AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News In Kannada Live: ಆ.31ರ ಇಡೀ ದಿನ ಸುದ್ದಿ ಬೆಳವಣಿಗೆಗಳ ಹೈಲೇಟ್ಸ್

TV9 Kannada News Today Live Updates: ಉತ್ತರಾಖಂಡದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾರವಾರ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿ 24 ಮೀನುಗಾರರ ರಕ್ಷಣೆ ಮಾಡಲಾಗಿದ್ದು, 80 ಲಕ್ಷ ರೂ. ನಷ್ಟ ಸಂಭವಿಸಿದೆ. ಇತ್ತ ಬಿಗ್ ಬಾಸ್ 13 ಸಂಭಾವನೆ ವಿಚಾರವಾಗಿ ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಲೈವ್ ಅಪ್ಡೇಟ್ಸ್‌ ಇಲ್ಲಿದೆ.

Breaking News In Kannada Live: ಆ.31ರ ಇಡೀ ದಿನ ಸುದ್ದಿ ಬೆಳವಣಿಗೆಗಳ ಹೈಲೇಟ್ಸ್
Shivashankarappa Sahukar
ಭಾವನಾ ಹೆಗಡೆ
| Edited By: |

Updated on:Aug 31, 2026 | 11:07 PM

Share

Breaking News Today Live Updates in Kannada: ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ಸ್ಥಳದ ‘ಶುದ್ಧೀಕರಣ’ ಕುರಿತು ಹೇಳಿಕೆ ನೀಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಸ್‌ಸಿ/ಎಸ್‌ಟಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಂಜದೀವ್ ದ್ವೀಪದ ಬಳಿ ‘ಶ್ರೀ ಮಾತಾ’ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಸಮೀಪದಲ್ಲಿದ್ದ ಬೋಟ್‌ಗಳ ಸಹಾಯದಿಂದ 24 ಮೀನುಗಾರರನ್ನು ರಕ್ಷಿಸಲಾಗಿದ್ದು, 80 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13ರ ಮಾಧ್ಯಮಗೋಷ್ಠಿಯಲ್ಲಿ ಸಂಭಾವನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್, “ನನ್ನ ಯೋಗ್ಯತೆ ಮತ್ತು ಶ್ರಮಕ್ಕೆ ತಕ್ಕಂತೆ ಬಿಎಂಎಸ್‌ಆರ್‌ ಸಂಸ್ಥೆ ಸೂಕ್ತ ಸಂಭಾವನೆ ನೀಡಿದೆ” ಎಂದು ಸ್ಪಷ್ಟಪಡಿಸಿದ್ದಾರೆ.  ಆಗಸ್ಟ್ 31ರದ ಇಡೀ ದಿನದ ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ಇಲ್ಲಿದೆ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE NEWS & UPDATES

The liveblog has ended.
  • 31 Aug 2026 11:03 PM (IST)

    ಕೆಪಿಎಸ್​ಸಿ ಅಕ್ರಮ: ಸಿಐಡಿಯ ಮುಂದೆ ತಪ್ಪೊಪ್ಪಿಕೊಂಡ ಅಭ್ಯರ್ಥಿ

    ಕೆಪಿಎಸ್​ಸಿ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಪ್ರಕರಣದ ತನಿಖೆಯಲ್ಲಿ ಬಗೆದಷ್ಟು ಬಯಲಾಗುತ್ತಿದ್ದು, ಇದೀಗ ಅಭ್ಯರ್ಥಿ ಸುಹೇಲ್​​​ ಎಂಬುವರು ಸಿಐಡಿಯ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ವಾಟ್ಸಾಪ್​ ಕರೆಮೂಲಕ ಡೀಲ್ ಮಾಡಿ 40 ಲಕ್ಷಕ್ಕೆ ಹುದ್ದೆಗೆ ಡೀಲ್ ಖುದುರಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಮುಂಗಡ ಹಣವಾಗಿ 20 ಲಕ್ಷ ರೂ. ನೀಡಿದ್ದು, ರೆಸಾರ್ಟ್​ನಲ್ಲಿ ‌ತರಬೇತಿ ಪಡೆದಿದ್ದರ ಕುರಿತು ಹೇಳಿಕೆ ನೀಡಿದ್ದಾನೆ. ಹೀಗಾಗಿ ಯಾರಿಗೆ ಹಣ ವರ್ಗಾವಣೆ ಆಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

