ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ: ಯಮಕನಮರಡಿಯ ನಾನು ಹಿಂದೂ ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿಗೆ ಸೂಲಿಬೆಲೆ ಸವಾಲ್
ಹಿಂದೂ ಧರ್ಮದ ಕುರಿತು ಮಾತಾಡಿದರೇ ಸುಮ್ಮನಿರಲ್ಲ, ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸವಾಲ್ ಹಾಕಿದ್ದಾರೆ.
ಬೆಳಗಾವಿ: ಹಿಂದೂ ಎನ್ನುವುದನ್ನು ಅಶ್ಲೀಲ ಎಂದು ಕರೆದಾಗ ತಕ್ಕ ಉತ್ತರ ಕೊಡಲೇಬೇಕಾಗಿತ್ತು. ನನ್ನ ವಯಕ್ತಿಕವಾಗಿ ಟೀಕೆ ಮಾಡಿದ್ರೆ ಸುಮ್ಮನಿರುತ್ತೇನೆ. ಜಾತಿ ಹಿಡಿದು ಟೀಕೆ ಮಾಡಿದ್ರೂ ಸಹ ಸುಮ್ಮನಿರುತ್ತೇನೆ. ಆದರೆ ಹಿಂದೂ (Hindu) ಧರ್ಮದ ಕುರಿತು ಮಾತಾಡಿದರೇ ಸುಮ್ಮನಿರಲ್ಲ, ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಸವಾಲ್ ಹಾಕಿದ್ದಾರೆ.
ಹುಕ್ಕೇರಿ ತಾಲೂಕಿನ ಸತೀಶ್ ಜಾರಕಿಹೊಳಿ (Satish Jarkiholi) ಕ್ಷೇತ್ರ ಯಮಕನಮರಡಿಯ ವಿದ್ಯಾವರ್ಧಕ ಶಾಲಾ ಸಂಘದ ಆವರಣದಲ್ಲಿ ನಡೆದ ಇಂದು(ನ.16) “ನಾನು ಹಿಂದೂ” ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಸೂಲಿಬೆಲೆ, ನನ್ನ ಧರ್ಮ ಮತ್ತು ತಾಯಿಯ ಬಗ್ಗೆ ಮಾತಾಡಿದವರ ಕ್ಷೇತ್ರಕ್ಕೆ ಹೋಗಬೇಕು ಅನಿಸಿತು. ಅದಕ್ಕೆ ಯಮಕನಮರಡಿಗೆ ಬಂದಿದ್ದೇನೆ. ಡಿಕ್ಷನರಿ ನೋಡಿಕೊಂಡು ಮಾತಾಡುವ ಪುಣ್ಯಾತ್ಮರಿಗೆ ಯಾವ ಡಿಕ್ಷನರಿ ಅಂತ ಮರೆತು ಹೋಗಿದೆ. ಹಿಂದೂ ಸಮಾಜ ತಿರುಗಿಬಿದ್ದರೇ ಏನಾಗುತ್ತೆ ಅನ್ನೋದು ಇಂದು ಯಮಕನಮರಡಿಯಲ್ಲಿ ಪ್ರೂವ್ ಆಗಿದೆ ಎಂದು ವಾಗ್ದಾಳಿ ಮಾಡಿದರು.
ಹಿಂದೂ ಈಗ ಜಾಗೃತನಾಗಿದ್ದಾನೆ, ಮೊದಲಿನಂತೆ ಇಲ್ಲ. ಇವತ್ತು ಹಿಂದೂ ಸಮಾಜ ಹಲಾಲ್ ವಿಚಾರ ಬಂದಾಗ ಬೀದಿಗೆ ಬಂದು ನಿಲ್ಲುತ್ತೆ. ಹಿಂದೂ ಅಂದ್ರೆ ಅಶ್ಲೀಲನಾ? ಹಿಂದೂ ಅಂದ್ರೆ ಬದುಕಿನ ಶೈಲಿ ಅಂತಾ ಸುಪ್ರೀಂಕೋರ್ಟ್ ಹೇಳುತ್ತೆ. ಧರ್ಮ ಬೇರೆ, ರಿಲಿಜನ್ ಬೇರೆ. ನಾನು ಕ್ರಿಶ್ಚಿಯನ್ರು ಅನೇಕರ ಮತಾಂತರ ಮಾಡೋದನ್ನು ನೋಡಿದ್ದೇನೆ. ಹಿಂದೂ ಧರ್ಮ ಯಾರೂ ಯಾರನ್ನೂ ನಂಬಿ ಅಂತ ಹೇಳಲ್ಲ. ನೀವು ಹಿಂದೂನ ನಂಬ್ತಿರಾ ಅವರು ಹಿಂದೂ, ನಂಬುದಿಲ್ವಾ ಅವರು ಹಿಂದೂ. ನಾನು ಮತಾಂತರಗೊಂಡೆ ಎಂದು ಹೇಳುವುದು ರಿಲಿಜಿಯನ್ನಲ್ಲಿ ಮಾತ್ರ. ಧರ್ಮದಲ್ಲಿ ಅದನ್ನು ಮಾಡಲು ಸಾಧ್ಯವೇ ಇಲ್ಲ ಇದೇ ಬದುಕಿನ ಶೈಲಿ ಎಂದು ಹೇಳಿದ್ದಾರೆ.
