TV9 Kannada News Live: ಮಳೆ ಕೊರತೆಯಿಂದ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಗೂ ಬರ ಸಾಧ್ಯತೆ
Karnataka News Today Live Updates: ಮುಂಬೈ ಸರಣಿ ಹತ್ಯಾಕಾಂಡದ ಭೀಕರ ಸಂಚು ಭೇದಿಸಿದ ಪೊಲೀಸರು! ಇತ್ತ ಬೆಂಗಳೂರಿನಲ್ಲಿ ಮೊದಲ ದಿನವೇ 11 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿ ದಾಖಲೆ ಬರೆಯಲಾಗಿದೆ. ಪ್ರಿಯಾ ಸುದೀಪ್ ಅವರಿಂದ ಹೊಸ ಕಥೆಗಾರರಿಗೆ ಸುವರ್ಣ ಅವಕಾಶ. ದೇಶ-ವಿದೇಶ, ಸಿನಿಮಾ ಹಾಗೂ ರಾಜ್ಯದ ಇಂದಿನ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ ಇಲ್ಲಿದೆ.

ಕೇಂದ್ರ ಸರ್ಕಾರವು ಆನ್‌ಲೈನ್ ವಂಚನೆ ತಡೆಗೆ ವಾಟ್ಸಾಪ್ ಬೆನ್ನಲ್ಲೇ ಈಗ ಟೆಲಿಗ್ರಾಮ್ ಮತ್ತು ಸಿಗ್ನಲ್ ಆ್ಯಪ್‌ಗಳ ‘ಯೂಸರ್ ನೇಮ್’ ವೈಶಿಷ್ಟ್ಯದ ವಿರುದ್ಧ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ. ಇತ್ತ ಕ್ರಿಕೆಟ್ ಅಂಗಳದಲ್ಲಿ, ಭಾರತ-ಇಂಗ್ಲೆಂಡ್ 2ನೇ ಟಿ20 ಪಂದ್ಯದಲ್ಲಿ ಯುವ ಆಟಗಾರ ವೈಭವ್‌ಗೆ ಅವಕಾಶ ಸಿಗಲ್ಲ, ಸಂಜುಗೇ ಚಾನ್ಸ್ ಎಂದು ದಿನೇಶ್ ಕಾರ್ತಿಕ್ ಭವಿಷ್ಯ ನುಡಿದಿದ್ದಾರೆ. ಇನ್ನು ಸಿನಿಮಾ ರಂಗದಲ್ಲಿ, ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಹೆಸರು ಫ್ರಾನ್ಸ್‌ನ ಪ್ರತಿಷ್ಠಿತ ಲುಮಿಯೆರ್ ಮ್ಯೂಸಿಯಂನ ‘ವಾಲ್ ಆಫ್ ಫಿಲ್ಮ್ ಮೇಕರ್ಸ್’ ಸೇರುವ ಮೂಲಕ ಜಾಗತಿಕ ಗೌರವ ಪಾತ್ರವಾಗಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಎಸ್ಐಆರ್ ಕರ್ತವ್ಯಕ್ಕೆ ಗೈರಾಗಿದ್ದ ಅಧಿಕಾರಿ ಅಮಾನತು
ರಾಜ್ಯದಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. ಇದರ ಮಧ್ಯೆ ಎಸ್ಐಆರ್ ಕರ್ತವ್ಯಕ್ಕೆ ಗೈರಾಗಿದ್ದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಬೆಸ್ಕಾಂ ಕಿರಿಯ ಅಭಿಯಂತರ ಯೋಗೀಶ್ ಗೌಡ ಅವರನ್ನ ಅಮಾನತು ಮಾಡಿ ಬೆಂಗಳೂರಿನ ಕೆ.ಆರ್.ಪುರಂ ವಿಭಾಗದ ಬೆಸ್ಕಾಂ ಜೆಇ ಆದೇಶಿಸಿದ್ದಾರೆ. ಮತಗಟ್ಟೆ ಅಧಿಕಾರಿಯಾಗಿ ನಿಯೋಜನೆಯಾಗಿದ್ದ ಯೋಗೀಶ್ ಗೌಡ, 4 ದಿನವಾದರೂ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಹೀಗಾಗಿ ಸಹಾಯಕ ಮತದಾರರ ನೋಂದಣಾಧಿಕಾರಿ ಶಿಫಾರಸಿನಂತೆ ಸಸ್ಪೆಂಡ್ ಮಾಡಲಾಗಿದೆ.
