ಕೊಲೆ ಮಾಡಿ ಸೂಟ್ಕೇಸ್ನಲ್ಲಿ ತುಂಬಿಟ್ಟ ಪ್ರಕರಣ: ಆರೋಪಿ ಸಿಕ್ಕಿಬಿದ್ದಿದ್ಹೇಗೆ? ಬೆಂಗಳೂರು ಪೊಲೀಸರು ಹೇಳಿದ್ದಿಷ್ಟು
ಬೆಂಗಳೂರಿನ ಹುಳಿಮಾವಿನಲ್ಲಿ ನಡೆದ ಭಯಾನಕ ಕೊಲೆ ಪ್ರಕರಣದಲ್ಲಿ ಆರೋಪಿ ಪತಿ ಮಹಾರಾಷ್ಟ್ರದಲ್ಲಿ ಪೊಲೀಸ್ ವಶವಾಗಿದ್ದಾನೆ. ಪತ್ನಿಯನ್ನು ಕೊಲೆ ಮಾಡಿ, ಮೃತದೇಹವನ್ನು ತುಂಡು ಮಾಡಿ ಸೂಟ್‌ಕೇಸ್‌ನಲ್ಲಿಟ್ಟು ಪರಾರಿಯಾಗಿದ್ದ ಆರೋಪಿ ಅಸ್ವಸ್ಥನಾಗಿ ಬಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ತನಿಖೆ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿ ಇಲ್ಲಿದೆ.

ಬೆಂಗಳೂರು, ಮಾರ್ಚ್ 28: ಬೆಂಗಳೂರಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹತ್ಯೆ (Bengaluru Murder Case) ಮಾಡಿ, ಮೃತದೇಹವನ್ನು ತುಂಡುತುಂಡು ಮಾಡಿ ಸೂಟ್‌ಕೇಸ್‌ನಲ್ಲಿಟ್ಟು ಪರಾರಿಯಾಗಿದ್ದ ಭಯಾನಕ ಘಟನೆ ಸದ್ಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೀಗ ಆ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ಹೇಗೆ ಮತ್ತು ಆರೋಪಿ ಪೊಲೀಸರಿಗೆ ಸಿಕ್ಕಿದ್ದು ಹೇಗೆ ಎಂಬುದನ್ನು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ (Bangalore Police Commissioner) ದಯಾನಂದ (Dayanand) ಅವರು ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ, ಆರೋಪಿಯನ್ನು ದಾಖಲಿಸಲಾಗಿರುವ ಮುಂಬೈ ಆಸ್ಪತ್ರೆಗೆ ಹುಳಿಮಾವು ಪೊಲೀಸರ ತಂಡ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಹುಳಿಮಾವು ಸಮೀಪದ ದೊಡ್ಡ ಕನ್ನಹಳ್ಳಿಯ ಮನೆಯಲ್ಲಿ ಪತ್ನಿಯನ್ನು (ಗೌರಿ ಅನಿಲ್ ಸಾಂಬೆಕರ್) ಕೊಲೆ ಮಾಡಿ, ಮೃತದೇಹವನ್ನು ತುಂಡರಿಸಿ ಸೂಟ್ ಕೇಸ್ನಲ್ಲಿ ತುಂಬಿದ ಬಳಿಕ ಆರೋಪಿ ರಾಕೇಶ್ ಮಹಾರಾಷ್ಟ್ರಕ್ಕೆ ತೆರಳಿದ್ದ. ಗುರುವಾರ ಆತ ಮುಂಬೈಗೆ ಹೋಗುತ್ತಿದ್ದಾಗ ಶಿರ್ವಾಲ್ ಪೊಲೀಸ್ ಠಾಣೆ ಸಮೀಪದಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ. ನಂತರ ಸ್ಥಳಕ್ಕೆ ಧಾವಿಸಿದ್ದ ಅಲ್ಲಿನ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿಸಿದ್ದರು. ಸತಾರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ತಡರಾತ್ರಿ ಪುಣೆಯ ಸಸೂನ್ ಆಸ್ಪತ್ರೆಗೆ ರವಾನಿಸಲಾಯಿತು. ಈಗ ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಕೆ ಮಾಡಲಾಗಿದೆ. ಸಸೂನ್ ಆಸ್ಪತ್ರೆಗೆ ಹುಳಿಮಾವು ಪೊಲೀಸರ ತಂಡ ಭೇಟಿ ನೀಡಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಆರೋಪಿ ವಿಷ ಸೇವಿಸಿರುವ ಶಂಕೆ
ಹುಳಿಮಾವು ಮಹಿಳೆಯ ಕೊಲೆ ಆರೋಪಿ ವಿಷ ಸೇವನೆ ಮಾಡಿದ್ದ ಬಗ್ಗೆ ಅನುಮಾನ ಇದೆ. ಸದ್ಯ ಆತನಿಗೆ ಚಿಕಿತ್ಸೆ ನೀಡಿಲಾಗುತ್ತಿದೆ. ಆಸ್ಪತ್ರೆಯ ವೈದ್ಯರ ಅಭಿಪ್ರಾಯ ಮತ್ತು ಚಿಕಿತ್ಸೆ ಬಳಿಕ ಆರೋಪಿಯನ್ನು ಬೆಂಗಳೂರಿಗೆ ಕರೆತರಬಹುದು ಎಂದು ಅವರು ತಿಳಿಸಿದ್ದಾರೆ.
ಕೊಲೆಗೆ ಕೌಟುಂಬಿಕ ಕಾರಣ ಇರುವ ಬಗ್ಗೆ ಮಾಹಿತಿ ಇದೆ. ಇಷ್ಟೇ ಅಲ್ಲದೆ, ಬೇರೆ ಏನಾದರೂ ಕಾರಣ ಇದೆಯೇ ಎಂದು ಕುಟುಂಬದವರ ಬಳಿ ಮಾಹಿತಿ ಪಡೆಯಬೇಕು. ಈಗಾಗಲೇ ಕುಟುಂಬದವರು ಪೊಲೀಸರ ಬೇಟಿ ಮಾಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪತ್ನಿಯನ್ನ ತುಂಡರಿಸಿ ಸೂಟ್ ಕೇಸ್ನಲ್ಲಿ ತುಂಬಿಟ್ಟ ಪತಿ
ಬೆಂಗಳೂರಿನ ಹುಳಿಮಾವಿನಲ್ಲಿ ನಡೆದಿತ್ತು ಭೀಭತ್ಸ ಕೃತ್ಯ
ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿನ ದೊಡ್ಡಕಮ್ಮನಹಳ್ಳಿ ಮನೆಯಲ್ಲಿ ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ದಂಪತಿ ವಾಸವಿದ್ದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಪತಿ ರಾಕೇಶ್ ಪತ್ನಿ ಗೌರಿ ಅನಿಲ್ ಸಾಂಬೆಕರ್ ಹತ್ಯೆ ಮಾಡಿ ಬಳಿಕ ಮೃತದೇಹವನ್ನು ತುಂಡರಿಸಿ ಸೂಟ್ಕೇಸ್ನಲ್ಲಿ ತುಂಬಿಟ್ಟಿದ್ದಾನೆ. ಬಳಿಕ ಈ ವಿಚಾರವನ್ನು ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದು, ಪರಾರಿಯಾಗಿದ್ದ. ಬಳಿಕ ಮಹಾರಾಷ್ಟ್ರ ಪೊಲೀಸರ ಮಾಹಿತಿ ಆಧರಿಸಿ ಬೆಂಗಳೂರಿನ ಹುಳಿಮಾವು ಪೊಲೀಸರು ಮನೆ ಭೇಟಿ ಪರಿಶೀಲನೆ ನಡೆಸಿದಾಗ ಘೋರ ಕೃತ್ಯ ಬೆಳಕಿಗೆ ಬಂದಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Fri, 28 March 25