AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓವರಿಯನ್ ಕ್ಯಾನ್ಸರ್ ಪತ್ತೆಗೆ ಹೊಸ ಸ್ಕ್ಯಾನ್ : ಬೆಂಗಳೂರು ವೈದ್ಯರ ಅಧ್ಯಯನದಿಂದ ಶೇ 86 ರಿಸಲ್ಟ್ಸ್!

ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ವೈದ್ಯರು ನಡೆಸಿರುವ ಹೊಸ ಅಧ್ಯಯನದ ಪ್ರಕಾರ, FAPI PET ಸ್ಕ್ಯಾನ್ ಅಂಡಾಶಯದ ಕ್ಯಾನ್ಸರ್ ದೇಹಕ್ಕೆ ಹಬ್ಬಿರುವ ಪ್ರಮಾಣವನ್ನು ಸಾಂಪ್ರದಾಯಿಕ ಸಿಟಿ ಸ್ಕ್ಯಾನ್‌ಗಿಂತ ಹೆಚ್ಚು ನಿಖರವಾಗಿ ಪತ್ತೆಹಚ್ಚುತ್ತದೆ. ಇದು ರೋಗಿಗಳಿಗೆ ಸರಿಯಾದ ಚಿಕಿತ್ಸಾ ಕ್ರಮಗಳನ್ನು ಆಯ್ಕೆ ಮಾಡಲು ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಅತ್ಯಂತ ಸಹಕಾರಿಯಾಗಿದೆ ಎಂದು ಸಾಬೀತಾಗಿದೆ.

ಓವರಿಯನ್ ಕ್ಯಾನ್ಸರ್ ಪತ್ತೆಗೆ ಹೊಸ ಸ್ಕ್ಯಾನ್ : ಬೆಂಗಳೂರು ವೈದ್ಯರ ಅಧ್ಯಯನದಿಂದ ಶೇ 86 ರಿಸಲ್ಟ್ಸ್!
Ovarian Cancer
ಭಾವನಾ ಹೆಗಡೆ
|

Updated on: Oct 11, 2026 | 12:02 PM

Share

ಮುಖ್ಯಾಂಶಗಳು

  • ಅಂಡಾಶಯದ ಕ್ಯಾನ್ಸರ್ ಪತ್ತೆಗೆ ಹೊಸ FAPI PET ಸ್ಕ್ಯಾನ್ ಅತ್ಯುತ್ತಮ
  • ಸಾಂಪ್ರದಾಯಿಕ ಸಿಟಿ ಸ್ಕ್ಯಾನ್‌ಗಿಂತ ಈ ನವೀನ ತಂತ್ರಜ್ಞಾನ ಹೆಚ್ಚು ನಿಖರವಾಗಿದೆ
  • ಬೆಂಗಳೂರು ವೈದ್ಯರ ಅಧ್ಯಯನದಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಹೆಜ್ಜೆ ಸಾಬೀತು

ಬೆಂಗಳೂರು, ಅಕ್ಟೋಬರ್ 11: ಅಂಡಾಶಯದ ಕ್ಯಾನ್ಸರ್ ದೇಹದ ಇತರೆ ಭಾಗಗಳಿಗೆ, ಮುಖ್ಯವಾಗಿ ಉದರದ ಒಳಪದರಕ್ಕೆ ಹಬ್ಬಿರುವ ಪ್ರಮಾಣವನ್ನು ನಿಖರವಾಗಿ ಪತ್ತೆಹಚ್ಚುವಲ್ಲಿ ಹೊಸ ತಂತ್ರಜ್ಞಾನದ ಸ್ಕ್ಯಾನ್ ಸಾಂಪ್ರದಾಯಿಕ ಸಿಟಿ ಸ್ಕ್ಯಾನ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಬೆಂಗಳೂರಿನ ವೈದ್ಯರು ನಡೆಸಿದ ಹೊಸ ಅಧ್ಯಯನದಿಂದ ತಿಳಿದುಬಂದಿದೆ.