  • 31 Aug 2026 09:02 PM (IST)

    ಕೋರ್ಟ್​​​ನಲ್ಲಿ ನಿರಾಸೆ, ಬಂಧನದ ಭೀತಿಯಲ್ಲಿ ಶಿವಶಂಕರಪ್ಪ ಸಾಹುಕಾರ್

    ಕೆಪಿಎಸ್​ಸಿ ನೇಮಕಾತಿಯಲ್ಲಿ ಅಕ್ರಮ ಆರೋಪದ ತನಿಖೆ ಮುಂದುವರೆದಿದೆ. ಸಿಐಡಿ ಅಧಿಕಾಗಳು ಈಗಾಗಲೇ ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದೆ. ಇದರ ಮಧ್ಯೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಶಿವಶಂಕರಪ್ಪ ಪೊಲೀಸರ ವಿಚಾರಣೆಗೆ ಸಹಕರಿಸಿದ್ದಾರೆ. ಅಕ್ರಮದಲ್ಲಿ ಅವರ ಪಾತ್ರವಿಲ್ಲದಿದ್ದರೂ ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ ಬಂಧನದಿಂದ ರಕ್ಷಣೆ ಕೋರಿ ಶಿವಶಂಕರಪ್ಪ ಸಾಹುಕಾರ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಇನ್ನು ಸಿಐಡಿ ಪರ ಎಸ್​ಪಿಪಿ ಬಿ.ಎನ್.ಜಗದೀಶ್ ವಾದ ಮಾಡಿದ್ದು, ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಇನ್ನೂ ಎರಡು ಕೇಸ್​ಗಳಿವೆ. ತನಿಖೆ ಈಗಷ್ಟೇ ಆರಂಭವಾಗಿರುವುದರಿಂದ ಮಧ್ಯಂತರ ರಕ್ಷಣೆ ಬೇಡ ಎಂದಿದ್ದಾರೆ. ಈ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಬಂಧನದಿಂದ ರಕ್ಷಣೆ ಬಗ್ಗೆ ಯಾವುದೇ ಆದೇಶ ನೀಡದೇ ವಿಚಾರಣೆ ಸೆ.3ಕ್ಕೆ ಮುಂದೂಡಿದೆ.

  • 31 Aug 2026 08:44 PM (IST)

    ಸ್ವಚ್ಛತೆ ಕಾಪಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ

    ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡ್‌ಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಂಜಾನೆಯೇ ದಿಢೀರ್ ಭೇಟಿ ನೀಡಿ, ನೈರ್ಮಲ್ಯ ಮತ್ತು ಮನೆ ಮನೆ ಕಸ ಸಂಗ್ರಹಣೆ ಕಾರ್ಯವನ್ನು ನೇರವಾಗಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿ ಕಸ ಸಂಗ್ರಹಣೆ ವಿಳಂಬವೂ ಸೇರಿದಂತೆ ವಿವಿಧ ಕುಂದುಕೊರತೆಗಳ ಕುರಿತು ಮಾಹಿತಿ ಪಡೆದ ಅವರು, ಕಸ ವಿಲೇವಾರಿಯಲ್ಲಿ ತಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪೌರಕಾರ್ಮಿಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು. ರಸ್ತೆ ಬದಿಯಲ್ಲಿ ಕಸ ರಾಶಿ ಬೀಳದಂತೆ ನೋಡಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತ್ಯಾಜ್ಯ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಕೆಬಿಜಿ, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ನೀಡಿ ತಮ್ಮ ಪರಿಸರದ ಸ್ವಚ್ಛತೆ ಕಾಪಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಕರೆ ನೀಡಿದರು.

