
ಸಾಂಕೇತಿಕ ಚಿತ್ರ

Doctor's Diary: ನಿನ್ನ ಅಮ್ಮನಿಗೆ ಚಿಕಿತ್ಸೆ ನೀಡಿದ್ದ ತಂಡದಲ್ಲಿ ನಾನೂ ಇದ್ದೆ. ನಾನೂ ಒಬ್ಬ ವೈದ್ಯೆ. ಹೊಡೆಯಬೇಕೆನಿಸಿದರೆ ನಿನ್ನ ಕಣ್ಣ ಮುಂದೆಯೇ ಇದ್ದೇನೆ, ನಿನಗೆ ಇಷ್ಟ ಬಂದಂತೆ ಮಾಡು.

TV9kannada Web Team

| Edited By: Skanda

Jun 03, 2021 | 11:33 AM

ದೇಶವೀಗ ಕೊರೊನಾ ಎರಡನೇ ಅಲೆ ಹೊಡೆತದಿಂದ ನಲುಗುತ್ತಿದೆ. ಸಾವು, ನೋವುಗಳ ವರದಿಗೆ ಪೂರ್ಣ ವಿರಾಮವೇ ಇಲ್ಲದಂತಾಗಿದೆ. ಯಾವ ಮನೆಯಲ್ಲಿ ಯಾವಾಗ ಸೂತಕದ ಛಾಯೆ ಆವರಿಸಿಕೊಳ್ಳುತ್ತದೋ ಎಂಬ ಆತಂಕ ಆವರಿಸಿಕೊಂಡಿದೆ. ಕಳೆದ ಒಂದೂವರೆ ವರ್ಷದಿಂದಲೂ ಇಂತಹ ವಿಷಮ ಪರಿಸ್ಥಿತಿಯನ್ನು ಅತಿ ಹತ್ತಿರದಿಂದ ನೋಡುತ್ತಿರುವವರಲ್ಲಿ, ರೋಗಿಯ, ರೋಗಿಯ ಕಡೆಯವರ ಆತಂಕಗಳಿಗೆ ಸಾಕ್ಷಿಯಾಗುತ್ತಿರುವವರಲ್ಲಿ ಮುಂಚೂಣಿಯಲ್ಲಿರುವುದು ವೈದ್ಯವರ್ಗ. ದುರದೃಷ್ಟವಶಾತ್, ಕೊರೊನಾ ಸೋಂಕಿತರ ಸೇವೆಯಲ್ಲಿ ನಿರತರಾಗಿದ್ದ ವೈದ್ಯರ ಪೈಕಿ ಸಾವಿರಕ್ಕೂ ಅಧಿಕ ಮಂದಿ ತಾವೂ ಸೋಂಕಿಗೆ ಒಳಗಾಗಿ ಜೀವ ತೆತ್ತಿದ್ದಾರೆ. ಲೆಕ್ಕವಿಲ್ಲದಷ್ಟು ವೈದ್ಯರ ಕುಟುಂಬಸ್ಥರು ಸೋಂಕಿನಿಂದ ನರಳಿದ್ದಾರೆ. ಈ ಎಲ್ಲಾ ಸಂಕಷ್ಟಗಳ ಮಧ್ಯೆ ವೈದ್ಯರನ್ನು ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ದೌರ್ಜನ್ಯ. ಕೊರೊನಾ ಆರಂಭವಾದ ನಂತರವಂತೂ ವೈದ್ಯರ ಮೇಲಿನ ದೌರ್ಜನ್ಯದ ಪ್ರಮಾಣವೂ ಹೆಚ್ಚುತ್ತಿದೆ. ಅಂತಹ ಸನ್ನಿವೇಶಕ್ಕೆ ಸಾಕ್ಷಿಯಾದ, ಆ ಹೊತ್ತಿನ ಆತಂಕವನ್ನು ಅನುಭವಿಸಿದ ವೈದ್ಯರೊಬ್ಬರು ತಾವು ಎದುರಿಸುತ್ತಿರುವ ಕಷ್ಟಗಳನ್ನು ಲೇಖನದ ಮೂಲಕ ಹರವಿಟ್ಟಿದ್ದಾರೆ.

ಲೇಖಕ – ಡಾ.ಲಕ್ಷ್ಮೀಶ ಜೆ.ಹೆಗಡೆ

ಸರಿಯಾಗಿ ನೆನಪಿದೆ. ಈಗ ಸುಮಾರು ಮೂರು ತಿಂಗಳ ಹಿಂದೆ ಒಂದು ದಿನ ನಾನು ನಮ್ಮ ಆಸ್ಪತ್ರೆಯ ವೈದ್ಯಶಾಸ್ತ್ರ(General medicine) ವಿಭಾಗದಲ್ಲಿ 24 ಗಂಟೆಗಳ ಎಮೆರ್ಜೆನ್ಸಿ ಡ್ಯೂಟಿಯಲ್ಲಿದ್ದೆ. ಅಂದರೆ ಆ ಇಡೀ ದಿನ ಯಾವುದೇ ಎಮರ್ಜೆನ್ಸಿ ಕೇಸು ಎಷ್ಟೇ ಹೊತ್ತಿನಲ್ಲಿ ಬಂದರೂ ನಾನು ಹೋಗಿ ಅಟೆಂಡ್ ಮಾಡಿ ಚಿಕಿತ್ಸೆ ಕೊಡಬೇಕು. ರಾತ್ರಿ ಮೂರು ಗಂಟೆ ಹೊತ್ತಿಗೆ ನನಗೆ ಫೋನ್ ಬಂತು. ವಯಸ್ಸಾದ ಒಬ್ಬ ರೋಗಿ ಖಾಸಗಿ ಆಸ್ಪತ್ರೆಯೊಂದರಿಂದ ಹೆಚ್ಚಿನ ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಿಗೆ ತೀವ್ರ ಹೃದಯಾಘಾತವಾಗಿದೆಯಂತೆ. ಆ ಖಾಸಗಿ ಆಸ್ಪತ್ರೆಯವರು ನಮಗೆ ಫೋನ್ ಮಾಡಿದ್ದರು ಎಂಬುದಾಗಿ ಡ್ಯೂಟಿ ನರ್ಸ್ ನನಗೆ ಫೋನಿನಲ್ಲಿ ಹೇಳಿದರು. ನಾನು ಎರಡು ನಿಮಿಷದೊಳಗೆ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗಕ್ಕೆ ಹೋದೆ. ನಾನು ಅಲ್ಲಿಗೆ ಹೋಗುವುದಕ್ಕೂ ಆ ರೋಗಿ ಬರುವುದಕ್ಕೂ ಸರಿಯಾಯಿತು. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ 75 ವರ್ಷ ವಯಸ್ಸಿನ ರೋಗಿಯ ಜತೆ ಹತ್ತು ಹದಿನೈದು ಜನ ಸಂಬಂಧಿಕರೂ ಬಂದಿದ್ದರು.

