ಸರ್ಕಾರ ಬದಲಾದಂತೆ ಪವರ್ ಕಟ್ ಶುರು: ಬೆಸ್ಕಾಂ ವಿರುದ್ಧ ಬೆಂಗಳೂರು ನಾಗರಿಕರ ಆಕ್ರೋಶ
ಸುಡು ಬೇಸಿಗೆಯಲ್ಲೂ ಪವರ್ ಕಟ್ ಮಾಡುವ ಮೂಲಕ ಬೆಸ್ಕಾಂ ಬೆಂಗಳೂರು ನಗರ ವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿದ್ಯುತ್ ಕಡಿತದ ಬಗ್ಗೆ ನೆಟ್ಟಿಗರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ಸುಡು ಬೇಸಿಗೆಯಲ್ಲೂ ಪವರ್ ಕಟ್ (Power Cut in Bangalore) ಮಾಡುವ ಮೂಲಕ ಬೆಸ್ಕಾಂ (BESCOM) ಬೆಂಗಳೂರು ನಗರ ವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿದ್ಯುತ್ ಕಡಿತದ ಬಗ್ಗೆ ನೆಟ್ಟಿಗರು ಟ್ವೀಟರ್ನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಅನ್ನು ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬೇಗೂರು, ಕೋಡಿಚಿಕ್ಕನಹಳ್ಳಿ, ಜೆ.ಪಿ.ನಗರ 6ನೇ ಹಂತ, ಬನಶಂಕರಿ 2ನೇ ಹಂತ, ತಾವರೆಕೆರೆ, ಬಿಳೇಕಹಳ್ಳಿ ಸೇರಿದಂತೆ ನಗರದ ಹಲವೆಡೆ ವ್ಯತ್ಯಯ ಉಂಟಾಗಿತ್ತು.
ಜೆ.ಪಿ.ನಗರ 8ನೇ ಹಂತದ ನಿವಾಸಿ ದಿಲೀಪ್ ಜೈನ್ ಟ್ವೀಟ್ ಮಾಡಿ, “ಏಳು ಗಂಟೆಗಳಲ್ಲಿ ಐದು ಬಾರಿ ವಿದ್ಯುತ್ ಕಡಿತವಾಗಿದೆ. ಹಲೋ ಬೆಸ್ಕಾಂ ದಯವಿಟ್ಟು ಏನಾದರೂ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ. ಸುರೇಶ್ ಎಂಬ ಇನ್ನೊಬ್ಬ ನೆಟಿಜನ್ ಟ್ವೀಟ್ ಮಾಡಿ, “ಬಿಎಸ್‌ಕೆ 2 ನೇ ಹಂತದ ಪ್ರದೇಶದಲ್ಲಿ ಹಲವಾರು ಗಂಟೆಗಳಿಂದ ಕರೆಂಟ್ ಇಲ್ಲ. ಇದಕ್ಕೆ ಕಾರಣವೇನು? ದಯವಿಟ್ಟು ತಿಳಿಸಿ” ಎಂದು ಒತ್ತಾಯಿಸಿದ್ದಾರೆ.
