
Breaking News Today Live Updates in Kannada: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರಚನೆ ಅಸಮಾಧಾನ ತೀವ್ರಗೊಂಡಿದ್ದು, ಶಾಸಕ ಆರ್. ಬಿ. ತಿಮ್ಮಾಪುರ ಹಾಗೂ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ‘ಪೇಮೆಂಟ್ ಸೀಟ್’ ಕುರಿತ ಆಡಿಯೋ ವೈರಲ್ ಆಗಿದೆ. ಮತ್ತೊಂದೆಡೆ, ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಇಂದು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 6 ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ನಡುವೆ, ತಮಿಳುನಾಡಿನಲ್ಲಿ ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್, ಟಿವಿಕೆ ಸರ್ಕಾರ ತಮ್ಮನ್ನು ಬಂಧಿಸಿ ಭಯೋತ್ಪಾದಕನಂತೆ ನಡೆಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ರಾಜೋಳ ಕ್ರಾಸ್ ಬಳಿ ಕೆಕೆಆರ್‌ಟಿಸಿ ಬಸ್ ಪಲ್ಟಿಯಾಗಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಳಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ಮದ್ಯ ಸೇವಿಸಿ ಸ್ಪೀಡ್ ಡ್ರೈವ್ ಮಾಡಿರುವ ಆರೋಪ ಕೇಳಿಬಂದಿದ್ದು, ಬಸ್ ಪಲ್ಟಿಯಾಗುತ್ತಿದಂತೆ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಬಸ್ ಆಳಂದ ಡಿಪೋಗೆ ಸೇರದ್ದು, ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭಾಷ್ ಗುತ್ತೇದಾರ್ ಗೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್, ಸಮನ್ಸ್ ಜಾರಿ ಮಾಡಿದೆ. ಸುದ್ದಿಗೋಷ್ಟಿಯಲ್ಲಿ ಮಾನಹಾನಿಕರ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬಿ.ಆರ್. ಪಾಟೀಲ್ ಅವರು ಸುಭಾಷ್ ಗುತ್ತೇದಾರ್ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ್ದರು. ಇದೀಗ ಈ ಪ್ರಕರಣ ಸಂಬಂಧ ಸುಭಾಷ್ ಗುತ್ತೇದಾರ್ ಗೆ ಕೋರ್ಟ್ ಸಮನ್ಸ್ ನೀಡಿದೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಎಂ.ಕೃಷ್ಣಪ್ಪ ಸಹ ಅಸಮಾಧಾನಗೊಂಡಿದ್ದು, ಇದೀಗ ಕೃಷ್ಣಪ್ಪನವರನ್ನು ಮನವೊಲಿಸಲು ಉಸ್ತುವಾರಿ ಸುರ್ಜೆವಾಲಾ ಹಾಗೂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಹೌದು..ಇಬ್ಬರು ನಾಯಕರು ಬೆಂಗಳೂರಿನ ವಿಜಯನಗರದಲ್ಲಿರುವ ನಿವಾಸಕ್ಕೆ ತೆರಳಿ ಶಾಸಕರಾದ ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಜೊತೆ ಮಾತುಕತೆ ನಡೆಸಿದ್ದಾರೆ.
ಮೆಟಾ ಸಂಸ್ಥೆಯು ಸಾಮಾಜಿಕ ಜಾಲತಾಣಗಳ ನಿರ್ವಹಣಾ ಲೋಪ ಒಪ್ಪಿಕೊಂಡಿದ್ದು, ಕೇಂದ್ರ ಸರ್ಕಾರವು ಅಧಿಕಾರಿಗಳಿಗೆ ನೋಟಿಸ್ ನೀಡಿರುವ ಬೆನ್ನಲ್ಲೇ ಮೆಟಾ ಸಂಸ್ಥೆ ಕ್ಷಮೆ ಕೇಳಿದೆ. ಅಪ್ರಾಪ್ತರ ಶೋಷಣೆ, ಡೀಪ್ಫೇಕ್ ದೃಶ್ಯಾವಳಿ, ತಾಂತ್ರಿಕ ಲೋಪಕ್ಕೆ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಕ್ಷಮೆಯಾಚಿಸಿದ್ದಾರೆ.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆ ನಾಳೆ (ಆ.05) ಬಂಗಾರಪೇಟೆ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.ಸ್ವಯಂ ಪ್ರೇರಿತ ಬಂದ್ ಗೆ ವಿವಿದ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ರೈತ ಸಂಘ, ದಲಿತ ಸಂಘಟನೆಗಳು, ತಾಲ್ಲೂಕು ಕಾಂಗ್ರೇಸ್, ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಬೆಂಬಲ ಘೋಷಿಸಿವೆ.