ಒಟ್ಟು 200 ಮಹಿಳೆಯರ ಮೇಲೆ ಸಂಶೋಧನೆ

ಬೆಂಗಳೂರಿನ ಆಸ್ಟರ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ವೈದ್ಯರು ಈ ಸಂಶೋಧನೆ ನಡೆಸಿದ್ದು, ಪ್ರತಿಷ್ಠಿತ ‘ಜರ್ನಲ್ ಆಫ್ ನ್ಯೂಕ್ಲಿಯರ್ ಮೆಡಿಸಿನ್’ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಅಂಡಾಶಯದ ಕ್ಯಾನ್ಸರ್ ಪೀಡಿತ ಒಟ್ಟು 200 ಮಹಿಳೆಯರ ಮೇಲೆ ಈ ಸಂಶೋಧನೆ ನಡೆಸಲಾಗಿದ್ದು, ‘ಫೈಬ್ರೋಬ್ಲಾಸ್ಟ್ ಆಕ್ಟಿವೇಷನ್ ಪ್ರೋಟೀನ್ ಇನ್ಹಿಬಿಟರ್’ (FAPI) ಅಥವಾ ಎಫ್‌ಎಪಿಐ ಟ್ರೇಸರ್ ಬಳಸಿ ಮಾಡುವ PET/CT ಸ್ಕ್ಯಾನ್ ರೋಗದ ಹರಡುವಿಕೆಯನ್ನು ಅತ್ಯಂತ ಸ್ಪಷ್ಟವಾಗಿ ಪತ್ತೆ ಮಾಡುತ್ತದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

ಈ ಹೊಸ ಸ್ಕ್ಯಾನ್​ನಿಂದ 86 ಪ್ರತಿಶತ ನಿಖರತೆ

ಸುಧಾರಿತ ಅಂಡಾಶಯದ ಕ್ಯಾನ್ಸರ್ ಪ್ರಕರಣಗಳಲ್ಲಿ ಕ್ಯಾನ್ಸರ್ ಜೀವಕೋಶಗಳು ಉದರದ ಒಳಪದರಕ್ಕೆ ಹರಡುವುದು ಸಾಮಾನ್ಯ. ಶಸ್ತ್ರಚಿಕಿತ್ಸೆ ನಡೆಸಬೇಕೇ ಅಥವಾ ಮೊದಲು ಕೀಮೋಥೆರಪಿ ನೀಡಬೇಕೇ ಎಂಬುದನ್ನು ನಿರ್ಧರಿಸಲು ಈ ಹರಡುವಿಕೆಯ ನಿಖರ ಮಾಹಿತಿ ಅತ್ಯಂತ ಮುಖ್ಯ. ಸಾಂಪ್ರದಾಯಿಕ ಕಾಂಟ್ರಾಸ್ಟ್-ಎನ್‌ಹಾನ್ಸ್ಡ್ ಸಿಟಿ ಸ್ಕ್ಯಾನ್‌ಗಳು ಸಣ್ಣ ಅಥವಾ ಚಪ್ಪಟೆಯಾದ ಕ್ಯಾನ್ಸರ್ ಗಡ್ಡೆಗಳನ್ನು ಗುರುತಿಸುವಲ್ಲಿ ವಿಫಲಗೊಳ್ಳುತ್ತವೆ. ಆದರೆ FAPI PET ಸ್ಕ್ಯಾನ್ 86 ಪ್ರತಿಶತ ನಿಖರತೆ ಹೊಂದಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆಸ್ಟರ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಎಸ್.ಪಿ. ಸೋಮಶೇಖರ್ ತಿಳಿಸಿದ್ದಾರೆ.

ಈ ಹೊಸ ತಂತ್ರಜ್ಞಾನದಿಂದಾಗಿ ಶಸ್ತ್ರಚಿಕಿತ್ಸೆಗೆ ಮುನ್ನವೇ ರೋಗದ ಗಂಭೀರತೆಯನ್ನು ಅರಿತುಕೊಂಡು ಸೂಕ್ತ ಚಿಕಿತ್ಸಾ ಕ್ರಮಗಳನ್ನು ಆಯ್ಕೆ ಮಾಡಲು ವೈದ್ಯರಿಗೆ ಸಾಧ್ಯವಾಗುತ್ತಿದೆ. ಇದು ಸುಮಾರು ಶೇ 18 ರಿಂದ 21 ರಷ್ಟು ರೋಗಿಗಳಲ್ಲಿ ಚಿಕಿತ್ಸೆಯ ನಿರ್ಧಾರವನ್ನು ಬದಲಾಯಿಸಲು ನೆರವಾಗಿದೆ. ಭಾರತದಲ್ಲಿ ಇನ್ನೂ ಸೀಮಿತ ಕೇಂದ್ರಗಳಲ್ಲಿ ಮಾತ್ರ ಲಭ್ಯವಿರುವ ಈ ನವೀನ ಸ್ಕ್ಯಾನ್ ಪದ್ಧತಿಯು ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ವರದಾನವಾಗಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More