  • 31 Aug 2026 08:00 PM (IST)

    ಅಂತಾರಾಜ್ಯ, ಅಂತರ್​​ಜಿಲ್ಲೆಗೆ ಮೇವು ಮಾರಾಟ ನಿರ್ಬಂಧ

    ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತಾರಾಜ್ಯ, ಅಂತರ್​​ಜಿಲ್ಲೆಗೆ ಮೇವು ಮಾರಾಟ ನಿರ್ಬಂಧಿಸಿ ಬೆಂಗಳೂರು ನಗರ ಡಿಸಿ ಪಿ.ಎಸ್.ಕಾಂತರಾಜು ಆದೇಶ ಹೊರಡಿಸಿದ್ದಾರೆ. ಈ ಬಾರಿ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದ್ದು, ಜಾನುವಾರುಗಳಿಗೆ ನೀರು ಮತ್ತು ಮೇವು ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಮೇವು & ನೀರಿನ ಅಭಾವ ಎದುರಾಗುವಂಥ ಸಂಭವವಿದೆ. ಆದ್ದರಿಂದ ಜಾನುವಾರುಗಳಿಗೆ ಸಂಕಷ್ಟ ಉಂಟಾಗದಂತೆ ಕ್ರಮವಹಿಸಿ ಬೆಂಗಳೂರು ನಗರ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಮೇವು ಮಾರಾಟ, ಸಾಗಣೆ ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

  • 31 Aug 2026 07:20 PM (IST)

    ರಾಜ್ಯದ ಹಲವೆಡೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

    ರಾಜ್ಯದ ಹಲವೆಡೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ಮುಂದುವರಿದಿದ್ದು, ದಾಳಿ ವೇಳೆ ಅವಧಿ ಮೀರಿದ ಆಹಾರ ಪದಾರ್ಥ ಪತ್ತೆಯಾಗಿದೆ. ಅವಧಿ ಮೀರಿದ 5 ಲೀಟರ್ ನಂದಿನಿ ಮೊಸರು, ತಪ್ಪು ಲೇಬಲಿಂಗ್ ಮಾಡಿದ್ದ ಚಾಕೋಲೆಟ್ ಹಾಗೂ ಅಲಂಕಾರಿಕ ಪದಾರ್ಥಗಳ 19 ಪ್ಯಾಕೆಟ್ ವಶಕ್ಕೆ ಪಡೆದುಕೊಂಡಿದ್ದಾರೆ. 360 ಕೆಜಿ ತಕ್ಷಣ ತಿನ್ನಬಹುದಾದ ಖಾರ ತಿನಿಸು, 4 ಕೆಜಿ ಕೋಕೋ ಪೌಡರ್, 196 ಕೆಜಿ ಸೋನ್​ಪಾಪ್ಡಿ, 4.5 ಕೆಜಿ ಕ್ರಾಕ್ಡ್ ಕೋಕೋ ಪೀಸ್, 6 ಕೆಜಿ ಕೋವಾ, 10 ಕೆಜಿ ಚಾಕೋಲೆಟ್ ಫ್ಲೇವರ್, 5 ಕೆಜಿ ರಸಗುಲ್ಲ. ತಪ್ಪು ಬ್ರಾಂಡಿಂಗ್ ಮಾಡಿದ್ದ ಬನಾನ ಚಿಪ್ಸ್, ಚಕ್ಕುಲಿ, ಮಸಾಲೆ ಪದಾರ್ಥ ಸೇರಿದಂತೆ 60 ಕೆಜಿ ಪದಾರ್ಥ ವಶಪಡಿಸಿಕೊಂಡಿದ್ದಾರೆ.

