ಬಾಗಲಕೋಟೆಯಲ್ಲಿ ಮಳೆ ಅವಾಂತರ: ಮೂವರು ಸಾವು
ಬಾಗಲಕೋಟೆ ಜಿಲ್ಲೆಯಲ್ಲಿ ಇಂದು ಸುರಿದ ಮಳೆ ಕೆಲ ಅವಾಂತರಕ್ಕೆ ಕಾರಣವಾಗಿದೆ. ಸಿಡಿಲು ಬಡಿದು ಅಜ್ಜಿ ಮತ್ತು ಮೊಮ್ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ. ಇನ್ನೊಂದೆಡೆ, ವಿದ್ಯುತ್ ತಂತಿ ಬಿದ್ದು ಬೈಕ್ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಸ್ಥಳಕ್ಕೆ ಆಯಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬಾಗಲಕೋಟೆ, ಸೆಪ್ಟೆಂಬರ್ 24: ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಕೆಲ ಅವಾಂತರಗಳು ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ವಿದ್ಯುತ್ ತಂತಿ ಬಿದ್ದು ಬೈಕ್ ಹಿಂಬದಿ ಸವಾರ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಐಹೊಳೆಯಲ್ಲಿ ಸಿಡಿಲು ಬಡಿದು ಅಜ್ಜಿ-ಮೊಮ್ಮಗ ಸಾವು: ಮೂವರ ಸ್ಥಿತಿ ಗಂಭೀರ
ಬಾದಾಮಿ ತಾಲೂಕಿನ ಐಹೊಳೆ ಗ್ರಾಮ ಒಂದರ ಹೊಲದಲ್ಲಿ ಬೆಳೆಯ ರಾಶಿ ಮಾಡಲು ತೆರಳಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ರಾಮವ್ವ (60) ಹಾಗೂ ಅವರ ಮೊಮ್ಮಗ ಬರಮಪ್ಪ ಖಂಡೇಕರ್ (23) ಮೃತರು.
ಇದನ್ನೂ ಓದಿ: ಬರದ ಮಧ್ಯೆ ಮಳೆಯ ಸಿಂಚನ: 3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಬಂದ ಹಿನ್ನೆಲೆ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದ ಸಂದರ್ಭದಲ್ಲಿ ಏಕಾಏಕಿ ಸಿಡಿಲು ಬಡಿದಿದೆ. ಪರಿಣಾಮ ಅಜ್ಜಿ ಮತ್ತು ಮೊಮ್ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಜೊತೆಯಲ್ಲಿದ್ದ ಮತ್ತಿಬ್ಬರು ಸೇರಿ ಒಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಬೈಕ್ ಸವಾರನ ಮೇಲೆ ಬಿದ್ದ ವಿದ್ಯುತ್ ತಂತಿ: ಓರ್ವ ಸಾವು
ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಮೈಮೇಲೆ ಬಿದ್ದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಜಿಮಲಂಗ್ ಶೇಖ್ (50)ಮೃತ ವ್ಯಕ್ತಿ.
ಇದನ್ನೂ ಓದಿ: ಮಳೆಗೆ ಗಿರಿನಗರದಲ್ಲಿ ಕಾಂಪೌಂಡ್ ಗೋಡೆ ಕುಸಿತ: ಅದೃಷ್ಟವಶಾತ್ ತಪ್ಪಿದ ದೊಡ್ಡ ದುರಂತ
ರಸ್ತೆಯಲ್ಲಿ ಬೈಕ್ ಚಲಿಸುತ್ತಿದ್ದ ವೇಳೆ ಗಾಳಿಗೆ ಬಿದ್ದ ಮರದಿಂದ ವಿದ್ಯುತ್ ತಂತಿ ತುಂಡಾಗಿ ಹಿಂಬದಿ ಸವಾರನ ಮೈಮೇಲೆ ಬಿದ್ದಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಹಾಜಿಮಲಂಗ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮುಂಬದಿ ಬೈಕ್ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