ಬಂದ ತಕ್ಷಣ ನಾನು ನಾಡಿ ಹಿಡಿದು ನೋಡಿದಾಗ ನಾಡಿಮಿಡಿತ ಸಿಗುತ್ತಿಲ್ಲ. ಸ್ಟೆತೋಸ್ಕೋಪ್ ಇಟ್ಟು ನೋಡಿದರೆ ಹೃದಯ ಬಡಿತದ ಶಬ್ದ ಕೇಳುತ್ತಿಲ್ಲ. ಅಲ್ಲಿಗೆ ನಮ್ಮ ಆಸ್ಪತ್ರೆಗೆ ಬರುವುದಕ್ಕೂ ಮೊದಲೇ ದಾರಿಯಲ್ಲೇ ರೋಗಿ ಸಾವನ್ನಪ್ಪಿದ್ದಾರೆ ಎನ್ನುವುದು ಖಚಿತವಾಯಿತು. ಅಂದರೆ Brought Dead. ಆದರೂ ಸ್ತಂಭನವಾದ ಹೃದಯ ಮತ್ತೆ ಬಡಿಯುವಂತೆ ಮಾಡುವ ಕೊನೆಯ ಪ್ರಕ್ರಿಯೆಯಾದ CPCR ಅನ್ನು ಕೊಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ನಾನು ರೋಗಿಯ ಸಂಬಂಧಿಕರಿಗೆ ಪರಿಸ್ಥಿತಿಯನ್ನೆಲ್ಲ ವಿವರಿಸಿ, ನಮ್ಮ ಆಸ್ಪತ್ರೆಗೆ ಬರುವುದಕ್ಕೂ ಮೊದಲೇ ರೋಗಿ ಸಾವನ್ನಪ್ಪಿದ್ದಾರೆಂದು ತಿಳಿಸಿದೆ. ಆದರೆ ರೋಗಿಯ ಕಡೆಯವರು ನನ್ನ ಮಾತುಗಳನ್ನು ಕೇಳಲೇ ತಯಾರಿಲ್ಲ. ರೋಗಿ ಸತ್ತಿಲ್ಲ, ಜೀವಂತವಾಗಿದ್ದಾರೆ. ನೀವೇ ಏನೂ ಚಿಕಿತ್ಸೆ ಕೊಡುತ್ತಿಲ್ಲ. ನಮ್ಮ ರೋಗಿಗೆ ಏನಾದರೂ ಆದರೆ ನಿಮ್ಮನ್ನು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ರೋಗಿ ಜೀವಂತವಾಗಿ ಮರಳಲೇ ಬೇಕು ಎಂದೆಲ್ಲ ಕಿರುಚಾಡುತ್ತ ಬೆದರಿಕೆ ಹಾಕಲಾರಂಭಿಸಿದರು. ಡ್ಯೂಟಿ ನರ್ಸ್​ ಹಾಗೂ ವಾರ್ಡ್​ ಬಾಯ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದರು. ಎಲ್ಲೆಲ್ಲಿಗೋ ಫೋನ್ ಮಾಡಿ ಗಲಾಟೆ ಮಾಡಲು ಇನ್ನಷ್ಟು ಜನರನ್ನು ಸೇರಿಸಲಾರಂಭಿಸಿದರು. ರೋಗಿ ಸತ್ತ ಮೇಲೆ ಯಾವ ವೈದ್ಯರಿಗೂ ಏನೂ ಮಾಡಲಾಗುವುದಿಲ್ಲ ಎಂದು ನಾನು ಎಷ್ಟೇ ಸಮಾಧಾನದಿಂದ ವಿವರಿಸಿದರೂ ಅವರು ಕೇಳಲು ತಯಾರಿರಲಿಲ್ಲ.

ನರ್ಸ್​ಗಳು, ಇತರೆ ಆರೋಗ್ಯ ಕಾರ್ಯಕರ್ತರೆಲ್ಲ ಭಯಭೀತರಾದರು. ರೋಗಿಯ ಕಡೆಯವರು ಯಾವುದೇ ಕ್ಷಣದಲ್ಲಾದರೂ ನಮ್ಮ ಮೇಲೆ ಹಲ್ಲೆ ಮಾಡುವ ಹಂತದಲ್ಲಿದ್ದರು. ಅಷ್ಟು ಹೊತ್ತಿಗೆ ಅದೆಲ್ಲಿಂದ ಬಂದರೋ, ಯಾಕೆ ಬಂದರೋ ಗೊತ್ತಿಲ್ಲ. ಸ್ಥಳೀಯ ರಾಜಕಾರಣಿಯೊಬ್ಬರು ಬಂದು ಏನು ಎತ್ತ ಎಂದೆಲ್ಲ ವಿಚಾರಿಸಿ ಅದು ಹೇಗೋ ರೋಗಿಯ ಕಡೆಯವರನ್ನು ಸಮಾಧಾನಿಸಿ ನಮ್ಮ ಮೇಲೆ ಹಲ್ಲೆ ಮಾಡದಂತೆ ತಡೆದರು. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ರಾಜಕಾರಣಿಯೊಬ್ಬರ ಬೆಂಗಾವಲಿನಲ್ಲಿ ನಾನು ರೋಗಿ ಸತ್ತಿದ್ದಾರೆ ಎಂದು ಸಂಬಂಧಿಕರಿಗೆ ವಿವರಿಸಿ Death Declare ಮಾಡಬೇಕಾಯಿತು.

