ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕು ಇನ್‌ನೊಬಿಗೆ: 65 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ಬಿಎಂಆರ್‌ಸಿಎಲ್
ಬಿಎಂಆರ್‌ಸಿಎಲ್ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಇನ್‌ಮೊಬಿ ಸಂಸ್ಥೆಯೊಂದಿಗೆ 65 ಕೋಟಿಯ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ಮುಂದೆ 'ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ' ಎಂದು ನಾಮಕರಣ ಮಾಡಲಾಗಿದೆ. ನಿಲ್ದಾಣದ ನಾಮಕರಣ ಹಕ್ಕುಗಳು ಹಾಗೂ ನಿರ್ಮಾಣ ವೆಚ್ಚಕ್ಕೆ ಕೊಡುಗೆಯನ್ನು ಒಳಗೊಂಡಿರುವ ಈ ವ್ಯವಸ್ಥೆಯಿಂದ ಬಿಎಂಆರ್‌ಸಿಎಲ್‌ಗೆ ಒಟ್ಟು 65 ಕೋಟಿ ರೂ. ಆದಾಯ ದೊರೆಯಲಿದೆ.

ಬೆಂಗಳೂರು, ನ.5: ಬಿಎಂಆರ್‌ಸಿಎಲ್ (BMRCL)ವು ಹೊರ ವರ್ತುಲ ರಸ್ತೆ (ORR) ಮೆಟ್ರೋ ಕಾರಿಡಾರ್‌ನ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾದ ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಜಾಗತಿಕ ತಂತ್ರಜ್ಞಾನ ಸಂಸ್ಥೆ ಇನ್‌ಮೊಬಿ ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಇಬ್ಬಲೂರು ಮೆಟ್ರೋ ನಿಲ್ದಾಣಕ್ಕೆ “ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ” ಎಂದು ಹೆಸರಿಡಲಾಗುತ್ತದೆ.
ಮಾಧ್ಯಮ ಪ್ರಕಟಣೆಯ ಪ್ರಕಾರ, ನಿಲ್ದಾಣದ ನಾಮಕರಣ ಹಕ್ಕುಗಳು ಹಾಗೂ ನಿರ್ಮಾಣ ವೆಚ್ಚಕ್ಕೆ ಕೊಡುಗೆಯನ್ನು ಒಳಗೊಂಡಿರುವ ಈ ವ್ಯವಸ್ಥೆಯಿಂದ ಬಿಎಂಆರ್‌ಸಿಎಲ್‌ಗೆ ಒಟ್ಟು 65 ಕೋಟಿ ರೂ. ಆದಾಯ ದೊರೆಯಲಿದೆ. ಹೊರ ವರ್ತುಲ ರಸ್ತೆಯ ಇಬ್ಬಲೂರು ಮೆಟ್ರೋ ಕಾರಿಡಾರ್‌ನ ಎರಡೂ ಬದಿಗಳಲ್ಲಿರುವ ಸಾಲು ಸಾಲು ಐಟಿ ಹಾಗೂ ತಂತ್ರಜ್ಞಾನ ಕಂಪನಿಗಳ ಸಾವಿರಾರು ಉದ್ಯೋಗಿಗಳ ಪ್ರಯಾಣದ ಅಗತ್ಯಗಳನ್ನು ಈ ನಿಲ್ದಾಣ ಪೂರೈಸಲಿದ್ದು, ಮೆಟ್ರೋ ಜಾಲಕ್ಕೆ ಸುಲಭ ಪ್ರವೇಶ ಕಲ್ಪಿಸಲಿದೆ. ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಿ.ಸಿ. ಜಾಫರ್ (ಐಎಎಸ್) ಹಾಗೂ ಇನ್‌ಮೊಬಿಯ ಜಾಗತಿಕ ಹಿರಿಯ ಉಪಾಧ್ಯಕ್ಷ ಹಾಗೂ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಮತ್ತು ಸಾರ್ವಜನಿಕ ನೀತಿ ಅಧಿಕಾರಿ ಡಾ. ಸುಬಿ ಚತುರ್ವೇದಿ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
BMRCL Signs MoU with InMobi for Naming Rights of Ibbaluru Metro Station / ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಇನ್ಮೊಬಿಯೊಂದಿಗೆ ಬಿಎಂಆರ್‌ಸಿಎಲ್ ಒಪ್ಪಂದ. ಹೆಚ್ಚಿನ ವಿವರಿಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ . https://t.co/fpQrwYhJRu
— ನಮ್ಮ ಮೆಟ್ರೋ (@OfficialBMRCL) November 5, 2026
“ಭಾರತದ ಮೊದಲ ಡಬಲ್ ಯೂನಿಕಾರ್ನ್ ಕಂಪನಿಯಾದ ಇನ್‌ಮೊಬಿಯನ್ನು ಬೆಂಗಳೂರಿನ ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಮ್ಮ ಪಾಲುದಾರರಾಗಿ ಸ್ವಾಗತಿಸಲು ಸಂತೋಷವಾಗುತ್ತಿದೆ. ₹65 ಕೋಟಿಯ ಈ ಒಪ್ಪಂದವು ಮೂಲಸೌಕರ್ಯ ಬೆಂಬಲದೊಂದಿಗೆ ಬಿಎಂಆರ್‌ಸಿಎಲ್‌ನ ಪ್ರಯಾಣಿಕೇತರ ಆದಾಯ ಉಪಕ್ರಮಗಳಿಗೂ ಬಲ ನೀಡಲಿದೆ.” ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಸಿ. ಜಾಫರ್ ಹೇಳಿದ್ದಾರೆ.
