AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಇಸ್ರೋ ಪ್ರಧಾನ ಕಚೇರಿಗೆ 4 ದಿನಗಳಲ್ಲಿ 3ನೇ ಬಾರಿ ಬಾಂಬ್ ಬೆದರಿಕೆ

ISRO Bomb Threat Mail: ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಧಾನ ಕಚೇರಿಗೆ ನಾಲ್ಕು ದಿನಗಳಲ್ಲಿ ಮೂರನೇ ಬಾರಿ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ತನಿಖೆಯ ಬಳಿಕ ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ.

ಬೆಂಗಳೂರು: ಇಸ್ರೋ ಪ್ರಧಾನ ಕಚೇರಿಗೆ 4 ದಿನಗಳಲ್ಲಿ 3ನೇ ಬಾರಿ ಬಾಂಬ್ ಬೆದರಿಕೆ
ಇಸ್ರೋ (ಸಾಂದರ್ಭಿಕ ಚಿತ್ರ)Image Credit source: TV9 Network
ಗಣಪತಿ ಶರ್ಮಾ
|

Updated on:Jul 07, 2026 | 9:04 AM

Share

ಮುಖ್ಯಾಂಶಗಳು

  • ಇಸ್ರೋ ಕಚೇರಿಗೆ ಮೂರನೇ ಬಾಂಬ್ ಬೆದರಿಕೆ ಇಮೇಲ್
  • ಪೊಲೀಸ್ ಹಾಗೂ ಬಾಂಬ್ ತಜ್ಞರಿಂದ ತೀವ್ರ ಶೋಧ
  • ಕೊನೆಗೂ ಹುಸಿ ಎಂದು ಸಾಬೀತಾದ ಇಮೇಲ್ ಸಂದೇಶ

ಬೆಂಗಳೂರು, ಜುಲೈ 7: ರಾಜಧಾನಿ ಬೆಂಗಳೂರಿನ (Bengaluru) ನ್ಯೂ ಬಿಇಎಲ್ ರಸ್ತೆಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಧಾನ ಕಚೇರಿಗೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ಇಸ್ರೋ ಸಂಸ್ಥೆಗೆ ಬಂದಿರುವ ಮೂರನೇ ಬಾಂಬ್ ಬೆದರಿಕೆ ಇಮೇಲ್ ಇದಾಗಿದೆ. ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಇಸ್ರೋ ಸಿಬ್ಬಂದಿ ಇಂಗ್ಲಿಷ್‌ನಲ್ಲಿ ಬಂದಿದ್ದ ಈ ಇಮೇಲ್ ಗಮನಿಸಿದ್ದು, ಅದರಲ್ಲಿ ಮಧ್ಯಾಹ್ನ 2 ಗಂಟೆಗೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಅಪರಿಚಿತ ಆರೋಪಿ ಉಲ್ಲೇಖಿಸಿದ್ದ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದೀರ್ಘ ಶೋಧದ ಬಳಿಕ ಪೊಲೀಸರು ನಿರಾಳ

ಬಾಂಬ್ ಬೆದರಿಕೆ ಇಮೇಲ್ ಹಿನ್ನೆಲೆಯಲ್ಲಿ ಬಾಂಬ್ ಸ್ಕ್ವಾಡ್ (BDDS), ಶ್ವಾನ ದಳ, ಸಿಐಎಸ್‌ಎಫ್ (CISF) ಮತ್ತು ಸಂಜಯನಗರ ಠಾಣಾ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಅಂತರಿಕ್ಷ ಭವನ ಸೇರಿದಂತೆ ಇಡೀ ಕ್ಯಾಂಪಸ್ ಅನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಇದರೊಂದಿಗೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಕೇಂದ್ರದಲ್ಲೂ ಪೊಲೀಸರು ಪರಿಶೀಲನೆ ನಡೆಸಿದರು. ಮಧ್ಯಾಹ್ನದವರೆಗೆ ನಡೆದ ಸುದೀರ್ಘ ಶೋಧದ ಬಳಿಕ ಯಾವುದೇ ಆಕ್ಷೇಪಾರ್ಹ ವಸ್ತು ಪತ್ತೆಯಾಗದ ಕಾರಣ ಇದೊಂದು ಹುಸಿ ಇಮೇಲ್ ಎಂದು ಘೋಷಿಸಲಾಯಿತು.

