Daily Horoscope: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಶ್ರದ್ಧೆ, ಸ್ನೇಹಿತರೊಡನೆ ವ್ಯವಹಾರ ಮಾಡುವಾಗ ಎಚ್ಚರವಹಿಸಿ
2023 ಫೆಬ್ರವರಿ 26ರ ಭಾನುವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 26ರ ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಐಂದ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ-52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ. ರಾಹು ಕಾಲ 05:11-06:38ರವರೆಗೆ, ಯಮಘಂಡ ಕಾಲ 12:46-02:14 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42-05:11ರವರೆಗೆ
ಮೇಷ: ಆರ್ಥಿಕಸ್ಥಿತಿಯು ಮಂದಗತಿಯಲ್ಲಿರಲಿದೆ. ಕೆಲಸವನ್ನು ಮಾಡಿಕೊಳ್ಳಲು ಜಾಣತನದಿಂದ ಮಾತನಾಡುವಿರಿ. ತಾಳ್ಮೆಯನ್ನು ಕಳೆದುಕೊಂಡು ಮಾತನಾಡುವುದರಿಂದ ಪ್ರಯೋಜನವಿಲ್ಲ. ಬಟ್ಟೆ ತಯಾರಕರಿಗೆ ವ್ಯವಹಾರ ವಿಸ್ತರಿಸುತ್ತದೆ. ರೇಷ್ಮೆ ವಸ್ತ್ರಗಳನ್ನು ನೇಯುವವರಿಗೆ ಬೇಡಿಕೆ ಹೆಚ್ಚುತ್ತದೆ. ಅಧಿಕ ಓಡಾಟ ಹೆಚ್ಚು ಆಯಾಸ ತರಬಹುದು. ಸಂಗಾತಿಯ ಆದಾಯದಲ್ಲಿ ಹೆಚ್ಚಳ ಕಾಣಬಹುದು. ದಿನಸಿ ದಾಸ್ತಾನುದಾರರಿಗೆ ತಕ್ಷಣದ ಲಾಭ ದೊರೆಯಬಹುದು. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯಾಪಾರ ಹೆಚ್ಚಾಗಿ ಲಾಭ ಹೆಚ್ಚುತ್ತದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ.
ವೃಷಭ: ಪೂರ್ವಯೋಜಿತವಾದ ಕಾರ್ಯಗಳಲ್ಲಿ ಸಫಲತೆ ಕಾಣುವಿರಿ. ಹಳೆಯ ಸಾಲಗಳನ್ನು ತೀರಿಸಿ ನೆಮ್ಮದಿಯನ್ನು ಕಾಣುವಿರಿ. ರೈತರು ಕೃಷಿ ಕಾರ್ಯಗಳಲ್ಲಿ ಹೆಚ್ಚಿನ ಗಮನ ಕೊಡುವರು. ಆಹಾರ ವ್ಯತ್ಯಾಸದಿಂದ ಸ್ವಲ್ಪ ಆರೋಗ್ಯ ವ್ಯತ್ಯಾಸವಾಗಬಹುದು. ಕೆಲವೊಂದು ಸ್ವಂತ ವ್ಯವಹಾರಗಳಿಗೆ ಮಧ್ಯವರ್ತಿಗಳನ್ನು ದೂರವಿಡುವುದು ಒಳ್ಳೆಯದು. ಸಿದ್ಧಪಡಿಸಿದ ಆಹಾರವನ್ನು ತಯಾರಿಸುವವರಿಗೆ ಮಾರುಕಟ್ಟೆ ವಿಸ್ತರಣೆಯ ಯೋಗವಿದೆ. ಅತಿಯಾದ ಆಲಸ್ಯ ಮತ್ತು ಅಹಂಕಾರ ನಿಮ್ಮನ್ನು ವ್ಯವಹಾರಗಳಿಂದ ಹೊರಗಿಡುತ್ತದೆ.
