ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ: ಸಿಟಿ ಟ್ರಾಫಿಕ್ ಕಂಟ್ರೋಲ್ಗೆ ಹೈದರಾಬಾದ್ ಮಾದರಿಯ ಹೈಟೆಕ್ ಟೆಕ್ನಾಲಜಿ ಅಳವಡಿಕೆ
ನಗರದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸರ್ಕಾರ ಸರ್ಕಸ್ ಮಾಡುತ್ತಿದೆ. ಇತ್ತ ಕಳೆದ ಒಂದು ವರ್ಷದಲ್ಲಿ 40 ಲಕ್ಷ ವಾಹನಗಳ ಸಂಖ್ಯೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಬರೋಬ್ಬರಿ 1 ಕೋಟಿ 4ಲಕ್ಷದ 9 ಸಾವಿರದ 289 ವಾಹನಗಳಿವೆ.
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರು ಟ್ರಾಫಿಕ್ (Traffic) ನಿಯಂತ್ರಣಕ್ಕೆ ಡೆಡ್ ಲೈನ್ ನೀಡಿದ ಹಿನ್ನಲೆ ಸಿಟಿ ಟ್ರಾಫಿಕ್ ಕಂಟ್ರೋಲ್ಗೆ ಅತ್ಯಾಧುನಿಕ ಟೆಕ್ನಾಲಜಿಯನ್ನು ಬಿಟಿಪಿ ಅಳವಡಿಸುತ್ತಿದೆ. ಹೈದರಾಬಾದ್ನಲ್ಲಿ ಅಳವಡಿಸಿರುವ ಅಡಪ್ಟೀವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಮಾದರಿಯಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಪೊಲೀಸರು ತಯಾರಿ ಮಾಡಿದ್ದಾರೆ. ಬೆಂಗಳೂರಿನಲ್ಲೂ ಅಳವಡಿಕೆ ಮಾಡಲು ಸಂಚಾರಿ ಪೊಲೀಸರು ಯೋಜನೆ ಮಾಡಿದ್ದಾರೆ. ಖುದ್ದು ಟ್ರಾಫಿಕ್ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳಿಂದ ಸೂಚನೆ ನೀಡಲಾಗಿದೆ. ಆರು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪಿಎಂ ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಹೊಸ ತಂತ್ರಜ್ಞಾನ ಜೊತೆಗೆ ಹಲವು ಸಾಧ್ಯತೆಗಳ ಪರಿಶೀಲನೆ ಮಾಡಲಾಗುತ್ತಿದೆ.
ಅಡಪ್ಟೀವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಎಂದರೇನು?
ರಸ್ತೆ ಮೇಲೆ ನಿಂತಿರುವ ವಾಹನಗಳ ದಟ್ಟಣೆ ಮೇಲೆ ಟ್ರಾಫಿಕ್ ಸಿಗ್ನಲ್ಗಳ ನಿರ್ವಹಣೆ ಮಾಡಲಾಗುತ್ತದೆ. ಟ್ರಾಫಿಕ್ ಸಿಗ್ನಲ್ಗಳಲ್ಲಿ ಮ್ಯಾಗ್ನೆಟಿಕ್ ಸೆನ್ಸಾರ್ಗಳನ್ನು ಅಳವಡಿಸಿ ವಾಹನ ದಟ್ಟಣೆ ಅನುಗುಣವಾಗಿ ಸಿಗ್ನಲ್ ನಿರ್ವಹಣೆ ಮಾಡಲಾಗುತ್ತದೆ. ನಗರದ 214 ಸಿಗ್ನಲ್ಗಳಲ್ಲು ಅಡಪ್ಟೀವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಕೆಗೆ ಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಕೆಲ ಸಿಗ್ನಲ್ಗಳಲ್ಲಿ ATSC ಅಳವಡಿಕೆ ಕಾರ್ಯರಾಂಭವಾಗಿದ್ದು, ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಪೊಲೀಸರ ಶತಪ್ರಯತ್ನ ಮಾಡುತ್ತಿದ್ದಾರೆ. ಒಂದು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರೆ ಸ್ವಯಂ ಚಾಲಿತವಾಗಿ ಸಿಗ್ನಲ್ ತನ್ನ ಸಮಯ ಹೆಚ್ಚಿಸಿಕೊಳ್ಳುತ್ತದೆ. ವಾಹನ ದಟ್ಟಣೆ ಕಡಿಮೆ ಇದ್ದರೆ ಸ್ವಯಂ ಚಾಲಿತವಾಗಿ ಟೈಮ್ ಕಡಿಮೆ ಮಾಡಿಕೊಳ್ಳತ್ತೆ.
ಒಂದು ವರ್ಷದಲ್ಲಿ 40 ಲಕ್ಷ ವಾಹನಗಳ ಸಂಖ್ಯೆ ಏರಿಕೆ
ನಗರದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸರ್ಕಾರ ಸರ್ಕಸ್ ಮಾಡುತ್ತಿದ್ದು, ಬಿಬಿಎಂಪಿ, ಟ್ರಾಫಿಕ್ ಪೊಲೀಸ್, ಬೆಸ್ಕಾಂ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಂದ ನೈಟ್ ರೌಂಡ್ಸ್ ಹಾಕಲಾಗಿದೆ. ಆದರೆ ಇತ್ತ ಕಳೆದ ಒಂದು ವರ್ಷದಲ್ಲಿ 40 ಲಕ್ಷ ವಾಹನಗಳ ಸಂಖ್ಯೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಬರೋಬ್ಬರಿ 1 ಕೋಟಿ 4ಲಕ್ಷದ 9 ಸಾವಿರದ 289 ವಾಹನಗಳಿವೆ(1,04,09,289). ಕಳೆದ ಒಂದು ವರ್ಷದಲ್ಲಿ 3,98,701 ಹೊಸ ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗಿವೆ. ನಿತ್ಯ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಸುಮಾರು 3 ಲಕ್ಷ ವಾಹನಗಳ ಆಗಮಿಸುವುದರೊಂದಿಗೆ ನಿರ್ಗಮಿಸುತ್ತಿವೆ. ಒಂದು ಕೋಟಿ ವಾಹನಗಳಿಗೆ ಬೇಕಾದ ರೋಡ್ ಇನ್ಫ್ರಾಸ್ಟಕ್ಚರ್ ಬೆಂಗಳೂರಿನಲ್ಲಿ ಇಲ್ಲ. ಬಿಬಿಎಂಪಿಯಿಂದ 50 ಜಂಕ್ಷನ್ಗಳ ಅಭಿವೃದ್ಧಿಗೆ ತೀರ್ಮಾನ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಒಟ್ಟು 69,31,839 ಬೈಕ್ಗಳಿದ್ದು, 21,97,158 ಕಾರ್ಗಳಿವೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಶೇ. 3.80-4% ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ.
Published On - 8:54 am, Wed, 29 June 22