ಕರ್ನಾಟಕದಲ್ಲಿ ಮತದಾನ ಪರಿಷ್ಕರಣೆ ನಡೆದಿದ್ದು, ಬೆಂಗಳೂರಲ್ಲಿ ಅತಿ ಹೆಚ್ಚು ಮತದಾರರು ಹೊರಗಡೆ ಉಳೀತಾರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಯಾಕಂದ್ರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.45ರಷ್ಟು ಮತದಾರರು ನಾಪತ್ತೆಯಾಗಿದ್ದರೆ, ಬೆಂಗಳೂರು ಉತ್ತರದಲ್ಲಿ ಶೇಕಡಾ 47ರಷ್ಟು , ಬೆಂಗಳೂರು ಕೇಂದ್ರದಲ್ಲಿ ಶೇಕಡಾ 48ರಷ್ಟು , ಬೆಂಗಳೂರು ದಕ್ಷಿಣದಲ್ಲಿ ಶೇಕಡಾ 51ರಷ್ಟು ಶಿಫ್ಟಿಂಗ್ ಆದವರು, ಮೃತಪಟ್ಟವರು, ಟ್ರೇಸ್ ಆಗದೇ ಇರುವವರು ಪತ್ತೆಯಾಗಿದ್ದಾರೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕ ಬಿಆರ್ ಪಾಟೀಲ್ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಸಹಜವಾಗಿಯೇ ನನಗೆ ನೋವಾಗಿದೆ. ಐದು ದಶಕಗಳ ರಾಜಕೀಯ ಜೀವನದಲ್ಲಿ ಹುದ್ದೆ, ವ್ಯಕ್ತಿ ಹಾಗೂ ವೈಯಕ್ತಿಕ ಹಿತಾಸಕ್ತಿಗಿಂತ ಸಿದ್ಧಾಂತವೇ ಮೇಲೆಂದು ನಾನು ನಂಬಿದ್ದೇನೆ. ಕಾಂಗ್ರೆಸ್ ಪಕ್ಷದ ಮೇಲಿನ ನನ್ನ ನಿಷ್ಟೆ ಅಚಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅನ್ನೋದು ಸುಳ್ಳು. ಶಾಸಕ ಸ್ಥಾನ ನನಗೆ ದೊರೆತಿರುವ ಹುದ್ದೆಯಲ್ಲ. ಬದಲಾಗಿ ಜನರು ನನ್ನ ಮೇಲೆ ನಂಬಿ ಕೊಟ್ಟಿರುವ ಜವಾಬ್ದಾರಿ. ಆ ಜನಾದೇಶಕ್ಕೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ. ಸಚಿವ ಸ್ಥಾನ ಇರಲಿ, ಇಲ್ಲದಿರಲಿ ಕ್ಷೇತ್ರದ ಜನರ ಸೇವೆಗೆ ಬದ್ಧನಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂಬ ಸುಳ್ಳು ಸುದ್ದಿ ನಂಬಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.
ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರು ರೈತರಿಗೆ ಕ್ಷಮೆ ಕೇಳಿದ್ದಾರೆ. ಮೊನ್ನೆ ಬೆಳೆ ವಿಮೆ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲು ಬಂದಿದ್ದ ರೈತರೊಂದಿಗೆ ಏರು ಧ್ವನಿಯಲ್ಲೇ ಅನುಚಿತವಾಗಿ ವರ್ತಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರೈತರು ಜಿಲ್ಲಾಧಿಕಾರಿಯನ್ನು ಅಮಾನತು ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಇಂದು (ಆಗಸ್ಟ್ 05) ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರಲ್ಲಿ ಕ್ಷಮೆಯಾಚಿಸಿದ್ದಾರೆ.