ನಮ್ಮ ಜನರನ್ನು ಮತಾಂತರ ಮಾಡಲು ಬಂದ ಕ್ರಿಶ್ಚಿಯನ್‌ರೇ ಮತಾಂತರವಾದರು. ದೇವರಿದ್ದಾನೆ ಎನ್ನುವವ ದೇವರಿಲ್ಲ ಎನ್ನುವ ಇಬ್ಬರೂ ಸಹ ಹಿಂದೂಗಳೇ. ಕೆಲ ಧರ್ಮಗಳಲ್ಲಿ ಬೇರೆ ದೇವರ ಪೂಜೆ ಮಾಡಿದ್ರೆ ತಲೆ ಕಡಿಯುತ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಬೇರೆ ದೇವರ ಪೂಜೆ ಮಾಡಿದರೆ ಎಲ್ಲಾ ದೇವರು ಒಂದೇ ತಲೆಕಡಸಿಕೊಳ್ಳಬೇಡ ಅಂತಾರೆ. ಹಿಂದೂ ಧರ್ಮಕ್ಕೆ ಒಂದು ಗ್ರಂಥ ಅಂತ ಇಲ್ಲ. ಹಿಂದೂ ಧರ್ಮಕ್ಕೆ ಸಂಸ್ಥಾಪಕರಿಲ್ಲ ಇದೊಂದು ವಿಜ್ಞಾನ, ವಿಜ್ಞಾನಕ್ಕೆ ಯಾರೂ ಸಹ ಸಂಸ್ಥಾಪಕರಿರೊಲ್ಲ ಎಂದು ಹೇಳಿದರು.
ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು ಯಾರೂ ಸಹ ಹಿಂದೂ ಧರ್ಮದ ಬಗ್ಗೆ ಮಾತಾಡಲಿಲ್ಲ. ಅವರ ಫೋಟೊಗಳನ್ನು ಹಾಕಿ ನೀವು ಹಿಂದೂ ಬಗ್ಗೆ ಮತಾಡ್ತಿರಲ್ಲ. ಹಿಂದೂ ಧರ್ಮದ ಬಗ್ಗೆ ಮಾತಾಡಿದ ಸತೀಶ್ರನ್ನು ಉಚ್ಛಾಟನೆ ಮಾಡ್ತೀರಾ? ಎಂದು ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನಿಸಿದ್ದಾರೆ.
8 ರಿಂದ 10 ಸಾವಿರ ವರ್ಷಗಳಿಂದ ಅಲುಗಾಡದ ಧರ್ಮ ಹಿಂದೂ ಧರ್ಮ. ಯಮಕನಮರಡಿಯಲ್ಲಿ ಯಾರೋ ಒಬ್ಬ ಎನೋ ಮಾತಾಡುತ್ತಾರೆ ಅಂತ ಅದು ಅಲುಗಾಡಲ್ಲ. ಹಿಂದೂ ಪರ್ಷಿಯಾದಿಂದ ಬಂದಿದ್ದು ಅಂತ ಇವರು ಹೇಳುತ್ತಾರೆ. ಹಿಂದೂ ರಾಷ್ಟ್ರ ಅಂತಾ ಕರೀತಿವಲ್ಲ ಸಪ್ತ ಸಿಂಧೂ ರಾಷ್ಟ್ರ ಅನ್ನುವಂತದ್ದು. ಏಳು ನದಿಗಳನ್ನು ಪ್ರತಿನಿತ್ಯ ಸ್ಮರಿಸಿ ಸ್ನಾನ ಮಾಡುತ್ತೇವೆ. ಪ್ರಾಕೃತ ಭಾಷೆಯಲ್ಲಿ ಸಕಾರ ಹಕಾರ ಆಗುವುದರಿಂದ ಹಫ್ತ್ ಹಿಂದೂ ಅಂತಾ ಬಳಸಿದರು. ಹಿಂದೂ ಅಲ್ಲಿಂದ ಬಂದಿದಲ್ಲ ಸಪ್ತ ಹಿಂದೂ ಅಲ್ಲಿ ಹೋಗಿದ್ದು ಎಂದು ತಿಳಿಸಿದರು.
