
ಬೆಂಗಳೂರು, ಜೂನ್ 17: ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ (Karnataka High Court) ನಿರ್ಬಂಧ ವಿಧಿಸಿದೆ. ಸರ್ಕಾರದ ನಿಲುವು ಏನು ಎಂಬುದನ್ನು ಈಗಾಗಲೇ ನಾವು ಹೈಕೋರ್ಟ್‌ಗೆ ತಿಳಿಸಿದ್ದೇವೆ. ಕೊರಿಯರ್, ಪಾರ್ಸೆಲ್ ಹೆಸರಿನಲ್ಲಿ ಬೈಕ್ ಟ್ಯಾಕ್ಸಿಗಳು (Bike Taxi) ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಕಾರಣ ನಮ್ಮ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ಬೈಕ್ ಟ್ಯಾಕ್ಸಿ ವಿರುದ್ಧ ಪೊಲೀಸರ ಕಾರ್ಯಾಚರಣೆ ಬಗ್ಗೆ ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಬೈಕ್ ಟ್ಯಾಕ್ಸಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ಹೈಕೋರ್ಟ್ ಆರು ವಾರಗಳ ಗಡುವು ನೀಡಿತ್ತು. ಈಗ ಆ ಅವಧಿ ಮುಗಿದು ಹೋಗಿದೆ. ಹೀಗಾಗಿ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕೊರಿಯರ್ ಮತ್ತು ಪಾರ್ಸೆಲ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ದೊರೆತಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸೋಮವಾರ ಒಂದೇ ದಿನ 103 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಿದ್ದರು.
ಬೈಕ್ ಟ್ಯಾಕ್ಸಿ ಅನಧಿಕೃತ ಎಂದು ಹೈಕೋರ್ಟ್ ಈಗಾಗಲೇ ಆದೇಶ ಹೊರಡಿಸಿದೆ. ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ನಿಲ್ಲಿಸಲು ನೀಡಿದ ಅವಧಿ ಕೂಡ ಮುಕ್ತಾಯವಾಗಿದೆ. ಹೀಗಾಗಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಬೆಂಗಳೂರು ಆರ್ಟಿಒ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ಸೋಮವಾರ ತಿಳಿಸಿದ್ದರು.
ಉಬರ್ ಸೇರಿದಂತೆ ಕೆಲವು ಬೈಕ್ ಟ್ಯಾಕ್ಸಿಗಳು ಈ ಹಿಂದೆ ಕೂಡ ಪಾರ್ಸೆಲ್ ಸೇವೆ ಒದಗಿಸುತ್ತಿದ್ದವು. ಇದೀಗ ಹೈಕೋರ್ಟ್ ಆದೇಶದಂತೆ, ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡ ಬೆನ್ನಲ್ಲೇ ಆ್ಯಪ್ಗಳಲ್ಲಿ ‘ಬೈಕ್ ಟ್ಯಾಕ್ಸಿ’ ಎಂಬ ಆಯ್ಕೆ ಇದ್ದುದನ್ನು ‘ಪಾರ್ಸೆಲ್’ ಎಂದು ಬದಲಾಯಿಸಿವೆ. ಅಲ್ಲದೆ, ಪಾರ್ಸೆಲ್ ಸೇವೆ ಮುಂದುವರಿಸಿವೆ. ಆದರೆ, ಪಾರ್ಸೆಲ್ ಹೆಸರಿನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅಂಥ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ: ಒಂದೇ ದಿನದಲ್ಲಿ 103 ಬೈಕ್ ಟ್ಯಾಕ್ಸಿ ಸೀಜ್: ವೈಟ್ ಬೋರ್ಡ್ ವಾಹನಗಳಿಗೆ ಎಚ್ಚರಿಕೆ ಸಂದೇಶ
ಇನ್ನು ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿದ್ದು, ಜೂನ್ 24ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ. ಏತನ್ಮಧ್ಯೆ, ಬೈಕ್ ಟ್ಯಾಕ್ಸಿಗೆ ಕಾನೂನಿನಲ್ಲಿ ಅವಕಾಶ ಮಾಡಿಕೊಡುವಂತೆ ಕಂಪನಿಗಳು ಸರ್ಕಾರಕ್ಕೆ ಮತ್ತೆ ಮನವಿ ಮಾಡಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಗೆ ಬೈಕ್ ಟ್ಯಾಕ್ಸಿ ಕಂಪನಿಗಳು ಸೋಮವಾರವೇ ಪತ್ರ ಬರೆದಿದ್ದರು.