-
ಮಳೆ ಕೊರತೆಯಿಂದ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಗೂ ಬರ ಸಾಧ್ಯತೆ
ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಆತಂಕಗೊಂಡಿದ್ದಾರೆ. ಅಷ್ಟೇ ಅಲ್ಲದೇ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರು ಇಂದು(ಜುಲೈ 03) ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆತಂಕ ಹೊರಹಾಕಿದ್ದು, ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಇತರೆ ಮೂಲಗಳ ಉತ್ಪಾದನೆಗೆ ತುರ್ತು ಗಮನ ಹರಿಸಬೇಕು. ಸಾರ್ವಜನಿಕ ಬಳಕೆಗೆ ತೊಂದ್ರೆ ಆಗದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
-
-
ಬ್ರೇಕ್ ಫೇಲಾಗಿ ಮರಕ್ಕೆ ಡಿಕ್ಕಿಹೊಡೆದ ಸರ್ಕಾರಿ ಬಸ್
ಸರ್ಕಾರಿ ಬಸ್ ಬ್ರೇಕ್ ಫೇಲಾಗಿ ಮರಕ್ಕೆ ಡಿಕ್ಕಿಹೊಡೆದಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಬಳಿ ನಡೆದಿದ್ದು, ಘಟನೆಯಲ್ಲಿ ಬಸ್ನಲ್ಲಿದ್ದ 13 ವಿದ್ಯಾರ್ಥಿಗಳು ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗೊಂಡಿದ್ದು, ಅವರನ್ನು ಜಿಮ್ಸ್ಗೆ ಶಿಫ್ಟ್ ಮಾಡಲಾಗಿದೆ.90ಕ್ಕೂ ಹೆಚ್ಚು ಜನರು ಇದ್ದ ಬಸ್ ಲಕ್ಷ್ಮೇಶ್ವರದಿಂದ ಬಾಲೆಹೊಸೂರಿಗೆ ಹೋಗುತ್ತಿದ್ದ ವೇಳೆ ಶಿಗ್ಲಿ-ದೊಡ್ದೂರು ಬಳಿ ಬ್ರೇಕ್ ಫೇಲಾಗಿ ಈ ದುರ್ಘಟನೆ ಸಂಭವಿಸಿದೆ.
-
ಸನ್ನಡತೆ ಆಧಾರದಲ್ಲಿ 24 ಕೈದಿಗಳಿಗೆ ಬಿಡುಗಡೆ ಭಾಗ್ಯ
ಸನ್ನಡತೆ ಆಧಾರದಲ್ಲಿ ಕರ್ನಾಟಕದ ವಿವಿಧ ಜೈಲಿನಲ್ಲಿರುವ ಒಟ್ಟು 24 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸ್ತಿದ್ದ 24 ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಅದರಂತೆ ನಾಳೆ (ಜುಲೈ 04) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
-
ಚಿತ್ರದುರ್ಗ ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ಕೆಲ ಹೊತ್ತಿನಲ್ಲೇ ರದ್ದು
ಚಿತ್ರದುರ್ಗ ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ಕೆಲ ಹೊತ್ತಿನಲ್ಲೇ ರದ್ದಾಗಿದೆ. ಚಿತ್ರದುರ್ಗ ಜಿಲ್ಲಾಧಿಕಾರಿ ಟಿ ವೆಂಕಟೇಶ್ ವರ್ಗಾವಣೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಜಿಲ್ಲಾಧಿಕಾರಿಯಾಗಿ ರಮ್ಯ ಎಸ್ ನೇಮಿಸಿ ಆದೇಶಿಸಲಾಗಿತ್ತು. ಆದ್ರೆ, ಈ ಆದೇಶ ಕೆಲವೇ ಹೊತ್ತಿನಲ್ಲೇ ರದ್ದಾಗಿದೆ. SIR ಚಾಲ್ತಿಯಲ್ಲಿರುವ ಕಾರಣ ಭಾರತ ಚುನಾವಣೆ ಆಯೋಗದ ಸಹಮತಿ ಇಲ್ಲದಿದ್ದರಿಂದ ಆದೇಶ ರದ್ದು ಮಾಡಲಾಗಿದೆ.