  • 31 Aug 2026 06:27 PM (IST)

    ರಾಹುಲ್ ಗಾಂಧಿ ವಿರುದ್ಧ ಎಫ್​​​ಐಆರ್ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

    ರಾಹುಲ್ ಗಾಂಧಿ ವಿರುದ್ಧ ಎಫ್​​​ಐಆರ್ ದಾಖಲಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಕೈ ನಾಯಕರ ದಿಢೀರ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೈ ಮುಖಂಡರು ಭಾಗಿದ್ದಾರೆ.

  • 31 Aug 2026 04:15 PM (IST)

    ಗೃಹ ಜ್ಯೋತಿ ಮರು ಪರಿಶೀಲನಾ ಕಾರ್ಯ ಇನ್ನೂ ಒಂದು ತಿಂಗಳು ವಿಸ್ತರಣೆ

    ಗೃಹ ಜ್ಯೋತಿ ಮರು ಪರಿಶೀಲನಾ ಕಾರ್ಯ ಇನ್ನೂ ಒಂದು ತಿಂಗಳು ವಿಸ್ತರಣೆ ಮಾಡಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಗೃಹ ಜ್ಯೋತಿ ಮರು ಪರಿಶೀಲನಾ ಕಾರ್ಯ ಇಂದಿಗೆ ಅಂದರೆ ಆಗಸ್ಟ್ 31ಕ್ಕೆ ಕೊನೆ ದಿನವಾಗಿತ್ತು. ಆದ್ರೆ, ಇದೀಗ ಗಡುವು ಸೆಪ್ಟೆಂಬರ್ 30ಕ್ಕೆ ವಿಸ್ತರಣೆ ಮಾಡಲಾಗಿದೆ. ಜುಲೈ 1 ರಿಂದ ರಾಜ್ಯಾದ್ಯಂತ ಆರಂಭ ಆಗಿರುವ ಮರು ಪರಿಶೀಲನಾ ಕಾರ್ಯ ಸೆಪ್ಟೆಂಬರ್ 30 ರ ಒಳಗಾಗಿ ಮುಗಿಸಲು ಸೂಚನೆ ನೀಡಲಾಗಿದೆ. ಸದ್ಯ ಬೆಸ್ಕಾಂ ವ್ಯಾಪ್ತಿಯಲ್ಲಿ 30% ಪರಿಶೀಲನಾ ಕಾರ್ಯ ಬಾಕಿ ಇದೆ ಎಂದು ಇಂಧನ ಇಲಾಖೆ ತಿಳಿಸಿದೆ.

  • 31 Aug 2026 03:41 PM (IST)

    BMTC, KSRTC ಬಸ್​ ನಿಲ್ದಾಣಕ್ಕೆ ಸಾರಿಗೆ ಸಚಿವ ಭೇಟಿ

    BMTC, KSRTC ಬಸ್​ ನಿಲ್ದಾಣಕ್ಕೆ ಸಾರಿಗೆ ಸಚಿವ ಭೈರತಿ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಪ್ರಯಾಣಿಕರ ಸಮಸ್ಯೆಗಳನ್ನ ಆಲಿಸಿದರು. ಇನ್ನು ಸ್ವಚ್ಛತೆ ಕುರಿತು ಪ್ರಯಾಣಿಕರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಬಿಎಂಟಿಸಿ ವಿದ್ಯಾರ್ಥಿ ಪಾಸ್ ಕೌಂಟರ್​ಗೆ ಸಚಿವರ ಭೇಟಿ ವಿದ್ಯಾರ್ಥಿಗಳ ಸಮಸ್ಯೆ ಕೇಳಿದರು. ಇದೇ ವೇಳೆ BMTC ಬಸ್ ಸ್ಟ್ಯಾಂಡ್​ನಲ್ಲಿ ವೈದ್ಯಕೀಯ ವ್ಯವಸ್ಥೆ ಇಲ್ಲ ಎಂದು ಪ್ರಯಾಣಿಕರು ದೂರು ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಕ್ಲಿನಿಕ್​ನಲ್ಲಿ ವೈದ್ಯರ ವ್ಯವಸ್ಥೆ ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

