ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕು ಹೆಚ್ಚಳ: ಕೇಂದ್ರ ಸರ್ಕಾರ ಕಳವಳ

ಕರ್ನಾಟಕದಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 29.9ರಷ್ಟಿದೆ. ಗೋವಾದಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.48.5ರಷ್ಟಿದೆ‌. ಇದು ಚಿಂತೆಯ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕು ಹೆಚ್ಚಳ: ಕೇಂದ್ರ ಸರ್ಕಾರ ಕಳವಳ
ಕೇಂದ್ರ ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ


ದೆಹಲಿ: ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚೆನ್ನೈ, ಕೊಯಿಕ್ಕೋಡ್, ಗುರುಗ್ರಾಮ, ಮೈಸೂರು, ಚಿತ್ತೂರು ಜಿಲ್ಲೆ ಮತ್ತು ನಗರಗಳಲ್ಲಿಯೂ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಆರತಿ ಅಹುಜಾ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ದೇಶದಲ್ಲಿ 4.14 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 12 ರಾಜ್ಯಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ. 7 ರಾಜ್ಯಗಳಲ್ಲಿ 50 ಸಾವಿರದಿಂದ ಒಂದು ಲಕ್ಷ ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ 29.9ರಷ್ಟಿದೆ. ಗೋವಾದಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.48.5ರಷ್ಟಿದೆ‌. ಇದು ಚಿಂತೆಯ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಈವರೆಗೆ 13.21 ಕೋಟಿ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 3.29 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದುವರೆಗೂ ಒಟ್ಟಾರೆ 16.50 ಕೋಟಿ ಡೋಸ್ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ 11.8 ಲಕ್ಷ ಡೋಸ್ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ 2ನೇ ಡೋಸ್ ಲಸಿಕೆ ನೀಡಲು ಹೆಚ್ಚಿನ‌ ಆದ್ಯತೆ ನೀಡಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ ಎಂದು ಅವರು ವಿವರಿಸಿದರು.

ಆಸ್ಪತ್ರೆಗಳಿಗೆ ನಿರಂತರ ವಿದ್ಯುತ್ ಪೂರೈಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ದೇಶದ ವಿವಿಧೆಡೆ 162 ಆಕ್ಸಿಜನ್ ಪ್ಲಾಂಟ್ ಮಂಜೂರು ಮಾಡಲಾಗಿದೆ. ಈಗಾಗಲೇ 71 ಘಟಕಗಳನ್ನು ಅವಳಡಿಸಲಾಗಿದೆ. 109 ಪ್ಲಾಂಟ್​ಗಳನ್ನು ಮೇ ತಿಂಗಳು ಮುಗಿಯುವುದರ ಒಳಗೆ ಅಳವಡಿಸಲಾಗುತ್ತದೆ. ಉಳಿದ ಆಕ್ಸಿಜನ್ ಪ್ಲಾಂಟ್​ಗಳ ಅವಳಡಿಕೆ ಕೆಲಸ ಜೂನ್ ತಿಂಗಳಲ್ಲಿ ಮುಗಿಯಲಿದೆ ಎಂದರು.

ವಿದೇಶಗಳಿಂದ ಹರಿದುಬರುತ್ತಿರುವ ನೆರವನ್ನು ಒಮ್ಮೆಲೆ ಎಲ್ಲ ರಾಜ್ಯಗಳಿಗೂ ಹಂಚಲು ಆಗುವುದಿಲ್ಲ. ಕೆಲವು ರಾಜ್ಯಗಳಿಗೆ ವಿದೇಶಿ ನೆರವು ಹಂಚಲಾಗಿದೆ. ಏಪ್ರಿಲ್ 27ರಿಂದಲೇ ವಿದೇಶಿ ನೆರವು ವಿವಿಧೆಡೆಗೆ ರವಾನೆಯಾಗುತ್ತಿದೆ. ಈವರೆಗೂ 11 ಸಾವಿರ ಉಪಕರಣಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. NDRFನಿಂದ ನಾಲ್ಕು ಆಕ್ಸಿಜನ್ ಪ್ಲಾಂಟ್ ಆಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿದೇಶಾಂಗ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರವಿ ಮಾತನಾಡಿ, ವಿದೇಶಗಳು ಭಾರತದೊಂದಿಗಿನ ಸದ್ಭಾವನೆಯ ಸಂಕೇತವಾಗಿ ನೆರವು ನೀಡುತ್ತಿವೆ. ನೆರವನ್ನು ವಿಶ್ಲೇಷಿಸಿ ವಿವಿಧೆಡೆಗೆ ರವಾನಿಸಲಾಗುತ್ತಿದೆ. ಅವರು ಕಳಿಸಿಕೊಟ್ಟ ವಸ್ತುಗಳನ್ನು ಹಂಚಿಕೆ ಮಾಡಿದ ಬಗ್ಗೆ ಸಂಬಂಧಿಸಿದ ದೇಶಗಳ ಸರ್ಕಾರಗಳಿಗೂ ಮಾಹಿತಿ ನೀಡಲಾಗುತ್ತಿದೆ. ವಿದೇಶದಿಂದ ಬಂದ ಯಾವೊಂದು ನೆರವು ಸಹ ಹಂಚಿಕೆಗೆ ಬಾಕಿ ಉಳಿದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನೀತಿ ಆಯೋಗದ ವಿ.ಕೆ.ಪೌಲ್ ಮತ್ತು ವಿಜಯ ರಾಘವನ್ ಭಾಗವಹಿಸಿದ್ದರು.

(Coronavirus infection increasing Bengaluru Mysuru Tumakuru Indian Govt Cautious About the Development)

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಮುಖಭಂಗ; ಆಕ್ಸಿಜನ್​ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್​ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ

ಇದನ್ನೂ ಓದಿ: ಕೊವಿಡ್​ 19 ಸೋಂಕಿಗೆ ನಲುಗಿರುವ ಭಾರತಕ್ಕೆ ಕೆನಡಾದಿಂದ ನೆರವು; ವೆಂಟಿಲೇಟರ್​, ರೆಮ್​ಡಿಸಿವರ್​ ಚುಚ್ಚುಮದ್ದು ರವಾನೆ