Weekly Horoscope:ಫೆಬ್ರವರಿ 5ರಿಂದ ಫೆ.11ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
2023ರ ಫೆಬ್ರವರಿ 5ರಿಂದ ಫೆಬ್ರವರಿ 11ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ(Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಫೆಬ್ರವರಿ 5ರಿಂದ ಫೆಬ್ರವರಿ 11ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಮೇಷ: ಏಕಾದಶದಲ್ಲಿರುವ ಶನಿ ಮತ್ತು ಶುಕ್ರರು ಧನಲಾಭವನ್ನು ಮಾಡುತ್ತಾರೆ. ದ್ವಾದಶದ ಗುರುವು ಗುರು ಧಾರ್ಮಿಕ ಅಥವಾ ಪುಣ್ಯಕಾರ್ಯಗಳಿಗೆ ಹಣವ್ಯಯವನ್ನು ಮಾಡಿಸುವನು. ದಶಮದ ರವಿ ಮತ್ತು ಬುಧರು ಉದ್ಯೋಗದಲ್ಲಿ ಸ್ತಿರತ್ವವನ್ನು ನೀಡುವರು. ದ್ವಿತೀಯದ ಕುಜನಿಂದ ಮನೆಯಲ್ಲಿ ಅಶಾಂತಿ, ಕಲಹಗಳು ಆಗಬಹುದು. ಪ್ರಥಮದ ರಾಹು ಆರೋಗ್ಯವನ್ನು ಹಾಳುಮಾಡುವನು. ವಿವಾಹಕ್ಕೆ ಸಂಬಂಧಿಸಿದಂತೆ ವಿಘ್ನಗಳು ಬರಬಹುದು.
ವೃಷಭ: ಏಕಾದಶದ ಗುರುವು ನಿಮಗೆ ಸಂಪತ್ತು, ವಸ್ತು, ಅಧಿಕಾರ ಮುಂತಾದ ಲಾಭಗಳನ್ನು ನೀಡುವನು. ಆದರೆ ನವಮದ ಸೂರ್ಯ ಹಾಗೂ ಬುಧರು ಮಂಗಲಕರವಾದ ಕರ್ಮಮಗಳಿಗೆ ಪ್ರೇರಣೆ ನೀಡುವರು. ಪಿತ್ರಾರ್ಜಿತ ಆಸ್ತಿ ಅಥವಾ ಸಂಪತ್ತಿನ ಸಹಾಯವು ಸಿಗುವುದು. ದಶಮದ ಶನಿ ಹಾಗೂ ಶುಕ್ರರು ವೃತ್ತಿಪರರಿಗೆ ಅಧಿಕಾರದ ಲಾಭವನ್ನು ದಯಪಾಲಿಸುವನು. ನ್ಯಾಯಾಲಯದಲ್ಲಿ ಗೆಲುವಾಗಲಿದೆ. ಷಷ್ಠದ ಕೇತುವು ಶತ್ರುಗಳನ್ನು ಇಲ್ಲದಂತೆ ಮಾಡುವನು ಮತ್ತು ನಿಮ್ಮ ಪ್ರಭಾವವನ್ನು ಪ್ರಕಟಗೊಳಿಸುವನು.
ಮಿಥುನ: ದಶಮದ ಗುರುವು ವೃತ್ತಿಪರರ ಸ್ಥಾನವನ್ನು ಗಟ್ಟಿಗೊಳಿಸುವನು. ಶಿಕ್ಷಕವೃತ್ತಿಯವರಿಗೆ ಉನ್ನತಸ್ಥಾನಕ್ಕೆ ಕರೆದೊಯ್ಯುವನು. ಏಕಾದಶದ ರಾಹು ಕಬ್ಬಿಣ ಮುಂತಾದ ಲೋಹಗಳ ವ್ಯಾಪರಗಳಿಂದ ಧನವನ್ನು ಕೊಡಿಸುವನು. ನವಮದ ಶನಿ ಹಾಗೂ ಶುಕ್ರರು ಮಿಶ್ರಫಲಗಳನ್ನು ನೀಡುವರು. ಅಷ್ಟಮದ ರವಿ ಹಾಗೂ ಬುಧರು ಅಪಘಾತ ಮುಂತಾದ ತೊಂದರೆಗಳು ಆಗದಂತೆ ರಕ್ಷಣೆಯನ್ನು ಕೊಡುವರು. ಸಾಲಬಾಧೆಯೂ ನಿಲ್ಲುವುದು. ಮಕ್ಕಳ ವಿದ್ಯಾಭಾಸಕ್ಕೆ ಪಂಚಮ ಕೇತುವು ತಡೆಯೊಡ್ಡುವನು.