ಕೊವಿಡ್ ಎರಡನೆ ಅಲೆಯಲ್ಲಿ ರೋಗಿಗಳಿಂದ ತುಂಬಿ ತುಳುಕುತ್ತಿತ್ತು ನಮ್ಮ ಆಸ್ಪತ್ರೆ. ನಾನು ಕೊವಿಡ್ ಡ್ಯೂಟಿ ಮಾಡುತ್ತಿದ್ದ ವಿಭಾಗದಲ್ಲಿ ಒಬ್ಬ 60 ವರ್ಷದ ರೋಗಿಯೊಬ್ಬರು ಸಾಮಾನ್ಯ ವಾರ್ಡಿನಲ್ಲಿ ಅಡ್ಮಿಟ್ ಆಗಿದ್ದರು. ರೌಂಡ್ಸ್ ಸಮಯದಲ್ಲಿ ಅವರ ಆಕ್ಸಿಜನ್ ಪ್ರಮಾಣ ಬಹಳ ಕಡಿಮೆಯಿದ್ದುದ್ದರಿಂದ ಅವರನ್ನು ಐಸಿಯುಗೆ ಸಾಗಿಸಿ ವೆಂಟಿಲೇಟರ್ ಅಳವಡಿಸಿದೆ. ಪರಿಸ್ಥಿತಿ ತೀರಾ ವಿಷಮವಾಗಿದ್ದರಿಂದ ಮರುದಿವಸ ಬೆಳಿಗ್ಗೆ ಆ ರೋಗಿ ತೀರಿಕೊಂಡರು. ಆ ರೋಗಿಯ ಮಗ ಬಂದು ನನ್ನ ಹತ್ತಿರ ಗಲಾಟೆ ಮಾಡಲಾರಂಭಿಸಿದರು. ನಮ್ಮ ತಂದೆ ನಿನ್ನೆ ಸಂಜೆ ತನಕ ಚೆನ್ನಾಗಿದ್ದರು. ಅವರು ಸಾಮಾನ್ಯ ವಾರ್ಡಿನಲ್ಲಿರುವಾಗ ನಮ್ಮ ಹತ್ತಿರ ಮಾತನಾಡುತ್ತಿದ್ದರು. ಐಸಿಯುಗೆ ಸೇರಿಸಿದ ಮೇಲೆ ಮಾತನಾಡಲಿಲ್ಲ. ಈಗ ಇದ್ದಕ್ಕಿದ್ದಂತೆಯೇ ತೀರಿಕೊಂಡಿದ್ದಾರೆ ಅಂದರೆ ನೀವೇ ಐಸಿಯುನಲ್ಲಿ ಏನೋ ಮಾಡಿದ್ದೀರಿ. ನನ್ನ ಬುದ್ಧಿ ಯಾವಾಗ ಹಾಳಾಗಿ ನನಗೆ ತಲೆಕೆಡುತ್ತದೆ ಗೊತ್ತಿಲ್ಲ. ಆಗ ನಿಮ್ಮನ್ನು ನೋಡಿಕೊಳ್ಳುತ್ತೇನೆ, ನಿಮಗೆ ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ, ಎಲ್ಲದ್ದಕ್ಕೂ ನೀವೇ ಜವಾಬ್ದಾರರು ಎಂದೆಲ್ಲ ಬೆದರಿಕೆಯೊಡ್ಡುತ್ತಾ ಕಿರುಚಿದರು. ನಾನು ಹೇಗೋ ಅವರನ್ನು ಸಂಭಾಳಿಸಿ ಕಳಿಸಿ ಆಸ್ಪತ್ರೆಯ ಆಡಳಿತ ವರ್ಗಕ್ಕೆ ಘಟನೆಯನ್ನು ವರದಿ ಮಾಡಿದೆ.

ನಾನೂ ಒಬ್ಬ ವೈದ್ಯೆ. ಹೊಡೆಯಬೇಕೆನಿಸಿದರೆ ನಿನ್ನ ಕಣ್ಣ ಮುಂದೆಯೇ ಇದ್ದೇನೆ.. ನನ್ನ ಸ್ನೇಹಿತರೊಬ್ಬರು ಹಂಚಿಕೊಂಡ ನೈಜ ಘಟನೆಯಿದು. ಮಹಾರಾಷ್ಟ್ರದ ಕೊವಿಡ್ ಆಸ್ಪತ್ರೆಯೊಂದಕ್ಕೆ ಒಬ್ಬ ಮಧ್ಯವಯಸ್ಕ ಮಹಿಳೆಯನ್ನು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿ ಕರೆತರಲಾಗಿತ್ತು. ಅಡ್ಮಿಷನ್ ಮಾಡುವಾಗಲೇ ರೋಗಿಯ ಸಂಬಂಧಿಕರಿಗೆ ರೋಗಿಯ ಆರೋಗ್ಯ ಸ್ಥಿತಿಯನ್ನು ವಿವರಿಸಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದೆಂದು ತಿಳಿಸಲಾಗಿತ್ತು. ಆಕ್ಸಿಜನ್ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ವೆಂಟಿಲೇಟರ್ ಅಳವಡಿಸಲಾಯಿತು. ಉಳಿಸಿಕೊಳ್ಳುವ ಸರ್ವ ಪ್ರಯತ್ನಗಳ ನಂತರವೂ ಮರುದಿನ ಆ ರೋಗಿ ಸಾವನ್ನಪ್ಪಿದರು. ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆ ರೋಗಿ ತೀರಿಕೊಂಡಿದ್ದಾರೆ ಎಂದು ರೋಗಿಯ ಸಂಬಂಧಿಕರಿಗೆ ಹೇಳಿದಾಗ ನನ್ನ ಅಮ್ಮನನ್ನು ನಿನ್ನೆ ಅಡ್ಮಿಟ್ ಮಾಡಿ ವೆಂಟಿಲೇಟರ್​ಗೆ ಹಾಕಿದ ವೈದ್ಯರು ಯಾರು ಅಂತ ಹೇಳಿ. ನಾನು ಅವರನ್ನು ಹುಡುಕಿಕೊಂಡು ಹೋಗಿ ಹೊಡೆಯುತ್ತೇನೆ ಎಂದು ಕಿರುಚಾಡಿದರು. ಆಗ ಕರ್ತವ್ಯನಿರತ ವೈದ್ಯೆ ಸಾವಧಾನದಿಂದ ನಿನ್ನ ಅಮ್ಮನಿಗೆ ಚಿಕಿತ್ಸೆ ನೀಡಿದ್ದ ತಂಡದಲ್ಲಿ ನಾನೂ ಇದ್ದೆ. ನಾನೂ ಒಬ್ಬ ವೈದ್ಯೆ. ಹೊಡೆಯಬೇಕೆನಿಸಿದರೆ ನಿನ್ನ ಕಣ್ಣ ಮುಂದೆಯೇ ಇದ್ದೇನೆ, ನಿನಗೆ ಇಷ್ಟ ಬಂದಂತೆ ಮಾಡು ಎಂದು ನಿಂತುಬಿಟ್ಟರು.