ಮಿಥುನ: ವೈದ್ಯರಿಗೆ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕಾದ ಅನಿವಾರ್ಯವಿದೆ. ಕೆಲವರಿಗೆ ಸಂಸ್ಥೆ ಮುಖಾಂತರ ತರಬೇತಿಗಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಓಡಾಟ ಹೆಚ್ಚಾಗಿ, ಹೆಚ್ಚು ಜನಸಂಪರ್ಕ ಮಾಡಬೇಕಾದ ಅನಿವಾರ್ಯವಿರುತ್ತದೆ. ಕೆಲವರಿಗೆ ಸೂಕ್ತ ವೈವಾಹಿಕ ಸಂಬಂಧ ದೊರೆಯುವ ಸಾಧ್ಯತೆ ಇದೆ. ಹಿರಿಯರಿಂದ ನಿಮ್ಮ ಪರಂಪರೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ದೊರೆಯುತ್ತದೆ. ವಾಹನ ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಸೌಲಭ್ಯ ಹೆಚ್ಚುತ್ತದೆ. ಸರ್ಕಾರಿ ಕಚೇರಿಗಳಿಗೆ ಹೆಚ್ಚು ಅಲೆದಾಟವಾದರೂ ಕೆಲಸಗಳಾಗುತ್ತವೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ಮುಟ್ಟುತ್ತದೆ.
ಕಟಕ: ಕಾರ್ಯದೊತ್ತಡಗಳ ನಡುವೆ ಕುಟುಂಬದಲ್ಲಿನ ಆಗು ಹೋಗುಗಳತ್ತ ಗಮನಹರಿಸುವುದು ಒಳ್ಳೆಯದು. ಹಳೆಯ ಸ್ನೇಹಿತರ ಸಂಪರ್ಕ ದೊರೆತು ಸಂತೋಷಪಡುವಿರಿ. ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಷೇರು ವ್ಯವಹಾರಗಳಲ್ಲಿ ಅಷ್ಟು ಏಳಿಗೆ ಇರುವುದಿಲ್ಲ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಬಂಧುಗಳು ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಯತ್ನಿಸುವರು ಎಚ್ಚರದಿಂದಿರಿ. ವೃತ್ತಿಯಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು ಹಾಗೂ ಅದರಲ್ಲಿ ಉತ್ತಮ ಫಲಿತಾಂಶ ಬರುವ ಯೋಗವಿದೆ. ವಿದೇಶದಲ್ಲಿ ವೃತ್ತಿಯಲ್ಲಿರುವವರಿಗೆ ಮುಂಬಡ್ತಿ ದೊರೆಯಬಹುದು.
ಸಿಂಹ: ಧನದ ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ವೃತ್ತಿಯಲ್ಲಿ ಬರುವ ಯಾವುದೇ ಹೊಸ ಜವಾಬ್ದಾರಿಗಳನ್ನು ಸಂಕೋಚವಿಲ್ಲದೆ ಒಪ್ಪಿಕೊಳ್ಳಿರಿ. ಇದು ನಿಮ್ಮ ಏಳಿಗೆಗೆ ಕಾರಣವಾಗಿರುತ್ತದೆ. ಪ್ರಭಾವಶಾಲಿ ವ್ಯಕ್ತಿಯೊಬ್ಬರ ಭೇಟಿಯಾಗಬಹುದು. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಮೂಡುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಕಾಡಬಹುದು. ಆಸ್ತಿ ತೆರಿಗೆ ಪಾವತಿಯಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಬಹಳ ಉತ್ತಮ. ಸಂಗಾತಿಗೆ ಹಿರಿಯರ ಆಸ್ತಿ ಒದಗುವ ಸಂದರ್ಭವಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ಕೆಲವು ಸರ್ಕಾರಿ ಕಾನೂನಿನ ತೊಡಕುಗಳು ಬರುವ ಸಾಧ್ಯತೆ ಇದೆ.
ಕನ್ಯಾ: ನಿಮ್ಮ ತೂಕದ ಮಾತು ನಿಮಗೆ ಗೌರವವನ್ನು ತರುತ್ತದೆ. ಸ್ನೇಹಿತರೊಡನೆ ವ್ಯವಹಾರ ಮಾಡುವಾಗ ಸಂಶಯ, ಅಪನಂಬಿಕೆ ಬಾರದಂತೆ ಸಾಕಷ್ಟು ಎಚ್ಚರವಹಿಸಿರಿ. ನಿಮ್ಮ ಸ್ವಂತ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ನಿಮ್ಮ ಉದಾಸೀನ ಮನೋಭಾವದಿಂದ ವ್ಯಾಪಾರದಲ್ಲಿ ನಷ್ಟ ಆದರೂ ಪಾಲುದಾರರಲ್ಲಿ ವಿನಂತಿಸಿದರೆ ಸುಮ್ಮನಿರುವರು. ಕಲಾವಿದರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ. ಅನಾರೋಗ್ಯವು ನಿಮ್ಮನ್ನು ಕಾಡಬಹುದು. ಕೃಷಿಯನ್ನು ಓದುತ್ತಿರುವವರಿಗೆ ಸೂಕ್ತ ಸೌಲಭ್ಯ ದೊರೆಯುತ್ತದೆ.
