ದಶಕದ ಬಳಿಕ ಬಯಲಾಯ್ತು ಹಗರಣ: ನಕಲಿ ಅಂಕಪಟ್ಟಿ ನೀಡಿ ನೌಕರಿ ಗಿಟ್ಟಿಸಿದ್ದ ಆರೋಗ್ಯ ಇಲಾಖೆ 52 ಸಿಬ್ಬಂದಿ ಅಮಾನತು!
ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಹತ್ತು ವರ್ಷಗಳ ಹಿಂದೆ ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿಗಳನ್ನು ನೀಡಿ ಸರ್ಕಾರಿ ನೌಕರಿ ಗಿಟ್ಟಿಸಿದ್ದ ಕಲ್ಯಾಣ ಕರ್ನಾಟಕ ವೃಂದದ 52 ಗ್ರೂಪ್-ಡಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಯಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಮುಖ್ಯಾಂಶಗಳು
- ದಶಕದ ಬಳಿಕ ನಕಲಿ ಅಂಕಪಟ್ಟಿ ನೀಡಿರುವ 52 ಸಿಬ್ಬಂದಿ ಅಮಾನತುಗೊಂಡಿದ್ದಾರೆ.
- ಕಲ್ಯಾಣ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಗ್ರೂಪ್-ಡಿ ಹುದ್ದೆ ಪಡೆದಿದ್ದರು.
- ಆರೋಪಿ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹತ್ತು ವರ್ಷಗಳ ಹಿಂದೆ ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ವೃಂದದಡಿ ನೇಮಕಗೊಂಡಿದ್ದ 52 ಗ್ರೂಪ್-ಡಿ ಸಿಬ್ಬಂದಿ ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿಗಳನ್ನು ನೀಡಿ ಸರ್ಕಾರಿ ನೌಕರಿ ಗಿಟ್ಟಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ವಂಚನೆ ಸಾಬೀತಾಗುತ್ತಿದ್ದಂತೆ ಇಲಾಖೆಯು ಎಲ್ಲ 52 ನೌಕರರನ್ನು ತಕ್ಷಣವೇ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
2015ರಲ್ಲಿ ನಡೆದಿದ್ದ ಅಕ್ರಮ
2015ರ ಮಾರ್ಚ್ನಲ್ಲಿ ಗ್ರೂಪ್-ಡಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿತ್ತು. ಅದೇ ವರ್ಷದ ನವೆಂಬರ್ನಲ್ಲಿ ಅಂತಿಮ ಪಟ್ಟಿ ಪ್ರಕಟಗೊಂಡು, 2016ರ ಜೂನ್ನಲ್ಲಿ ನೇಮಕಾತಿ ಆದೇಶಗಳನ್ನು ನೀಡಲಾಗಿತ್ತು. ಈ ಸಿಬ್ಬಂದಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಂಡಳಿಯಿಂದ ನೀಡಿದ್ದ ದೃಢೀಕರಣ ಪತ್ರಗಳು ಕೂಡ ನಕಲಿ
2023ರಲ್ಲಿ ಬಂದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಹಗರಣ ಹೊರಬಂದಿದೆ. ಮೂಲಗಳ ಪ್ರಕಾರ, ಕೇವಲ 230 ಅಂಕಗಳನ್ನು ಗಳಿಸಿದ್ದ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳ ಮೂಲಕ ತಮ್ಮ ಅಂಕಗಳನ್ನು 625ಕ್ಕೆ 560ರಿಂದ 586ರವರೆಗೆ ಏರಿಕೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಅಂದು ಮಂಡಳಿಯಿಂದ ನೀಡಲಾಗಿದೆ ಎನ್ನಲಾದ ದೃಢೀಕರಣ ಪತ್ರಗಳು ಕೂಡ ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ನೌಕರರು ಅಮಾನತು
ಸರ್ಕಾರದ ಸೆಪ್ಟೆಂಬರ್ 22ರ ಆದೇಶದಂತೆ ಆರೋಪಿ ನೌಕರರಿಗೆ ನೋಟಿಸ್ ನೀಡಲಾಗಿದ್ದರೂ ಸೂಕ್ತ ಉತ್ತರ ನೀಡಲು ವಿಫಲರಾಗಿದ್ದಾರೆ. ಇದರೊಂದಿಗೆ ಕರ್ತವ್ಯಲೋಪ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಗಂಭೀರ ಆರೋಪದಡಿ ಶಿಸ್ತು ಕ್ರಮ ಕೈಗೊಂಡಿರುವ ಇಲಾಖೆ, ನೌಕರರನ್ನು ಅಮಾನತುಗೊಳಿಸಿದೆ. ಅಲ್ಲದೆ, ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಈ ಸಿಬ್ಬಂದಿ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 am, Fri, 16 October 26




