30 ವರ್ಷ ದಾಟಿದವರೇ ಎಚ್ಚರ: ಬಿಪಿ, ಮಧುಮೇಹದಿಂದ ಹೆಚ್ಚಬಹುದು ಸ್ಟ್ರೋಕ್ ಅಪಾಯ
ಸ್ಟ್ರೋಕ್ ಅಥವಾ ಪಾರ್ಶ್ವವಾಯು ವಯಸ್ಸಾದವರಿಗೆ ಮಾತ್ರ ಬರುವ ಕಾಯಿಲೆಯಲ್ಲ. ಮೂವತ್ತರ ವಯಸ್ಸಿನವರಲ್ಲಿಯೂ ಅನಾರೋಗ್ಯಕರ ಜೀವನಶೈಲಿಯಿಂದ ಈ ಅಪಾಯ ಹೆಚ್ಚಬಹುದು. ಮುಖ ವಕ್ರವಾಗುವುದು, ಕೈಕಾಲುಗಳಲ್ಲಿ ದೌರ್ಬಲ್ಯ ಅಥವಾ ಮಾತು ತೊದಲುವ ಲಕ್ಷಣಗಳು ಕಂಡರೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಬೇಕು. ಸಮಯೋಚಿತ ಚಿಕಿತ್ಸೆ ಗಂಭೀರ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಸ್ಟ್ರೋಕ್ ಅಥವಾ ಪಾರ್ಶ್ವವಾಯು ಎಂದರೆ ವಯಸ್ಸಾದವರಿಗೆ ಮಾತ್ರ ಬರುವ ಕಾಯಿಲೆ ಎಂಬ ನಂಬಿಕೆ ಇದೆ. ಆದರೆ ಯುವ ವಯಸ್ಕರಲ್ಲಿಯೂ ಸ್ಟ್ರೋಕ್ ಕಾಣಿಸಿಕೊಳ್ಳಬಹುದು. ಭಾರತದ ಅಧ್ಯಯನಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಸುಮಾರು 10–15% ಸ್ಟ್ರೋಕ್ ಪ್ರಕರಣಗಳು 45 ವರ್ಷದೊಳಗಿನವರಲ್ಲೇ ಕಾಣಿಸಿಕೊಳ್ಳುತ್ತಿವೆ. ಈ ಅಧ್ಯಯನಗಳ ಪ್ರಕಾರ ನಮ್ಮ ದೇಶದಲ್ಲಿ ಸ್ಟ್ರೋಕ್ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈ ಬಗ್ಗೆ, ಹೆಬ್ಬಾಳ ಮತ್ತು ಯಲಹಂಕ ಮಣಿಪಾಲ್ ಆಸ್ಪತ್ರೆಯ ನರರೋಗ ವಿಭಾಗದ ಪ್ರಮುಖ ಸಲಹೆಗಾರರಾದ ಡಾ. ಶ್ರೀನಿವಾಸ್ ರಾಜು ಅವರು ಹೆಚ್ಚಿನ ಮಾಹಿತಿಯನ್ನು ನೀಡಿದ್ದು, ಈ ರೀತಿ ಆಗುವುದಕ್ಕೆ ಕಾರಣ ಮತ್ತು ಯಾವ ರೀತಿ ಲಕ್ಷಣ ಕಂಡು ಬರುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಏಕೆ ಹೀಗಾಗುತ್ತದೆ?
