AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಅನುಮತಿ ನಿರಾಕರಣೆ

ಬಿಜೆಪಿಯ 'ಬಳ್ಳಾರಿ ಚಲೋ' ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಶಾಲಾ ಶಿಕ್ಷಣ ಇಲಾಖೆಯು ಅನುಮತಿ ನಿರಾಕರಿಸಿದೆ. ಸೆಪ್ಟೆಂಬರ್ 10ರಂದು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಸಲು ಬಿಜೆಪಿ ಮನವಿ ಮಾಡಿತ್ತು. ನಿಯಮಾವಳಿಗಳ ಪ್ರಕಾರ ಶಾಲಾ ಮೈದಾನಗಳನ್ನು ರಾಜಕೀಯ ಸಮಾರಂಭಗಳಿಗೆ ಬಳಸುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳನ್ನು ಖಂಡಿಸಿ ಈ ಪಾದಯಾತ್ರೆ ನಡೆಯುತ್ತಿದೆ.

ಬಳ್ಳಾರಿ: ಬಿಜೆಪಿಯ 'ಬಳ್ಳಾರಿ ಚಲೋ' ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಅನುಮತಿ ನಿರಾಕರಣೆ
ಬಳ್ಳಾರಿ ಚಲೋ, ಬಿಜೆಪಿ ಪಾದಯಾತ್ರೆ
ಕಿರಣ್​ ಹನಿಯಡ್ಕ
| Edited By: |

Updated on:Sep 08, 2026 | 11:16 AM

Share

ಬಳ್ಳಾರಿ, ಸೆ.8: ಮಾಜಿ ಸಚಿವ ಬಿ, ನಾಗೇಂದ್ರ ರಾಜೀನಾಮೆಗಾಗಿ ಆರಂಭವಾದ ಬಿಜೆಪಿ ಪಾದಯಾತ್ರೆ ಇದೀಗ ಬಳ್ಳಾರಿ ಚಲೋ ಪಾದಯಾತ್ರೆವರೆಗೆ ತಲುಪಿದೆ.  ಬಳ್ಳಾರಿಯಲ್ಲಿ  ಗುರುವಾರದಂದು ಅಂದರೆ ಸೆ.10ಕ್ಕೆ ನಡೆಯಲಿರುವ ಈ ಪಾದಯಾತ್ರೆಯ ಸಮಾರೋಪಕ್ಕೆ ಶಾಲಾ ಶಿಕ್ಷಣ ಇಲಾಖೆಯು ಅನುಮತಿ ನಿರಾಕರಿಸಿದೆ. ಬಳ್ಳಾರಿಯ ಎಕ್ಸ್ ಮುನ್ಸಿಪಲ್ ಶಾಲೆ (ಸರ್ಕಾರಿ ಪದವಿ ಪೂರ್ವ ಕಾಲೇಜು) ಮೈದಾನದಲ್ಲಿ ಬಹಿರಂಗ ಸಭೆ ನಡೆಸಲು ಬಿಜೆಪಿ ಕಡೆಯಿಂದ ಅನುಮತಿ ಕೋರಲಾಗಿತ್ತು. ಆದರೆ, ಶಾಲಾ ಮೈದಾನವನ್ನು ಸಾರ್ವಜನಿಕ ಅಥವಾ ಖಾಸಗಿ ಸಮಾರಂಭಗಳಿಗೆ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಇಲಾಖೆಯು ಬಳ್ಳಾರಿ ಜಿಲ್ಲಾ ಬಿಜೆಪಿಗೆ ಲಿಖಿತವಾಗಿ ಅನುಮತಿ ನಿರಾಕರಿಸಿದೆ.

ಸೆಪ್ಟೆಂಬರ್ 10 ರಂದು ಗುರುವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಭೆ ನಡೆಸಲು ಬಿಜೆಪಿ ಅನುಮತಿ ಕೇಳಿತ್ತು. ಸರ್ಕಾರದ ನಿಯಮಾವಳಿಗಳ ಪ್ರಕಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ರಾಜಕೀಯ ಅಥವಾ ಇತರ ಸಾರ್ವಜನಿಕ ಸಮಾರಂಭಗಳಿಗೆ ಬಳಸಲು ಅವಕಾಶವಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನು ನೇರವಾಗಿ ಹೊಣೆಗಾರರನ್ನಾಗಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ದಿನಕ್ಕೊಂದು ವಿಚಾರಗಳಿಂದ ಗಮನ ಸೆಳೆಯುತ್ತಿರುವ ಬಳ್ಳಾರಿ ಚಲೋ: 8ನೇ ದಿನಕ್ಕೆ ಪ್ರವೇಶಿಸಿದ ಬಿಜೆಪಿಯ ಪಾದಯಾತ್ರೆ

ನಾಳೆಯವರೆಗೆ ಪಾದಯಾತ್ರೆ ಪೂರೈಸಿ, ನಾಡಿದ್ದು (ಸೆ.10) ಬಳ್ಳಾರಿ ನಗರದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸಲು ಬಿಜೆಪಿ ಸಿದ್ಧತೆ ನಡೆಸಿತ್ತು. ಈ ಹಿಂದೆ ಇದೇ ಮೈದಾನದಲ್ಲಿ ಕೆಲ ರಾಜಕೀಯ ಸಮಾವೇಶಗಳು ನಡೆದಿದ್ದರೂ, ಪ್ರಸ್ತುತ ನಿಯಮಗಳ ಹಿನ್ನೆಲೆಯಲ್ಲಿ ಅನುಮತಿ ದೊರೆತಿಲ್ಲ.

ಇಲ್ಲಿದೆ ನೋಡಿ ವಿಡಿಯೋ:

ಬಳ್ಳಾರಿ ಚಲೋ 8ನೇ ದಿನಕ್ಕೆ ರಂಗು:

ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳು ಹಾಗೂ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ 8ನೇ ದಿನಕ್ಕೆ ಕಾಲಿಟ್ಟಿದೆ. ರಾಯಚೂರಿನ ಲಿಂಗಸುಗೂರಿನಿಂದ ಸೆಪ್ಟೆಂಬರ್ 1ರಂದು ಆರಂಭವಾದ ಈ 170 ಕಿ.ಮೀ ಸುದೀರ್ಘ ಪಾದಯಾತ್ರೆ ಇದೀಗ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಅಂತಿಮ ಘಟ್ಟವನ್ನು ಪ್ರವೇಶಿಸಿದೆ. ರಸ್ತೆಯುದ್ದಕ್ಕೂ ಬೃಹತ್ ಹೂವಿನ ಹಾರ, ಪಟಾಕಿ ಸಿಡಿತ ಹಾಗೂ ಜೆನ್‌ಝೀ (Gen Z) ಯುವಕರೊಂದಿಗೆ ನಡೆಯುತ್ತಿರುವ ಸಂವಾದಗಳು ಪಾದಯಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 am, Tue, 8 September 26

Follow Us