ಕರ್ನಾಟಕ ಬಂದ್: ಸಾರಿಗೆ ಸಂಘಟನೆಗಳಿಗೆ ಪೊಲೀಸ್ ನೋಟಿಸ್, ಕಾನೂನು ಕ್ರಮದ ಎಚ್ಚರಿಕೆ
ಮಾರ್ಚ್ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಎಂಇಎಸ್‌ನ ಪುಂಡಾಟ, ಕಳಸಾ-ಬಂಡೂರಿ ಯೋಜನೆ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮುಂತಾದ ವಿಷಯಗಳನ್ನು ಒತ್ತಾಯಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ. ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನೈತಿಕ ಬೆಂಬಲ ಸೂಚಿಸಿದ್ದು, ನಾಳೆ ಎಂದಿನಂತೆ ಬಸ್ ಸಂಚಾರವಿರಲಿದೆ ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ಬಿಗಿ ಭದ್ರತೆಗೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಬೆಂಗಳೂರು, ಮಾರ್ಚ್ 21: ಬೆಳಗಾವಿಯ ಗಡಿಯಲ್ಲಿ ಪದೇ ಪದೇ ಪುಂಡಾಟ ಮೆರೆಯುತ್ತಿರುವ ಎಂಇಎಸ್ ಪುಂಡರ ವಿರುದ್ಧ ಸಮರ ಸಾರುವುದಕ್ಕೆ ಕನ್ನಡಿಗರು ಸಜ್ಜಾಗಿದ್ದಾರೆ. ಮರಾಠಿ ಸಂಘಟನೆಗಳ ಪುಂಡಾಟದ ವಿರುದ್ಧ ಧ್ವನಿ ಎತ್ತಲು ಹೊರಟಿರುವ ಕನ್ನಡಪರ ಸಂಘಟನೆಗಳು ನಾಳೆ (ಮಾ. 22) ರಂದು ಕರ್ನಾಟಕ ಬಂದ್ (Karnataka Bandh)ಗೆ ಕರೆ ಕೊಟ್ಟಿದೆ. ಬಂದ್‌ಗೆ ಹಲವು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ. ಖಾಸಗಿ ಸಾರಿಗೆ ಸಂಘಟನೆಗಳು (Private transport) ಕೂಡ ಈಗಾಗಲೇ ಬೆಂಬಲ ಘೋಷಿಸಿವೆ. ಹೀಗಿರುವಾಗಲೇ ಬಂದ್ ಮಾಡದಂತೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಿಗೆ ಪೊಲೀಸ್ ಕಮಿಷನರ್ ನೋಟಿಸ್ ಜಾರಿ ಮಾಡಿದೆ.
ನೋಟಿಸ್ನಲ್ಲಿ ಏನಿದೆ?
ನಾಳೆ (ಮಾ. 22ರಂದು) ಕನ್ನಡ ಪರ ಸಂಘಟನೆಗಳು ಮತ್ತು ರಾಜ್ಯದ ವಿವಿಧ ಸಂಘಟನೆಗಳ ವತಿಯಿಂದ ಮರಾಠಿಗರ ಪುಂಡಾಟಿಕೆ, ಎಂಇಎಸ್ ನಿಷೇಧ, ಕಳಸಾ ಬಂಡೂರಿ ಮಹದಾಯಿ ಯೋಜನೆ ಆರಂಭ, ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು ಮತ್ತು ಕಂಡಕ್ಟರ್ ಮೇಲೆ ಮರಾಠಿಗರ ದಾಳಿ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿ ಕರ್ನಾಟಕ ಬಂದ್ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ, ಮುಷ್ಕರ ಮತ್ತು ಮೆರವಣಿಗೆಯನ್ನು ಹಮ್ಮಿಕೊಂಡಿರುವ ವಿಚಾರ ತಿಳಿದುಬಂದಿದ್ದು, ಅದರ ಭಾಗವಾಗಿ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿಕೊಂಡು ಟೌನ್ ಹಾಲ್ ಮುಂಭಾಗದಿಂದ ಫ್ರೀಡಂಪಾರ್ಕ್‌ಗೆ ಮೆರವಣಿಗೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಕರ್ನಾಟಕ ಬಂದ್: ನಾಳೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ? ಸಚಿವರು ಕೊಟ್ಟ ಮಾಹಿತಿ ಇಲ್ಲಿದೆ
ಬೆಂಗಳೂರು ನಗರದ ಫ್ರೀಡಂ ಪಾರ್ಕ್ ಉದ್ಯಾನವನವನ್ನು ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಸಾರ್ವಜನಿಕರ ಸಂಚಾರ ಹಾಗೂ ನೆಮ್ಮದಿ ಭಂಗವಾಗುವಂತೆ ಪ್ರತಿಭಟನೆ, ಮುಷ್ಕರ ಮತ್ತು ಮೆರವಣಿಗಳನ್ನು ಮಾಡುವಂತಿಲ್ಲ.
ಈ ಕುರಿತು ಹೈಕೋರ್ಟ್ W.P.No.5781/2021 (GM-RES-PIL) , ಆದೇಶ ಮಾಡಿದೆ. ಘನ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕು. ಪ್ರತಿಭಟನೆಯಾಗಲಿ, ಮುಷ್ಕರವಾಗಲಿ ಮತ್ತು ಮೆರವಣಿಗೆಯಾಗಲಿ ಮಾಡುವಂತಿಲ್ಲ. ಒಂದು ವೇಳೆ ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಲ್ಲಿ ತಮ್ಮ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ಜಾರಿ ಮಾಡಲಾಗಿದೆ.