-
-
ವಚನಾನಂದಶ್ರೀ ವಿರುದ್ಧದ ಪೋಕ್ಸೋ ಕೇಸ್ ವಿಚಾರಣೆ ಮುಂದೂಡಿಕೆ
ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ದಾವಣಗೆರೆ ಕೋರ್ಟ್ ನಾಳೆಗೆ (ಜುಲೈ 04) ಮುಂದೂಡಿದೆ. ವಚನಾನಂದಶ್ರೀ ಪರ ವಕೀಲ ಎಸ್.ವಿ.ಪಾಟೀಲ್ ವಾದ ಮಂಡಿಸಿದರು. ಇನ್ನು ನಾಳೆ ಸಂತ್ರಸ್ತ ಬಾಲಕನ ಪರ ವಕೀಲರಿಂದ ವಾದ ಮಂಡನೆಗೆ ಅವಕಾಶ ಕೇಳಿದ್ದಾರೆ. ಹೀಗಾಗಿ ಕೋರ್ಟ್, ವಿಚಾರಣೆಯನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ.
-
ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಬೆದರಿಕೆ ಹಾಕಿದ್ದವ ಪತ್ತೆ
ಬೆಂಗಳೂರಲ್ಲಿ ಇಸ್ರೋ ಕೇಂದ್ರ ಕಚೇರಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬೆದರಿಕೆ ಹಾಕಿದ್ದ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿದ್ದು, ಗಾಜಿಯಾಬಾದ್ ನ ನಿಶಾಂತ್ ತ್ಯಾಗಿ (36) ಎಂಬಾತನನ್ನು ಬೆಂಗಳೂರಿನ ಸಂಜಯ್ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿಕೊಂಡಿದ್ದಾರೆ. ಇನ್ನು ವಿಚಾರಣೆ ವೇಳೆ ಆತನ ಮೊಬೈಲ್ ಪರಿಶೀಲನೆ ಮಾಡಿದ ವೇಳೆ ಹುಸಿ ಬೆದರಿಕೆ ಇ ಮೇಲ್ ಮಾಡಿರುವುದು ದೃಢವಾಗಿದೆ. ಆದರೆ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ತಿಳಿದುಬಂದಿದ್ದು, ಸದ್ಯ ವಶಕ್ಕೆ ಪಡೆದು ಸ್ಥಳೀಯ ಪೊಲೀಸರ ಜತೆ ವಿಚಾರಣೆ ನಡೆಸಿದ್ದಾರೆ.
-
ಎಸ್ಕೇಪ್ ಆಗಿದ್ದ ಪೋಕ್ಸೋ ಆರೋಪಿ ಕೊನೆಗೂ ಅರೆಸ್ಟ್
ಕಲಬುರಗಿಯ ಅಫಜಲಪುರ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಪೋಕ್ಸೋ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರಕ್ಕೆ ಪರಾರಿಯಾಗಲು ಮುಂದಾಗಿದ್ದ ಆರೋಪಿ ಮಂಜುನಾಥ್ ನನ್ನು ತೆಲ್ಲೂರಿನಲ್ಲಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಹಾರಾಷ್ಟ್ರಕ್ಕೆ ಎಸ್ಕೇಪ್ ಆಗಲು ಮುಂದಾಗಿದ್ದ ಎಂದು ತಿಳಿದುಬಂದಿದೆ. ಸದ್ಯ ಪೋಕ್ಸೋ ಪ್ರಕರಣದ ಆರೋಪಿ ಮಂಜುನಾಥ್ ವಿರುದ್ಧ ಮತ್ತೊಂದು ಕೇಸ್ ದಾಖಲಿಸಲಾಗಿದೆ.
