AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯಲ್ಲೂ ಇದೆ ಸಿಡಿ ಫ್ಯಾಕ್ಟರಿ, ಸದ್ಯದಲ್ಲೇ ಹೊರ ಬರುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ

ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿದ್ದು, ಬಿಜೆಪಿಯಲ್ಲೂ ಕೆಲವು ಸ್ಟಿಂಗ್ ಆಪರೇಷನ್‌ಗಳು ನಡೆದಿವೆ. ಆ ಸಿಡಿಗಳು ಯಾವಾಗ ಹೊರಬರುತ್ತವೆ ಎಂಬುದನ್ನು ನೋಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಜಕಾರಣಿಗಳನ್ನು ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಬಿಜೆಪಿಯಲ್ಲೂ ಇದೆ ಸಿಡಿ ಫ್ಯಾಕ್ಟರಿ, ಸದ್ಯದಲ್ಲೇ ಹೊರ ಬರುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಗಣಪತಿ ಶರ್ಮಾ
|

Updated on: Oct 24, 2026 | 4:49 PM

Share

ಮುಖ್ಯಾಂಶಗಳು

  • ಬಿಜೆಪಿಯಲ್ಲೂ ಸಿಡಿ ಫ್ಯಾಕ್ಟರಿ ಇದೆ ಎಂದ ಯತ್ನಾಳ್
  • ಸ್ಟಿಂಗ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ
  • ಬಿಜೆಪಿಗೆ ಮರಳಲು ಅರ್ಜಿ ಹಾಕಿಲ್ಲ ಎಂದ ಶಾಸಕ

ನವದೆಹಲಿ, ಅಕ್ಟೋಬರ್ 24: ಕರ್ನಾಟಕ ರಾಜಕೀಯದಲ್ಲಿ ಸಿಡಿ ಮತ್ತು ಸ್ಟಿಂಗ್ ಆಪರೇಷನ್‌ ಸಂಬಂಧಿತ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ ಮತ್ತೊಂದು ಸ್ಫೋಟಕ ಆರೋಪ ಕೇಳಿಬಂದಿದೆ. ‘ಬಿಜೆಪಿಯಲ್ಲೂ ಸಿಡಿ ಫ್ಯಾಕ್ಟರಿ ಇದೆ. ಅಲ್ಲಿಯೂ ಕೆಲವು ಸ್ಟಿಂಗ್ ಆಪರೇಷನ್‌ಗಳು ನಡೆದಿವೆ. ಆ ಸಿಡಿಗಳು ಯಾವಾಗ ಹೊರಬರುತ್ತವೆ ಎಂಬುದನ್ನು ನೋಡಬೇಕು’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಯತ್ನಾಳ್, ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ ಎಂದು ತಾವು ಬಹಳ ಹಿಂದೆಯೇ ಹೇಳಿದ್ದಾಗಿ ತಿಳಿಸಿದರು. ಒಂದು ಸಿಡಿ ಫ್ಯಾಕ್ಟರಿ ಯಾವುದು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದ ಅವರು, ಮತ್ತೊಂದು ಫ್ಯಾಕ್ಟರಿ ಬಿಜೆಪಿಯಲ್ಲೂ ಇದೆ ಎಂದು ಆರೋಪಿಸಿದರು. ರಾಜಕೀಯ ಎದುರಾಳಿಗಳು ಹಾಗೂ ಭವಿಷ್ಯದಲ್ಲಿ ತಮಗೆ ಅಡ್ಡಿಯಾಗಬಹುದು ಎಂದು ಭಾವಿಸುವವರನ್ನು ಬ್ಲ್ಯಾಕ್‌ಮೇಲ್ ಮಾಡಲು ಇಂತಹ ವಿಡಿಯೋಗಳನ್ನು ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು.

ಕರ್ನಾಟಕದಲ್ಲಿ ಸಿಡಿ ಮತ್ತು ಸ್ಟಿಂಗ್ ಆಪರೇಷನ್‌ಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವುದು ಒಂದು ವ್ಯವಹಾರವಾಗಿ ಬೆಳೆದಿದೆ. ರಾಜಕೀಯಕ್ಕೆ ಯಾವುದೋ ನೆಪದಲ್ಲಿ ಪ್ರವೇಶಿಸಿ, ವಿಡಿಯೋಗಳನ್ನು ಮಾಡಿಕೊಂಡು ಹಣಕ್ಕಾಗಿ ಶಾಸಕರನ್ನೇ ಬ್ಲ್ಯಾಕ್‌ಮೇಲ್ ಮಾಡುವ ತಂಡಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ ಎಂದು ಯತ್ನಾಳ್ ಆರೋಪಿಸಿದರು.