ಇಷ್ಟೆಲ್ಲ ಏಕೆ ಹೇಳಬೇಕಾಯಿತೆಂದರೆ ಮೊನ್ನೆ ಮಂಗಳವಾರ ಅಸ್ಸಾಂನ ಉದಾಲಿ ಕೊವಿಡ್ ಕೇರ್ ಸೆಂಟರ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ವೈದ್ಯರೊಬ್ಬರ ಮೇಲೆ ರೋಗಿ ತೀರಿಕೊಂಡ ನಂತರ ರೋಗಿಯ ಕಡೆಯವರು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಆ ವೈದ್ಯರು ಆಗಷ್ಟೇ ವೈದ್ಯ ಪದವಿ ಪಡೆದು ಡ್ಯೂಟಿ ಆರಂಭಿಸಿದ್ದರು. ಕರ್ತವ್ಯದ ಮೊದಲ ದಿನವೇ ವೈದ್ಯನಾಗಿದ್ದಕ್ಕೆ ಜನರಿಂದ ಪೆಟ್ಟು ತಿನ್ನುವಂತಾಯಿತು. ಆ ರೋಗಿ ಆಸ್ಪತ್ರೆಗೆ ಬರುವಾಗಲೇ ಅವರ ಹೃದಯ ಸ್ತಂಭನವಾಗಿತ್ತೆಂದು ರೋಗಿಯ ಕಡೆಯವರಿಗೆ ಹೇಳಿದರೂ ಅವರು ಒಪ್ಪಿಕೊಳ್ಳಲು ತಯಾರಿರಲಿಲ್ಲ. ರೋಗಿ ಇನ್ನೂ ಬದುಕಿದ್ದಾರೆ. ನೀವು ಚಿಕಿತ್ಸೆ ಕೊಡುತ್ತಿಲ್ಲ ಎಂದು ಕಾರ್ಯನಿರತ ಆರೋಗ್ಯ ಸಿಬ್ಬಂದಿಯ ಮೇಲೆ ಕಿರುಚಾಡುತ್ತ ಹಲ್ಲೆ ನಡೆಸಿದ್ದಾರೆ. ಅದನ್ನು ವಿಡೀಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಆಸ್ಪತ್ರೆಯ ಪ್ರಾಂಗಣದಲ್ಲೇ ಯುವ ವೈದ್ಯನನ್ನು ಎಳೆದುಕೊಂಡು ಹೋಗಿ ಅಂಗಿ ಬಿಚ್ಚಿಸಿ ಹಲ್ಲೆ ಮಾಡಿ ಮೃಗೀಯ ವರ್ತನೆ ತೋರಿದ್ದಾರೆ. ಆ ವೈದ್ಯರು ಅಸಹಾಯಕರಾಗಿ ಕೂಗಿಕೊಂಡರೂ ಬಿಡಲಿಲ್ಲ. ತಡೆಯಲು ಬಂದವರ ಮೇಲೂ ಹಲ್ಲೆ ಮಾಡಿದ್ದಾರೆ.

ಇತ್ತ ನಮ್ಮ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ತಮ್ಮ ಮಗು ತೀರಿಹೋಯಿತು. ಅದಕ್ಕೆ ವೈದ್ಯರು ಇಂಜೆಕ್ಷನ್ ಓವರ್ ಡೋಸ್ ಕೊಟ್ಟಿದ್ದೇ ಕಾರಣ ಎಂದು ಆರೋಪಿಸಿ ಆ ಮಗುವಿನ ಕಡೆಯವರು ವೈದ್ಯರೊಬ್ಬರ ಮೇಲೆ ಹಾಡಹಗಲೇ ಮಚ್ಚು ಕತ್ತಿಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಿದ ನಂತರ ಹಲ್ಲೆಗೊಳಗಾದ ವೈದ್ಯರು ಅಪಾಯದಿಂದ ಪಾರಾಗಿದ್ದಾರೆ. ಅಸ್ಸಾಂ ವೈದ್ಯರ ಮೇಲಿನ ಹಲ್ಲೆ ಸುದ್ದಿಯಲ್ಲಿರುವಾಗಲೇ ಚಿಕ್ಕಮಗಳೂರಿನ ಈ ಘಟನೆ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಲಾರಂಭಿಸಿದೆ.

ಅಸ್ಸಾಂ ಘಟನೆಗೆ ಸಂಬಂಧಿಸಿದಂತೆ ಪೋಲೀಸರು ಈಗಾಗಲೇ 24 ಮಂದಿಯನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಿದ್ದಾರೆ. ಆದರೆ ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ರೋಗಿಯನ್ನು ಉಳಿಸಲು ಪ್ರಯತ್ನ ಮಾಡಿದ್ದಕ್ಕೆ ರೋಗಿಯ ಕಡೆಯವರಿಂದ ಹೊಡೆಸಿಕೊಂಡಾಗ ಆದ ಮಾನಸಿಕ ಆಘಾತದಿಂದ ಆ ಯುವ ವೈದ್ಯ ಹೊರಬರಲು ಅದೆಷ್ಟು ದಿನಗಳು ಬೇಕಾಗಬಹುದೋ. ವೈದ್ಯ ವೃತ್ತಿಗೆ ಸೇರಲು ಹಗಲು ರಾತ್ರಿ ಕಷ್ಟಪಟ್ಟು ಓದಿದ್ದಕ್ಕೆ ಆ ವೈದ್ಯ ಇನ್ನು ಜೀವನಪೂರ್ತಿ ಪಶ್ಚಾತ್ತಾಪ ಪಡಬಹುದೇನೋ. ಒಬ್ಬ ರೌಡಿಶೀಟರ್​ಗಿಂತಲೂ ಕಡೆಯಾಗಿ ಮಚ್ಚಿನಿಂದ ಹಲ್ಲೆಗೊಳಗಾದ ಆ ಚಿಕ್ಕಮಗಳೂರಿನ ವೈದ್ಯರ ಸ್ಥಿತಿ ಇದಕ್ಕಿಂತಲೂ ಭೀಕರ ಎಂದೆನಿಸದೇ ಇರದು.

ವೈದರ ಮೇಲೆ ನಡೆಯುವ ಹಲ್ಲೆ ಇದೇನೂ ಹೊಸದಲ್ಲ. ಆದರೆ ದಿನೇ ದಿನೇ ಇದರ ಗಂಭೀರತೆ, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತೀ ಸಲ ವೈದ್ಯರ ಮೇಲೆ ಹಲ್ಲೆಯಾದಾಗಲೂ ವೈದ್ಯರು ಪ್ರತಿಭಟಿಸುತ್ತಾರೆ. ಆದರೆ ಹೇಗೆ? ತೋಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಕೆಲಸ ಮಾಡುತ್ತಾರೆ. ಬಿಡುವಾದರೆ ಫ್ಲೆಕ್ಸ್ ಕಾರ್ಡ್ ಹಿಡಿದು ಮೊಂಬತ್ತಿ ಹಚ್ಚಿ ಮೌನ ಪ್ರತಿಭಟನೆ ಮಾಡುತ್ತಾರೆ. ಎಮರ್ಜೆನ್ಸಿ ವಿಭಾಗದಲ್ಲಿ ಕೆಲಸ ಮಾಡುವ ವೈದ್ಯರು ಈ ಯಾವ ಪ್ರತಿಭಟನಾ ಕಾರ್ಯಕ್ರಮಗಳಿಗೂ ಹಾಜರಾಗುವುದಿಲ್ಲ. ಅವರು ರೋಗಿಯ ರಕ್ಷಣೆಯಲ್ಲಿ ನಿರತರಾಗಿರುತ್ತಾರೆ. ತಮ್ಮ ಮೇಲೆ ಪದೇ ಪದೇ ದೌರ್ಜನ್ಯವಾದರೂ ಸಹಿಸಿಕೊಂಡು ತಾವು ಒಪ್ಪಿಕೊಂಡ ಕಾರ್ಯಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುವ ಏಕೈಕ ಸಮೂಹವಿದ್ದರೆ ಅದು ವೈದ್ಯವರ್ಗ ಮಾತ್ರ.

SAVE DOCTORS

ಸಾಂಕೇತಿಕ ಚಿತ್ರ

ವೈದ್ಯರ ಮೇಲಾಗುವ ದೌರ್ಜನ್ಯ ನಿರ್ಲಕ್ಷಿಸಬಹುದಾದಷ್ಟು ಸಾಮಾನ್ಯ ವಿಷಯವೇ? ವೈದ್ಯರ ಮೇಲಿನ ದೌರ್ಜನ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಭಾರತೀಯ ವೈದ್ಯಕೀಯ ಸಂಘದಿಂದ ಸರ್ಕಾರಕ್ಕೆ ಮತ್ತೊಂದು ಎಚ್ಚರಿಕೆಯ ಪತ್ರ ಹೋಗುತ್ತದೆ. ಆಮೇಲೆ ಇನ್ನೇನೂ ಆಗುವುದಿಲ್ಲ. ದಿನಬೆಳಗಾದರೆ ಆಸ್ಪತ್ರೆಯ ಕದ ತಟ್ಟುವ ಕೋಟ್ಯಂತರ ರೋಗಿಗಳು, ಸಾಮಾನ್ಯ ಜನರು ಯಾರೂ ಈ ಎಲ್ಲ ಘಟನೆಗಳು ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಇದ್ದುಬಿಡುತ್ತಾರೆ. ಸಣ್ಣ ಕೆಮ್ಮು ಬಂದರೂ ಕೊವಿಡ್ ಇರಬಹುದು ಎಂಬ ಭಯದಿಂದ ಅರ್ಧರಾತ್ರಿಯಲ್ಲಿ ಪರಿಚಯದ ವೈದ್ಯರಿಗೆ ಫೋನು ಮಾಡಿ ಪುಕ್ಕಟೆ ಸಲಹೆ ಕೇಳುವ ಮಂದಿ ಇಂಥ ಘಟನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ತಮ್ಮ ಸ್ನೇಹಿತರ ಮಗನ ಸ್ಕ್ಯಾನಿಂಗ್ ಸೆಂಟರ್​ನಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿ 50% ರಿಯಾಯಿತಿ ಕೇಳುವ ರೋಗಿಗಳು ಸ್ಕ್ಯಾನ್ ಮಾಡುವ ವೈದ್ಯರ ಸಹೋದ್ಯೋಗಿ ಎಲ್ಲೋ ಒಂದು ಕಡೆ ರೋಗಿಗಳಿಂದ ಹೊಡೆಸಿಕೊಂಡಾಗ ಆ ವೈದ್ಯರ ಬಗ್ಗೆ ಸಾಂತ್ವಾನದ ಎರಡು ಮಾತುಗಳನ್ನಾಡುವುದಿಲ್ಲ.

ಎಲ್ಲೋ ಇಸ್ರೇಲಿನಲ್ಲೋ, ಕಾಶ್ಮೀರದಲ್ಲೋ ನಡೆಯುವ ಹಿಂಸಾಚಾರದಲ್ಲಿ ಅಮಾಯಕರು ತೀರಿಕೊಂಡಿದಾಗ ಗೋಳಿಡುತ್ತ ಪುಟಗಟ್ಟಲೆ ಲೇಖನ ಬರೆಯುವವರು, ಫೇಸ್ಬುಕ್ಕಿನಲ್ಲಿ ಉದ್ದುದ್ದ ಪೋಸ್ಟ್ ಹಾಕುವವರು ತಮ್ಮದೇ ಪರಿಚಯದ ವೈದ್ಯರೊಬ್ಬರು ಅವಮಾನಕ್ಕೊಳಗಾದಾಗ, ಅಮಾನುಷವಾಗಿ ಹಲ್ಲೆಗೊಳಗಾದಾಗ, ಅವರ ಬಗ್ಗೆ ಒಂದೇ ಒಂದು ಅಕ್ಷರ ಬರೆದದ್ದು ನಾನಂತೂ ನೋಡಿಲ್ಲ. ಭಯೋತ್ಪಾಕದರ ಮೇಲೆ ದಾಳಿ ಮಾಡಿದಾಗೆಲ್ಲ ಮಾನವ ಹಕ್ಕುಗಳ ಉಲ್ಲಂಘನೆಯಾಯಿತೆಂದು ಬೊಬ್ಬಿಡುವರಿಗೆಲ್ಲ ಪ್ರಾಣ ಉಳಿಸುವ ವೈದ್ಯರ ಮೇಲೆ ಆಗುವ ಮಾರಣಾಂತಿಕ ಹಲ್ಲೆಗಳು ಕಾಣುವುದೇ ಇಲ್ಲವೇನೋ? ‘I Stand with..’ ಎಂದು ಸ್ಟೇಟಸ್ ಹಾಕುವವರದ್ದೆಲ್ಲ ವೈದ್ಯರ ಮೇಲಿನ ಹಲ್ಲೆಯ ಸಂದರ್ಭಗಳಲ್ಲಿ ದಿವ್ಯಮೌನ. ಬೇರೆಲ್ಲ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಡಿಬೇಟ್ ನಡೆಸುವವರು ವೈದ್ಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಜೋರು ಧ್ವನಿ ಹೊರಡಿಸುವುದೇ ಇಲ್ಲ. ವೈದ್ಯರ ಮೇಲಿನ ದೌರ್ಜನ್ಯದ ವಿರುದ್ಧ ಸಾತ್ವಿಕ ಪ್ರತಿಭಟನೆ ಮಾಡುವುದು ವೈದ್ಯವರ್ಗ ಮತ್ತು ಆರೋಗ್ಯ ಕಾರ್ಯಕರ್ತರು ಮಾತ್ರ. ಉಳಿದವರಿಗೆಲ್ಲ ಅದು ನಿರ್ಲಕ್ಷಿಸಬಹುದಾದಷ್ಟು ಸಾಮಾನ್ಯ ವಿಷಯ.