-
ನರೇಗಲ್ಲ ಗ್ರಾಮದಲ್ಲಿ ಗಲಾಟೆ: ಸ್ಪಷ್ಟನೆ ನೀಡಿದ ಮುಸ್ಲಿಮರು
ಹಾವೇರಿ ಜಿಲ್ಲೆಯ ನರೇಗಲ್ಲ ಗ್ರಾಮದಲ್ಲಿ ಕಾರಹುಣ್ಣಿಮೆ ವೇಳೆ ಹೋರಿ ಓಡಿಸುವಾಗ ಹಿಂದೂಗಳ ಮೇಲೆ ಮುಸ್ಲಿಮರಿಂದ ಹಲ್ಲೆ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಮುಸ್ಲಿಂ ಸಮುದಾಯ ಸ್ಪಷ್ಟನೆ ನೀಡಿದೆ. ಇದು ವೈಯುಕ್ತಿಕ ವಿಚಾರಕ್ಕೆ ನಡೆದಿರುವ ಗಲಾಟೆಯಾಗಿದೆ. ಆದ್ರೆ, ಪ್ರಕರಣವನ್ನ ಕೋಮುಗಲಭೆ ಎಂದು ಬಿಂಬಿಸಲಾಗ್ತಿದೆ. ಇದರಿಂದ ಮುಸ್ಲಿಮ್ ಸಮುದಾಯಕ್ಕೆ ತೀವ್ರ ಬೇಸರವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಮುಸ್ಲಿಂ ಮುಖಂಡರು ಸ್ಪಷ್ಟಪಡಿಸಿದ್ದಾರೆ.
-
ಪಾಕ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎಚ್ಚರಿಕೆ
ಭಯೋತ್ಪಾದನೆ ಚಟುವಟಿಕೆ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎಚ್ಚರಿಕೆ ನೀಡಿದೆ. ಪಾಕಿಸ್ತಾನವು ಭಯೋತ್ಪಾದನೆ ಚಟುವಟಿಕೆಗಳನ್ನು ನಿಲ್ಲಿಸದ ಹೊರತು ಸಿಂಧೂ ನದಿ ನೀರು ಒಪ್ಪಂದದ ಕುರಿತ ಭಾರತದ ನಿಲುವು ಬದಲಾಗಲ್ಲ. ಪಾಕಿಸ್ತಾನವು ಎಲ್ಲಿಯವರೆಗೆ ಭಯೋತ್ಪಾದನೆಯನ್ನ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಭಾರತದ ನಿಲುವಿನಲ್ಲಿ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
-
ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್‌ಗೆ ಹಿನ್ನಡೆ: ಆದೇಶ ತಿದ್ದುಪಡಿ ಅರ್ಜಿ ತಿರಸ್ಕೃತ
ನಟ ದರ್ಶನ್ ಸಲ್ಲಿಸಿದ್ದ ಆದೇಶ ತಿದ್ದುಪಡಿ ಅರ್ಜಿಯನ್ನು ಸುಪ್ರೀಂಕೋರ್ಟ್ ರಿಜಿಸ್ಟರ್ ತಿರಸ್ಕರಿಸಿದ್ದಾರೆ. ಕಳೆದ ಬಾರಿ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ, ಒಂದು ವರ್ಷದವರೆಗೆ ಜಾಮೀನು ಕೋರುವಂತಿಲ್ಲ ಎಂದು ಸೂಚಿಸಲಾಗಿತ್ತು. ಈ ಆದೇಶವನ್ನು ಮಾರ್ಪಡಿಸಿ, ‘ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರಲು ಅವಕಾಶ ನೀಡಿ’ ಎಂದು ದರ್ಶನ್ ಮನವಿ ಮಾಡಿದ್ದರು. ಆದರೆ, ಈ ಅರ್ಜಿಯು ವಿಚಾರಣೆಗೆ ಅರ್ಹವಲ್ಲ ಎಂದು ತಿಳಿಸಿ ರಿಜಿಸ್ಟರ್ ಅದನ್ನು ತಿರಸ್ಕರಿಸಿದ್ದು, ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ವಕೀಲರಿಗೆ ಮಾಹಿತಿ ನೀಡಿದ್ದಾರೆ.
-
ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಹೆಚ್.ಡಿ.ಕುಮಾರಸ್ವಾಮಿ!
