108 ತುಂಗಾಭದ್ರಾ ಆರತಿ ಮಂಟಪಗಳಿಗೆ ನಾಳೆ ಮುಖ್ಯಮಂತ್ರಿಗಳಿಂದ ಕಾಮಗಾರಿಗೆ ಚಾಲನೆ
ಇಂದು ಬೆಂಗಳೂರಿನ ಶ್ವಾಸಯೋಗ ಕೇಂದ್ರದಲ್ಲಿ ಫೆಬ್ರವರಿ 20, 2022 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಿಂದ ನಡೆಯಲಿರುವ 108 ತುಂಗಾಭದ್ರಾ ಆರತಿ ಮಂಟಪಗಳ ಶಿಲಾನ್ಯಾಸ ಕಾರ್ಯಕ್ರಮದ ಮಾಹಿತಿ ಹಾಗೂ ಕಾನ್ಸೆಪ್ಟ್ ವಿಡಿಯೋವನ್ನು ಬಿಡುಗಡೆಗೊಳಿಸಲಾಯಿತು.

ಬೆಂಗಳೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾದ ಹರಕ್ಷೇತ್ರ ಹರಿಹರದ ಗತವೈಭವವನ್ನು ಮರಳಿ ಪಡೆಯುವ ಹಾಗೂ ದೇಶದಲ್ಲೇ ಹಿಂದುಗಳ ಪ್ರಮುಖ ಯಾತ್ರಾಸ್ಥಳವನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಗಳು ಹೇಳಿದರು. ಇಂದು ಬೆಂಗಳೂರಿನ ಶ್ವಾಸಯೋಗ ಕೇಂದ್ರದಲ್ಲಿ ಫೆಬ್ರವರಿ 20, 2022 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಿಂದ ನಡೆಯಲಿರುವ 108 ತುಂಗಾಭದ್ರಾ ಆರತಿ ಮಂಟಪಗಳ ಶಿಲಾನ್ಯಾಸ ಕಾರ್ಯಕ್ರಮದ ಮಾಹಿತಿ ಹಾಗೂ ಕಾನ್ಸೆಪ್ಟ್ ವಿಡಿಯೋವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಉತ್ತರಕ್ಕೆ ಗಂಗೆಯ ರೀತಿ ದಕ್ಷಿಣ ಭಾರತಕ್ಕೆ ತುಂಗಾ ನದಿ ಪವಿತ್ರ ಎನಿಸಿದೆ. ಗಂಗಾ ಸ್ನಾನ-ತುಂಗಾ ಪಾನ ಎನ್ನುವ ಉಕ್ತಿಯೂ ಇದೆ. ಗಂಗಾರತಿಯ ರೀತಿಯಲ್ಲಿಯೇ ತುಂಗಾರತಿಯನ್ನು ಏಕೆ ಆರಂಭಿಸಬಾರದು ಎನ್ನುವ ವಿಷಯ ನಮ್ಮ ಮನಸಿಗೆ ಬಂದಿತ್ತು. ಈ ಯೋಚನೆ ಬರುತ್ತಿದ್ದಂತೆ, ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಬಳಿಯಿರುವ ತುಂಗಾ ತಟದಲ್ಲಿ ತುಂಗಾರತಿಯನ್ನು ಆರಂಭಿಸಲು ಯೋಚಿಸಿದೆವು. ಜೊತೆಗೆ ಗಂಗೆಯಂತೆ ತುಂಗಾ ನದಿಯನ್ನೂ ಶುಚಿಗೊಳಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಬಂದಾಗ ಭಕ್ತಗಣದೊಂದಿಗೆ ಸೇರಿ ತುಂಗಾ ನದಿಯನ್ನು ಶುಚಿಗೊಳಿಸುವ, ನಮಾಮಿ ತುಂಗೆ ಯೋಜನೆಗೆ ಚಾಲನೆ ನೀಡಿದೆವು ಎಂದರು.
