ಧಾರವಾಡ ಮೂಲದ ವಿಜ್ಞಾನಿ ಡಾ. ಕಟ್ಟಿಗೆ ಕ್ಯಾನರ್ ಸಂಶೋಧನೆಗೆ ಸಂದಿದೆ ಅಂತರಾಷ್ಟ್ರೀಯ ಮನ್ನಣೆ
ಡಾ. ಕಟ್ಟೇಶ್ ವಿ. ಕಟ್ಟಿ ಅವರು ಮೂಲತಃ ಧಾರಾವಾಡದವರಾಗಿದ್ದು, ಇವರ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ. ಗ್ರೀನ್ ನ್ಯಾನೋಟೆಕ್ನಾಲಜಿ ಕ್ಷೇತ್ರದಲ್ಲಿ ಇವರ ಸಾಧನೆ ಅಪಾರವಾಗಿದ್ದು, ಸಾಂಪ್ರದಾಯಿಕ ಆಯುರ್ವೇದ ಔಷಧಿಗಳನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ 'ನ್ಯಾನೋ-ಆಯುರ್ವೇದ' ಪರಿಕಲ್ಪನೆಯನ್ನು ಪರಿಚಯಿಸಿದ್ದು, ಈ ಸಾಧನೆಗಾಗಿ ಡಾ. ಕಟ್ಟಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ. ಹಾಗಾದರೆ ಏನಿದು ಗ್ರೀನ್ ನ್ಯಾನೋಟೆಕ್ನಾಲಜಿ, ಇದರಿಂದ ಯಾವ ರೀತಿಯ ಉಪಯೋಗವಿದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಜ್ಞಾನ ಕ್ಷೇತ್ರದಲ್ಲಿ ಭಾರತ ಮೂಲದ ಅನೇಕ ಮಹನೀಯರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಂತಹವರಲ್ಲಿ ಒಬ್ಬರು ಡಾ. ಕಟ್ಟೇಶ್ ವಿ. ಕಟ್ಟಿ (Dr. Kattesh V. Katti). ಇವರು ಮೂಲತಃ ಧಾರಾವಾಡದವರಾಗಿದ್ದು, ಇವರ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯೇ. ಇವರನ್ನು “ಹಸಿರು ನ್ಯಾನೊತಂತ್ರಜ್ಞಾನದ ಪಿತಾಮಹ” (Father of Green Nanotechnology) ಎಂದೇ ಕರೆಯಲಾಗುತ್ತದೆ. ಗ್ರೀನ್ ನ್ಯಾನೋಟೆಕ್ನಾಲಜಿ ಕ್ಷೇತ್ರದಲ್ಲಿ ಇವರ ಸಾಧನೆ ಅಪಾರವಾಗಿದ್ದು, ಸಾಂಪ್ರದಾಯಿಕ ಆಯುರ್ವೇದ ಔಷಧಿಗಳನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ‘ನ್ಯಾನೋ-ಆಯುರ್ವೇದ’ ಪರಿಕಲ್ಪನೆಯನ್ನು ಪರಿಚಯಿಸಿದ್ದು. ಈ ಸಾಧನೆಗಾಗಿ ಡಾ. ಕಟ್ಟಿ ಅವರನ್ನು ಐಎಓಟಿಪಿ (IAOTP- International Association of Top Professionals) ಸಂಸ್ಥೆ 2026ನೇ ಸಾಲಿನ ಹೆಲ್ತ್‌ಕೇರ್ ಟಾಪ್ ಇನೋವೇಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಗೌರವ ಸಮಾರಂಭವು ಡಿಸೆಂಬರ್‌ನಲ್ಲಿ ನ್ಯೂಯಾರ್ಕ್ ನಗರದ ಐತಿಹಾಸಿಕ ದಿ ಪ್ಲಾಜಾ ಹೋಟೆಲ್ ನಲ್ಲಿ ನಡೆಯಲಿದೆ. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಗ್ರೀನ್ ನ್ಯಾನೋಟೆಕ್ನಾಲಜಿಯ ಪಿತಾಮಹ