ಈ ರೀತಿ ಆಗುವುದಕ್ಕೆ ಕಾರಣ ನಮ್ಮ ಜೀವನಶೈಲಿ. ಗಂಟೆಗಟ್ಟಲೆ ಕುರ್ಚಿಯಲ್ಲಿ ಕೂತು ಕೆಲಸ, ಒತ್ತಡ, ನಿದ್ದೆಯ ಕೊರತೆ, ಹೊರಗಿನ ಊಟ, ವ್ಯಾಯಾಮ ಇಲ್ಲದಿರುವುದು. ಇವು ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳ ಉಲ್ಭಣಕ್ಕೆ ಮುಖ್ಯ ಕಾರಣವಾಗುತ್ತವೆ. ಈ ಮೂರು ಸ್ಟ್ರೋಕ್ ಸಂಭವನೆಯ ಅಪಾಯವನ್ನು ಹೆಚ್ಚಿಸುವ ಮೂರು ಕಾರಣಗಳಾಗಿವೆ. ICMR-INDIAB ಅಧ್ಯಯನದ (2023) ಪ್ರಕಾರ ಭಾರತದಲ್ಲಿ ಸುಮಾರು 10 ಕೋಟಿ ಜನರಿಗೆ ಮಧುಮೇಹ, 31 ಕೋಟಿಗೂ ಹೆಚ್ಚು ಜನರಿಗೆ ಅಧಿಕ ರಕ್ತದೊತ್ತಡ ಇದೆ. ಇನ್ನೂ ಕಳವಳದ ಸಂಗತಿ ಏನೆಂದರೆ, ಬಹಳ ಜನರಿಗೆ ತಮಗೆ ಈ ಕಾಯಿಲೆಗಳು ಇವೆ ಎಂಬುದರ ಅರಿವೇ ಇರುವುದಿಲ್ಲ. ಲಕ್ಷಣಗಳೇ ಇರದ ಕಾರಣ “ನಾನು ಚೆನ್ನಾಗಿದ್ದೀನಿ” ಅಂತ ಅಂದುಕೊಂಡಿರುತ್ತಾರೆ.
ಏನು ಮಾಡಬೇಕು?
- 30 ವರ್ಷ ದಾಟಿದ ಮೇಲೆ ವರ್ಷಕ್ಕೊಮ್ಮೆ ಬಿಪಿ, ಸಕ್ಕರೆ ಮತ್ತು ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಿ. ಕುಟುಂಬದಲ್ಲಿ ಇತಿಹಾಸ ಇದ್ದರೆ ಇನ್ನೂ ಬೇಗ ಮಾಡಿಸಿಕೊಳ್ಳಿ.
- ಉಪ್ಪು ಕಡಿಮೆ ಮಾಡಿ, ಹುರಿದ ಪದಾರ್ಥ ಮತ್ತು ಸಿಹಿ ಮಿತಿಯಲ್ಲಿರಲಿ.
- ವಾರಕ್ಕೆ ಕನಿಷ್ಠ 150 ನಿಮಿಷ ನಡಿಗೆ ಅಥವಾ ವ್ಯಾಯಾಮ ಮಾಡಿ.
- ತಂಬಾಕು, ಸಿಗರೇಟ್ ಬಿಟ್ಟುಬಿಡಿ.
- ವೈದ್ಯರು ಔಷಧ ಕೊಟ್ಟರೆ, ಚೆನ್ನಾಗಿದ್ದೀನಿ ಅಂತ ನಿಲ್ಲಿಸಬೇಡಿ.
ಈ ಲಕ್ಷಣ ಕಂಡರೆ ತಡ ಮಾಡಬೇಡಿ
ಮುಖ ಒಂದು ಕಡೆ ಸೊಟ್ಟಗಾಗುವುದು, ಕೈ ಅಥವಾ ಕಾಲು ಶಕ್ತಿ ಕಳೆದುಕೊಳ್ಳುವುದು, ಮಾತು ತೊದಲುವುದು, ಹಠಾತ್ ದೃಷ್ಟಿ ಮಂಜಾಗುವುದು, ವಿಪರೀತ ತಲೆ ತಿರುಗುವಿಕೆ. ಇವು ಕಂಡರೆ ಸೌಲಭ್ಯ ಇರುವ ಆಸ್ಪತ್ರೆಗೆ ಹೋಗಿ. ಮೊದಲ 4.5 ಗಂಟೆ ಅತ್ಯಂತ ಮುಖ್ಯ, ಏಕೆಂದರೆ ಆ ಸಮಯದಲ್ಲಿ ರಕ್ತಗಟ್ಟು ಕರಗಿಸುವ ಚಿಕಿತ್ಸೆ ಸಾಧ್ಯ. ಪ್ರತಿ ನಿಮಿಷಕ್ಕೂ ಬೆಲೆ ಇದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