ಅಲ್ಲದೆ, ಪ್ರತಿ ನಿತ್ಯ ಸೂರ್ಯಾಸ್ತವಾದ ನಂತರ ಗಂಗೋತ್ರಿ, ರುದ್ರಪ್ರಯಾಗ ದೇವಪ್ರಯಾಗ, ಋಷಿಕೇಶ, ಹರಿದ್ವಾರ ಸೇರಿದಂತೆ ನೂರಾರು ಪವಿತ್ರ ಗಂಗಾ ತಟಗಳಲ್ಲಿ ಗಂಗಾರತಿ ನಡೆಯುವ ರೀತಿಯಲ್ಲಿಯೇ ನಮ್ಮ ತುಂಗಾ ನದಿ ತಟದಲ್ಲೂ ತುಂಗಾರತಿ ಪ್ರಾರಂಭಿಸಬೇಕು. ಹೇಗೆ ಮನಮೋಹಕ ಗಂಗಾರತಿ ಲಕ್ಷಾಂತರ ಭಕ್ತರ ಹೃನ್ಮನ ಸೆಳೆಯಿತೋ ಹಾಗೆ ತುಂಗಾರತಿ ಕೂಡ ನಾಡಿನ ಭಕ್ತರ ಹೃನ್ಮನ ಸೆಳೆಯಬೇಕು ಅನ್ನುವುದು ನಮ್ಮ ಇಚ್ಛೆಯಾಗಿತ್ತು. ಈ ಹಿನ್ನಲೆಯಲ್ಲಿ ನಾವು ಮಾಡಿದ ಮನವಿಗೆ ಸೂಕ್ತವಾಗಿ ಕರ್ನಾಟಕ ಸರಕಾರ ಸ್ಪಂದಿಸಿದೆ. ಅಲ್ಲದೇ, 30 ಕೋಟಿ ರೂಪಾಯಿಗಳ ಅನುದಾನವೂ ನೀಡಿದ್ದು, ಭಾನುವಾರ ಫೆಬ್ರವರಿ 20,2022 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಈ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಹರಿಹರದ ತುಂಗಾಭದ್ರಾ ನದಿಯ ತಟದಲ್ಲಿ “ತುಂಗಾಭದ್ರಾ ಆರತಿ” ಯೋಜನೆ: ಹರಿಹರದ ತುಂಗಭದ್ರಾ ನದಿ ತಟದಲ್ಲಿನ ರಾಘವೇಂದ್ರ ಶ್ರೀಗಳ ದೇವಸ್ಥಾನದಿಂದ ಹರಿಹರೇಶ್ವರ ದೇವಸ್ಥಾನದ ಮಧ್ಯದಲ್ಲಿ ತುಂಗಾ ಮಂಟಪಗಳನ್ನು ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಇದಕ್ಕೆ 30 ಕೋಟಿ ರೂ. ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. 108 ಮಂಟಪ ನಿರ್ಮಾಣ, ಗಂಗಾ ಆರತಿಯಂತೆ ಪ್ರತಿನಿತ್ಯ ತುಂಗಾಭದ್ರಾ ಆರತಿ, ಪೂಜೆ ನಡೆಸುವ ಯೋಜನೆ ಇದಾಗಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕ ಒಂದೂಗೂಡಿಸುವ ಮಹತ್ವದ ಯೋಜನೆ ಇದಾಗಿರಲಿದೆ. ಇದಕ್ಕೆ ಈಗಾಗಲೇ ಅನುದಾನ ಬಿಡುಗಡೆ ಆಗಿದ್ದು ಯೋಜನೆಯ ನೀಲೀ ನಕ್ಷೆಯನ್ನು ಅಂತಿಮಗೊಳಿಸಲಾಗಿದೆ. ಅಲ್ಲದೆ, ಫೆಬ್ರವರಿ 20 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.
ಹರಿಹರ ನಗರದಲ್ಲಿ ಪ್ರವಾಸೋದ್ಯಮ, ಉದ್ಯೋಗಾವಕಾಶ ಹಾಗೂ ಗತವೈಭವ ಮರಳಿಸುವ ಗುರಿ: ತುಂಗಾಭದ್ರಾ ಆರತಿಯ ಅನುಷ್ಠಾನದಿಂದ ಹರಿಹರ ನಗರ ಹಾಗೂ ತುಂಗಾಭದ್ರಾ ನದಿ ಹರಿಯುವ ಎಲ್ಲಾ ಕಡೆಯೂ ಪ್ರವಾಸೋದ್ಯಮ, ಉದ್ಯೋಗಾವಕಾಶ ಹಾಗೂ ಗತವೈಭವವನ್ನು ಮರಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಹೇಗೆ ವಾರಣಾಸಿ ಕಾರಿಡಾರ್ ನಲ್ಲಿ ಗಂಗಾ ನದಿ ಹರಿಯುವ ಎಲ್ಲ ಕಡೆಯೂ ಗಂಗಾ ಆರತಿ ನಡೆಯುವಂತೆ ತುಂಗಾಭದ್ರಾ ನದಿ ಹರಿಯುವ ಎಲ್ಲೆಡೆಯೂ ಆರತಿ ಕಾರ್ಯಕ್ರಮ ನಡೆಯಬೇಕು. ಈ ಮೂಲಕ ಜೀವ ನದಿಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಹಾಗೂ ಅದರ ಸುತ್ತಮುತ್ತಲಿನ ನಗರಗಳ ಸರ್ವತೋಮುಖ ಅಭಿವೃದ್ದಿಯಾಗುವುದು ನಮ್ಮ ಉದ್ದೇಶ ಮತ್ತು ಗುರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:
BBMP: ಕಸ ಗುತ್ತಿಗೆದಾರರ ಪ್ರತಿಭಟನೆ ವಾಪಸ್: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಂಧಾನ
Published On - 3:33 pm, Sat, 19 February 22