  • 31 Aug 2026 03:15 PM (IST)

    ಮಣ್ಣಿನ ಗಣೇಶ ಪ್ರತಿಷ್ಠಾಪನೆಗೆ ಆದ್ಯತೆ

    ಮಣ್ಣಿನ ಗಣೇಶ ಪ್ರತಿಷ್ಠಾಪನೆಗೆ ನಾವು ಆದ್ಯತೆ ಕೊಡುತ್ತೇವೆ. ಪಿಒಪಿ ಗಣೇಶ ಮಾರಾಟ ಮಳಿಗೆ ಮೇಲೆ ದಾಳಿ ಮಾಡುತ್ತೇವೆ. ಈ ಮೂಲಕ ಪಿಒಪಿ ಗಣೇಶ ಮಾರಾಟ ಮಾಡಲು ನಿರ್ಬಂಧ ಹಾಕುತ್ತೇವೆ. ಮುಂದಿನ ವರ್ಷದಿಂದ ಅರಣ್ಯ ಇಲಾಖೆಯಿಂದ ಮಣ್ಣಿನ ಗಣೇಶ ವಿತರಣೆ ಮಾಡುತ್ತೇವೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ.

  • 31 Aug 2026 02:07 PM (IST)

    ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

    ಕೆಪಿಎಸ್‌ಸಿ ನೇಮಕಾತಿ ಹಾಗೂ ಪಶುವೈದ್ಯರ ಹುದ್ದೆಗಳ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಓಎಂಆರ್ ಶೀಟ್ ತಿದ್ದುಪಡಿ ಹಾಗೂ ಅಕ್ರಮಗಳ ದಾಖಲೆಗಳಿದ್ದರೂ ಸರ್ಕಾರ ಮೌನವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಉತ್ತರ ನೀಡದೆ ಆರ್‌ಎಸ್‌ಎಸ್ ಜಪ ಮಾಡುತ್ತಿದ್ದಾರೆ ಎಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

  • 31 Aug 2026 01:25 PM (IST)

    BIG BOSS: ಒಂದೇ ವೇದಿಕೆಯಲ್ಲಿ ನಾಲ್ಕು ಭಾಷೆಯ ಸೂಪರ್‌ಸ್ಟಾರ್‌ಗಳು!

    ದಕ್ಷಿಣ ಭಾರತದ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದ ಕಿಚ್ಚ ಸುದೀಪ್, ಮಲಯಾಳಂನ ಮೋಹನ್‌ಲಾಲ್, ತೆಲುಗಿನ ಅಕ್ಕಿನೇನಿ ನಾಗಾರ್ಜುನ ಹಾಗೂ ತಮಿಳಿನ ವಿಜಯ್ ಸೇತುಪತಿ ಒಂದೇ ವೇದಿಕೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಜಿಯೋ ಹಾಟ್‌ಸ್ಟಾರ್‌ನ ಈ ಮಹಾ ಬಿಗ್ ಬಾಸ್ ಸಮ್ಮಿಲನವು ಸೆಪ್ಟೆಂಬರ್ 6 ರಿಂದ ಪ್ರಸಾರವಾಗಲಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮತ್ತಷ್ಟು ಓದಿ

  • 31 Aug 2026 01:24 PM (IST)