ಇದಕ್ಕೂ ಮುನ್ನ ಜುಲೈ 2 ರಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ಕಚೇರಿಗೆ ಇಮೇಲ್ ಕಳುಹಿಸಿದ್ದ ಉತ್ತರ ಪ್ರದೇಶದ ಗಾಜಿಯಾಬಾದ್‌ನ ನಿಶಾಂತ್ ತ್ಯಾಗಿ (36) ಎಂಬಾತನನ್ನು ಜುಲೈ 3 ರಂದು ಬಂಧಿಸಲಾಗಿತ್ತು. ಆದರೆ, ಶುಕ್ರವಾರ ತಮಿಳು ಭಾಷೆಯಲ್ಲಿ ಬಂದಿದ್ದ ಎರಡನೇ ಇಮೇಲ್ ಮತ್ತು ಭಾನುವಾರ ಬಂದಿರುವ ಮೂರನೇ ಇಮೇಲ್‌ಗೂ ಬಂಧಿತ ತ್ಯಾಗಿಗೂ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ. ಈ ಮೂರೂ ಇಮೇಲ್ ಐಡಿಗಳು ಬೇರೆ ಬೇರೆಯಾಗಿವೆ ಎಂದು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ. ಸಂಜಯನಗರ ಪೊಲೀಸರು ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾದ ಬಾಂಬ್ ಬೆದರಿಕೆ

ಇಸ್ರೋ ಸಂಸ್ಥೆಯ ಬೆನ್ನಲ್ಲೇ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಇಮೇಲ್ ಬಂದಿರುವುದು ರಾಜ್ಯದಲ್ಲಿ ತಲ್ಲಣ ಮೂಡಿಸಿದೆ. ತಮಿಳುನಾಡಿನಿಂದ ‘ಉದಯ್ ಸೇತುಪತಿ’ ಎಂಬ ಹೆಸರಿನ ಇಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ರವಾನೆಯಾಗಿದೆ. ಕೋರ್ಟ್ ಆವರಣದಲ್ಲಿ ನಾಲ್ಕು ಆರ್‌ಡಿಎಕ್ಸ್ (RDX) ಐಇಡಿ ಬಾಂಬ್‌ಗಳನ್ನು ಇಟ್ಟು ಮಧ್ಯಾಹ್ನ 2 ಗಂಟೆಗೆ ಸ್ಫೋಟಿಸುವುದಾಗಿ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಪೋಕ್ಸೊ (POCSO) ಪ್ರಕರಣದ ಆರೋಪಿಗಳಾದ ಆರ್.ಜೆ. ಶರಣ್ ಜಯರಾಮ್ ಮತ್ತು ಜಲ್ಲಿಕಟ್ಟು ಜ್ಯೂಲಿಯನ್ ಎಂಬುವವರನ್ನು ಬಿಡುಗಡೆ ಮಾಡಬೇಕು, ಅವರು ನಿರ್ಭಯಾ ಅತ್ಯಾಚಾರ ಪ್ರಕರಣದಂತಹ ಆರೋಪಿಗಳಲ್ಲ ಎಂದು ಇಮೇಲ್‌ನಲ್ಲಿ ಆಗ್ರಹಿಸಲಾಗಿತ್ತು.

ಇದನ್ನೂ ಓದಿ: ದುರಂತ್ ಎಕ್ಸ್​ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!

ಇಮೇಲ್ ಕಂಡು ಬೆದರಿದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಟೇಷನ್ ಬಜಾರ್ ಪೊಲೀಸರು, ಬಾಂಬ್ ಹಾಗೂ ಶ್ವಾನ ದಳದೊಂದಿಗೆ ಕೋರ್ಟ್ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 am, Tue, 7 July 26

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