Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 5ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 5ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 5ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಏನನ್ನಾದರೂ ದಕ್ಕಿಸಿಕೊಳ್ಳಬಲ್ಲೆ ಎಂಬ ಧೋರಣೆ ಈ ದಿನ ಯಾವುದೇ ಕಾರಣಕ್ಕೂ ಬೇಡ. ವಿಪರೀತ ಚಂಚಲತೆ ಇರುತ್ತದೆ. ಎಲ್ಲವೂ ಬೇಕು, ಬೇಕು ಎಂಬ ಧೋರಣೆ ಸರಿಯಲ್ಲ. ನಿಮ್ಮ ಅಗತ್ಯಗಳನ್ನು ಅರಿತುಕೊಂಡು, ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿಸಿ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಬಹಳ ಎಚ್ಚರಿಕೆ ಅಗತ್ಯ. ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಹಣ ಅಥವಾ ವಸ್ತು ತೆಗೆದುಕೊಳ್ಳಬೇಡಿ. ಮುಖ್ಯ ವಸ್ತುಗಳ ಕಡೆಗೆ ಹೆಚ್ಚಿನ ಲಕ್ಷ್ಯ ಇರಲಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಾನಾ ಕಾರಣಗಳಿಗೆ ಈ ದಿನ ನಿಮಗೆ ಒತ್ತಡ ಇರಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗಬಹುದು. ಹೊಸ ವಿಷಯಗಳನ್ನು ಕಲಿತುಕೊಳ್ಳಲಿದ್ದೀರಿ. ವಸ್ತ್ರಾಭರಣ ಖರೀದಿಸಲಿದ್ದೀರಿ. ಗುರು- ಹಿರಿಯರ ಆಶೀರ್ವಾದ ಇರಲಿದೆ. ಸ್ನೇಹಿತರು- ಬಂಧುಗಳು ಹಣಕಾಸಿನ ನೆರವು ನೀಡಬಹುದು. ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಯಾರಿಗೂ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ. ಪಾರ್ಟಿಗಳಲ್ಲಿ ಭಾಗೀ ಆಗಲಿದ್ದೀರಿ. ನಿದ್ದೆ- ಊಟ ಇವುಗಳನ್ನು ಸರಿಯಾದ ಸಮಯಕ್ಕೆ ಮಾಡುವ ಕಡೆಗೆ ಗಮನ ನೀಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ದಿನ ಅತಿಯಾದ ಆಲೋಚನೆ ನಿಮ್ಮನ್ನು ಕಾಡಲಿದೆ. ಬಹುಶಃ ಇತರರನ್ನು, ಇತರರ ಮನೆಯನ್ನು ಹೋಲಿಕೆ ಮಾಡಲಿದ್ದೀರಿ. ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಈ ದಿನ ಹಲವು ಜನರ ಮಧ್ಯೆ ಇದ್ದರೂ ಒಂಟಿತನ ನಿಮ್ಮನ್ನು ಕಾಡುತ್ತದೆ, ಸ್ವಾದಿಷ್ಟವಾದ ಊಟ- ತಿಂಡಿ ಸವಿಯುವ ಯೋಗ ಇದೆ. ವಿನಾಕಾರಣವಾಗಿ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಆಗಿದ್ದೇ ನಿಮಗೂ ಆಗಲಿದೆ. ಅದಕ್ಕೆ ಗಾಬರಿ ಏಕೆ? ಆತ್ಮವಿಶ್ವಾಸ ಇದ್ದಲ್ಲಿ ಎಂಥ ಸವಾಲನ್ನಾದರೂ ದಾಟಬಹುದು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ರಾಜಕಾರಣದ ಬಗ್ಗೆ ಮಹತ್ವಾಕಾಂಕ್ಷೆ ಇರುವವರಿಗೆ ಇದು ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕಕಕ್ಕೆ ಬರಲಿದ್ದೀರಿ. ವೃತ್ತಿನಿರತರಿಗೆ ಭವಿಷ್ಯದ ಸವಾಲಿನ ಬಗ್ಗೆ ಸೂಚನೆ ದೊರೆಯಲಿದೆ. ಉದ್ಯೋಗದಲ್ಲಿ ಇರುವವರು ಕೆಲವು ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಸಮಾನ ಮನಸ್ಕರು, ಸ್ನೇಹಿತರ ಜತೆಯಲ್ಲಿ ಚರ್ಚಿಸುವ ಅವಕಾಶಗಳಿವೆ. ಸೋಷಿಯಲ್ ಮೀಡಿಯಾ ಬಳಸುವವರು ಬಹಳ ಎಚ್ಚರಿಕೆಯಿಂದ ಇರಬೇಕು. ವಾಗ್ವಾದ- ಭಿನ್ನಾಭಿಪ್ರಾಯ ಇಲ್ಲದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಇನ್ನೇನು ಎಲ್ಲ ಕೆಲಸ ಆಗಿಹೋಗಿದೆ, ಹಣ ಬರುವುದಷ್ಟೇ ಬಾಕಿ ಎಂದುಕೊಂಡಿದ್ದ ಕೆಲಸದಲ್ಲಿ ಸವಾಲು ಎದುರಾಗಲಿದೆ. ಭರವಸೆ ಇಟ್ಟುಕೊಂಡು ಶುರು ಮಾಡಿದ್ದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ವರ್ಚಸ್ಸು, ಹಣಕ್ಕೆ ಹಾನಿ ಆಗಬಹುದು. ಹೊಸಬರ ಪರಿಚಯ ಆಗುತ್ತದೆ. ಸ್ವಂತ ಉದ್ಯಮಿಗಳಿಗೆ ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕಣ್ಣಿನ ಅಲರ್ಜಿ ಕಾಡಬಹುದು. ಹೊಸ ವಾಹನ ಖರೀದಿಸಬೇಕು ಎಂದಿರುವವರು ಸ್ವಲ್ಪ ಸಮಯ ನಿರ್ಧಾರವನ್ನು ಮುಂದೂಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಯಾರು ಸ್ವಂತ ವ್ಯವಹಾರ ಮಾಡಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದೀರೋ ಅಂಥವರಿಗೆ ಬಹಳ ಮುಖ್ಯವಾದ ದಿನ ಇದಾಗಲಿದೆ. ವ್ಯಾಪಾರ- ವ್ಯವಹಾರ ವಿಸ್ತರಣೆಗಾಗಿ ಕುಟುಂಬದಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ನಿಮ್ಮ ಈ ತನಕದ ಉಳಿತಾಯ ಹಾಗೂ ತೆಗೆದುಕೊಳ್ಳಬಹುದಾದ ಸಾಲ ಮತ್ತು ವ್ಯಾಪಾರಕ್ಕೆ ಇರುವ ಅವಕಾಶಗಳನ್ನು ಚೆನ್ನಾಗಿ ಅಳೆದು, ಮುಂದಿನ ಯೋಜನೆ ರೂಪಿಸುತ್ತೀರಿ. ನಿಮ್ಮ ಸಮಯಪ್ರಜ್ಞೆಯಿಂದ ತುಂಬ ದೊಡ್ಡ ಸಹಾಯ ಆಗಲಿದೆ. ಹೊಸ ಕಚೇರಿಯನ್ನು ಬಾಡಿಗೆಗೆ ಪಡೆಯುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಒಂದು ವೇಳೆ ಸಂಬಂಧಿಗಳ ಜತೆಗೆ ಈಗಾಗಲೇ ಏನಾದರೂ ಸಣ್ಣ- ಪುಟ್ಟ ವೈಮನಸ್ಯ ಮಾಡಿಕೊಂಡಿದ್ದಲ್ಲಿ ಅದನ್ನು ಸರಿ ಮಾಡಿಕೊಳ್ಳಲು ಅವಕಾಶ, ವೇದಿಕೆ ದೊರೆಯಲಿದೆ. ಇದನ್ನು ನೀವು ಬಳಸಿಕೊಳ್ಳುವುದರಿಂದ ಸಂಬಂಧ ಗಟ್ಟಿ ಆಗಲಿದೆ. ಸ್ನೇಹಿತರ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೀರಿ. ಮರದ ಕೆತ್ತನೆ, ಮಾರಾಟ ಮಾಡುವಂಥವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುವ ಮಾರ್ಗ ಗೋಚರಿಸಲಿದೆ. ರಾಜಕಾರಣಿಗಳಿಗೆ ಪ್ರಭಾವ ವಿಸ್ತರಿಸಿಕೊಳ್ಳವಂಥ ದಿನ ಇದು. ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಬರಲಿದ್ದಾರೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಈ ದಿನ ನಿಮ್ಮ ಮನೆಯ ಬಳಿ ಅಥವಾ ಸ್ವಲ್ಪ ದೂರವಾದರೂ ಸರಿ, ಹೋಗಲು ಸಾಧ್ಯವಿದೆ ಎಂದಾದರೆ ದಕ್ಷಿಣಾಮೂರ್ತಿ ದೇವಸ್ಥಾನಕ್ಕೆ ತೆರಳಿ, ದರ್ಶನವನ್ನು ಪಡೆಯಿರಿ. ಗುರುಗಳ ಅನುಗ್ರಹ ದೊರೆಯಲಿದೆ. ಹೊಸದಾಗಿ ವಾಹನ ಖರೀದಿಗಾಗಿ ಹಣ ಹೊಂದಿಕೆಗಾಗಿ ಸ್ನೇಹಿತರು- ಸಂಬಂಧಿಗಳ ಬಳಿ ಪ್ರಯತ್ನ ಮಾಡಲಿದ್ದೀರಿ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ನಿಮ್ಮ ಕೈಯಾರೆ ಹಣ ಖರ್ಚು ಮಾಡಿಕೊಳ್ಳಲಿದ್ದೀರಿ. ಹಳೇ ವ್ಯಾಜ್ಯಗಳು ಇದ್ದಲ್ಲಿ ಮಾತು ಕತೆ ಮೂಲಕ ಬಗಹರಿಸಿಕೊಳ್ಳುವುದಕ್ಕೆ ದಾರಿ ಸಿಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ದಿರಿಸು ಇರಬಹುದು ಅಥವಾ ಆಲೋಚನೆ ಇರಬಹುದು, ಬದಲಾವಣೆ ಮಾಡಿಕೊಳ್ಳುವ ಕಡೆಗೆ ಆಲೋಚನೆ ಮಾಡಲಿದ್ದೀರಿ. ಇದೊಂದು ರೀತಿಯಲ್ಲಿ ಮುಂದೆ ದೊರೆಯಲಿರುವ ಹೊಸ ಕೆಲಸಕ್ಕೆ ಸಿದ್ಧತೆ ಮಾಡಿಕೊಂಡಂತೆಯೇ ಆಗುತ್ತದೆ. ಅಂದರೆ ಅದಕ್ಕೆ ಬೇಕಾದಂತೆ ರೆಸ್ಯೂಮೆ, ಹೊಸ ದಿರಿಸು, ಶೂ ಖರೀದಿ ಇತ್ಯಾದಿಗಳೊಂದಿಗೆ ಸಿದ್ಧ ಆಗಲಿದ್ದೀರಿ. ತಾಯಿ ಕಡೆಯ ಸಂಬಂಧಿಕರು ಮನೆಗೆ ಬರುವಂಥ ಯೋಗ ಇದೆ. ನವವಿವಾಹಿತರು ಸಂತೋಷವಾಗಿ ಕಾಲ ಕಳೆಯಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