ಬೆಂಗಳೂರಿನ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಎಸ್‌ಐಆರ್ (SIR) ಪ್ರಕ್ರಿಯೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಯಶವಂತಪುರ ಕ್ಷೇತ್ರಕ್ಕೆ ಸೇರಿದ ಈ ವಿಡಿಯೋದಲ್ಲಿ, ಶಾಸಕ ಎಸ್.ಟಿ. ಸೋಮಶೇಖರ್ ಅವರ ಭಾವಚಿತ್ರವಿರುವ ಪುಸ್ತಕವನ್ನು ಹಿಡಿದುಕೊಂಡು ಬಿಎಲ್‌ಒಗಳು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವುದು ಬಹಿರಂಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.
-
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಇಂದು ಕುಟುಂಬ ಸಮೇತ ಆಂಧ್ರಪ್ರದೇಶದ ತಿರುಮಲಕ್ಕೆ ಭೇಟಿ ನೀಡಿ, ಕಲಿಯುಗದ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನಕ್ಕೆ ಆಗಮಿಸಿದ ರಾಜ್ಯಪಾಲರನ್ನು ಆಡಳಿತ ಮಂಡಳಿ ಆತ್ಮೀಯವಾಗಿ ಬರಮಾಡಿಕೊಂಡಿತು. ದರ್ಶನದ ಬಳಿಕ ದಂಪತಿಗೆ ಅರ್ಚಕರು ವೇದ ಆಶೀರ್ವಾದ ನೀಡಿ, ಪ್ರಸಾದ ವಿನಿಯೋಗ ಮಾಡಿದರು.
-
ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ: ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ
ರಾಮನಗರ ಸೇರಿದಂತೆ ರಾಜ್ಯದ ಹಲವೆಡೆ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಮತದಾರರ ಸಂಖ್ಯೆ ಹೆಚ್ಚಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಮನೆಯಿಂದಲೇ ಅಕ್ರಮ ಆರಂಭಿಸಿದ್ದಾರೆ ಎಂದು ಕಿಡಿಕಾರಿದ ಅವರು, ಪಶ್ಚಿಮ ಬಂಗಾಳದ ಮಾದರಿಯಲ್ಲಿ ಬೇರೆ ರಾಜ್ಯದ ಅಧಿಕಾರಿಗಳನ್ನು ಕರೆಸಿ ಪ್ರಕ್ರಿಯೆ ನಡೆಸುವಂತೆ ದಾಖಲೆ ಸಹಿತ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.
-
ಠಾಣೆಯಿಂದ ಪೋಕ್ಸೋ ಆರೋಪಿ ಪರಾರಿ: ಮೂವರು ಪೊಲೀಸರು ಅಮಾನತು
ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಿಂದ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾದ ಹಿನ್ನೆಲೆಯಲ್ಲಿ, ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿ ರಾತ್ರಿ ಪಾಳಿಯಲ್ಲಿದ್ದ ಮೂವರು ಕಾನ್ಸ್‌ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಠಾಣಾಧಿಕಾರಿ ರವಿ, ಸೆಂಟ್ರಿ ಪ್ರಶಾಂತ್ ಹಾಗೂ ಶಿವಣ್ಣ ಅವರನ್ನು ಅಮಾನತುಗೊಳಿಸಿ ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಆದೇಶ ಹೊರಡಿಸಿದ್ದು, ಪಿಎಸ್‌ಐ ಹಾಗೂ ಸಿಪಿಐಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
-
ಸಿಆರ್‌ಪಿಎಫ್ ವಾಹನ ಪಲ್ಟಿ: 6 ಯೋಧರಿಗೆ ಗಂಭೀರ ಗಾಯ
ಜಮ್ಮು-ಕಾಶ್ಮೀರದ ಗಂಡೇರ್‌ಬಲ್ ಜಿಲ್ಲೆಯ ಸೋನ್‌ಮಾರ್ಗ್ ಸುರಂಗದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸಿಆರ್‌ಪಿಎಫ್ (CRPF) ಸೇನಾ ವಾಹನವೊಂದು ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಆರು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
-
ಅಂಜನಾದ್ರಿ ಬೆಟ್ಟಕ್ಕೆ ರಾಹುಲ್ ದ್ರಾವಿಡ್ ದಂಪತಿ ಭೇಟಿ