ಹಿಂದೂಗಳನ್ನು ಎದುರಿಸಲಾಗದ ಜನ ಹಿಂದೂಗಳನ್ನು ಡಾಕುಗಳು ಎಂದರು. ಜಗತ್ತಿನಲ್ಲಿ 8 ಕೋಟಿ ಹಿಂದೂಗಳನ್ನು ಹತ್ಯೆ ಮಾಡಲಾಯಿತು. ಸೈಪ್ ಅಲಿ ಖಾನ್ ತನ್ನ ಮಗನಿಗೆ ತೈಮೂರ ಅಂತ ಹೆಸರಿಟ್ಟಿದ್ದಾನೆ. ತೈಮೂರು ಎಂಬ ರಾಜ ಹಿಂದೂಗಳ ತಲೆ ಕತ್ತರಿಸಿ ಅದರಿಂದ ಬೆಟ್ಟ ಮಾಡಿದ್ದನು. ಅಂತವನ ಹೆಸರನ್ನ ಸೈಫ್ ಅಲಿ ಖಾನ್ ಅವನ ಮಗನಿಗಿಟ್ಟಿದ್ದಾನೆ ಇದಕ್ಕಿಂತ ದುರ್ದೈವ ಬೇಕಾ? ನಾನು ಚಿಕ್ಕವನಿದ್ದಾಗ ಮಲವಿಸರ್ಜನೆಗೆ ಹೋಗಬೇಕಾದರೇ ಲಂಡನ್ಗೆ ಹೋಗ್ತಿನಿ ಅಂತಿದ್ದೆ. ನಾನು ಕಾಲೇಜಿಗೆ ಹೋದಾಗ ಟಾಯ್ಲೆಟ್ ಮೇಲೆ ವೆಲ್ ಕಮ್ ಟೂ ಪಾಕಿಸ್ತಾನ ಅಂತ ಬರೆದಿದ್ದರು. ಇವರುಗಳು ಇದನ್ನೂ ಸಹ ಡಿಕ್ಷನರಿಯಲ್ಲಿ ಲಂಡನ್ಗೆ ಮಲವಿಸರ್ಜನೆ ಅಂತ ಅರ್ಥ ಇದೆ. ಅದೇ ಡಿಕ್ಷನರಿಯಲ್ಲಿ ಟಾಯ್ಲೆಟ್ಗೆ ಪಾಕಿಸ್ತಾನ ಅಂತ ಅರ್ಥ ಇದೆ ಅಂತ ಚರ್ಚೆಗೆ ಬಂದ್ರೆ ಎನ್ ಮಾಡೋಕಾಗುತ್ತೆ ಎಂದು ವ್ಯಂಗ್ಯವಾಡಿದರು.
ನಮ್ಮ ಹೆಣ್ಣುಮಕ್ಕಳಿಗೆ ಹೇಗೆ ಈ ನಶೆ ಏರುತ್ತೋ ಗೊತ್ತಿಲ್ಲ
ದೆಹಲಿಯ ಶ್ರದ್ಧಾ ಬರ್ಬರ ಹತ್ಯೆ ಕೇಸ್ ಕುರಿತು ಮಾತನಾಡಿದ ಅವರು ನಮ್ಮ ಹೆಣ್ಣುಮಕ್ಕಳಿಗೆ ಹೇಗೆ ಈ ನಶೆ ಏರುತ್ತೋ ಗೊತ್ತಿಲ್ಲ. ಫೇಸ್ಬುಕ್ನಲ್ಲಿ ಆಕೆಯನ್ನು ಅಫ್ತಾಬ್ ಪರಿಚಯ ಮಾಡಿಕೊಂಡನು.ಅವರಪ್ಪ ಅಮ್ಮ ವಿರೋಧಿಸಿದ್ದಕ್ಕೆ ನನಗೂ ನಿಂಗೂ ಸಂಬಂಧ ಇಲ್ಲ ಅಂದನು. ಆ ಹೆಣ್ಣು ಮಗಳನ್ನು ಕೊಲೆ ಮಾಡಿ ಕತ್ತರಿಸಿ 35 ಪೀಸ್ ಮಾಡಿ ಫ್ರಿಡ್ಜ್ ತಂದು ಅದರಲ್ಲಿಟ್ಟಿದ್ದನು. ಈ ಹುಡುಗಿಯ ಮುಂಚೆ ಅಫ್ತಾಬ್ ನಾಲ್ಕು ಹಿಂದೂ ಹುಡುಗಿಯರ ಜೊತೆ ಈತ ಸಂಬಂಧ ಇಟ್ಟುಕೊಂಡಿದ್ದನು. ಈ ಅಫ್ತಾಬ್ ತರಹದವರು ಇವತ್ತೂ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಾನು ಹಿಂದೂ’ ಬೃಹತ್ ಸಮಾವೇಶದಲ್ಲಿ ಸಂಸದ ಅಣ್ಣಾಸಾಹೇಬ್, ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಮುಖಂಡ ರಾಜೇಶ್ ನೆರ್ಲಿ ಸೇರಿ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:26 pm, Wed, 16 November 22