ರೋಗಿಯ ಸ್ಥಿತಿ ಗಂಭೀರವಾದಾಗ, ರೋಗಿ ಸಾವನ್ನಪ್ಪಿದಾಗ ಸಂಬಂಧಿಕರು ಭಾವೋದ್ವೇಗಕ್ಕೆ ಒಳಗಾಗುವುದು, ಮಾನಸಿಕ ನಿಯಂತ್ರಣ ಕಳೆದುಕೊಳ್ಳುವುದು ಸಹಜ. ನಮ್ಮ ಪ್ರೀತಿಪಾತ್ರರು ಮರಣವನ್ನಪ್ಪಿದಾಗ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ ಸಾವಿಗೆ ವೈದ್ಯರೇ ಕಾರಣರು ಎಂದು ವೈದ್ಯರ ಮೇಲೆ ಹಲ್ಲೆ ಮಾಡುವುದು ಸರಿಯೇ? ತೀರಾ ಹಾಳಾದ ರಸ್ತೆಯಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ಬೈಕ್ ಸವಾರ ಬಿದ್ದು ಮೃತಪಟ್ಟರೆ ಹಾಳಾದ ರಸ್ತೆಗೆ ಕಾರಣರಾದ ಸ್ಥಳೀಯ ರಾಜಕಾರಣಿಗಳ ಮೇಲೆ, ಮಂತ್ರಿಗಳ ಮೇಲೆ ಜನ ಹಲ್ಲೆ ಮಾಡಲು ಹೋಗುತ್ತಾರೆಯೇ? ಇಲ್ಲ ತಾನೆ? ಹಾಗಿರುವಾಗ ರೋಗಿಯನ್ನು ಉಳಿಸಲು ತಮ್ಮೆಲ್ಲ ಜ್ಞಾನ, ಕೌಶಲಗಳನ್ನು ಉಪಯೋಗಿಸಿ ಶ್ರಮ ಪಡುವ ವೈದ್ಯರ ಮೇಲೇಕೆ ಈ ರೀತಿಯ ಅಮಾನವೀಯ ದೌರ್ಜನ್ಯ? ರೋಗಿಯನ್ನು ಕೊಲ್ಲಬೇಕು ಎಂದು ಯಾವ ವೈದ್ಯನೂ ಚಿಕಿತ್ಸೆ ಶುರು ಮಾಡುವುದಿಲ್ಲ. ಕೆಲವೊಂದು ಸಲ ರೋಗಿಗಳ ಆರೋಗ್ಯ ಸ್ಥಿತಿ ತೀರಾ ವಿಷಮಿಸಿದಾಗ ಚಿಕಿತ್ಸೆಗೆ ದೇಹ ಸ್ಪಂದಿಸದಿದ್ದರೆ ಸಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಚಿಕಿತ್ಸೆ ಕೊಟ್ಟ ವೈದ್ಯರಿಗೆ ಹೊಡೆಯುವುದರಿಂದ ರೋಗಿ ಬದುಕಿ ಎದ್ದು ಬರುತ್ತಾನೆಯೇ?

ಋತುಸ್ರಾವದ ನೋವಿದ್ದರೂ ಮುಖದ ಮೇಲೆ ನಗು ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಐದು ದಿನಗಳ ಹಿಂದಿನ ಮಾತಷ್ಟೇ. ನಾನು ಕೊವಿಡ್ ವಿಭಾಗದಲ್ಲಿ 24 ಗಂಟೆಗಳ ಎಮರ್ಜೆನ್ಸಿ ಡ್ಯೂಟಿಯಲ್ಲಿದ್ದೆ. ತುರ್ತು ಚಿಕಿತ್ಸಾ ವಿಭಾಗದಿಂದ ಬೆಳಿಗ್ಗೆ ಆರು ಗಂಟೆಗೆ ಫೋನ್ ಬಂತು. ಹೊಸ ಪೇಷಂಟ್ ಬಂದಿದ್ದಾರೆ. ಕೊವಿಡ್ ಪಾಸಿಟಿವ್, ಏನೇನು ಚಿಕಿತ್ಸೆ ಶುರು ಮಾಡಬೇಕೆಂದು ಹೇಳಿ ಅಂತ ಡ್ಯೂಟಿ ನರ್ಸ್ ಫೋನ್ ಮಾಡಿದರು. ನಾನು ನನ್ನ ಸಹೋದ್ಯೋಗಿ ವೈದ್ಯರೊಬ್ಬರಿಗೆ ಫೋನ್ ಮಾಡಿ ನೀವು ಆ ರೋಗಿಯನ್ನು ಅಟೆಂಡ್ ಮಾಡಿ, ಸ್ವಲ್ಪ ಹೊತ್ತಿನಲ್ಲಿ ನಾನು ಬಂದು ಏನೇನು ಟ್ರೀಟ್ಮೆಂಟ್ ಹಾಕಬೇಕೆಂದು ಹೇಳುತ್ತೇನೆ ಎಂದೆ. ಅದಕ್ಕೆ ಆ ಮಹಿಳಾ ವೈದ್ಯೆ, ಕ್ಷಮಿಸಿ ಸರ್, ನಾನು ಆಸ್ಪತ್ರೆಯಲ್ಲಿಲ್ಲ ಈಗ. ನನಗೆ ಋತುಸ್ರಾವ ಶುರುವಾಗಿದೆ, ಆಸ್ಪತ್ರೆಯಲ್ಲಿರುವ ಯಾವ ಶೌಚಾಲಯಗಳೂ ಬಳಸುವ ಸ್ಥಿತಿಯಲ್ಲಿಲ್ಲ. ಅಲ್ಲದೆ ನನ್ನ ಹತ್ತಿರ ಸ್ಯಾನಿಟರಿ ಪ್ಯಾಡ್ ಕೂಡ ಇರಲಿಲ್ಲ. ಬಹಳ ಹೊತ್ತು ಪಿಪಿಇ ಕಿಟ್ ಧರಿಸಿದ್ದರಿಂದ ಹಾಗೂ ರಾತ್ರಿ ಡ್ಯೂಟಿ ಮಾಡಿದ್ದರಿಂದ ಬಳಲಿಕೆ ಉಂಟಾಗಿದೆ. ಹಾಗಾಗಿ ನಾನು ಶೌಚಾಲಯ ಬಳಸುವ ಸಲುವಾಗಿ ನನ್ನ ಹಾಸ್ಟೆಲ್ ರೂಮಿಗೆ ಬಂದಿದ್ದೇನೆ, ದಯವಿಟ್ಟು ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡು ಅರ್ಧ ಗಂಟೆ ನನಗೆ ಬಿಡುವು ಕೊಡಿ ಎಂದರು. ಸರಿ ನೀವು ರೆಸ್ಟ್ ತೆಗೆದುಕೊಳ್ಳಿ, ನಿಮ್ಮ ಪಾಳಿ ಮುಗಿಯಲು ಇನ್ನು ಎರಡು ತಾಸುಗಳಷ್ಟೇ ಉಳಿದಿವೆ. ಮತ್ತೆ ವಾಪಾಸ್ ಬರುವುದು ಬೇಡ. ಪೇಷಂಟನ್ನು ನಾನು ನೋಡುತ್ತೇನೆ ಎಂದೆ. ಇಂಥ ಸನ್ನಿವೇಶಗಳಲ್ಲಿ ಕೆಲಸ ಮಾಡುವ ವೈದ್ಯರ ಸ್ಥಿತಿಯ ಬಗ್ಗೆ ತಿಳಿದ ಮೇಲೂ ವೈದ್ಯರ ಮೇಲೆ ಹಲ್ಲೆ ಮಾಡಲು ನಿಮಗೆ ಮನಸ್ಸಾದರೆ ಮುಂದುವರೆಯಬಹುದು.

