ಕೆಲಕಾಲ ನಿಂತಲ್ಲೇ ನಿಂತ ಮೆಟ್ರೋ ರೈಲು: ಪರ್ಪಲ್ ಲೈನ್‌ನಲ್ಲಿ ಸಂಚಾರ ವಿಳಂಬ
ಬೆಂಗಳೂರಿನ ನಮ್ಮ ಮೆಟ್ರೋ ಪರ್ಪಲ್ ಲೈನ್‌ನಲ್ಲಿ ಶುಕ್ರವಾರ ಬೆಳಗ್ಗೆ ಸಂಚಾರ ವಿಳಂಬವಾಗಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ತೆರಳುತ್ತಿದ್ದ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಸುಮಾರು 10 ನಿಮಿಷ ನಿಂತಿತ್ತು. ಇದರಿಂದಾಗಿ ಪ್ರಯಾಣ ವಿಳಂಬವಾಯಿತು. ಪೀಕ್ ಅವರ್‌ನಲ್ಲಿ ರೈಲು ವಿಳಂಬವಾದ ಕಾರಣ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

ಬೆಂಗಳೂರು, ಅಕ್ಟೋಬರ್ 30: ನಮ್ಮ ಮೆಟ್ರೋ ರೈಲುಗಳು ಪದೇ ಪದೇ ಕೆಟ್ಟು ನಿಲ್ಲುತ್ತಿರುವ ಮತ್ತು ತಾಂತ್ರಿಕ ದೋಷದಿಂದ ಪ್ರಯಾಣ ವಿಳಂಬವಾಗುತ್ತಿರುವ ಪ್ರಕರಣಗಳು ಹೆಚ್ಚಿರುವ ಸಂದರ್ಭದಲ್ಲೇ ಮತ್ತೊಂದು ಅಂತಹ ಘಟನೆ ವರದಿಯಾಗಿದೆ. ಪರ್ಪಲ್ ಲೈನ್ ಮೆಟ್ರೋ ರೈಲು ಶುಕ್ರವಾರ ಬೆಳಗಿನ ಜಾವ 9:30 ರ ಸುಮಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಸುಮಾರು 10 ನಿಮಿಷ ಕಾಲ ನಿಂತಲ್ಲೇ ನಿಂತಿದೆ. ತಾಂತ್ರಿಕ ಕಾರಣಗಳಿಂದ ಪ್ರಯಾಣ ವಿಳಂಬವಾಗುತ್ತಿದೆ. ಅಡಚಣೆಗಾಗಿ ವಿಷಾದಿಸುತ್ತಿದ್ದೇವೆ ಎಂದು ರೈಲಿನಲ್ಲಿ ಅನೌನ್ಸ್ಮೆಂಟ್ ಮಾಡಿರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ. ಆದರೆ, ಈ ಕುರಿತು ಬಿಎಂಆರ್ಸಿಎಲ್ ಅಧಿಕೃತ ಹೇಳಿಕೆ ಈವರೆಗೆ ಬಿಡುಗಡೆಯಾಗಿಲ್ಲ.
ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಕಡೆಗೆ ಸಂಚರಿಸುತ್ತಿದ್ದ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ನಿಂತಿದ್ದು, ಸುಮಾರು 10 ನಿಮಿಷಗಳ ನಂತರ ಹೊರಟಿದೆ. ಪೀಕ್ ಅವರ್ನಲ್ಲೇ ರೈಲು ವಿಳಂಬವಾದ ಕಾರಣ ಮೆಜೆಸ್ಟಿಕ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಅತಿಯಾಗಿತ್ತು. ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಳಂಬವಾಗಿ ಗಮ್ಯ ತಲುಪಿದ ಪ್ರಯಾಣಿಕರು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಟ ಬಳಿಕವೂ ಪ್ರತಿ ನಿಲ್ದಾಣದಲ್ಲಿ ನಿಲ್ಲುವ ಅವಧಿ ಹೆಚ್ಚಾಗಿತ್ತು. ಇದರಿಂದಾಗಿ ಗಮ್ಯ ತಲುಪುವುದು ಸುಮಾರು 20 ರಿಂದ 25 ನಿಮಿಷ ತಡವಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ನಮ್ಮ ಮೆಟ್ರೋ ರೈಲು ಕೆಟ್ಟು ನಿಂತ ಇತ್ತೀಚಿನ ಟೈಮ್ಲೈನ್
- ಜೂನ್ 23, 2026: ಪರ್ಪಲ್ ಲೈನ್‌ನ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಸಂಜೆ ಪೀಕ್ ಅವರ್‌ನಲ್ಲಿ ಘಟನೆ ನಡೆದಿದ್ದು, ಅಂಡರ್‌ಗ್ರೌಂಡ್ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸಾವಿರಾರು ಪ್ರಯಾಣಿಕರು ಪರದಾಡಿದ್ದರು. ಮಾಗಡಿ ರಸ್ತೆ–ಚಲ್ಲಘಟ್ಟ ಮತ್ತು ಇಂದಿರಾನಗರ–ವೈಟ್‌ಫೀಲ್ಡ್ ನಡುವೆ ಸೀಮಿತ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ರೈಲಿಗೆ ವಿದ್ಯುತ್ ಪೂರೈಸುವ ಡಿವೈಸ್ಗೆ ಹಾನಿಯಾಗಿದ್ದೇ ಸಮಸ್ಯೆಗೆ ಕಾರಣ ಎನ್ನಲಾಗಿತ್ತು.
- ಜುಲೈ 22, 2026: ಬೆಳಗ್ಗೆ ಸುಮಾರು 8 ಗಂಟೆಗೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಿ ಯಲಹಂಕದತ್ತ ಸಾಗುವ ಗ್ರೀನ್ ಲೈನ್‌ನ ಯಲಹಂಕ–ಮಾದಾವರ ನಡುವಿನ ಸಂಚಾರ ಸ್ಥಗಿತಗೊಂಡಿತ್ತು. ಗೊರಗುಂಟೆಪಾಳ್ಯದಿಂದ ಮಾದಾವರದವರೆಗಿನ ಒಂಬತ್ತು ನಿಲ್ದಾಣಗಳ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಸುಮಾರು 8.45ಕ್ಕೆ ವಿದ್ಯುತ್ ಪೂರೈಕೆ ಮರುಸ್ಥಾಪನೆಯಾದ ಬಳಿಕ ಸಂಚಾರ ಸಹಜ ಸ್ಥಿತಿಗೆ ಮರಳಿತ್ತು.
- ಮೇ 4, 2026: ವಿದ್ಯುತ್ ವ್ಯತ್ಯಯದಿಂದ ಕಬ್ಬನ್ ಪಾರ್ಕ್ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣದಲ್ಲಿ ಬೆಳಕಿನ ವ್ಯವಸ್ಥೆ ಸ್ಥಗಿತಗೊಂಡಿತ್ತು. ಸುರಕ್ಷತೆಯ ದೃಷ್ಟಿಯಿಂದ ಬೆಳಗ್ಗೆ 7ರಿಂದ 11ರವರೆಗೆ ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆ ನೀಡಿರಲಿಲ್ಲ. ಪರ್ಪಲ್ ಲೈನ್‌ನಲ್ಲಿ ರೈಲು ಸಂಚಾರ ಮುಂದುವರಿದಿದ್ದರೂ, ಕಬ್ಬನ್ ಪಾರ್ಕ್ ನಿಲ್ದಾಣವನ್ನು ಪ್ರಯಾಣಿಕರು ಬಳಸಲು ಸಾಧ್ಯವಾಗಿರಲಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 am, Fri, 30 October 26