ಕೆಪಿಎಸ್‌ಸಿ (KPSC) ಅಕ್ರಮವನ್ನು ಖಂಡಿಸಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ‘KPSC JOB SCAM’, ‘JOBS FOR SALE’ ಹಾಗೂ ‘ಆಫರ್ ಕ್ಲೋಸಸ್ ಸೂನ್’ ಎಂಬ ವಿಭಿನ್ನ ಪೋಸ್ಟರ್‌ಗಳನ್ನು ಪ್ರದರ್ಶಿಸಿ, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ನಾಯಕರ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ 14,500 ಪಿಂಚಣಿ, 4,000 ರೇಷನ್ ಕಾರ್ಡ್ ರದ್ದು ಹಾಗೂ 60 ಎಕರೆ ಅಕ್ರಮ ಸರ್ಕಾರಿ ಜಮೀನು ಹಗರಣ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದೆ. ಕೆಜಿಎಫ್‌ನ ಸೂರಜ್ ಮುಲ್ ಸರ್ಕಲ್‌ನಿಂದ ತಾಲೂಕು ಕಚೇರಿವರೆಗೆ ಮಾಜಿ ಶಾಸಕ ವೈ. ಸಂಪಂಗಿ, ಮಾಜಿ ಸಂಸದ ಮುನಿಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ವಿಜಯನಗರ ಜಿಲ್ಲೆಯ ಹಂಪಿಯಲ್ಲಿರುವ ಐತಿಹಾಸಿಕ ಕಾಲುವೆಗಳನ್ನು ಕಸ ಮತ್ತು ಮಾಲಿನ್ಯದಿಂದ ಮುಕ್ತಗೊಳಿಸಲು ನಗರಸಭೆ 5 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ಯೋಜನೆ ಕೈಗೆತ್ತಿಕೊಂಡಿದೆ. ಕಾಲುವೆಗಳಿಗೆ ಕಬ್ಬಿಣದ ಮೆಶ್ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದ್ದು, ಕಸ ಎಸೆಯುವವರ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಕಾಲುವೆಗಳ ಮಹತ್ವ ಉಳಿಸುವ ನಗರಸಭೆಯ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸ್ನಾತಕೋತ್ತರ (PG) ವಿದ್ಯಾರ್ಥಿಗಳಿಗೆ ಯುಜಿಸಿ ರಾಷ್ಟ್ರೀಯ ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿವೇತನ (NSPG) ಯೋಜನೆಯಡಿ ವಾರ್ಷಿಕ 1.5 ಲಕ್ಷ ರೂ. ನೀಡಲು ಮುಂದಾಗಿದೆ. ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ PG ಮೊದಲ ವರ್ಷ ವ್ಯಾಸಂಗ ಮಾಡುತ್ತಿರುವ 30 ವರ್ಷದೊಳಗಿನ ವಿದ್ಯಾರ್ಥಿಗಳು NSP ಪೋರ್ಟಲ್‌ನಲ್ಲಿ ಶೀಘ್ರದಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಮತ್ತಷ್ಟು ಓದಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಮುಂಬರುವ ಜನವರಿಯಿಂದ ಆರಂಭವಾಗಲಿದ್ದು, ಸರಣಿ ಗೆಲುವಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭರ್ಜರಿ ತಯಾರಿ ನಡೆಸಿದೆ. ಭಾರತೀಯ ಸ್ಪಿನ್ ದಾಳಿಯನ್ನು ಎದುರಿಸಲು ಆಸ್ಟ್ರೇಲಿಯಾ ಕೃತಕ ಸ್ಪಿನ್ ಪಿಚ್ ನಿರ್ಮಿಸಿ ಕಠಿಣ ಅಭ್ಯಾಸ ನಡೆಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಮತ್ತಷ್ಟು ಓದಿ
ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಸತೀಶ್ ನೀನಾಸಂ ಅಭಿನಯದ ‘ಅಯೋಗ್ಯ 2’ ಹಾಗೂ ಕಾನೂನು ಸಮರ ಮುಗಿಸಿಕೊಂಡು ಬಿಡುಗಡೆಯಾಗುತ್ತಿರುವ ‘ಬಾಸ್’ ಸಿನಿಮಾಗಳು ಶುಕ್ರವಾರ ತೆರೆಕಾಣುತ್ತಿವೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ. ಮತ್ತಷ್ಟು ಓದಿ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಕೆ.ಆರ್. ಮಾರ್ಕೆಟ್ ಬದಿಯಲ್ಲಿರುವ ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 130 ಅಂಗಡಿಗಳನ್ನು ಜೆಸಿಬಿ ಬಳಸಿ ಬಿಬಿಎಂಪಿ/ಜಿಬಿಎ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ ಕಂಡು ಮಹಿಳಾ ವ್ಯಾಪಾರಿಗಳು ಕಣ್ಣೀರಿಟ್ಟಿದ್ದಾರೆ.
