ಹೆರಿಗೆ ಬಳಿಕ ತಾಯಂದಿರು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಇಲ್ಲಿದೆ ಟಿಪ್ಸ್
Mother's Day 2022: ಹೆರಿಗೆಯಾದ ಬಳಿಕ ಹೆಣ್ಣು ತನ್ನ ಗರ್ಭಾವಸ್ಥೆಯಲ್ಲಿದ್ದಾಗ ತೆಗೆದುಕೊಂಡಷ್ಟೇ ಕಾಳಜಿಯನ್ನು ತೆಗೆದುಕೊಳ್ಳುವ ಅಗತ್ಯವಿದೆ, ಆಕೆ ಎದುರಿಸುವ ನೋವು, ಸವಾಲುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗರ್ಭಿಣಿಯಾದಾಗಿನಿಂದ ಹೆರಿಗೆಯಾಗುವವರೆಗೆ ಒಂದು ಹೆಣ್ಣು ಅನುಭವಿಸುವ ಕಷ್ಟಗಳೊಂದೆಡೆಯಾದರೆ ಹೆರಿಗೆ ಬಳಿಕವೂ ಹಲವು ತೊಂದರೆಗಳನ್ನು ಆಕೆ ಎದುರಿಸಬೇಕಾಗುತ್ತದೆ. ತಾಯಿಯಾದ ಬಳಿಕ ಪ್ರತೀ ಹೆಣ್ಣಿಗೆ ಹೊಸ ಜನ್ಮ ದೊರೆತಂತೆ . ತನ್ನ ಉಸಿರಿನಿಂದ ಇನ್ನೊಂದು ಜೀವಕ್ಕೆ ಜೀವ ನೀಡಿದ ಖುಷಿಯನ್ನು ಆಕೆ ಕಾಣುತ್ತಾಳೆ. ಹೆರಿಗೆಯ ಬಳಿಕ ಹುಟ್ಟಿದ ಮಗುವಿನ ಆರೈಕೆ ಹೆಚ್ಚು ಮುಖ್ಯವಾಗಿರುತ್ತದೆ. ಅದರ ಜೊತೆಗೆ ಬಾಣಂತನದ ಸಂದರ್ಭದಲ್ಲಿ ತಾಯಿಯ ಆರೋಗ್ಯ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಮುಗುವಿನ ಆರೈಕೆಯಲ್ಲಿ ಮೈಮರೆಯದೇ ತನ್ನ ಆರೋಗ್ಯದ ಕಡೆಯೂ ಗಮನಹರಿಸುವ ಅಗತ್ಯವಿದೆ.
ಬಾಣಂತದ ಆರೈಕೆ ತಾಯಿಯಾದವಳ ಪಾಲಿಗೆ ಸವಾಲಿನ ದಿನಗಳು ಎಂದೇ ಹೇಳಬಹುದು, ತಾಯಿಗೆ ಅದೆಲ್ಲವೂ ಹೊಸತು, ಆದರೆ ಮಗುವನ್ನು ನೋಡುತ್ತಾ ಆಕೆ ಮೈಮರೆಯಬಾರದು, ಒಂದೊಮ್ಮೆ ಬಾಣಂತನವನ್ನು ಸರಿಯಾಗಿ ಮಾಡಿಕೊಳ್ಳದೇ ಇದ್ದಲ್ಲಿ ಆಕೆ ಮುಂದೊಂದು ದಿನ ದೊಡ್ಡ ಪ್ರಮಾಣದ ತೊಂದರೆಯನ್ನು ಎದುರಿಸಬೇಕಾದೀತು.
ಮಗುವಿನ ಆರೋಗ್ಯದ ಚಿಂತೆ ಒಂದೆಡೆಯಾದರೆ ದೈಹಿಕವಾಗಿ ಆಗುವ ಬದಲಾವಣೆಗಳಿಗೆ ಒಗ್ಗಿಕೊಂಡು ಮಾನಸಿಕ ಸ್ಥಿತಿಯನ್ನೂ ಸಮತೋಲನದಲ್ಲಿರಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಹೀಗಾಗಿ ಬಾಣಂತನದಲ್ಲಿ ತಾಯಿಯ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ಡಾ. ಪ್ರಿಯಾಂಕಾ ವಿಶ್ವನಾಥ್ ಮಾಹಿತಿ ನೀಡಿದ್ದಾರೆ. ಇಲ್ಲಿದೆ ನೋಡಿ ವಿವರ.
