ಇವರು ಯಾರು ಬಲ್ಲಿರಾ? ಇವರ ಸಾಧನೆ ಏನು ಗೊತ್ತಾ?
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತನ್ನ ಧೈರ್ಯ ಹಾಗೂ ಪ್ರಬಲ ಚಿಂತನೆಗಳಿಂದ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾದಂತಹ ಕಂಪನಿಯನ್ನು ಕಟ್ಟಿದ ಸಾಹಸಿ ಮಹಿಳೆಯ ಬದುಕಿನ ರೋಚಕ ಕಥೆ ಇದು. ಆಕೆ ನಮ್ಮ ಕನ್ನಡತಿ ಎಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮೆಲುಕು ಹಾಕುವುದು ಸೂಕ್ತವಾದೀತು. ವೈದ್ಯರಾಗಬೇಕೆಂಬ ಮಹಾದಾಸೆ ನೆರವೇರಲಿಲ್ಲ, ಮುಂದೆ ಆಗಿದ್ದೇನು? ಸಾಮಾನ್ಯ ಭಾರತೀಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಹುಡುಗಿ ವೈದ್ಯನಾಗಬೇಕೆಂಬ ಮಹಾದಾಸೆ ಹೊಂದಿದ್ದಳು. ಹೀಗಾಗಿ ಆರಂಭಿಕ ಶಿಕ್ಷಣವನ್ನು ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ನಲ್ಲಿ ನಡೆಸಿದರು. ಆದರೆ ದುರಾದೃಷ್ಟ ವೈದ್ಯಕೀಯ […]
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತನ್ನ ಧೈರ್ಯ ಹಾಗೂ ಪ್ರಬಲ ಚಿಂತನೆಗಳಿಂದ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾದಂತಹ ಕಂಪನಿಯನ್ನು ಕಟ್ಟಿದ ಸಾಹಸಿ ಮಹಿಳೆಯ ಬದುಕಿನ ರೋಚಕ ಕಥೆ ಇದು. ಆಕೆ ನಮ್ಮ ಕನ್ನಡತಿ ಎಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮೆಲುಕು ಹಾಕುವುದು ಸೂಕ್ತವಾದೀತು.
ವೈದ್ಯರಾಗಬೇಕೆಂಬ ಮಹಾದಾಸೆ ನೆರವೇರಲಿಲ್ಲ, ಮುಂದೆ ಆಗಿದ್ದೇನು? ಸಾಮಾನ್ಯ ಭಾರತೀಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಹುಡುಗಿ ವೈದ್ಯನಾಗಬೇಕೆಂಬ ಮಹಾದಾಸೆ ಹೊಂದಿದ್ದಳು. ಹೀಗಾಗಿ ಆರಂಭಿಕ ಶಿಕ್ಷಣವನ್ನು ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ನಲ್ಲಿ ನಡೆಸಿದರು. ಆದರೆ ದುರಾದೃಷ್ಟ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡಲು ಆಕೆಗೆ ಸಾಧ್ಯವಾಗಲಿಲ್ಲ. ಇದರಿಂದ ವಿಚಲಿತಗೊಳ್ಳದ ಧೀರ ಯುವತಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆಯಲು ನಿರ್ಧರಿಸಿದರು.
ಆದರೂ ವೈದ್ಯಳಾಗಬೇಕೆಂಬ ಛಲ ಬಿಡದ ಯುವತಿ, ಮತ್ತೆ ವಿದೇಶದಲ್ಲಿ ವೈದ್ಯಕೀಯ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸಿದರು. ಆದರೆ ಅವರಿಗೆ ವಿದ್ಯಾರ್ಥಿ ವೇತನ ಸಿಗದಿದ್ದಾಗ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ಫರ್ಮೆಂಟೇಶನ್ ಸೈನ್ಸ್ (Fermentation Science) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ನಿರ್ಧರಿಸಿದರು. ಆ ಕೋರ್ಸ್ ಆ ಮಹಿಳೆಯ ಜೀವನದ ಮಹತ್ವದ ಘಟ್ಟವಾಗಿ, ತಿರುವು ಪಡೆಯಿತು!
ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ, ಯಾವ ವಿಷಯದಲ್ಲಿ? ಏಕೆಂದರೆ ಫರ್ಮೆಂಟೇಶನ್ ಸೈನ್ಸ್ ವಿಷಯವು ಸೂಕ್ಷ್ಮಜೀವಿ ವಿಜ್ಞಾನದ ಬಗ್ಗೆ ಯುವತಿ ಹೊಂದಿದ್ದ ಮನೋಭಾವವನ್ನು ಬದಲಿಸಿದ್ದಲ್ಲದೆ, ಬ್ರೂಯಿಂಗ್ ಮತ್ತು ಫರ್ಮೆಂಟೇಶನ್ ಕ್ಷೇತ್ರದಲ್ಲಿ ತುಂಬಾ ಉತ್ಸಾಹವನ್ನು ಬೆಳೆಸಿಕೊಳ್ಳಲು ಸಹಕಾರಿಯಾಯಿತು. ಇದರಿಂದಾಗಿ ಅವರು ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕವನ್ನು ಸಂಪಾದಿಸಿದರು.
ಪುರುಷ ಪ್ರಾಬಲ್ಯ ಕಂಪನಿಗಳ ತಿರಸ್ಕಾರ ಮೆಟ್ಟಿ ನಿಂತಿದ್ದು ಹೇಗೆ? ವಿದ್ಯಾಭ್ಯಾಸದ ನಂತರ ಭಾರತಕ್ಕೆ ಮರಳಿದ ಯುವತಿ ಕೂಡಲೇ ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು. ಆದರೆ ಆ ಯುವತಿಗೆ ಕಂಪನಿಗಳಿಂದ ಬಂದ ಪ್ರತಿಕ್ರಿಯೆಗಳು ಅವಳ ಕನಸುಗಳನ್ನೆಲ್ಲಾ ಚೂರುಚೂರು ಮಾಡಿದವು. ಪ್ರತಿ ಕಂಪನಿಯೂ ಯುವತಿಯ ಅರ್ಹತೆ ಮತ್ತು ಕೌಶಲ್ಯಗಳನ್ನು ಒಪ್ಪಿಕೊಂಡರೂ ಸಹ ಆಕೆಗೆ ಉದ್ಯೋಗ ನೀಡಲು ಹಿಂದೇಟು ಹಾಕಿದವು.
ಏಕೆಂದರೆ ಆಗ ಭಾರತದಲ್ಲಿ ಫರ್ಮೆಂಟೇಶನ್ ಕ್ಷೇತ್ರದ ಉದ್ಯೋಗಗಳು ಹೆಚ್ಚಾಗಿ ಪುರುಷ-ಪ್ರಾಬಲ್ಯದ ಕೈಗಾರಿಕೆಗಳಾಗಿದ್ದ ಹಾರ್ಡ್ ಡ್ರಿಂಕ್ ಕಂಪನಿಗಳಿಗೆ ಸೀಮಿತವಾಗಿತ್ತು. ಹೀಗಾಗಿ ಆ ಯುವತಿಯ ಅರ್ಹತೆ ಮತ್ತು ಕೌಶಲ್ಯಕ್ಕೆ ಸೂಕ್ತವಾಗುವ ಅಂದಿನ ಸ್ಥಾನಮಾನವೆಂದರೆ ಅದು ಮಾಸ್ಟರ್ ಬ್ರೂಯರ್ ಆಗಿತ್ತು. ಆದ್ರೆ, ಈ ಸ್ಥಾನಮಾನ ಸಾಮಾನ್ಯವಾಗಿ ಮದ್ಯ ತಯಾರಿಕೆ ಕಂಪನಿಗಳಲ್ಲಿತ್ತು. ಎಗೈನ್ ಅದು ಪುರುಷ ಪ್ರಧಾನದ್ದೇ ಆಗಿತ್ತು.
ಕಂಪೆನಿಗಳು ಮಹಿಳೆಯರಿಗೆ ಅಂತಹ ‘ಅನಪೇಕ್ಷಿತ ಉದ್ಯೋಗ’ಗಳನ್ನು ನೀಡುವುದರಿಂದ ಅವಳ ಅಡಿಯಲ್ಲಿ ಕೆಲಸ ಮಾಡುವ ಪುರುಷರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುವುದಲ್ಲದೆ ಅಲ್ಲಿ ಕೆಲಸ ಮಾಡುವ ಪುರುಷರ ಆಸಕ್ತಿಗೆ ಪೆಟ್ಟುಬೀಳುತ್ತದೆ ಎಂಬ ಕಾರಣಗಳಿಂದಾಗಿ ಕಂಪನಿಗಳು ಆಕೆಗೆ ಉದ್ಯೋಗ ನೀಡಲು ಹಿಂದೇಟು ಹಾಕಿದವು. ಇದರಿಂದ ಆಕೆ ಸಾಕಷ್ಟು ನಿರಾಸೆಗೊಂಡರು.