ಇನ್ನು ಇನ್‌ಮೊಬಿ ಸಂಸ್ಥಾಪಕ ಹಾಗೂ ಸಿಇಒ “ಬೆಂಗಳೂರು ಇನ್‌ಮೊಬಿಗೆ ಜಾಗತಿಕ ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಆತ್ಮವಿಶ್ವಾಸ ನೀಡಿದೆ. ನಮಗೆ ಪ್ರಯಾಣಕ್ಕೆ ದಾರಿ ಮಾಡಿಕೊಟ್ಟ ಈ ನಗರಕ್ಕೆ ಮರಳಿ ಕೊಡುಗೆ ನೀಡುವುದು ನಮ್ಮ ಬದ್ಧತೆಯಾಗಿದೆ. ನಗರಕ್ಕೆ ಕೊಡುಗೆ ನೀಡುವುದಕ್ಕೂ ನಾವು ಬದ್ಧರಾಗಿದ್ದೇವೆ.” ಎಂದು ಹೇಳಿದ್ದಾರೆ. “ನಗರ ನಿರ್ಮಾಣಕ್ಕೆ ಅಗತ್ಯವಾದ ತಾಳ್ಮೆ ಮತ್ತು ಜವಾಬ್ದಾರಿಯೊಂದಿಗೆ ಬೆಂಗಳೂರಿನ ಭವಿಷ್ಯಕ್ಕೆ ನಾವು ಬದ್ಧರಾಗಿದ್ದೇವೆ. ಹಲವು ತಲೆಮಾರುಗಳ ಜನರಿಗೆ ಸೇವೆ ಸಲ್ಲಿಸುವ ಮೂಲಸೌಕರ್ಯದ ಮೂಲಕ ದೀರ್ಘಕಾಲೀನ ಸಾರ್ವಜನಿಕ ಮೌಲ್ಯವನ್ನು ಸೃಷ್ಟಿಸುವುದು ನಮ್ಮ ಉದ್ದೇಶ.” ಎಂದು ಇನ್‌ಮೊಬಿನ ಹಿರಿಯ ಉಪಾಧ್ಯಕ್ಷ ಡಾ. ಸುಬಿ ಚತುರ್ವೇದಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಂಕ್ ಲೈನ್: ಪೀಕ್ ಅವರ್‌ನಲ್ಲಿ ಪ್ರತಿ 8 ನಿಮಿಷಕ್ಕೊಂದು ರೈಲು ಸಂಚಾರ, ಆರಂಭದಲ್ಲಿ ನಾಲ್ಕು ರೈಲುಗಳ ನಿಯೋಜನೆ
ಒಆರ್‌ಆರ್ ಮೆಟ್ರೋ ಕಾರಿಡಾರ್‌ನಲ್ಲಿರುವ ಇತರ ಬ್ರ್ಯಾಂಡಿಂಗ್ ಒಪ್ಪಂದಗಳು:
ಹೊರ ವರ್ತುಲ ರಸ್ತೆ (ORR) ಕಾರಿಡಾರ್‌ನಲ್ಲಿರುವ ಇತರ ಮೂರು ಮೆಟ್ರೋ ನಿಲ್ದಾಣಗಳ ನಾಮಕರಣ ಹಕ್ಕುಗಳಿಗಾಗಿ ಬಿಎಂಆರ್‌ಸಿಎಲ್ ಈಗಾಗಲೇ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರೆಸ್ಟೀಜ್ ಗ್ರೂಪ್ ಬೆಳ್ಳಂದೂರು ಮೆಟ್ರೋ ನಿಲ್ದಾಣ, ಎಂಬಸಿ ಗ್ರೂಪ್ ಕಡುಬೀಸನಹಳ್ಳಿ ಮೆಟ್ರೋ ನಿಲ್ದಾಣ, ಬಾಗ್ಮನೆ ಗ್ರೂಪ್ ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣ ಒಪ್ಪಂದವನ್ನು ಮಾಡಿಕೊಂಡಿದೆ. ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ವಿಸ್ತರಣೆಗೆ ಬೆಂಗಳೂರಿನ ಕಾರ್ಪೊರೇಟ್ ವಲಯದಿಂದ ಹೆಚ್ಚುತ್ತಿರುವ ಈ ಸಹಭಾಗಿತ್ವಗಳು ಮೆಟ್ರೋ ಜಾಲವನ್ನು ಬಲಪಡಿಸುವುದರ ಜೊತೆಗೆ ಬಿಎಂಆರ್‌ಸಿಎಲ್‌ಗೆ ಪ್ರಯಾಣಿಕೇತರ ಆದಾಯವನ್ನು ಸೃಷ್ಟಿಸಲು ಸಹಕಾರಿಯಾಗಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