ಕಟಕ: ನವಮದ ಗುರುವು ನಿಮ್ಮನ್ನು ಸಕಲ ಆಪತ್ತುಗಳಿಂದ ರಕ್ಷಿಸುವನು. ಅಷ್ಟಮದ ಶುಕ್ರ ಮತ್ತು ಶನಿ ಇವರಿಬ್ಬರೂ ಸಲ್ಲದ ಆಲೋಚನೆಗಳನ್ನು ತಂದು ಮಾನಸಿಕ ನೆಮ್ಮದಿಯನ್ನು ಹಾಳುಮಾಡುವರು. ಅಷ್ಟಮದ ಶನಿಯು ನಿಮಗೆ ಪ್ರಾಣಹಾನಿಗೆ ಸರಿಯಾದ ನೋವುಗಳನ್ನು ನೀಡುವನು. ಏಕಾದಶದ ಕುಜನು ಯಂತ್ರೋಪಕರಳಿಂದ ಲಾಭವನ್ನು ಕೊಡುವನು. ಸಾಪ್ಟ್ ವೇರ್ ಉದ್ಯೋಗಿಗಳಿಗೆ ಸ್ಥಾನಮಾನವನ್ನು ವಿದೇಶಪ್ರವಾಸವನ್ನು ಮಾಡಿಸುವನು.
ಸಿಂಹ: ಸಪ್ತಮದ ಶುಕ್ರನು ಸಂಗಾತಿಯೊಂದಿಗೆ ಅನ್ಯೋನ್ಯವಾಗಿ ಇರುವಂತೆ ಮಾಡುವನು ಮತ್ತು ಅವಿವಾಹಿತರಿಗೆ ವಧೂ-ವರರನ್ನು ಒದಗಿಸಿಕೊಡುವನು. ಅಷ್ಟಮದ ಗುರು, ಹಿರಿಯರಿಂದ, ಉದ್ಯೋಗದ ಸ್ಥಳದಲ್ಲಿ ಅಪಮಾನವನ್ನು ಮಾಡಿಸುವನು. ತೃತೀಯದ ಕೇತುವು ದುಃಸಾಧ್ಯ ಕೆಲಸಗಳನ್ನು ಮಾಡಿಸಿ ನಿಮ್ಮ ಪರಾಕ್ರಮವನ್ನು ಪ್ರಕಟಗೊಳಿಸುವನು. ಷಷ್ಠದ ರವಿಯು ಶತ್ರುಗಳನ್ನು ದುರ್ಬಲಗೊಳಿಸುವನು. ದಶಮದ ಕುಜನು ಉದ್ಯೋಗದ ಅಪೇಕ್ಷಿಗಳಿಗೆ ಉದ್ಯೋಗವನ್ನು ಕೊಡಿಸುವನು.
ಕನ್ಯಾ: ಸಪ್ತಮದ ಗುರುವು ಅನೇಕ ಮಂಗಲ ಕಾರ್ಯಗಳನ್ನು, ಶುಭವನ್ನು, ಲಾಭವನ್ನು ಮಾಡಿಸುವನು. ನವಮದ ಕುಜನು ಭೂಮಿಯ ಲಾಭವನ್ನು ಮಾಡಿಸುವನು. ಪಂಚಮದ ಸೂರ್ಯ ಹಾಗೂ ಬುಧರು ಪ್ರತಿಭೆಯನ್ನು ಅನಾವರಣಗೊಳಿಸುವರು. ಮಕ್ಕಳಿಂದ ಶುಭವಾರ್ತೆಯನ್ನು ದಯಪಾಲಿಸುವರು. ಷಷ್ಠದ ಶನಿಯು ಸಾಲಬಾಧೆಯನ್ನು ನೀಡುವನು. ಶತ್ರುಗಳಿಗೆ ದುರ್ಬಲವನ್ನು ಕರುಣಿಸುವನು. ಮನೆಯ ನಿರ್ಮಾಣ ಕಾರ್ಯವು ವೇಗವನ್ನು ಪಡೆದುಕೊಳ್ಳುವುದು. ಅಷ್ಟಮದ ರಾಹುವು ಕೆಲವು ತೊಂದರೆಗಳನ್ನು ನೀಡಬಹುದು. ಶಿವಸ್ತೋತ್ರವನ್ನು ಪಠಿಸಿ.