ಬಾಣಂತನದ ಆರಂಭದ ದಿನಗಳು: ಹೆರಿಗೆಯಾದ ಬಳಿಕ ಮುಂದಿನ ಘಟ್ಟವೇ ಬಾಣಂತನ, ಎಷ್ಟು ದಿನದವರೆಗೆ ಈ ಬಾಣಂತನ ಮುಂದುವರೆಯುತ್ತದೆ ಎನ್ನುವುದು ತಾಯಿ ಮತ್ತು ಮಗುವಿನ ಆರೋಗ್ಯ ಮೇಲೆ ನಿರ್ಧರಿತವಾಗಿರುತ್ತದೆ. ಸಾಮಾನ್ಯವಾಗಿ 6 ರಿಂದ 8 ವಾರಗಳು ಬಾಣಂತನದ ಆರೈಕೆಯನ್ನು ಮಾಡಲಾಗುತ್ತದೆ. ಅದರೆ ಕೆಲವರಲ್ಲಿ ಬಾಣಂತನದ ಅವಧಿ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಬಹುದು. ಯಾವಾಗ ಶರೀರ ಗರ್ಭಧರಿಸುವುದಕ್ಕಿಂತ ಮೊದಲಿದ್ದ ಸ್ಥಿತಿಗೆ ತಲುಪುವುದೋ ಅಲ್ಲಿಯವರೆಗೆ ಆರೈಕೆ ಬೇಕಾಗುತ್ತದೆ.
6 ರಿಂದ 8 ವಾರಗಳ ಅವಧಿ ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ತಾಯಿಯ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಮಾನಸಿಕವಾಗಿ ಮಗುವಿನ ಆರೈಕೆ ಬಗ್ಗೆ ಯೋಚನೆಗಳಾದರೆ, ಮಗುವಿಗೆ ಎದೆಹಾಲು ಉಣಿಸುವುದು ಮೊದಲ ಬಾರಿ ತಾಯಿಯಾದವರಿಗೆ ತುಸು ಕ್ಲಿಷ್ಟಕರವಾದ ಸಂಗತಿ ಮತ್ತು ಅದರ ಬದಲಾವಣೆಗೆ ಹೊಂದಿಕೊಳ್ಳುವುದು. ಹೀಗಾಗಿ ಎಲ್ಲವೂ ಸರಿಯಾಗಿ ಆಗಬೇಕು ಎಂದರೆ ಬಾಣಂತಿಯ ಆರೋಗ್ಯ ಉತ್ತಮವಾಗಿರಬೇಕು. ಅದಕ್ಕೆ ಜೀವಶೈಲಿ ಹೀಗಿರಬೇಕು.
ಮಗುವಿನ ಆರೈಕೆ ಜತೆಗೆ ವಿಶ್ರಾಂತಿ: ಪ್ರತೀ ಹೆಣ್ಣು ತಾಯಿಯಾದ ಮೇಲೆ ದೇಹದಲ್ಲಿ ಅನೇಕ ಬದಲಾವಣೆಗಳನ್ನು ಎದುರಿಸುತ್ತಾಳೆ, ತೂಕ ಹೆಚ್ಚಳ, ಸುಸ್ತು, ನೋವು ಏನೇ ಇದ್ದರು ಮಗುವಿನ ಮುಖ ನೋಡುತ್ತಾ ಎಲ್ಲವನ್ನೂ ಮರೆಯುತ್ತಾಳೆ, ರಾತ್ರಿಯೆಲ್ಲ ಆಗಾಗ ಮಗು ಎಚ್ಚರಗೊಂಡು ಹಾಲನ್ನು ಕೇಳುತ್ತದೆ. ಆಗ ತಾಯಿ ಏಳಲೇಬೇಕು. ಹೀಗಾಗಿ 8 ಗಂಟೆಗಳ ನಿರಂತರ ನಿದ್ದೆ ಸಾಧ್ಯವಾಗದು. ಹೆರಿಗೆಯ ನಂತರ ವಿಶ್ರಾಂತಿ ಅತೀ ಅಗತ್ಯವಾಗಿರುತ್ತದೆ. ಹೀಗಾಗಿ ಮಗು ಮಲಗಿದ ಸಮಯದಲ್ಲಿಯೇ ಮಲಗಿ ವಿಶ್ರಾಂತಿ ಪಡೆದುಕೊಳ್ಳಬೇಕು.
ಮೊದಲ ಎರಡು ಮೂರು ತಿಂಗಳು ಬಲು ಕಷ್ಟ: ಒತ್ತಡದಿಂದ ಕೂಡಿದ್ದರೆ ಎದೆಹಾಲಿನ ಉತ್ಪತ್ತಿ ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಚೆನ್ನಾಗಿ ವಿಶ್ರಾಂತಿ ತೆಗೆದುಕೊಂಡರೆ ತಾಯಿ ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ. ಮೊದಲ 2 ತಿಂಗಳು ಆದಷ್ಟು ಮಗುವಿನ ಆರೈಕೆಯಲ್ಲಿಯೇ ಕಳೆದು ಉಳಿದ ಸಮಯದಲ್ಲಿ ವಿಶ್ರಾಂತಿ ಪಡೆದುಕೊಳ್ಳಿ. ಮೊದಲ ಎರಡು ಮೂರು ತಿಂಗಳು ಬಲು ಕಷ್ಟವಾಗಿರುತ್ತದೆ, ತಾಯಿ ಮಗು ಇಬ್ಬರಿಗೂ ಇದು ಹೊಸತು.
ಪೋಷಕಾಂಶಯುಕ್ತ ಆಹಾರ ಸೇವಿಸಿ: ಪ್ರತಿಯೊಬ್ಬ ತಾಯಿಗೂ ಪೋಷಕಾಂಶಯುಕ್ತ ಆಹಾರ ಬೇಕೇ ಬೇಕು. ಅದಕ್ಕೂ ಮೊದಲು ಮಾಡಬೇಕಾಗಿರುವ ಕೆಲಸ ನೀರು ಕುಡಿಯುವುದು. ನೀರನ್ನು ಹೆಚ್ಚು ಸೇವಿಸಿದಷ್ಟು ಆರೋಗ್ಯ ಉತ್ತಮವಾಗುತ್ತದೆ. 3 ರಿಂದ 4 ಲೀ ನೀರಿನ ಸೇವನೆ ಮಾಡುವುದು ಉತ್ತಮ. ನೀರಿನ ಸೇವನೆಯಿಂದ ಎದೆಹಾಲಿನ ಉತ್ಪತ್ತಿ ಕೂಡ ಹೆಚ್ಚಾಗುತ್ತದೆ.
ಡ್ರೈಪ್ರೂಟ್ಸ್, ಸೊಪ್ಪು, ಹಣ್ಣುಗಳ ಸೇವನೆಯನ್ನು ಹೆಚ್ಚು ಮಾಡಿ. ವೈದ್ಯರು ನೀಡುವ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಮಾಡುವುದು ಒಳ್ಳೆಯದು ಎಂದು ಅವರು ಸಲಹೆ ನೀಡುತ್ತಾರೆ. ಅಲ್ಲದೆ ಹೆರಿಗೆಯ ಸಂದರ್ಭದಲ್ಲಿ ಕಳೆದುಕೊಂಡು ರಕ್ತವನ್ನು ಸರಿದೂಗಿಸಲು ಪೋಷಕಾಂಶಯುಕ್ತ ಆಹಾರ ಸೇವನೆ ಅಗತ್ಯ. ಮಗುವಿನ ಆರೋಗ್ಯವನ್ನು ಉತ್ತಮವಾಗಿಡಲು ತಾಯಿಯ ಆರೋಗ್ಯ ಮುಖ್ಯವಾಗಿರುತ್ತದೆ.
ವ್ಯಾಯಾಮ ಮಾಡಿ: ಹೆರಿಗೆಯ ಬಳಿಕ ದೇಹದ ತೂಕ ಕ್ರಮೇಣವಾಗಿ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಲು ವ್ಯಾಯಾಮ ಅತ್ಯಗತ್ಯ, ಅದಕ್ಕಿಂತ ಹೆಚ್ಚಾಗಿ ಇಡೀ ದೇಹದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ವ್ಯಾಯಾಮ ಅಗತ್ಯವಾಗಿರುತ್ತದೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಮಗು ಹೊಟ್ಟೆಯಲ್ಲಿರುವಾಗ ಅಬ್ಡಾಮಿನಲ್ ಮಾಂಸಖಂಡಗಳು ದೊಡ್ಡದಾಗಿರುತ್ತದೆ. ಮಗು ಹೊರಗೆ ಬಂದಾಗ ಅದು ಹಾಗೆಯೇ ಉಳಿದುಬಿಡುತ್ತದೆ. ಈ ಮಾಂಸಖಂಡಗಳನ್ನು ಸಹಜ ಸ್ಥಿತಿಗೆ ತರುವುದು ಬಹಳ ಮುಖ್ಯವಾಗಿದೆ. ಅದ್ದರಿಂದ ಹೆರಿಗೆಯ ಬಳಿಕ ವ್ಯಾಯಾಮ ಮಾಡುವುದು ಅತೀ ಅಗತ್ಯವಾಗಿದೆ.
ನಾರ್ಮಲ್ ಹೆರಿಗೆಯಾದ ಸಂದರ್ಭದಲ್ಲಿ ಯೋನಿಯ ಮಾಂಸಖಂಡಗಳು ಹಿಗ್ಗಿಕೊಂಡಿರುತ್ತವೆ. ನಕ್ಕಾಗ, ಕೆಮ್ಮಿದಾಗ ಕೆಲವು ದಿನಗಳವರೆಗೆ ಮೂತ್ರ ಹೊರಹೊರಬರುವ ಸಾಧ್ಯತೆಗಳಿರುತ್ತದೆ. ಇದನ್ನು ತಡೆಯಲು ವೈದ್ಯರ ಸಲಹೆ ಪಡೆದು ಅವರು ಹೇಳಿದಂತೆಯೇ ವ್ಯಾಯಾಮವನ್ನು ಮುಂದುವರೆಸಿ ಆರೋಗ್ಯವಾಗಿರಲಿ.
ಆರೋಗ್ಯ ಹಾಗೂ ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