ನ.25ಕ್ಕೆ ಕೋಳಿ ಸಾಕಾಣಿಕೆದಾರರಿಂದ ಮುಷ್ಕರಕ್ಕೆ ಕರೆ: ಚಿಕನ್, ಮೊಟ್ಟೆ ಪೂರೈಕೆ ವ್ಯತ್ಯಯ ಸಾಧ್ಯತೆ; ಸಾಕಾಣಿಕೆ ಶುಲ್ಕ ಪಾವತಿಗೆ ಪಟ್ಟು
ಕೋಳಿ ಸಾಕಾಣಿಕೆದಾರರು ನವೆಂಬರ್ 25 ರಿಂದ ಚಿಕನ್ ಮತ್ತು ಮೊಟ್ಟೆ ಪೂರೈಕೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಕನಿಷ್ಠ ಸಾಕಾಣಿಕೆ ವೆಚ್ಚ ಪಾವತಿಗೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ, ಬೆಂಗಳೂರಿನಲ್ಲಿ ಮೊಟ್ಟೆಯ ದರ 7.50 ರೂಪಾಯಿಗೆ ಏರಿಕೆಯಾಗಿ ಗ್ರಾಹಕರಿಗೆ ಆಘಾತ ನೀಡಿದೆ. ಮುಂಬರುವ ದಿನಗಳಲ್ಲಿ ಚಿಕನ್ ಮತ್ತು ಮೊಟ್ಟೆ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಸಾಧ್ಯತೆ ಇದೆ.

ಬೆಂಗಳೂರು, ನವೆಂಬರ್ 09: ಕೋಳಿ ಸಾಕಾಣಿಕೆದಾರರು ನವೆಂಬರ್ 25ರಿಂದ ಚಿಕನ್ ಹಾಗೂ ಮೊಟ್ಟೆ ಪೂರೈಕೆ ಬಂದ್ ಮಾಡುವ ಸುಳಿವು ನೀಡಿದ್ದಾರೆ. ಮತ್ತೊಂದೆಡೆ ಮೊಟ್ಟೆಯ ದರ ಏಕಾಏಕಿ 7.5 ರೂ ಏರಿಕೆಯಾಗಿದ್ದು, ಮೊಟ್ಟೆ ಪ್ರಿಯರಿಗೆ ಶಾಕ್ ಎದುರಾಗಿದೆ. ಕನಿಷ್ಠ ಸಾಕಾಣಿಕೆ ವೆಚ್ಚವನ್ನು ಪಾವತಿಸುವಂತೆ ಒತ್ತಾಯಿಸಲಾಗಿದೆ.
ಕನಿಷ್ಠ ಸಾಕಾಣಿಕೆ ವೆಚ್ಚ ಪಾವತಿಸುವಂತೆ ಆಗ್ರಹ
ಕನಿಷ್ಠ ಸಾಕಾಣಿಕೆ ವೆಚ್ಚವನ್ನು ಪಾವತಿಸುವಂತೆ ಇಂಟಿಗ್ರೇಷನ್ ಕಂಪನಿಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕು ಅಂತಾ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ. ಇಲ್ಲವಾದಲ್ಲಿ ನವೆಂಬರ್ 25ರಂದು ಬೃಹತ್ ವಿಧಾನಸೌಧ ಚಲೋಗೆ ತೀರ್ಮಾನಿಸಲಾಗಿದೆ.
ಚಿಕನ್ ಹಾಗೂ ಮೊಟ್ಟೆ ಪೂರೈಕೆಯ ವ್ಯತ್ಯಯ: ವ್ಯಾಪಾರಿಗಳು ಆತಂಕ
ಅಷ್ಟೇ ಅಲ್ಲದೆ ಅದೇ ದಿನ ಸಂಜೆಯಿಂದ ರಾಜ್ಯಾದ್ಯಂತ ಕೋಳಿ ಮರಿ ಸ್ವೀಕಾರ ಹಾಗೂ ಕೋಳಿ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ನಗರದಲ್ಲಿ ಚಿಕನ್ ಹಾಗೂ ಮೊಟ್ಟೆ ಪೂರೈಕೆಯ ವ್ಯತ್ಯಯದ ಬಗ್ಗೆ ವ್ಯಾಪಾರಿಗಳು ಆತಂಕ ಹೊರಹಾಕಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ಗೆ ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಆರೋಪ: ಕೇಂದ್ರದ ಮೌನ ಪ್ರಶ್ನಿಸಿದ ಸಚಿವ ರಿಜ್ವಾನ್ ಅರ್ಷದ್
ಇನ್ನು ನಿತ್ಯ ಒಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಉತ್ತಮ ಅಂತಾ ಮೊಟ್ಟೆ ತಿನ್ನುವವರಿಗೆ ಶಾಕ್ ಎದುರಾಗಿದೆ. ಒಂದು ಮೊಟ್ಟೆಯ ಬೆಲೆ ಬೆಂಗಳೂರಿನಲ್ಲಿ 7.50 ರೂ ತಲುಪಿರುವುದು ನಾಗರಿಕರಿಗೆ ಸಂಕಷ್ಟ ತಂದೊಡ್ಡಿದೆ. ಈ ರೀತಿ ಅಗತ್ಯ ಆಹಾರ ಉತ್ಪನ್ನಗಳ ಬೆಲೆ ಏರಿಕೆ ನಿಜಕ್ಕೂ ಬಡ ಹಾಗೂ ಮಧ್ಯಮ ವರ್ಗದ ಬರಸಿಡಿಲು ಅಂತಾ ಆಕ್ರೋಶ ವ್ಯಕ್ತವಾಗಿದೆ.
ಮೊಟ್ಟೆ ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡ ವರ್ತಕರು
ಇನ್ನು ವರ್ತಕರು ಕೂಡ ಮೊಟ್ಟೆ ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಕೋಳಿ ಹಾಗೂ ಮೊಟ್ಟೆ ಉತ್ದಾದನಾ ವೆಚ್ಚ ಕೂಡ ಹೆಚ್ಚಳವಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಅಂತಿದ್ದಾರೆ. ಒಟ್ಟಿನಲ್ಲಿ ಸಾಲು ಸಾಲು ಬೆಲೆ ಏರಿಕೆಗಳಿಂದ ಎಲ್ಲವೂ ದುಬಾರಿಯಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