ತಾನೇ ಕಂಪನಿ ಕಟ್ಟಲು ನಿರ್ಧರಿಸಿದರು.. ಸಾಕಷ್ಟು ಆತ್ಮಾವಲೋಕನ ಮಾಡಿಕೊಂಡ ಧೀರ ಯುವತಿ ಕಡೆಗೊಂದು ದಿನ ತನಗೆ ತಾನೇ ಪ್ರಶ್ನೆ ಹಾಕಿಕೊಂಡಳು.. ಬ್ರೂಯಿಂಗ್ ಕಂಪನಿಗಳು ನನ್ನನ್ನು ನೇಮಿಸಿಕೊಳ್ಳಲು ಬಯಸದಿದ್ದರೆ ಏನಂತೆ? ಖುದ್ದಾಗಿ ನಾನೇ ಬ್ರೂಯಿಂಗ್ ಉದ್ಯಮದ ವಿರುದ್ಧ ಯಾಕೆ ಸ್ಪರ್ಧೆಗಿಳಿಯಬಾರದು ಎಂದುಕೊಂಡು ಒಂದು ನಿರ್ಧಾರಕ್ಕೆ ಬಂದಳು.
ಸೂಕ್ಷ್ಮಜೀವಿ ವಿಜ್ಞಾನದಲ್ಲಿ ಸಾಕಷ್ಟು ನಿಪುಣತೆ ಹೊಂದಿದ್ದ ಯುವತಿ ತಾನು ಸಾಧಿಸಬೇಕೆಂದುಕೊಂಡಿರುವ ಹಾದಿಯಲ್ಲಿ ಸೂಕ್ಷ್ಮಜೀವಿ ವಿಜ್ಞಾನವನ್ನು ಬಳಸಿಕೊಂಡು ಕೆಲವು ಔಷಧಿಗಳನ್ನು ಅಭಿವೃದ್ಧಿಪಡಿಸಲು ಮುಂದಾದಳು. ಈ ಹಿನ್ನೆಲೆಯಲ್ಲಿ ದಿಟ್ಟ ಸಂಕಲ್ಪ ಮಾಡಿದ ಮಹಿಳೆ 1970 ರ ದಶಕದಲ್ಲಿ ತನ್ನ ಬಾಡಿಗೆ ಮನೆಯ ಗ್ಯಾರೇಜ್‌ನಲ್ಲಿ ಹೆಲ್ತ್ಕೇರ್ ಕೇಂದ್ರಿತ ಬ್ರೂಯಿಂಗ್ ಅಂಡ್ ಮೈಕ್ರೋಬಿಯಲ್ ಕಂಪನಿಯನ್ನು ಪ್ರಾರಂಭಿಸಿಯೇ ಬಿಟ್ಟಳು!
ಆ ದಿಟ್ಟ ಮಹಿಳೆ ಯಾರು? ಕಟ್ಟಿದ ಕಂಪನಿ ಯಾವುದು? ಅಂದು ಬಾಡಿಗೆ ಮನೆಯ ಗ್ಯಾರೇಜ್‌ನಲ್ಲಿ ಪ್ರಾರಂಭಗೊಂಡ ಕಂಪನಿ ಇಂದು ವಿಶ್ವದ ಅಗ್ರ 5 ಬಯೋಟೆಕ್ ಕಂಪನಿಗಳಲ್ಲಿ ಒಂದಾಗಿದೆ. ಅಂತಹ ದೊಡ್ಡ ಕಂಪನಿಯನ್ನು ಕಟ್ಟಿ ಬೆಳೆಸಿದ ಆ ಯುವತಿಯ ಹೆಸರೇನು ಗೊತ್ತಾ? ಅವರೇ ಕಿರಣ್ ಮಜುಮ್ದಾರ್ ಷಾ. ಅವರು ಕಟ್ಟಿ ಬೆಳೆಸಿದ ಕಂಪನಿಯೇ ಅಚ್ಚಳಿಯದ ಸಾಮ್ರಾಜ್ಯದ ಬಯೋಕಾನ್ ಕಂಪನಿ!
Published On - 2:44 pm, Thu, 12 November 20