AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ನೀಡುವ ಆ್ಯಪ್​ಗಳಿಂದ ದೌರ್ಜನ್ಯ; ದೂರು ನೀಡಲು ಸಂತ್ರಸ್ತರಿಗೆ ಪೊಲೀಸರ ಸಲಹೆ, ಎಚ್ಚರವಹಿಸುವಂತೆ ಸೂಚನೆ

ಸಾಲವನ್ನು ಮಂಜೂರು ಮಾಡುವಾಗ ಸಾಲದ ಅಪ್ಲಿಕೇಶನ್‌ಗಳು ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತವೆ ಮತ್ತು ಸಾಲವನ್ನು ಮರುಪಾವತಿಸಲು ವಿಫಲವಾದರೆ ಗ್ರಾಹಕರನ್ನು ಪೀಡಿಸಲು ಆ ಮಾಹಿತಿಯನ್ನು ಬಳಸುತ್ತವೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಸಾಲ ನೀಡುವ ಆ್ಯಪ್​ಗಳಿಂದ ದೌರ್ಜನ್ಯ; ದೂರು ನೀಡಲು ಸಂತ್ರಸ್ತರಿಗೆ ಪೊಲೀಸರ ಸಲಹೆ, ಎಚ್ಚರವಹಿಸುವಂತೆ ಸೂಚನೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Jul 13, 2023 | 3:50 PM

Share

ಬೆಂಗಳೂರು: ಅಕ್ರಮವಾಗಿ ಹಣ ನೀಡುವ ಆ್ಯಪ್‌ಗಳಿಂದ (Lending Chinese Apps) ಸಾಲ ಪಡೆಯುವ ಕುರಿತು ಬೆಂಗಳೂರು ನಗರ ಪೊಲೀಸರು (Bengaluru Police) ಗುರುವಾರ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಅನೇಕ ಜನರು ಸಾಲ ನೀಡುವ ಆ್ಯಪ್​​ಗಳಿಂದ ಹಣ ಪಡೆದುಕೊಂಡು ಸಮಸ್ಯೆಗೆ ಸಿಲುಕಿದ್ದಾರೆ. ಇಂಥ ಅಪ್ಲಿಕೇಶನ್‌ಗಳು ಜನರಿಗೆ ಸುಲಭವಾಗಿ ಸಾಲ ನೀಡುವುದರಿಂದ ಜನರು ಅವುಗಳ ಬಲೆಗೆ ಬೀಳುತ್ತಾರೆ. ಗ್ರಾಹಕರು ಸಾಲವನ್ನು ಮರುಪಾವತಿಸಲು ವಿಫಲವಾದಾಗ ಆ್ಯಪ್​​ಗಳು ಗ್ರಾಹಕರಿಗೆ ಕಿರುಕುಳ ನೀಡುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

22 ವರ್ಷ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಸಾಲ ವಸೂಲಾತಿ ಆ್ಯಪ್​ ಏಜೆಂಟ್‌ಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ, ಸಾಲ ನೀಡಿಕೆ ಆ್ಯಪ್​​ಗಳ ಬಗ್ಗೆ ಎಚ್ಚರ ವಹಿಸುವಂತೆ ಜನರಿಗೆ ಸೂಚನೆ ನೀಡಿರುವ ಪೊಲೀಸರು, ಆ್ಯಪ್​​ಗಳಿಂದ ಕಿರುಕುಳ ಎದುರಿಸುತ್ತಿರುವ ಜನರು ಮುಂದೆ ಬಂದು ದೂರುಗಳನ್ನು ದಾಖಲಿಸಬೇಕು ಎಂದು ಸಲಹೆ ನೀಡಿದ್ದಾರೆ. ದೇಶದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ 350 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಗೂಗಲ್ ಪ್ಲೇ ಸ್ಟೋರ್‌ನಿಂದ 350 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಜನರು ಈ ಆ್ಯಪ್‌ಗಳಿಗೆ ಬಲಿಯಾಗಬಾರದು. ಚೀನೀ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ತೆಗೆದುಕೊಳ್ಳಲು ಬ್ಯಾಂಕ್‌ಗಳು ಮತ್ತು ಇತರ ಆಯ್ಕೆಗಳಿವೆ. ಇಂತಹ ಆ್ಯಪ್​​ಗಳಿಂದ ಸಾಲ ಪಡೆದವರು ಕಿರುಕುಳ ಎದುರಿಸುತ್ತಿದ್ದರೆ ಮುಂದೆ ಬಂದು ದೂರು ನೀಡಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಸ್‌ಡಿ ಶರಣಪ್ಪ ತಿಳಿಸಿದ್ದಾರೆ.

ಸಾಲವನ್ನು ಮಂಜೂರು ಮಾಡುವಾಗ ಸಾಲದ ಅಪ್ಲಿಕೇಶನ್‌ಗಳು ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತವೆ ಮತ್ತು ಸಾಲವನ್ನು ಮರುಪಾವತಿಸಲು ವಿಫಲವಾದರೆ ಗ್ರಾಹಕರನ್ನು ಪೀಡಿಸಲು ಆ ಮಾಹಿತಿಯನ್ನು ಬಳಸುತ್ತವೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಬೆಂಗಳೂರು ಎಕ್ಸ್​ಪ್ರೆಸ್ ವೇಯಲ್ಲಿ ತಪ್ಪಿತು ಭಾರೀ ದುರಂತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

ಈ ಸಾಲದ ಅಪ್ಲಿಕೇಶನ್‌ಗಳು ವಿಷವರ್ತುಲದಂತೆ ಎಂದು ಜನರು ತಿಳಿದಿರಬೇಕು. ಅನುಕೂಲಕರ ಮರುಪಾವತಿ ಆಯ್ಕೆಯೊಂದಿಗೆ ಸಣ್ಣ ಸಾಲದ ಮೊತ್ತವನ್ನು ನೀಡುವ ಮೂಲಕ ಅವರು ಜನರನ್ನು ಆಕರ್ಷಿಸುತ್ತಾರೆ. ಈ ಹಿಂದೆಯೂ ಇಂತಹ ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಆದರೆ ಹೊಸ ಆ್ಯಪ್‌ಗಳು ಬರುತ್ತಲೇ ಇರುತ್ತವೆ ಎಂದು ಶರಣಪ್ಪ ಹೇಳಿರುವುದಾಗಿ ‘ನ್ಯೂಸ್ 9’ ವರದಿ ಮಾಡಿದೆ.

ಪ್ಕೇ ಸ್ಟೋರ್ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ 2022 ರಲ್ಲಿ 3,500 ಕ್ಕೂ ಹೆಚ್ಚು ಸಾಲ ನೀಡುವ ಅಪ್ಲಿಕೇಶನ್‌ಗಳ ವಿರುದ್ಧ ಗೂಗಲ್ ಕ್ರಮ ತೆಗೆದುಕೊಂಡಿತ್ತು. ಜನರಿಗೆ ಸಾಲ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೈಸೆನ್ಸ್ ಪಡೆಯುವುದು ಸಾಲ ನೀಡುವ ಅಪ್ಲಿಕೇಶನ್‌ಗಳಿಗೆ ಕಡ್ಡಾಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