ಸಿಡಿ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಮಾತನಾಡುತ್ತಿಲ್ಲ: ಯತ್ನಾಳ್

ಸ್ಟಿಂಗ್ ಆಪರೇಷನ್ ಪ್ರಕರಣದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಮಾತನಾಡುತ್ತಿಲ್ಲ yಯಾಕೆ ಎಂದು ಪ್ರಶ್ನಿಸಿದ ಯತ್ನಾಳ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ವಿಚಾರವಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನೂ ಈ ವಿಚಾರದಲ್ಲಿ ನೇರವಾಗಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಲವರು ನೇರವಾಗಿ ಆರೋಪಗಳನ್ನು ಮಾಡುತ್ತಿದ್ದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ದೇಶದಲ್ಲೇ ಇಂತಹ ರಾಜಕೀಯ ಬೆಳವಣಿಗೆ ಕೆಟ್ಟ ಬೆಳವಣಿಗೆಯಾಗಿದೆ ಎಂದು ಯತ್ನಾಳ್ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆಯೂ ಮಾತನಾಡಿದ ಯತ್ನಾಳ್, ರಾಜಕೀಯ ಎದುರಾಳಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವ ಪ್ರವೃತ್ತಿ ಬೆಳೆದಿದೆ. ಈ ಪ್ರಕರಣದಲ್ಲಿ ತಮ್ಮ ಪಕ್ಷದ ಬಿ.ವೈ. ವಿಜಯೇಂದ್ರ ಅಥವಾ ಆರ್. ಅಶೋಕ್ ಸೇರಿದಂತೆ ಹಲವರ ಪಾತ್ರವಿಲ್ಲ ಎಂದು ಹೇಳಿದ ಅವರು, ಬೇರೆ ಪಕ್ಷದವರು ಅಥವಾ ಎಚ್.ಡಿ. ಕುಮಾರಸ್ವಾಮಿ ಈ ಕೃತ್ಯ ಎಸಗಿದ್ದಾರೆ ಎಂದೂ ತಾವು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇಬ್ಬರು ಉದಯೋನ್ಮುಖ ರಾಜಕಾರಣಿಗಳಿಂದ ಕೃತ್ಯ: ಯತ್ನಾಳ್ ಆರೋಪ

ಕಳೆದ ಹತ್ತು ವರ್ಷಗಳಿಂದ ಇಬ್ಬರು ಉದಯೋನ್ಮುಖ ರಾಜಕಾರಣಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪವನ್ನೂ ಯತ್ನಾಳ್ ಮಾಡಿದ್ದಾರೆ. ರಾಜಕಾರಣಿಗಳ ವಿಡಿಯೋಗಳನ್ನು ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವ ಪ್ರವೃತ್ತಿ ಹಿಂದಿನಿಂದಲೂ ಇದೆ ಎಂದ ಅವರು, ರಮೇಶ್ ಜಾರಕಿಹೊಳಿ ಅವರ ಪ್ರಕರಣವನ್ನೂ ಪ್ರಸ್ತಾಪಿಸಿದರು. ಈ ಹಿಂದೆ ಇನ್ನಿಬ್ಬರು ಶಾಸಕರ ವಿಡಿಯೋಗಳೂ ಬಹಿರಂಗವಾಗಿದ್ದವು ಎಂದು ಹೇಳಿದರು.

ಹಣಕಾಸಿನ ವ್ಯವಹಾರ ಕುದುರಿದರೆ ಇಂತಹ ಪ್ರಕರಣಗಳು ಅಲ್ಲಿಗೇ ನಿಲ್ಲುತ್ತವೆ. ಇಂತಹ ಕೃತ್ಯಗಳಿಂದ ಕರ್ನಾಟಕದ ರಾಜಕೀಯ ನಾಯಕರ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಮತ್ತು ರಾಜ್ಯದ ಹೆಸರು ಹಾಳಾಗುತ್ತಿದೆ ಎಂದು ಯತ್ನಾಳ್ ಹೇಳಿದರು.

ಸ್ಟಿಂಗ್ ಆಪರೇಷನ್ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಯತ್ನಾಳ್ ಆಗ್ರಹಿಸಿದರು. ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ಇಂತಹ ಆರೋಪಗಳು ರಾಜ್ಯದ ಘನತೆಗೆ ಧಕ್ಕೆ ತರುತ್ತವೆ. ಇಂತಹವರ ಕೈಗೆ ರಾಜ್ಯದ ರಾಜಕೀಯ ಹೋಗುವುದರಿಂದ ಕರ್ನಾಟಕದ ಹೆಸರು ದೇಶ-ವಿದೇಶಗಳಲ್ಲಿ ಹಾಳಾಗುವ ಅಪಾಯವಿದೆ ಎಂದು ಯತ್ನಾಳ್ ಆತಂಕ ವ್ಯಕ್ತಪಡಿಸಿದರು.

ಬಿಜೆಪಿಗೆ ಮರಳುವ ವಿಚಾರವಾಗಿ ಯತ್ನಾಳ್ ಹೇಳಿದ್ದೇನು?

ಬಿಜೆಪಿಗೆ ಮರಳುವ ವಿಚಾರದ ಬಗ್ಗೆಯೂ ಯತ್ನಾಳ್ ಪ್ರತಿಕ್ರಿಯಿಸಿದರು. ತಾವು ಯಾವುದೇ ರಾಜಕಾರಣಿಯ ಸಂಪರ್ಕದಲ್ಲಿಲ್ಲ ಎಂದು ಹೇಳಿದರು. ಮುಂದಿನ ವಾರ ಮತ್ತೆ ಭೇಟಿಯಾಗೋಣ ಎಂದು ಕೆಲವರು ಹೇಳಿದ್ದಾರೆ. ಆದರೆ, ಬಿಜೆಪಿಗೆ ಮರಳುವ ವಿಚಾರವಾಗಿ ಯಾರನ್ನೂ ಸಂಪರ್ಕಿಸಿಲ್ಲ ಮತ್ತು ಪಕ್ಷಕ್ಕೆ ಸೇರ್ಪಡೆಯಾಗಲು ಯಾರ ಬಳಿಯೂ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು. ತಾವು ಆರಾಮವಾಗಿದ್ದು, ನಿಯತ್ತಿನಿಂದ ಹಾಗೂ ಸ್ವಾಭಿಮಾನದಿಂದ ಇದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More