ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳ ತನಿಖೆಗೆ ಕರ್ನಾಟಕದಾದ್ಯಂತ 33 ಪೊಲೀಸ್ ಠಾಣೆ: ಏ. 14 ರಂದೇ ಚಾಲನೆ
ಕರ್ನಾಟಕ ಸರ್ಕಾರವು ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ 33 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುತ್ತಿದೆ. ಏಪ್ರಿಲ್ 14 ರಿಂದ ಇವು ಕಾರ್ಯಾರಂಭ ಮಾಡಲಿವೆ. ಕಡಿಮೆ ಶಿಕ್ಷಾ ಪ್ರಮಾಣವನ್ನು ಗಮನಿಸಿ, ತ್ವರಿತ ತನಿಖೆ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗಾಗಿ ಈ ಠಾಣೆಗಳು ಸಹಾಯ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ. ಇದು ದಲಿತರ ಹಕ್ಕುಗಳ ರಕ್ಷಣೆಗೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸರ್ಕಾರ ಹೇಳಿದೆ.

ಬೆಂಗಳೂರು, ಏಪ್ರಿಲ್ 11: ಎಸ್‌ಸಿ, ಎಸ್‌ಟಿಗಳ (SC/ST cases) ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆಂದೇ ಕರ್ನಾಟಕ ಸರ್ಕಾರ (Karnataka govt) ಪ್ರತ್ಯೇಕವಾಗಿ ಸ್ಥಾಪಿಸುತ್ತಿರುವ 33 ಪೊಲೀಸ್ ಠಾಣೆಗಳು ಏಪ್ರಿಲ್ 14 ರಿಂದ ಕಾರ್ಯಾರಂಭ ಮಾಡಲಿವೆ. ಇದರೊಂದಿಗೆ, ಅಂಬೇಡ್ಕರ್ ಜಯಂತಿಯಂದೇ ಎಸ್‌ಸಿ, ಎಸ್‌ಟಿ ಪ್ರಕರಣಗಳ ಪೊಲೀಸ್ ಠಾಣೆಗಳು ಅಸ್ತಿತ್ವಕ್ಕೆ ಬಂದಂತಾಗಲಿದೆ. ಈ ಪೊಲೀಸ್ ಠಾಣೆಗಳಿಂದಾಗಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (DCRE) ಅಧಿಕಾರ ಇನ್ನಷ್ಟು ಹೆಚ್ಚಾಗಲಿದ್ದು, ಎಸ್‌ಸಿ, ಎಸ್‌ಟಿಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ತನಿಖೆಗೆ ಅನುವು ಮಾಡಿಕೊಡಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳಲ್ಲಿನ ಶಿಕ್ಷೆ ಪ್ರಮಾಣ ಅತಿ ಕಡಿಮೆ ಇದೆ.
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು 2023-24ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಇದಾದ ಎರಡು ವರ್ಷಗಳ ನಂತರ ಇದೀಗ ಕೊನೆಗೂ ಎಸ್‌ಸಿ, ಎಸ್‌ಟಿ ಠಾಣೆಗಳು ಅಸ್ತಿತ್ವಕ್ಕೆ ಬರುತ್ತಿವೆ.
ಏಪ್ರಿಲ್ 14 ರಂದು ಹೊಸ ಠಾಣೆಗಳು ಕಾರ್ಯಾರಂಭ ಮಾಡಲಿವೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ದೃಢಪಡಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ದಲಿತರ ಹಕ್ಕುಗಳ ರಕ್ಷಣೆಗಾಗಿ ಇದು ಸಚಿವ ಸಂಪುಟದ ಐತಿಹಾಸಿಕ ನಿರ್ಧಾರವಾಗಿದೆ ಎಂದೂ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಎರಡು ಠಾಣೆಗಳಿದ್ದರೆ, ಉಳಿದ ಎಲ್ಲಾ ಜಿಲ್ಲೆಗಳು ತಲಾ ಒಂದು ಠಾಣೆಯನ್ನು ಹೊಂದಲಿವೆ.
ಪೊಲೀಸರ ವಿರುದ್ಧ ಕೋಪಗೊಂಡಿದ್ದ ಸಿದ್ದರಾಮಯ್ಯ
ಐದು ವರ್ಷಗಳಲ್ಲಿ (2020-24) ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳಲ್ಲಿ ಶೇ 28 ರಷ್ಟು (10,961 ಪ್ರಕರಣಗಳಲ್ಲಿ 3,118) ಪ್ರತಿದೂರುಗಳನ್ನು ದಾಖಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ವಿಚಾರವಾಗಿ ಜನವರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರೇ ದುರ್ಬಲಗೊಳಿಸುತ್ತಿದ್ದಾರೆ ಎಂದು ಅವರು ದೂರಿದ್ದರು.
ಇದನ್ನೂ ಓದಿ: ಕರಾಳ ಗುರುವಾರ: ಕರ್ನಾಟಕದಾದ್ಯಂತ ಸರಣಿ ಅಪಘಾತಗಳಲ್ಲಿ 17 ಜನ ಸಾವು
ಎಸ್‌ಸಿ, ಎಸ್‌ಟಿ ದೌರ್ಜನ್ಯ: ಶಿಕ್ಷೆಯ ಪ್ರಮಾಣ ಕಡಿಮೆ
ಸರ್ಕಾರಿ ಅಂಕಿಅಂಶಗಳ ಪ್ರಕಾರ, 2012 ಮತ್ತು 2024 ರ ನಡುವೆ, ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಶೇ 2.47 ರಷ್ಟಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 am, Fri, 11 April 25