ಶೌಚಾಲಯದಲ್ಲಿ ಸ್ಮಾರ್ಟ್ ಫೋನ್ ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸಮಸ್ಯೆ ನಿಮ್ಮಲ್ಲೂ ಕಂಡುಬರಬಹುದು
ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಸ್ಮಾರ್ಟ್‌ಫೋನ್ ರೋಗಗಳನ್ನು ಹರಡುವ 'ಡಿಜಿಟಲ್ ಯುಗದ ಸೊಳ್ಳೆ' ಎಂದೂ ಕರೆದಿದ್ದಾರೆ. ನೀವು ಶೌಚಾಲಯದಲ್ಲಿ ಸ್ಮಾರ್ಟ್ ಫೋನ್ ಬಳಸುವ ಅಭ್ಯಾಸವನ್ನು ಹೊಂದಿದ್ದರೆ ನೀವು ಈ ಕೆಳಗಿನ ತಿಳಿಸಿರುವ ಸೋಂಕಿಗೆ ತುತ್ತಾಗುವುದಂತೂ ಖಂಡಿತಾ.
ಶೌಚಾಲಯದಲ್ಲಿ ಫೋನ್ ಬಳಸುವುದು ನಿಮ್ಮನ್ನು ಸೋಂಕಿಗೆ ಒಳಪಡಿಸುತ್ತದೆ. ಕೊರೊನಾ ನಂತರದ ಸ್ಮಾರ್ಟ್ ಪೋನ್ಗಳ ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ. ತಮ್ಮ ವೈಯಕ್ತಿಕ ವಿಚಾರಗಳ ಜೊತೆಗೆ ವೃತ್ತಿಗೆ ಸಂಬಂಧಪಟ್ಟ ಸಾಕಷ್ಟು ವ್ಯಾವಹಾರಗಳನ್ನು ಸ್ಮಾರ್ಟ್‌ಫೋನ್ ಮೂಲಕ ಮಾಡಬಹುದು. ಅಧ್ಯಯನವೊಂದರ ಪ್ರಕಾರ, 10 ರಲ್ಲಿ ಆರು ಜನರು ತಮ್ಮ ಫೋನ್‌ಗಳನ್ನು ವಾಶ್‌ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ, ವಿಶೇಷವಾಗಿ ಯುವಕರು ಎಂದು ತಿಳಿದುಬಂದಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ, ಶೇಕಡಾ 61.6 ರಷ್ಟು ಜನರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಟಾಯ್ಲೆಟ್ ಸೀಟ್‌ನಲ್ಲಿ ಕುಳಿತು ಪರಿಶೀಲಿಸುವುದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಶೇಕಡಾ 24.5ರಷ್ಟು ಜನರು ತಮ್ಮ ಪ್ರೀತಿಪಾತ್ರರಿಗೆ ಸಂದೇಶ ಕಳುಹಿಸುವ ಮೂಲಕ ಅಥವಾ ಕರೆ ಮಾಡುವ ಮೂಲಕ ವಾಶ್‌ರೂಮ್‌ನಲ್ಲಿ ಫೋನ್ ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ.
ಈ ಅಭ್ಯಾಸವು ಸ್ಮಾರ್ಟ್‌ಫೋನ್‌ಗಳ ಮೂಲಕ ದೇಹಕ್ಕೆ ಮಾರಣಾಂತಿಕ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳ ಪ್ರವೇಶಿಸಲು ಕಾರಣವಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ನೀವು ಶೌಚಾಲಯಗಳಲ್ಲಿ ಫೋನ್ ಬಳಸುತ್ತಿದ್ದಂತೆ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ತಮ್ಮ ಕೈಗಳ ಮೂಲಕ ಸ್ಮಾರ್ಟ್‌ಫೋನ್‌ನ ಮೇಲ್ಮೈಗೆ ತಮ್ಮ ದಾರಿಯನ್ನು ಕಂಡುಕೊಳ್ಳುತ್ತವೆ. ಅಂತಿಮವಾಗಿ, ದಿನವಿಡೀ ನಿರಂತರವಾಗಿ ಸ್ಮಾರ್ಟ್‌ಫೋನ್ ಬಳಸುವುದರಿಂದ ಈ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಿ, ಕಣ್ಣು ಮತ್ತು ಮೂಗಿನ ಮೂಲಕ ಸೇರಿಕೊಳ್ಳುತ್ತವೆ.
ಇದನ್ನೂ ಓದಿ: ತಂಪು ಪಾನೀಯಗಳಲ್ಲಿ ಬಳಸಲಾಗುವ ‘ಆಸ್ಪರ್ಟೇಮ್’ ಕ್ಯಾನ್ಸರ್ಕಾರಕ ಎಂದು ಘೋಷಿಸಲು ನಿರ್ಧಾರ
ವರದಿಯು ಸೂಚಿಸುವಂತೆ, ಸೂಕ್ಷ್ಮಾಣುಗಳು 28 ದಿನಗಳವರೆಗೆ ಮೊಬೈಲ್ ಫೋನ್ ಪರದೆಗಳಲ್ಲಿ ವಾಸಿಸುತ್ತವೆ. ಸೋಂಕು ನಿಯಂತ್ರಣ ತಜ್ಞ ಡಾ ಹ್ಯೂ ಹೇಡನ್ ಪ್ರಕಾರ “ಸ್ಮಾರ್ಟ್‌ಫೋನ್‌ಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹತ್ತು ಪಟ್ಟು ಹೆಚ್ಚು ಸೂಕ್ಷ್ಮಾಣುಗಳನ್ನು ಸಾಗಿಸಬಲ್ಲವು. ಜೊತೆಗೆ ಟಚ್‌ಸ್ಕ್ರೀನ್‌ಗಳನ್ನು ‘ಡಿಜಿಟಲ್ ಯುಗದ ಸೊಳ್ಳೆ’ ಎಂದು ಇವರು ಕರೆದಿದ್ದಾರೆ. ಟಾಯ್ಲೆಟ್ ಆಸನಗಳು ಸ್ಟ್ಯಾಫಿಲೋಕೊಕಸ್ ಔರೆಸ್ ಸೇರಿದಂತೆ ವಿವಿಧ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಆಶ್ರಯಿಸಬಹುದು. ಈ ರೋಗಕಾರಕಗಳು ಮೂತ್ರನಾಳದ ಸೋಂಕುಗಳು, ಹೊಟ್ಟೆ ನೋವು, ಅತಿಸಾರ, ಸೋಂಕುಗಳು, ಆಹಾರ ವಿಷ, ಬಾವುಗಳಂತಹ ಚರ್ಮದ ಸೋಂಕುಗಳು, ಸೈನುಟಿಸ್ನಂತಹ ಉಸಿರಾಟದ ಸೋಂಕುಗಳು ಮತ್ತು ಇತರ ತೊಡಕುಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಆರೋಗ್ಯಕ್ಕೆ ಸಂಬಂಧಪಟ್ಟ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:17 pm, Fri, 30 June 23