Again power cut, 5th in a row in 7 hours ??@NammaBESCOM @CMofKarnataka ? https://t.co/LHJyUt23hC
— Dilip Jain | दिलीप जैन ?? (@dilipjain1979) May 19, 2023
ಇಲ್ಲಿನ ನಿವಾಸಿಯೊಬ್ಬರು ಹೇಳುವ ಪ್ರಕಾರ, ನನ್ನ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆಯ ನಂತರ ಸಂಜೆವರೆಗೆ ವಿದ್ಯುತ್ ಕಡಿತವಾಗುತ್ತದೆ. ಬಿಲ್ಲೇಕಹಳ್ಳಿ, ರಂಕಾ ಕಾಲೋನಿ ಹತ್ತಿರ (ಶ್ರವಂತಿ ಕ್ಲಾಸಿಕ್ ಅಪಾರ್ಟ್‌ಮೆಂಟ್). ವಿದ್ಯುತ್ ಯಾವಾಗ ಬರುತ್ತದೆ ಎಂದು ದಯವಿಟ್ಟು ನನಗೆ ತಿಳಿಸುವಿರಾ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ಪ್ರಣಾಳಿಕೆ; ಬೆಸ್ಕಾಂ ಸಿಬ್ಬಂದಿಗೆ ವೃದ್ಧೆ ಆವಾಜ್, ವಿಡಿಯೋ ನೋಡಿ
ಸರ್ಕಾರ ಬದಲಾವಣೆ ನಂತರ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ನೆಟ್ಟಿಗರೊಬ್ಬರು ಆರೋಪಿಸಿದ್ದಾರೆ. “ಸರ್ಕಾರ ಬದಲಾದಂತೆ ಈಗ ನಾವು 1 ಗಂಟೆಯಿಂದ 4 ಗಂಟೆಗೂ ಅಧಿಕ ವಿದ್ಯುತ್ ಕಡಿತವಾಗುತ್ತಿದೆ. 1-4 ಗಂಟೆಗಳವರೆಗೆ ವಿದ್ಯುತ್ ಕಡಿತಗೊಳಿಸುವ ಮೂಲಕ ನಮಗೆ 200 ಯೂನಿಟ್‌ಗಳ ಸಬ್ಸಿಡಿಯನ್ನು ನೀಡಲು ಹೊರಟಿದ್ದಾರೆಯೇ” ಎಂದು ನಿತಿನ್ ಬಜಾಜ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಬೆಸ್ಕಾಂ ಸಹಾಯವಾಣಿ ಸಮಸ್ಯೆ ಬಗ್ಗೆ ಬೊಟ್ಟು ಮಾಡಿ ಹೇಳಿದ ಮತ್ತೊಬ್ಬ ನೆಟಿಜನ್, “ಜೆಪಿ ನಗರ 5ನೇ ಹಂತದ ಎಸ್‌ಎಂಎಸ್ ಲೇಔಟ್‌ನಲ್ಲಿ ಮತ್ತೆ ವಿದ್ಯುತ್ ಕಡಿತಗೊಂಡಿದೆ. ಬೆಸ್ಕಾಂ ಸಹಾಯವಾಣಿ 1912 ಕೆಲಸ ಮಾಡುತ್ತಿಲ್ಲ. ಯಾಕ್ರೀ ಹಿಂಗೆ ಪ್ರಾಣ ತಿಂತೀರಾ ಜನರದ್ದು!! ದಯವಿಟ್ಟು ತ್ವರಿತವಾಗಿ ವಿದ್ಯುತ್ ಪೂರೈಕೆ ಮಾಡಿ!” ಎಂದು ಹೇಳಿದ್ದಾರೆ.
ಗ್ರಾಹಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಬೆಸ್ಕಾಂ, ಓವರ್‌ಲೋಡ್, ಪೂರೈಕೆ ವೈಫಲ್ಯ ಇತ್ಯಾದಿಗಳಿಂದ ಸಮಸ್ಯೆ ಉಂಟಾಗಿದೆ ಎಂಂದು ತಿಳಿಸಿದೆ. “ಆತ್ಮೀಯ ಗ್ರಾಹಕರೇ, ಸಮಸ್ಯೆಗೆ ಸಂಬಂಧಿಸಿದಂತೆ ನಾವು ಸಂಬಂಧಪಟ್ಟ ತಂಡಕ್ಕೆ ತಿಳಿಸಿದ್ದೇವೆ ಮತ್ತು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲಾಗುವುದು. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ” ಎಂದು ಟ್ವೀಟ್ ಮಾಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯ ಸುಡು ಜೋರಾಗಿದೆ. ದೀರ್ಘ ಕಾಲದ ವಿದ್ಯುತ್ ವ್ಯತ್ಯಯ ಸಂಭವಿಸಿದ ಶುಕ್ರವಾರದಂದು ಗರಿಷ್ಠ ತಾಪಮಾನವು 35.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