ತುಲಾ: ಪಂಚಮದಲ್ಲಿರುವ ಶನಿಯು ಖರ್ಚುಗಳು ಹೆಚ್ಚಾಗುವಂತೆ ಮಾಡುವನು ಮತ್ತು ಅಲ್ಲಿಯೇ ಇರುವ ಶುಕ್ರನು ಅಧಿಕವಾಗುವ ವ್ಯಯವನ್ನು ತಡೆಯುವನು. ಚತುರ್ಥದ ಸೂರ್ಯ ಮತ್ತು ಬುಧರು ಕುಟುಂಬದಿಂದ ಸಹಾಯವನ್ನು ಮಾಡಿಸುವರು. ಅಪಮಾನಕರವಾದ ಸಂದರ್ಭಗಳು ಷಷ್ಠದ ಗುರುವಿನಿಂದ ದೊರೆಯಲಿದೆ. ಅಷ್ಟಮದಲ್ಲಿರುವ ಕುಜನು ಅಪಘಾತಾದಿಗಳನ್ನು ಮಾಡಿಸುವನು. ವಾಹನದಲ್ಲಿ ಓಡಾಡುವಾಗ ಜಾಗರೂಕರಾಗಿರಿ.
ವೃಶ್ಚಿಕ: ಪಂಚಮದಲ್ಲಿರುವ ಗುರುವು ಮನೆಯಲ್ಲಿ ಮಂಗಲಕಾರ್ಯಗಳನ್ನು, ಸಂತಾನಲಾಭನ್ನು, ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಪ್ರಯಾಣವನ್ನೂ ಮಾಡಿಸುವನು. ಚತುರ್ಥದಲ್ಲಿರುವ ಶುಕ್ರನಿಂದ ವಾಹನಲಾಭವನ್ನು ನಿರೀಕ್ಷಿಸಬಹುದು. ಚತುರ್ಥದಲ್ಲಿರುವ ಸೂರ್ಯ ಹಾಗೂ ಬುಧರು ಭಾಷಣಕಾರರಿಗೆ ಅವಕಾಶಗಳನ್ನು ಕೊಡಿಸುವರು. ಷಷ್ಠದಲ್ಲಿರುವ ರಾಹುವು ರಿಪುಮರ್ದಕನಾಗಿದ್ದಾನೆ. ಪ್ರೇಮವಿವಾಹವಾಗುವವರಿಗೆ ಶುಭವಾಗುವುದು. ಕೆಟ್ಟ ಕೆಲಸಗಳಿಂದ ನಿಮಗೆ ಧನವು ನಷ್ಟವಾಗಲಿದೆ.
ಧನಸ್ಸು: ಪಂಚಮದಲ್ಲಿರುವ ರಾಹುವು ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶಗಳನ್ನು ಕೊಡಿಸದೇ ಇರುವನು. ಮಕ್ಕಳಿಂದ ಅಶುಭವಾರ್ತೆಗಳು ಬರಬಹುದು. ವಿದ್ಯಾಭಾಸದಲ್ಲಿ ಹಿನ್ನಡೆ ಸಾಧ್ಯತೆ ಇದೆ. ತೃತೀಯದಲ್ಲಿರುವ ಶನಿ ಮತ್ತು ಶುಕ್ರರು ನಿಮ್ಮ ಆತ್ಮಬಲವನ್ನು ಹೆಚ್ಚಿಸುವರು. ನಿಮ್ಮ ಯೋಜನೆಗೆ ಅನುಸಾರವಾಗಿ ಕೆಲಸಗಳು ನಡೆಯುವುವು. ಷಷ್ಠದ ರಾಹುವು ಶತ್ರುಗಳನ್ನು ಸದೆಬಡಿಯುವನು ಮತ್ತು ಋಣಬಾಧೆಯಿಂದ ನಿಮ್ಮನ್ನು ಹೊರ ನೂಕುವನು. ಯಂತೋಪಕರಣಗಳನ್ನು ಮಾರಾಟ ಮಾಡುವವರು ಅಧಿಕಲಾಭವನ್ನು ಗಳಿಸುವರು.