    ಶಿವರಾಮ ಕಾರಂತ ಬಡಾವಣೆ ಭೂಮಾಲೀಕರಿಗೆ ಪರಿಹಾರ ವಿತರಣೆ

    ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರು ಹಾಗೂ ಭೂಮಾಲೀಕರಿಗೆ ಪರ್ಯಾಯ ನಿವೇಶನಗಳ ಕ್ರಯಪತ್ರ (ಪರಿಹಾರ) ವಿತರಣಾ ಕಾರ್ಯಕ್ರಮ ಬೆಂಗಳೂರಿನ ನೆಹರು ತಾರಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೂಮಾಲೀಕರು ಮತ್ತು ರೈತರಿಗೆ ಕ್ರಯಪತ್ರಗಳನ್ನು ವಿತರಿಸಿದರು. ಕೋರ್ಟ್ ನಿರ್ದೇಶನದಂತೆ ಸಂತ್ರಸ್ತ ಭೂಮಾಲೀಕರಿಗೆ ಆದ್ಯತೆಯ ಮೇರೆಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಸಾವಿರಾರು ಕುಟುಂಬಗಳಿಗೆ ಈ ಯೋಜನೆಯಿಂದ ಪರಿಹಾರ ದೊರೆಯಲಿದೆ.

  • 31 Aug 2026 01:22 PM (IST)

    ಹೆಣ್ಣು ಭ್ರೂಣ ಹತ್ಯೆ ತಡೆಯಲು ‘ಮನೆ ಮನೆ ಮಹಾಲಕ್ಷ್ಮಿ’ ವಿನೂತನ ಯೋಜನೆ

    ಹೆಣ್ಣು ಭ್ರೂಣ ಹತ್ಯೆ ತಡೆಯಲು ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮ ಪಂಚಾಯತಿ ರಾಜ್ಯದಲ್ಲೇ ಮೊದಲ ಬಾರಿಗೆ ‘ಮನೆ ಮನೆ ಮಹಾಲಕ್ಷ್ಮಿ’ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ. ಪಂಚಾಯತಿಯಲ್ಲಿ ಸಂಗ್ರಹವಾಗುವ ತೆರಿಗೆ ಹಣದಲ್ಲಿ, ಮೊದಲ ಹೆಣ್ಣು ಮಗು ಜನಿಸಿದರೆ ಆ ಮಗುವಿನ ಹೆಸರಿನಲ್ಲಿ 5,000 ರೂ. ಚೆಕ್ ನೀಡಲಾಗುತ್ತದೆ. ಆಗಸ್ಟ್ 15 ರಂದು ಚಾಲನೆ ನೀಡಲಾದ ಈ ಮಾದರಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

  • 31 Aug 2026 01:21 PM (IST)

    ಆಕಸ್ಮಿಕವಾಗಿ ಬಂದೂಕು ಸಿಡಿದು ಕಾಫಿ ಬೆಳೆಗಾರ ಸಾವು

    ಆನೆಗಳಿಂದ ರಕ್ಷಣೆಗೆಂದು ತಂದಿದ್ದ ಬಂದೂಕು ಆಕಸ್ಮಿಕವಾಗಿ ಸಿಡಿದು ಕಾಫಿ ಬೆಳೆಗಾರ ಕೇಶವಶೆಟ್ಟಿ (61) ಮೃತಪಟ್ಟ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಫಿತೋಟದಲ್ಲಿ ನಡೆದು ಹೋಗುವಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳಕ್ಕೆ ಎಸ್ಪಿ ಶುಭಾನ್ವಿತ ಭೇಟಿ ನೀಡಿದ್ದಾರೆ. ಅರೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 31 Aug 2026 12:35 PM (IST)

    ಕೊಳ್ಳೇಗಾಲ: 4 ಅಡಿ ನಾಗರಹಾವನ್ನೇ ನುಂಗಿದ 7 ಅಡಿಯ ನಾಗರಹಾವು!

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ನಾಗರಹಾವೊಂದು ಮತ್ತೊಂದು ನಾಗರಹಾವನ್ನೇ ನುಂಗಿದ ಅಪರೂಪದ ಹಾಗೂ ವಿಚಿತ್ರ ಘಟನೆ ನಡೆದಿದೆ. 4 ಅಡಿ ಉದ್ದದ ನಾಗರಹಾವನ್ನು ನುಂಗಿದ್ದ 7 ಅಡಿ ಉದ್ದದ ಬೃಹತ್ ನಾಗರಹಾವು ಗ್ರಾಮದ ಸಮುದಾಯ ಭವನ ಸೇರಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ‘ಸ್ನೇಕ್ ಬಾಬು’ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