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಪತ್ನಿ ಸಮೇತ ಹನುಮನ ಜನ್ಮಭೂಮಿ ಎಂದೇ ಪ್ರಸಿದ್ಧವಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ದ್ರಾವಿಡ್ ದಂಪತಿ 575 ಮೆಟ್ಟಿಲುಗಳನ್ನು ಹತ್ತಿ ಆಂಜನೇಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
-
ಸಲ್ಮಾನ್ ಖಾನ್ ಕೃಷ್ಣಮೃಗ ಪ್ರಕರಣದ ಸಿನಿಮಾ: 8000 ಸ್ಕ್ರೀನ್‌ಗಳಲ್ಲಿ ಬಿಡುಗಡೆಗೆ ನಿರ್ಮಾಪಕ ಪಟ್ಟು
ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಭೇಟೆ ಪ್ರಕರಣದ ಕಥೆಯುಳ್ಳ ‘ಕಾಲಾ ಹಿರನ್’ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರದ ಬಿಡುಗಡೆ ತಡೆಯಲು ಸಲ್ಮಾನ್ ಖಾನ್ ಕಾನೂನು ತಂಡ ತೀವ್ರ ಪ್ರಯತ್ನ ನಡೆಸುತ್ತಿದ್ದರೂ, ನಿರ್ಮಾಪಕರು ಮಾತ್ರ ಪಟ್ಟು ಸಡಿಸಿಲ್ಲ. 8000 ಸ್ಕ್ರೀನ್‌ಗಳಲ್ಲಿ ಅತ್ಯಂತ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಮಾಡುವುದಾಗಿ ಅವರು ಘೋಷಿಸಿದ್ದಾರೆ.
-
ಅಕ್ರಮ ಮತದಾರರ ಪಟ್ಟಿ ಆರೋಪ: ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ಪತ್ರ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ರಮ ಮತದಾರರ ಪಟ್ಟಿ ಸಿದ್ಧಪಡಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜಿಬಿಎ ವ್ಯಾಪ್ತಿಯ 27 ವಾರ್ಡ್‌ಗಳಲ್ಲಿ ಪ್ರತ್ಯೇಕ ಎಸ್‌ಐಆರ್ (SIR) ನಡೆಸಿ ಗೊಂದಲ ಸೃಷ್ಟಿಸುತ್ತಿರುವ ವಿರುದ್ಧ ಹಾಗೂ ಬಾಂಗ್ಲಾದೇಶಿಯರನ್ನು ಸಕ್ರಮಗೊಳಿಸಲು ಮಸೀದಿ, ಶಾದಿ ಮಹಲ್‌ಗಳಲ್ಲಿ ಫಾರ್ಮ್ ವಿತರಿಸುತ್ತಿರುವುದನ್ನು ತಡೆಯುವಂತೆ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಪತ್ರಗಳನ್ನು ಬರೆದಿದ್ದಾರೆ.
-
ಬೆಂಗಳೂರು ವ್ಯವಸ್ಥೆ ಸುಧಾರಣೆಗೆ ಕೃಷ್ಣ ಬೈರೇಗೌಡ ಕರೆ
ನಗರದಲ್ಲಿ ಫುಟ್ಪಾತ್ ತೆರವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ವಹಿಸಿಕೊಂಡ ಜವಾಬ್ದಾರಿಗೆ ನ್ಯಾಯ ಒದಗಿಸದೆ, ಹತ್ತಿದ ಕುದುರೆ ಇಳಿಯುವ ಜಾಯಮಾನ ನನ್ನದಲ್ಲ ಎಂದು ತಿಳಿಸಿದ್ದಾರೆ. ಜಿಬಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಜನರಿಗೆ ಅತ್ಯುತ್ತಮ ಸಹಕಾರದ ಅಗತ್ಯವಿದ್ದು, ನಗರದ ವ್ಯವಸ್ಥೆ ಸುಧಾರಿಸಲು ಟ್ರಾಫಿಕ್ ಪೊಲೀಸ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಒಟ್ಟಾಗಿ, ಸಮನ್ವಯದಿಂದ ಕೆಲಸ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
-
ಪುನೀತ್ ಕೆರೆಹಳ್ಳಿ ಬಂಧನ
ಮೌಲ್ವಿಗಳಿಗೆ ನಿಂದನೆ ಮಾಡಿದ ಆರೋಪದ ಮೇಲೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಕುಮಾರಸ್ವಾಮಿ ಲೇಔಟ್ (ಕೆ.ಎಸ್. ಲೇಔಟ್) ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರಜಾಕ್ ಎಂಬುವವರು ನೀಡಿದ ದೂರಿನ ಮೇರೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇವರನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.
