AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟ: ವಾರ್ಡರ್ ಮೇಲೆ ಹಲ್ಲೆಗೆ ಯತ್ನ!

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕೈದಿಗಳು ಜೈಲು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ ಪುಂಡಾಟಿಕೆ ತೋರಿದ್ದಾರೆ. ಬೇರೆ ಕೈದಿಯ ಹೆಸರಿನಲ್ಲಿ ಆಸ್ಪತ್ರೆಗೆ ಬಂದಿದ್ದನ್ನು ಪ್ರಶ್ನಿಸಿದ ವಾರ್ಡರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದ್ದು, 50 ಕ್ಕೂ ಹೆಚ್ಚು ಕೈದಿಗಳು ಒಟ್ಟಾಗಿ ಧರ್ಮದ ಪರ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ಪೊಲೀಸರು ಮತ್ತು ಜೈಲು ಅಧಿಕಾರಿಗಳು ಭೇಟಿ ನೀಡಿ ಸದ್ಯ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟ: ವಾರ್ಡರ್ ಮೇಲೆ ಹಲ್ಲೆಗೆ ಯತ್ನ!
ಪರಪ್ಪನ ಅಗ್ರಹಾರ ಕಾರಾಗೃಹ
ರಾಚಪ್ಪಾಜಿ ನಾಯ್ಕ್
| Edited By: |

Updated on: Jun 07, 2026 | 11:20 AM

Share

ಬೆಂಗಳೂರು, ಜೂನ್ 07: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕೈದಿಗಳು (Inmates) ಜೈಲು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ, ಧರ್ಮದ ಪರ ಘೋಷಣೆಗಳನ್ನು ಕೂಗಿ ಪುಂಡಾಟ ನಡೆಸಿರುವ ಗಂಭೀರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆಯಿಂದಾಗಿ ಜೈಲು ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮುಖ್ಯಾಂಶಗಳು

  • ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಾಂಬ್ ಸ್ಫೋಟದ ಕೈದಿಗಳು ಪುಂಡಾಟ ನಡೆಸಿದ್ದಾರೆ.
  • ನಿಯಮ ಉಲ್ಲಂಘನೆ ಪ್ರಶ್ನಿಸಿದ ಜೈಲು ವಾರ್ಡರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.
  • ಐವತ್ತಕ್ಕೂ ಹೆಚ್ಚು ಕೈದಿಗಳು ಒಟ್ಟಾಗಿ ಧರ್ಮದ ಪರ ಘೋಷಣೆ ಕೂಗಿದ್ದಾರೆ.

ಘಟನೆಯ ಹಿನ್ನೆಲೆ ಮತ್ತು ವಾಗ್ವಾದ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಕೈದಿಗಳು (ಉಗ್ರರು) ಜೈಲು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆದರೆ, ಅವರು ನಿಯಮ ಉಲ್ಲಂಘಿಸಿ ಬೇರೆ ಕೈದಿಯ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಜೈಲು ವಾರ್ಡರ್ ದಾಖಲೆಗಳನ್ನು ಪರಿಶೀಲಿಸಿದಾಗ ಇಬ್ಬರು ಕೈದಿಗಳ ಗುರುತು ಪತ್ತೆಯಾಗಿದೆ. ಬೇರೆ ಕೈದಿ ಹೆಸರಿನಲ್ಲಿ ಯಾಕೆ ಬಂದಿದ್ದೀರಿ ಎಂದು ವಾರ್ಡರ್ ಪ್ರಶ್ನಿಸಿದಾಗ, ಉಗ್ರರು ಮತ್ತು ವಾರ್ಡರ್ ಮಧ್ಯೆ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿ ಆರಂಭವಾಗಿದೆ.

ಖೈದಿಗಳ ಜಮಾವಣೆ

ವಾರ್ಡರ್ ಪ್ರಶ್ನಿಸುತ್ತಿದ್ದಂತೆ ಜೈಲಿನಲ್ಲಿದ್ದ ಇತರ ಬಾಂಬ್ ಸ್ಫೋಟ ಪ್ರಕರಣದ 50ಕ್ಕೂ ಹೆಚ್ಚು ಉಗ್ರ ಕೈದಿಗಳು ತಕ್ಷಣ ಒಂದೆಡೆ ಜಮಾವಣೆಗೊಂಡಿದ್ದಾರೆ. ವಾರ್ಡರ್ ಕ್ರಮವನ್ನು ವಿರೋಧಿಸಿದ ಕೈದಿಗಳ ಗುಂಪು, ಜೈಲಿನೊಳಗೇ ಒಂದು ಧರ್ಮದ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿದ್ದ ಜೈಲು ವಾರ್ಡರ್ ಮೇಲೆ ಹಲ್ಲೆ ಮಾಡಲು ಸಹ ಕೈದಿಗಳು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ

ಘಟನೆಯಿಂದ ಜೈಲಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಎಚ್ಚೆತ್ತ ಜೈಲಿನ ಹಿರಿಯ ಅಧಿಕಾರಿಗಳು ಮತ್ತು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಕೈದಿಗಳನ್ನು ಮನವೊಲಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಜೈಲಿನಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ. ಆದರೆ, ಇಷ್ಟೆಲ್ಲಾ ಹಂಗಾಮಾ ನಡೆದಿದ್ದರೂ ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Rachappaji Naik S
Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More