ತುಲಾ: ವಿದೇಶದಲ್ಲಿದ್ದು ಸಂಗಾತಿಯನ್ನು ಹುಡುಕುವಿರಿ. ಮಹಿಳೆಯರ ಅನಾರೋಗ್ಯಕರ ಚಿಂತನೆ ಅವರಿಗೆ ಕುಂದು ತರುತ್ತದೆ. ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೊಸ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಉದ್ಯೋಗದಲ್ಲಿ ವರ್ಚಸ್ಸನ್ನು ಹೆಚ್ಚು ಮಾಡಿಕೊಳ್ಳುವಿರಿ. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದರೂ ಖರ್ಚು ಅದನ್ನು ಮೀರಿರುತ್ತದೆ. ಸಂಸಾರದಲ್ಲಿ ಕಲಹ ಏರ್ಪಡಬಹುದು. ವಾಯು ಪ್ರಕೋಪ ಕಾಡಬಹುದು. ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಹೊಸ ಸ್ಥಾನ ದೊರೆಯುವ ಸಾಧ್ಯತೆ ಇದೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಶ್ರದ್ಧೆ ಇರುತ್ತದೆ. ಸಹೋದ್ಯೋಗಿಗಳ ಜೊತೆ ವಾದ-ವಿವಾದಗಳು ಖಂಡಿತಬೇಡ. ಪೊಲೀಸ್ ಹುದ್ದೆಯಲ್ಲಿರುವ ಕೆಲವರಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಅವಸರ ಖಂಡಿತ ಬೇಡ. ಹಣದ ಹರಿವು ಸಾಮಾನ್ಯವಾಗಿದ್ದರೂ ಖರ್ಚು ನಿಭಾಯಿಸುವುದು ಬಹಳ ಉತ್ತಮ. ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಪ್ರಪಂಚದಲ್ಲಿ ಹೆಚ್ಚು ಪ್ರಗತಿ ಕಾಣುವಿರಿ. ಕಳೆದು ಹೋಗಿದ್ದ ಸರ್ಕಾರಿ ದಾಖಲೆಗಳು ಈಗ ಸಿಗುವ ಸಾಧ್ಯತೆಗಳಿವೆ. ಹಣಕಾಸಿನ ಸಂಸ್ಥೆಯ ದಾಖಲೆ ಮೇಲ್ವಿಚಾರಕರು ಹೆಚ್ಚು ಎಚ್ಚರದಿಂದ ಕೆಲಸ ಮಾಡುವುದು ಒಳ್ಳೆಯದು.
ಧನಸ್ಸು: ವೃತ್ತಿಯಲ್ಲಿ ಬಹಳ ಜಾಣ್ಮೆಯಿಂದ ಕೆಲಸವನ್ನು ನಿಭಾಯಿಸುವಿರಿ. ಸರ್ಕಾರದಿಂದ ಬರಬೇಕಾದ ಹಳೆ ಬಾಕಿಗಳು ಈಗ ಬಂದು ಸೇರುತ್ತವೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಚೇತರಿಕೆ ಕಂಡು ಸಂತಸವಾಗುತ್ತದೆ. ನಿಮ್ಮ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಿರಿ. ಸಾಹಸ ಕಲಾವಿದರಿಗೆ ಯಶಸ್ಸು ಸಿಗುತ್ತದೆ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಎಲ್ಲ ರೀತಿಯ ಸಹಾಯಧನ ಬರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ಅವಕಾಶ ಒದಗುತ್ತದೆ. ನಿಮ್ಮ ಕಾರ್ಯಕ್ಷಮತೆಯಿಂದ ನಿಮ್ಮ ಸಂಸ್ಥೆಗೆ ಲಾಭವಾಗುತ್ತದೆ.