-
ಸಿಎಂ ಡಿಕೆಶಿ-ಸಿದ್ದರಾಮಯ್ಯ ಭೇಟಿ: ಸಂಪುಟ ವಿಸ್ತರಣೆ ಚರ್ಚೆ?
ಕನಕಪುರಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಕಾವೇರಿ’ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಚಿವರ ಎರಡನೇ ಪಟ್ಟಿ ಬಿಡುಗಡೆ ಹಾಗೂ ಸಂಪುಟ ವಿಸ್ತರಣೆ ಕುರಿತು ಉಭಯ ನಾಯಕರು ಚರ್ಚಿಸಿರುವ ಸಾಧ್ಯತೆಯಿದೆ. ಈ ವಿಷಯವಾಗಿ ಶೀಘ್ರದಲ್ಲೇ ಇಬ್ಬರೂ ನಾಯಕರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
-
ಟಿಬಿ ಡ್ಯಾಂನಿಂದ ನೀರು ಸ್ಥಗಿತ: ರೈತರಲ್ಲಿ ಆತಂಕ
ಮುಂಗಾರು ಮಳೆ ಕೊರತೆಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಾಲುವೆಗಳಿಗೆ ನೀರು ಪೂರೈಕೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಮುಂಗಾರು ಬೆಳೆಗೆ ನೀರು ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕಳೆದ ವರ್ಷ ಕ್ರಸ್ಟ್ ಗೇಟ್ ಸಮಸ್ಯೆಯಿಂದ ಹಿಂಗಾರು ಕಳೆದುಕೊಂಡಿದ್ದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶದ ರೈತರು ಈಗ ಸತತ ಎರಡನೇ ಬಾರಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
-
ಮಾದಪಟ್ಟಣ ಕ್ವಾರಿ ದುರಂತ: ಮೂವರು ಆರೋಪಿಗಳ ಬಂಧನ
ಗುರುವಾರ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಕಾವೇರಿ ಕ್ವಾರಿಯಲ್ಲಿ ಕಲ್ಲುಬಂಡೆ ಬಿದ್ದು ಏಳು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಯಿ ರಾಮ್ ಕ್ರಷರ್ ಮಾಲೀಕ ಪಾಂಡುರಂಗ, ಕ್ವಾರಿ ಇನ್‌ಚಾರ್ಜ್ ಲೋಕೇಶ್ ಮತ್ತು ಲೋಕಲ್ ಇನ್‌ಚಾರ್ಜ್ ರಾಜು ಬಂಧಿತರು.
ಬಸವೇಶ್ವರ ಕ್ರಷರ್ ಅನ್ನು ಲೀಸ್‌ಗೆ ಪಡೆದಿದ್ದ ಪಾಂಡುರಂಗ ಸೇರಿದಂತೆ ಮೂವರನ್ನು ತನಿಖೆಗೆ ಒಳಪಡಿಸಲಾಗಿದೆ. ಕಾರ್ಮಿಕ ಗೋಪಿಕೃಷ್ಣನ್ ನೀಡಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಾಗಿತ್ತು. ಆದರೆ, ಕಾವೇರಿ ಕ್ರಷರ್ ಮಾಲೀಕ ಉದಯ್ ಶಂಕರ್ ಮತ್ತು ಬಸವೇಶ್ವರ ಕ್ರಷರ್ ಮಾಲೀಕ ಡಿ.ಆನಂದಸ್ವಾಮಿ ಇನ್ನೂ ಬಂಧನವಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮತ್ತಷ್ಟು ಓದಿ
Published On - Jul 03,2026 8:41 AM