  • 31 Aug 2026 12:32 PM (IST)

    ಪ್ರಜಾಸೌಧಕ್ಕಾಗಿ ಬನಹಟ್ಟಿ ಜನತೆಯ ಬೃಹತ್ ಪಾದಯಾತ್ರೆ: ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ

    ಬನಹಟ್ಟಿ ಪಟ್ಟಣದಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂದು ಒತ್ತಾಯಿಸಿ ‘ಪ್ರಜಾಸೌಧ ಹೋರಾಟ ಸಮಿತಿ’ ನೇತೃತ್ವದಲ್ಲಿ ಬನಹಟ್ಟಿಯಿಂದ ಹೊರಟ ಬೃಹತ್ ಪಾದಯಾತ್ರೆಯು ಬಾಗಲಕೋಟೆಗೆ ಆಗಮಿಸಿದೆ. ವಿದ್ಯಾಗಿರಿ ಐಬಿಯಲ್ಲಿ ಉಪಹಾರ ಸೇವಿಸಿದ ಹೋರಾಟಗಾರರು, ಕಾಳಿದಾಸ ವೃತ್ತದ ಮೂಲಕ ಜಿಲ್ಲಾಡಳಿತ ಭವನದವರೆಗೆ ರ‍್ಯಾಲಿ ನಡೆಸಿ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಮುತ್ತಿಗೆ ಚಳವಳಿಯ ಹಿನ್ನೆಲೆಯಲ್ಲಿ ಬಾಗಲಕೋಟೆ ಡಿಸಿ ಕಚೇರಿ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

  • 31 Aug 2026 12:30 PM (IST)

    ಗದಗ: ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾದ ಸರ್ವಧರ್ಮ ಸಾಮೂಹಿಕ ವಿವಾಹ

    ಪ್ರವಾದಿ ಮೊಹಮ್ಮದ್ ಪೈಗಂಬರ್ ಜಯಂತ್ಯೋತ್ಸವದ ಅಂಗವಾಗಿ ಬೆಟಗೇರಿ ಈದ್ಗಾ ಕಮೀಟಿ ಗದಗದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 18 ನವಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟವು. ಹಿಂದೂ-ಮುಸ್ಲಿಂ ಧರ್ಮಗುರುಗಳ ಸಾನ್ನಿಧ್ಯದಲ್ಲಿ ತಮ್ಮ ತಮ್ಮ ಸಂಪ್ರದಾಯದಂತೆ ಸರಳವಾಗಿ ಮದುವೆಗಳು ನೆರವೇರಿದವು. ಈ ಕಾರ್ಯಕ್ರಮವು ಮಾನವೀಯತೆ ಹಾಗೂ ಭಾವೈಕ್ಯತೆಯ ಸಂದೇಶ ಸಾರಿತು.

  • 31 Aug 2026 11:28 AM (IST)

    ಮೊಬೈಲ್ ವಿಚಾರಕ್ಕೆ ಜಗಳ; ತಮ್ಮನಿಂದಲೇ ಅಣ್ಣನ ಭೀಕರ ಕೊಲೆ

    ಮಂಗಳೂರಿನ ಬಿಜೈ ಕೊಟ್ಟಾರ ಕ್ರಾಸ್ ಬಳಿ ಮೊಬೈಲ್ ವಿಚಾರವಾಗಿ ನಡೆದ ಜಗಳದಲ್ಲಿ ತಮ್ಮನೇ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಬೆಳಗಾವಿಯ ಬೈಲಹೊಂಗಲ ಮೂಲದ ಅಡಿವೆಪ್ಪ (40) ಕೊಲೆಯಾದವರು. ಈತನ ತಮ್ಮ ರಾಜು (36) ಕೃತ್ಯ ಎಸಗಿದ ಆರೋಪಿ. ರವಿವಾರ ರಾತ್ರಿ ಮೊಬೈಲ್ ವಿಷಯಕ್ಕೆ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿ ರಾಜು ಅಣ್ಣನಿಗೆ ಚಾಕುವಿನಿಂದ ಇರಿದಿದ್ದಾನೆ. ವೆನ್ಲಾಕ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಡಿವೆಪ್ಪ ಮೃತಪಟ್ಟಿದ್ದಾರೆ. ಉರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 31 Aug 2026 11:22 AM (IST)