ಮಕರ: ಪ್ರೀತಿಯಲ್ಲಿ ಬಿದ್ದರೂ ಹಿರಿಯರು ನಿಮ್ಮ ಪ್ರೀತಿಗೆ ಒಪ್ಪಿಗೆ ನೀಡುವರು. ದಾಂಪತ್ಯದಲ್ಲಿ ಅನ್ಯೋನ್ಯತೆ ಮೂಡುತ್ತದೆ. ನಡವಳಿಕೆಯಿಂದ ಎಲ್ಲರ ಮನಗೆದ್ದು ನಿಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಿರಿ. ವಿದೇಶಿ ಕಚೇರಿಗಳನ್ನು ನಡೆಸುತ್ತಿರುವವರು ಆ ಜಾಗವನ್ನು ಕೊಂಡು ಸ್ವಂತ ಕಚೇರಿಗಳನ್ನು ಮಾಡಿಕೊಳ್ಳುವ ಯೋಗವಿದೆ. ಆರ್ಥಿಕಸ್ಥಿತಿಯು ಸ್ವಲ್ಪ ಸುಧಾರಣೆಯತ್ತ ಹೊರಳುತ್ತದೆ. ಮಾರ್ಗದರ್ಶಕರ ಸಲಹೆಯಂತೆ ನಿಮ್ಮ ಗುರಿಮುಟ್ಟುವ ಹಾದಿಯನ್ನು ಬದಲಿಸಿಕೊಂಡಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳಿಗೆ ಸಂಘ-ಸಂಸ್ಥೆಗಳಲ್ಲಿ ಉತ್ತಮ ಹುದ್ದೆ ದೊರೆಯುತ್ತದೆ. ಸರ್ಕಾರಿ ಕಾನೂನು ತೊಡಕುಗಳು ಈಗ ನಿವಾರಣೆಯಾಗುತ್ತವೆ.
ಕುಂಭ: ಸಹೋದರರು ನಿಮಗೆ ಸಾಕಷ್ಟು ವಿರೋಧವನ್ನು ಮಾಡುವರು. ಹತ್ತಾರು ವರ್ಷದ ಹಿಂದೆ ಕೂಡಿಟ್ಟ ಹಣವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸುವಿರಿ. ಖರ್ಚಿಗೆ ತಕ್ಕಂತೆ ಆದಾಯ ಬರುವುದರಿಂದ ಹಣಕಾಸಿನ ಸ್ಥಿತಿ ಸಮತೋಲನವಾಗಿರುತ್ತದೆ. ಪಿತ್ರಾರ್ಜಿತ ಆಸ್ತಿಗಾಗಿ ಬಂಧುಗಳ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ವಿದ್ಯುತ್ ಉತ್ಪಾದಕರಿಗೆ ಸರ್ಕಾರದಿಂದ ಬರಬೇಕಿದ್ದ ಹಣ ಈಗ ಬರುತ್ತದೆ. ಹಿರಿಯರ ಕೆಲವು ಆರೋಗ್ಯ ಸಮಸ್ಯೆಗಳು ತಾನೇ ಸರಿಯಾಗುವ ಲಕ್ಷಣವಿದೆ. ವ್ಯಾಪಾರದಲ್ಲಿ ಮಧ್ಯವರ್ತಿ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭ ದೊರೆಯುವ ಸಂದರ್ಭವಿದೆ.
ಮೀನ: ವೃತ್ತಿಯಲ್ಲಿ ನಿಮ್ಮ ಕೆಲಸವನ್ನು ನಿಯಮ ಬದ್ಧವಾಗಿ ಮಾಡಿ ಮುಗಿಸುವುದು ಉತ್ತಮ. ಕೆಲವು ನ್ಯಾಯಮೂರ್ತಿಗಳಿಗೆ ಉತ್ತಮ ನ್ಯಾಯದಾನ ನೀಡಿದ ಸಂತೋಷವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಬಹಳ ಶ್ರಮಪಡುವಿರಿ. ಕೆಲವರಿಗೆ ಸಂಸ್ಥೆಯೊಂದರ ಸಲಹೆಗಾರರಾಗಿ ನೇಮಕಗೊಳ್ಳುವ ಅವಕಾಶವಿದೆ. ಎಲ್ಲಾ ವಿಚಾರಗಳಲ್ಲೂ ನಿಮ್ಮದೇ ಅಭಿಪ್ರಾಯ ಹೇಳುವುದಕ್ಕಿಂತ ಇತರರ ಅಭಿಪ್ರಾಯಗಳಿಗೂ ಬೆಲೆ ಕೊಡುವುದು ಉತ್ತಮ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.
ಲೋಹಿತಶರ್ಮಾ, ಇಡುವಾಣಿ