ಮಕರ: ದ್ವಿತೀಯದರಲ್ಲಿರುವ ಶನಿ ಹಾಗೂ ಶುಕ್ರರು ಪಿತ್ರಾರ್ಜಿತವಾದ ಸಂಪತ್ತಗಳನ್ನು ಪಡೆಯಲು ವಿಳಂಬ ಮಾಡುವರು. ತೃತೀಯದ ಗುರುವು ಸಹೋದರರ ಸಂಬಂಧವನ್ನು ಗಟ್ಟಿಗೊಳಿಸುವನು ಹಾಗೂ ಸಹಾಯವನ್ನು ಮಾಡಿಸುವನು. ಪ್ರಥಮಸ್ಥಾನದಲ್ಲಿರುವ ಸೂರ್ಯನು ಜ್ವರಾದಿ ರೋಗಗಳನ್ನು, ಉದ್ವೇಗವನ್ನು ನೀಡುವನು. ಅಲ್ಲಿಯೇ ಇರುವ ಬುಧನು ಶೀಘ್ರವಾಗಿ ಆರೋಗ್ಯವನ್ನು ಕರುಣಿಸುವನು. ಪಂಚಮದ ಕುಜನು ಮಕ್ಕಳಿಂದ ಅಶುಭವನ್ನೂ ಪ್ರತಿಭೆಯ ಅನಾವರಣಕ್ಕೆ ವಿಘ್ನವನ್ನೂ ನೀಡುವನು.
ಕುಂಭ: ದ್ವಿತೀಯದಲ್ಲಿರುವ ಗುರುವು ಪಿತ್ರಾರ್ಜಿತ ಆಸ್ತಿಯನ್ನು ಕೊಡಿಸುವನು. ತೃತೀಯದ ರಾಹುವು ಸಾಮರ್ಥ್ಯಕ್ಕೆ ಬಲವನ್ನು ತುಂಬಲಿದ್ದಾನೆ. ಪ್ರಥಮಸ್ಥಾನದಲ್ಲಿರುವ ಶನಿ ಹಾಗು ಶುಕ್ರರು ಆಲಸ್ಯವನ್ನೂ ಶಾಂತಿಯನ್ನೂ ನೆಮ್ಮದಿಯನ್ನೂ ನೀಡುವರು. ಕುಟುಂಬದಲ್ಲಿ ಕಲಹಗಳು ಆಗಬಹುದು. ನವಮದ ಕೇತುವು ನಿಮ್ಮನ್ನು ಕೆಟ್ಟ ಕರ್ಮಗಳಿಗೆ ಪ್ರೇರಣೆಯನ್ನು ನೀಡಬಹುದು. ದ್ವಾದಶದ ರವಿಯು ತಂದೆಯ ಕಾರಣಕ್ಕೆ ಸಂಪತ್ತನ್ನು ನಷ್ಷಗೊಳಿಸುವನು.
ಮೀನ: ಸಾಡೆ ಸಾಥ್ ಶನಿಯ ಕಾರಣದಿಂದ ಕಾರ್ಯಗಳು ನಿಧಾನವಾಗುವುದು. ಜೊತೆಗೆ ಶುಕ್ರನೂ ಇರುವ ಕಾರಣ ಆರ್ಥಿಕಸ್ಥಿತಿಯು ಹಿನ್ನಡೆ ಕಾಣುವುದು. ವೃತ್ತಿಯಲ್ಲಿ ಗೊಂದಲಗಳು, ಬದಲಾವಣೆಗಳು, ತ್ಯಾಗಗಳು ಆಗಬಹುದು. ದ್ವಿತೀಯದಲ್ಲಿರುವ ರಾಹುವಿನಿಂದ ಕುಟುಂಬದಲ್ಲಿ ನೆಮ್ಮದಿ ಹಾಳಾಗಬಹುದು. ಆಪತ್ತಿನ ಕಾಲದಲ್ಲಿ ಏಕಾದಶದ ಸೂರ್ಯನು ತಂದೆಯಿಂದಲೂ ಮತ್ತು ಬುಧನು ಬಂಧುಗಳಿಂದಲೂ ಸಹಾಯವನ್ನು ಕೊಡಿಸುವನು. ಶಿವಸ್ತೋತ್ರ, ಹನುಮಾನ್ ಚಾಲೀಸ್ ಪಠಣವು ಸಂಕಟವನ್ನು ತಡೆದುಕೊಳ್ಳುವ ಬಲವನ್ನು ನೀಡುವನು.
-ಲೋಹಿತಶರ್ಮಾ, ಇಡುವಾಣಿ