ಕೊವಿಡ್ ಡ್ಯೂಟಿ ಮಾಡುತ್ತ ಸಾವಿರಾರು ಜನ ವೈದ್ಯರು ಸೋಂಕಿಗೊಳಗಾಗಿ ಮೃತರಾಗಿದ್ದಾರೆ. ರೋಗಿಯ ಮನೆಯ ಹೆಂಗಸರ ಮಾಂಗಲ್ಯ ಭಾಗ್ಯವನ್ನು ಉಳಿಸಲು ತಮ್ಮ ಮನೆಯ ಹೆಂಗಸರನ್ನು ವಿಧವೆಯರನ್ನಾಗಿಸಿ ಇಹಲೋಕ ತ್ಯಜಿಸಿದ ಕೊವಿಡ್ ವೈದ್ಯರಿದ್ದಾರೆ. ಮದುವೆಯ ನಂತರ ಹನಿಮೂನಿಗೆ ಹೋಗದೆ ಮರುದಿನವೇ ನೇರವಾಗಿ ಕೊವಿಡ್ ಐಸಿಯುಗೆ ಕರ್ತವ್ಯಕ್ಕೆ ತೆರಳಿದ ಯುವ ವೈದ್ಯ ದಂಪತಿ ಇದ್ದಾರೆ. ರಾತ್ರಿಪಾಳಿಯಲ್ಲಿ ಋತುಸ್ರಾವ ಶುರುವಾಗಿ ಪ್ಯಾಡ್ ಬದಲಿಸಲೂ ಸಮಯವಿಲ್ಲದಷ್ಟು ಕೆಲಸವಿರುವ ಕೊವಿಡ್ ಐಸಿಯುಗಳಲ್ಲಿ ಭಾರದ ಪಿಪಿಇ ಕಿಟ್ ಧರಿಸಿ, ಹೊಟ್ಟೆ ನೋವನ್ನು ಮುಚ್ಚಿಟ್ಟು ಮುಖದ ಮೇಲಿನ ಮಂದಹಾಸ ಮರೆಯಾಗದಂತೆ ರೋಗಿಗಳ ಸೇವೆ ಮಾಡಿದ ಸಾವಿರಾರು ಮಹಿಳಾ ಆರೋಗ್ಯ ಕಾರ್ಯಕರ್ತರಿದ್ದಾರೆ. ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ತನ್ನ ಅಪ್ಪ ಇನ್ಸುಲಿನ್ ತೆಗೆದುಕೊಳ್ಳಲು ಮರೆತರೆ ಏನು ಮಾಡುವುದು ಎಂಬ ಚಿಂತೆಯಲ್ಲೇ ಕೊವಿಡ್ ಡ್ಯೂಟಿ ಮಾಡುವ ವಾರ್ಡ್ ಬಾಯ್ ಇದ್ದಾರೆ. ಇವರೆಲ್ಲರೂ ತಾವು ಮಾಡುವ ಕೆಲಸಕ್ಕೆ ಸಂಬಳ ಪಡೆಯುತ್ತಾರೆ ನಿಜ. ಆದರೆ ಸಂಬಳಕ್ಕೆ ದುಡಿಯುವ ಇತರ ಜನರಂತಲ್ಲ ಇವರ ಬದುಕು. ಇವರಿಗಿರುವುದು ವ್ಯಕ್ತಿಯೊಬ್ಬನ ಜೀವದ ನಿಯಂತ್ರಣದ ಜವಾಬ್ದಾರಿ. ಇದರಲ್ಲಿ ಸ್ವಲ್ಪ ಮೈಮರೆತರೂ ದಂಡವಾಗಿ ಒಂದು ಪ್ರಾಣವನ್ನೇ ತೆರಬೇಕಾಗುತ್ತದೆ. ಮೈಯೆಲ್ಲ ಕಣ್ಣಾಗಿ ಕೆಲಸ ಮಾಡುವ ಇಂಥವರ ಕೆಲಸವನ್ನು ಅವರ ಮೇಲೆ ಹಲ್ಲೆ ಮಾಡಿ ಅವಮಾನಿಸುವುದು ಸರಿಯೇ?

ನಾವು ದೇವರಲ್ಲ, ಸಾಮಾನ್ಯ ಮನುಷ್ಯರು ಕೊವಿಡ್ ವಾರಿಯರ್ಸ್ ಎಂದು ನೀವು ಕೊಡುವ ಬಿರುದು ಸನ್ಮಾನಗಳು ವೈದ್ಯರಿಗೆ ಬೇಕಾಗಿಲ್ಲ. ತಾವು ಕಷ್ಟಪಟ್ಟು ಜೀವ ಉಳಿಸಿದ್ದಕ್ಕಾಗಿ ರೋಗಿ ಥ್ಯಾಂಕ್ಸ್ ಹೇಳಬೇಕು ಅಂತಲೂ ಬಯಸುವುದಿಲ್ಲ. ಬಯಸುವುದು ಕನಿಷ್ಟ ಮರ್ಯಾದೆಯನ್ನಷ್ಟೇ. ಅವರು ಎಲ್ಲವನ್ನೂ ನಿಯಂತ್ರಿಸಬಲ್ಲ ದೇವರಲ್ಲ, ಅರಿಷಡ್ವರ್ಗಗಳಿರುವ ಸಾಮಾನ್ಯ ಮನುಷ್ಯರು ಎಂದು ಅರ್ಥ ಮಾಡಿಕೊಂಡರೆ ಸಾಕು.

