Bangalore Rains: ಬೆಂಗಳೂರಿನಲ್ಲಿ ಧಾರಾಕಾರ ಮಳೆ: ವರುಣಾರ್ಭಟಕ್ಕೆ ಕೆರೆಯಂತಾದ ರಸ್ತೆಗಳು, ಎಲ್ಲೆಡೆ ಫುಲ್ ಟ್ರಾಫಿಕ್
ಬೆಂಗಳೂರಿನಲ್ಲಿ ಸಂಜೆ ದಿಢೀರ್ ಧಾರಾಕಾರ ಮಳೆ ಸುರಿದಿದೆ. ಮೆಜೆಸ್ಟಿಕ್, ಜಯನಗರ, ವಿಧಾನಸೌಧ ಸೇರಿದಂತೆ ಹಲವೆಡೆ ಮಳೆ ಅಬ್ಬರವಿತ್ತು. ಏಕಾಏಕಿ ಸುರಿದ ಮಳೆಯಿಂದ ಜನರು ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದರು. ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಬಿಸಿಲಿನ ತಾಪದಿಂದ ತಂಪೆರೆದ ಮಳೆ, ಸಂಚಾರಕ್ಕೆ ಅಡ್ಡಿಯಾಗಿದೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ
- 1 ಗಂಟೆಯಿಂದ ಸುರಿದ ಭಾರೀ ಮಳೆಗೆ ನಗರದ ಪ್ರಮುಖ ರಸ್ತೆಗಳು ಜಲಾವೃತ
- ವರುಣಾರ್ಭಟಕ್ಕೆ ಸಿಲಿಕಾನ್ ಸಿಟಿ ಜನರು ತತ್ತರ
ಬೆಂಗಳೂರು, ಅಕ್ಟೋಬರ್ 15: ಬಿಸಿಲಿನ ಬೇಗೆಯ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ವರುಣ ತಂಪೆರೆದಿದ್ದಾನೆ. ಸುಮಾರು ದಿನ ಬಿಡುವು ನೀಡಿದ್ದ ಮಳೆರಾಯ ಇಂದು ಸಂಜೆ ಆಗುತ್ತಿದ್ದಂತೆ ಬಿಟ್ಟುಬಿಡದೆ ಕಳೆದ 1 ಗಂಟೆಯಿಂದ ಧಾರಾಕಾರವಾಗಿ ಸುರಿಯುತ್ತಿದೆ. ಏಕಾಏಕಿ ಸುರಿದ ಗುಡುಗು ಸಹಿತ ಜೋರು ಮಳೆಗೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಏಲ್ಲೆಲ್ಲಿ ಮಳೆ?
ಮೆಜೆಸ್ಟಿಕ್, ಟೌನ್ ಹಾಲ್, ಕೆಆರ್ ಮಾರ್ಕೆಟ್, ಜಯನಗರ, ಶೇಷಾದ್ರಿಪುರಂ, ವಿಧಾನಸೌಧದ ಸುತ್ತಮುತ್ತ, ಮಲ್ಲೇಶ್ವರಂ, ರಾಜಾಜಿನಗರ, ಜಯನಗರ, ಮೈಸೂರು ಬ್ಯಾಂಕ್ ಸರ್ಕಲ್, ಕಾರ್ಪೊರೇಷನ್ ಸೇರಿದಂತೆ ಹಲವೆಡೆ ಮಳೆ ಅಬ್ಬರಿಸಿದೆ. ದಿಢೀರ್ ಮಳೆಗೆ ಬಸ್ ನಿಲ್ದಾಣಗಳಲ್ಲಿ ಜನರು ಆಶ್ರಯ ಪಡೆದರು.
ಲಾಲ್ ಬಾಗ್, ವಿವಿ ಪುರಂ, ಬಸವಗುಡಿ, ಗಾಂಧಿ ಬಜಾರ್, ಸೌತ್ ಎಂಡ್ ಸರ್ಕಲ್, ಬಸಪ್ಪ ಸರ್ಕಲ್ನಲ್ಲೂ ಮಳೆ ಸುರಿದಿದೆ. ಏಕಾಏಕಿ ಮಳೆಯಿಂದ ಕೆಲಸ ಮುಗಿಸಿ ಮನೆಗೆ ಹೋಗುವವರು ತೊಂದರೆ ಅನುಭವಿಸುವಂತಾಗಿದೆ. ಕೆಲವರು ಛತ್ರಿ ಹಿಡಿದು ಮಳೆಯಲ್ಲೇ ತೆರಳುತ್ತಿದ್ದಾರೆ. ಇನ್ನು ರಸ್ತೆ ಬದಿ ವ್ಯಾಪಾರಿಗಳಿಗೆ ವರುಣ ಹೊಡೆತ ನೀಡಿದ್ದಾನೆ.
ಭಾರೀ ಮಳೆಗೆ ಬೆಂಗಳೂರು-ಹೊಸೂರು ಹೆದ್ದಾರಿ ಜಲಾವೃತ
ಇನ್ನು ಭಾರೀ ಮಳೆಗೆ ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರದ ಕಿತ್ತಾಗನಹಳ್ಳಿ ಕ್ರಾಸ್ ಬಳಿ ರಸ್ತೆ ಜಲಾವೃತಗೊಂಡಿದೆ. 1 ಗಂಟೆಯಿಂದ ಸುರಿದ ಭಾರೀ ಮಳೆಗೆ ರಸ್ತೆ ಜಲಾವೃತಗೊಂಡಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಮಳೆ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಡ್ರೈನೇಜ್ ಬ್ಲಾಕ್ಗಳಲ್ಲಿ ಕಸ, ಕಡ್ಡಿ ತುಂಬಿಕೊಂಡಿದೆ. ಪ್ರತಿ ಬಾರಿ ಮಳೆ ಬಂದಾಗಲೂ ರಸ್ತೆ ಜಲಾವೃತಗೊಳ್ಳುತ್ತಿದೆ.
ಹೆದ್ದಾರಿ ಪ್ರಾಧಿಕಾರದ ವಿರುದ್ದ ವಾಹನ ಸವಾರರ ಆಕ್ರೋಶ
ಜಲಾವೃತವಾದ ನೀರಿನಲ್ಲಿಯೇ ಹರಸಾಹಸ ಪಟ್ಟು ವಾಹನಗಳು ಸಂಚರಿಸುತ್ತಿವೆ. ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಅಂಗಡಿ, ಮುಂಗಟ್ಟುಗಳ ಬಳಿ ಪಾದಚಾರಿಗಳು ಆಶ್ರಯ ಪಡೆದಿದ್ದು, ಹೆದ್ದಾರಿ ಪ್ರಾಧಿಕಾರದ ವಿರುದ್ದ ವಾಹನ ಸವಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:46 pm, Thu, 15 October 26