ಡಾ. ಕಟ್ಟೇಶ್ ವಿ. ಕಟ್ಟಿ ಅವರು ವಿಶ್ವವಿಖ್ಯಾತ ಭಾರತೀಯ- ಅಮೇರಿಕನ್ ವಿಜ್ಞಾನಿ, ಮಿಸೌರಿ ವಿಶ್ವವಿದ್ಯಾಲಯದ ಮೆಡಿಕಲ್ ಸ್ಕೂಲ್‌ನಲ್ಲಿ ಪ್ರಾಧ್ಯಾಪಕರಾಗಿರುವ ಇವರು, ಆಯುರ್ವೇದ ಮತ್ತು ಆಧುನಿಕ ನ್ಯಾನೊತಂತ್ರಜ್ಞಾನವನ್ನು ಸಂಯೋಜಿಸಿ (Nano-Ayurvedic Medicine) ಕ್ಯಾನ್ಸರ್ ಚಿಕಿತ್ಸೆಗಾಗಿ ಟೀ, ದಾಲ್ಚಿನ್ನಿ ಮುಂತಾದ ನೈಸರ್ಗಿಕ ಮೂಲಗಳಿಂದ (phytochemicals) ವಿಷಕಾರಿಯಲ್ಲದ ನ್ಯಾನೊಪಾರ್ಟಿಕಲ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸಸ್ಯ ಮೂಲದ ಫೈಟೋಕೇಮಿಕಲ್‌ಗಳನ್ನು ಬಳಸಿ 100% ಹಸಿರು ವಿಧಾನದಲ್ಲಿ ನ್ಯಾನೋ ವಸ್ತುಗಳನ್ನು ಅಭಿವೃದ್ಧಿಪಡಿಸುವುದು ಅವರ ಸಂಶೋಧನೆಯ ವಿಶೇಷತೆ. ಈ ವಿಧಾನವು ಪರಿಸರ ಸ್ನೇಹಿ ಹಾಗೂ ಆರೋಗ್ಯಪರವಾಗಿರುವುದು ಗಮನಾರ್ಹ. ಇವರ ಈ ಸಂಶೋಧನೆಯು ಕ್ಯಾನ್ಸರ್ ಮತ್ತು ಸಂಧಿವಾತದಂತಹ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳನ್ನು ಕಂಡುಹಿಡಿಯಲು ಸಹಾಯ ಮಾಡಿದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು
ಕ್ಯಾನ್ಸರ್ ಚಿಕಿತ್ಸೆಯಲ್ಲಿ ನವೀನ ತಂತ್ರಜ್ಞಾನ
ಡಾ. ಕಟ್ಟಿ ಅಭಿವೃದ್ಧಿಪಡಿಸಿದ ಕಟ್ಟಿ ಪೆಪ್ಟೈಡ್ಸ್ (Katti Peptides) ನ್ಯಾನೋ ಕಣಗಳು ಕೋಶ ಮಟ್ಟದಲ್ಲಿ ರೋಗ ಪತ್ತೆಹಚ್ಚಲು ಸಹಕಾರಿಯಾಗಿವೆ. ವಿಶೇಷವಾಗಿ ಈ ನ್ಯಾನೋ ಕಣಗಳನ್ನು ಟ್ಯೂಮರ್ ಪ್ರದೇಶಗಳಲ್ಲಿ ಬಳಸುವ ಮೂಲಕ ಸ್ತನ, ಯಕೃತ್, ಶ್ವಾಸಕೋಶ, ಬಾಯಿ, ಪ್ರೋಸ್ಟೇಟ್ ಹಾಗೂ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಇದಲ್ಲದೆ, ಆಸ್ಟಿಯೋಆರ್ಥ್ರೈಟಿಸ್ ಮತ್ತು ಪಾರ್ಕಿನ್ಸನ್‌ಗಳಂತಹ ದೀರ್ಘಕಾಲದ ಕಾಯಿಲೆಗಳಿಗೂ ಅವರ ಸಂಶೋಧನೆ ವಿಸ್ತರಿಸಿದೆ. ಇದಲ್ಲದೆ ನ್ಯಾನೋ ಆಯುರ್ವೇದಿಕ್ ಮೆಡಿಸಿನ್ ಎಂಬ ಹೊಸ ವೈದ್ಯಕೀಯ ವಿಧಾನವನ್ನು ಪರಿಚಯಿಸಲಾಗಿದೆ. ಈ ಉತ್ಪನ್ನಗಳಲ್ಲಿ ಕೆಲವು ಭಾರತ ಸರ್ಕಾರದ ಅನುಮೋದನೆ ಪಡೆದಿವೆ.
ಡಾ. ಕಟ್ಟಿ ಅವರ ಸಂಶೋಧನೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದು, ಹಸಿರು ತಂತ್ರಜ್ಞಾನವನ್ನು ಬಳಸಿಕೊಂಡು ಜೀವ ಉಳಿಸುವ ಔಷಧಿಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರೀನ್ ನ್ಯಾನೋಟೆಕ್ನಾಲಜಿಯನ್ನು ಇನ್ನಷ್ಟು ವಿಸ್ತರಿಸಿ ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವ ಉದ್ದೇಶ ಅವರದ್ದಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Wed, 25 February 26