ನೈತಿಕ ಬೆಂಬಲವಿದೆ: ಎಲ್ಲಾ ಜಿಲ್ಲೆಗಳಲ್ಲಿ ಬಸ್ ಸಂಚಾರವಿರಲಿದೆ: ಕುಯ್ಲಾಡಿ ಸುರೇಶ್ ನಾಯಕ್
ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಪ್ರತಿಕ್ರಿಯಿಸಿದ್ದು, ನಮ್ಮ ನೈತಿಕ ಬೆಂಬಲ ಇದೆ. ಆದರೆ ಎಲ್ಲಾ ಜಿಲ್ಲೆಗಳಲ್ಲಿ ಬಸ್ ಎಂದಿನಂತೆ ಸಂಚಾರವಿರಲಿದೆ. ಕನ್ನಡ, ಕರ್ನಾಟಕಕ್ಕೆ ಅನ್ಯಾಯ ಆದಾಗ ಬಸ್ ಮಾಲಕರು ಜೊತೆಗೆ ಇದ್ದೇವೆ. ಆದರೆ ನಾಳೆ ಬಂದ್ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಹಾಗಾಗಿ ನಾವು ಬಂದ್ ಮಾಡುವುದಿಲ್ಲ ಎಂದಿನಂತೆ ಬಸ್ಸುಗಳು ಓಡಾಡುತ್ತವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ 6000 ಖಾಸಗಿ ಬಸ್ಸುಗಳು ಇವೆ. 17 ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳು ಸಕ್ರಿಯವಾಗಿದೆ. ಉಡುಪಿ, ಮಂಗಳೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ, ಮಂಡ್ಯ, ತುಮಕೂರು, ಮೈಸೂರು, ಚಾಮರಾಜನಗರಗಳಲ್ಲಿ ಖಾಸಗಿ ಬಸ್ಗಳಿವೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು, ಪರೀಕ್ಷೆ ಇದೆ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು. ಬಸ್ಸಿನವರು ಯಾವತ್ತೂ ಕೂಡ ಬಂದು ಮಾಡಿಲ್ಲ. ಕನ್ನಡದ ವಿಷಯಕ್ಕೆ ಖಂಡಿತ ನಮ್ಮ ನೈತಿಕ ಬೆಂಬಲ ಇದೆ. ನಮಗೆ ತೊಂದರೆಯಾದಾಗಲೂ ನಾವು ಬಸ್ ನಿಲ್ಲಿಸಿಲ್ಲ. ಲಾಭ, ನಷ್ಟದ ಲೆಕ್ಕಾಚಾರ ಅಲ್ಲ. ಸಾರ್ವಜನಿಕರಿಗೆ ತೊಂದರೆ ಆಗಬಾರದು, ವಿದ್ಯಾರ್ಥಿಗಳಿಗೆ ಅಡ್ಡಿಯಾಗಬಾರದು. ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವುದು ಖಂಡನಾರ್ಹ. ಬಂದ್ ನಡೆಸುವುದನ್ನು ಸ್ವಾಗತಿಸುತ್ತೇವೆ. ಬಸ್ ಅನ್ನೋದು ಲಾಭದಾಯಕ ಉದ್ಯಮ ಅಲ್ಲ ಸೇವೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದಾದ್ಯಂತ ಸೂಕ್ತ ಭದ್ರತೆಗೆ ಸೂಚನೆ
ಇನ್ನು ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಂಗಳೂರು ನಗರದಾದ್ಯಂತ ತಮ್ಮ ವಿಭಾಗದಲ್ಲಿ ಸೂಕ್ತ ಭದ್ರತೆಗೆ ಡಿಸಿಪಿಗಳಿಗೆ ಕಮಿಷನರ್ ಸೂಚಿಸಿದ್ದಾರೆ. ಪ್ರಮುಖವಾಗಿ ಮೆಜೆಸ್ಟಿಕ್ ಸುತ್ತಮುತ್ತ, ಫ್ರೀಡಂಪಾರ್ಕ್, ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಬಂದ್‌ಗೆ ಕರೆ ನೀಡಿದವರ ಜೊತೆ ಸಭೆ ಮಾಡಿರುವ ಕಮಿಷನರ್ ಬಿ.ದಯಾನಂದ್, ಬಲವಂತವಾಗಿ ಬಂದ್ ಮಾಡದಂತೆ, ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಲಾಗಿದೆ.
ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಿಷ್ಟು
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಧ್ಯಮದವರೊಂದಿಗೆ ಮಾತನಾಡಿ, ಕೆಲ ಕನ್ನಡಪರ ಸಂಘಟನೆಗಳು ಬಂದ್ ಬಗ್ಗೆ ಘೋಷಣೆ ಮಾಡಿವೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತೇವೆ. ನಾಳಿನ ಬಂದ್‌ಗೆ ಭದ್ರತೆ ಬಗ್ಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ರೀತಿ ಬಲವಂತವಾಗಿ ಬಂದ್ ಮಾಡಿಸುವಂತಿಲ್ಲ. ಬಂದ್‌ಗೆ ಅಗತ್ಯ ಭದ್ರತೆ ನೀಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್, ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಕೋರ್ಟ್ ಆದೇಶದ ಬಗ್ಗೆ ಸಂಘಟನೆ ಮುಖಂಡರಿಗೆ ತಿಳಿಸಿದ್ದೇವೆ. ನಾಳೆ ದಿನ ಯಾವುದೇ ಅಹಿತಕರ ಘಟನೆ ನಡೆದರೆ, ಡ್ಯಾಮೇಜ್ ಆದರೆ ಬಂದ್‌ಗೆ ಕರೆಕೊಟ್ಟಿರುವವರೇ ಭರಿಸಬೇಕು. ಸಾಮಾನ್ಯ ನಾಗರಿಕರಿಗೆ ಅಡಚಣೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.