    ಪೋಷಕರ ವಿರುದ್ಧ ಡೆತ್‌ ನೋಟ್ ಬರೆದಿಟ್ಟು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

    ಶಿವಮೊಗ್ಗದ ರಾಮಕೃಷ್ಣ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಪೋಷಕರ ವಿರುದ್ಧವೇ ಡೆತ್‌ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ರಾಯರ ಆರಾಧನೆಗೆ ಪೋಷಕರು ಈಕೆಯನ್ನು ಮನೆಯಲ್ಲೇ ಬಿಟ್ಟು ಉಳಿದಿಬ್ಬರು ಮಕ್ಕಳ ಜೊತೆ ಮಠಕ್ಕೆ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಬಾಲಕಿ ಕೃತ್ಯ ಎಸಗಿದ್ದಾಳೆ. ತಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಬೇಸರ ಹಾಗೂ ಓದಲು ಪೋಷಕರ ಒತ್ತಡವೇ ಸಾವಿಗೆ ಕಾರಣ ಎನ್ನಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 31 Aug 2026 10:21 AM (IST)

    ದೊಡ್ಡಬಳ್ಳಾಪುರ: ರೈಲು ಢಿಕ್ಕಿ ಹೊಡೆದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ದುರ್ಮರಣ

    ದೊಡ್ಡಬಳ್ಳಾಪುರ ರೈಲು ನಿಲ್ದಾಣದಲ್ಲಿ ಸ್ಕೈವಾಕ್ ಇಲ್ಲದ ಕಾರಣ ರೈಲು ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿಯಾಗಿ ಪಾಲನಜೋಗಹಳ್ಳಿಯ ಇರ್ಫಾನಾ (46), ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಾಕಿಯಾ (8) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಜೆ ಮುಗಿಸಿ ಹಿಂದೂಪುರಕ್ಕೆ ವಾಪಸಾಗುತ್ತಿದ್ದಾಗ ಈ ದಾರುಣ ಘಟನೆ ಸಂಭವಿಸಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 31 Aug 2026 10:20 AM (IST)

    ನೇಪಾಳ ದುರಂತ: ಕನ್ನಡಿಗರ ರಕ್ಷಣೆಗೆ ನೋಡಲ್ ಅಧಿಕಾರಿಯ ನೇಮಕ

    ನೇಪಾಳ ದುರಂತದಲ್ಲಿ ಸಿಲುಕಿರುವ ಹಾಗೂ ನಾಪತ್ತೆಯಾದ ಕರ್ನಾಟಕದ ಮೂಲದವರ ರಕ್ಷಣೆ ಮತ್ತು ನೆರವಿಗೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ. ಈ ಕಾರ್ಯಾಚರಣೆಯ ಸಮನ್ವಯಕ್ಕಾಗಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ (OSD) ಅಭಿಜಿತ್ ಗೌಡ ಅವರನ್ನು ವಿಶೇಷ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

  • 31 Aug 2026 10:02 AM (IST)

    ದೆಹಲಿಯಲ್ಲಿ ಇಂದು ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ

    ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮಧ್ಯಾಹ್ನ 12.30ಕ್ಕೆ ದೆಹಲಿಯ ಕುಶಕ್ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಪ್ರಮುಖ ಸಭೆ ನಡೆಸಲಿದ್ದಾರೆ. ಈ ಸಭೆಯ ಮುಕ್ತಾಯದ ನಂತರ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

Published On - Aug 31,2026 10:02 AM

Follow Us
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