ನನ್ನ ಇನ್ನೊಂದು ಅನುಭವದೊಂದಿಗೆ ಬರಹವನ್ನು ಮುಗಿಸುತ್ತೇನೆ. ನಾನು ಅರಿವಳಿಕೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ವೈದ್ಯರೊಬ್ಬರು ರೋಗಿಯನ್ನು ನೋಡಲೆಂದು ವಾರ್ಡಿಗೆ ಹೋಗಿದ್ದಾಗ ರೋಗಿಯ ಸಂಬಂಧಿಕನೊಬ್ಬ ಅವರ ವ್ಯಾಲೆಟ್ ಕಸಿದುಕೊಂಡು ಓಡಿ ಹೋದ. ನಂತರ ಪೋಲೀಸರ ಚಾಣಾಕ್ಷತನದಿಂದ ಎರಡೇ ಗಂಟೆಗಳೊಳಗೆ ಆ ಕಳ್ಳನನ್ನು ಹಿಡಿಯಲಾಯಿತು. ಪೋಲೀಸರು ಹೊಡೆದಿದ್ದರಿಂದ ಅವನ ಮೈಕೈ ನೋಯುತ್ತಿತ್ತು. ಆಗ ನಾನು ಅವನಿಗೆ, ನಿನ್ನ ರೋಗಿಗೆ ಚಿಕಿತ್ಸೆ ಕೊಟ್ಟ ವೈದ್ಯರ ಹಣ ಕದ್ದು ಓಡಿದ್ದೀಯ ನೀನು, ಆದರೂ ನಿನ್ನ ರೋಗಿಗೆ ನಾವು ಚಿಕಿತ್ಸೆ ಮುಂದುವರೆಸಿದ್ದೇವೆ. ನಾಳೆ ನೀನು ಯಾವುದೋ ಅಪಘಾತಕ್ಕೊಳಗಾಗಿ ನಮ್ಮದೇ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗಕ್ಕೆ ಗಂಭೀರ ಸ್ಥಿತಿಯಲ್ಲಿ ಬರುತ್ತೀಯ. ನಾವು ನಮ್ಮೆಲ್ಲ ಜ್ಞಾನ, ಕೌಶಲಗಳನ್ನು ಉಪಯೋಗಿಸಿ ನಿನ್ನನ್ನು ಸಾವಿನಿಂದ ಬಚಾವ್ ಮಾಡುತ್ತೇವೆ. ನೀನು ಹಿಂದೆ ನಮ್ಮ ಹಣ ಕದ್ದು ನಮಗೆ ಮೋಸ ಮಾಡಿದ್ದಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಚಿಕಿತ್ಸೆ ನೀಡುತ್ತೇವೆ. ಅದೇ ನೀನು ಗುಣವಾಗಿ ಹೋಗುವಾಗ ಮತ್ತೆ ಅಂಥದ್ದೇ ಏನಾದರೂ ಕೆಲಸ ಮಾಡಿ ನಮ್ಮನ್ನು ಅವಮಾನಿಸಬಹುದು. ನೀನು ಹತ್ತು ಸಲ ಅವಮಾನಿಸಿದರೂ, ನೀನು ಹತ್ತು ಸಲ ಚಿಕಿತ್ಸೆಗೆಂದು ನಮ್ಮಲ್ಲಿ ಬಂದಾಗಲೂ ನೀನೊಬ್ಬ ರೋಗಿಯಷ್ಟೇ ಎಂಬ ನಿರ್ಮಮ ಭಾವದಿಂದ ನೀ ಮಾಡಿದ ಎಲ್ಲ ಅಪರಾಧಗಳನ್ನೂ ಮರೆತು ನಿನ್ನನ್ನು ಹುಷಾರು ಮಾಡಿ ಮನೆಗೆ ಕಳಿಸುತ್ತೇವೆ. ಏಕೆಂದರೆ ಅದು ನಮ್ಮ ವೈದ್ಯಕೀಯ ಧರ್ಮ. ಆ ಧರ್ಮಕ್ಕೆ ಯಾವತ್ತೂ ನಾವು ಬದ್ಧವಾಗಿರುತ್ತೇವೆ. ನೀನು ಹತ್ತು ಸಲ ವೈದ್ಯರ ಮೇಲೆ ಹಲ್ಲೆ ಮಾಡಿ ಓಡಿ ಹೋದರೂ ಹನ್ನೊಂದನೆ ಸಲ ಯಾವುದೋ ಖಾಯಿಲೆ ಅಂತ ಆಸ್ಪತ್ರೆಗೆ ಬಂದರೆ ನಿನ್ನಿಂದ ಹಲ್ಲೆಗೊಳಗಾದ ವೈದ್ಯನೇ ನಿನ್ನನ್ನು ಶುಶ್ರೂಷೆ ಮಾಡುತ್ತಾನೆ ಎಂಬುದು ಸದಾ ನೆನಪಿರಲಿ ಎಂದು ಹೇಳಿದ್ದೆ.

ದಯವಿಟ್ಟು ನೆನಪಿಡಿ, ವೈದ್ಯರ ಮೇಲೆ ಹಲ್ಲೆ ಮಾಡುವುದರಿಂದ ನೀವು ಗಳಿಸಿಕೊಳ್ಳುವಂಥದ್ದು ಏನೂ ಇಲ್ಲ. ಆದರೆ ವೈದ್ಯರ ನೈತಿಕ ಸ್ಥೈರ್ಯ ದಿನೇ ದಿನೇ ಕುಸಿಯುತ್ತದೆ ಅಷ್ಟೇ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ವೈದ್ಯಕೀಯ ಶಿಕ್ಷಣ ಪಡೆಯಲು ಯಾರೂ ಮುಂದೆ ಬರದೆ, ವೈದ್ಯರ ಕೊರತೆ ಉಂಟಾದರೆ ತೊಂದರೆಯಾಗುವುದು ಅಮಾಯಕ ರೋಗಿಗಳಿಗೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಉಳಿಯುವುದು ಎಂದಿಗೂ ವಾಸಿಯಾಗದ ಗಾಯವಷ್ಟೇ.

ಲೇಖಕ ಡಾ.ಲಕ್ಷ್ಮೀಶ ಜೆ. ಹೆಗಡೆ ಪರಿಚಯ ಹುಟ್ಟಿದ್ದು ಮಂಗಳೂರಿನಲ್ಲಿ. ಹತ್ತನೆಯ ತರಗತಿಯವರೆಗೆ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ವೈದ್ಯನಾಗುವ ಹಂಬಲದಿಂದ ಸಾಂಸ್ಕೃತಿಕ ನಗರಿಯ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡಿದರು. ನಂತರ ಮುಂಬೈನ ಲೋಕಮಾನ್ಯ ತಿಲಕ್ ಮೆಡಿಕಲ್ ಕಾಲೇಜಿನಲ್ಲಿ ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲಾ ಆಸ್ಪತ್ರೆಯ ಕೊವಿಡ್ ಐಸಿಯುನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ನೋವು ಶಮನ ಮಾಡುವುದನ್ನು ವೃತ್ತಿಯಾಗಿ ಹಾಗೂ ಬರವಣಿಗೆಯನ್ನು ಪ್ರವೃತ್ತಿಯಾಗಿ ಅಳವಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Shocking: ಆಮ್ಲಜನಕ ಕೊರತೆಯಿಂದ ವ್ಯಕ್ತಿ ಸಾವು ಎಂದು ಆರೋಪಿಸಿ ವೈದ್ಯರನ್ನು ಅಮಾನುಷವಾಗಿ ಥಳಿಸಿದ ಜನರು; 24 ಮಂದಿ ಪೊಲೀಸರ ವಶಕ್ಕೆ

Follow us on

Related Stories

Most Read Stories

Click on your DTH Provider to Add TV9 Kannada