ತಮಿಳುನಾಡಿನ ಹಣಕಾಸು ಸಚಿವ ಮಾರಿ ವಿಲ್ಸನ್ ತಮ್ಮ ಮೊದಲ ಬಜೆಟ್ ಮಂಡಿಸಿದ್ದು, ಉಚಿತ ಯೋಜನೆಗಳ ಸುರಿಮಳೆ ಗೈದಿದ್ದಾರೆ. ನವಜಾತ ಶಿಶುವಿಗೆ 1 ಗ್ರಾಂ ಚಿನ್ನದ ಉಂಗುರ, ವಧುವಿಗೆ 8 ಗ್ರಾಂ ಚಿನ್ನದ ನಾಣ್ಯ, ಉಚಿತ ಹಸು-ಮೇಕೆ ಹಾಗೂ ಹಿರಿಯ ನಾಗರಿಕರಿಗೆ 1000 ಸಂಚಾರಿ ಚಿಕಿತ್ಸಾಲಯ ಸೇರಿದಂತೆ ಯುವಜನತೆ ಮತ್ತು ಮಹಿಳೆಯರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಲಾಗಿದೆ.
ತುಮಕೂರಿನ ವಸಂತನರಸಾಪುರ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಕಾಮಗಾರಿ ಶಂಕುಸ್ಥಾಪನೆ ಮುಗಿದು ವರ್ಷವಾದರೂ ಆರಂಭವಾಗದೆ ನಿಂತಿದೆ. 41.33 ಎಕರೆ ಜಮೀನು ನೀಡಿದ್ದರೂ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿದ್ದು, ಸ್ಥಳೀಯರ ಉದ್ಯೋಗ ಮತ್ತು ಪ್ರಗತಿಗಾಗಿ ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಹಾರ ಖಾತೆ ಬದಲಿಗೆ ಸಮಾಜ ಕಲ್ಯಾಣ ನೀಡುವಂತೆ ಕೆ.ಹೆಚ್. ಮುನಿಯಪ್ಪ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರೆ, ಶಿವರಾಜ ತಂಗಡಗಿ ಹಾಗೂ ಪಿ.ಎಂ. ನರೇಂದ್ರಸ್ವಾಮಿ ಕೂಡ ಈ ಪ್ರಭಾವಿ ಖಾತೆ ದಕ್ಕಿಸಿಕೊಳ್ಳಲು ಭಾರಿ ಪ್ರಯತ್ನ ನಡೆಸುತ್ತಿದ್ದಾರೆ.
ಕಾವೇರಿ ನೀರು ಹಂಚಿಕೆ, ಮಹದಾಯಿ ಯೋಜನೆ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಆಗಸ್ಟ್ 13ರಂದು ‘ಕರ್ನಾಟಕ ಬಂದ್’ಗೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಗಡಿ, ಜಲ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಸರ್ಕಾರ ಹಾಗೂ ಕೇಂದ್ರ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
2,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗೆ 0.3% ರಿಂದ 0.5% ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿಗೆ ಚಿಂತಿಸಿದೆ. ರೂ. 1.5 ಕೋಟಿಗಿಂತ ಹೆಚ್ಚು ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಇದು ಅನ್ವಯಿಸಲಿದ್ದು, ಸಾಮಾನ್ಯ ಗ್ರಾಹಕರು ಮತ್ತು ಸಣ್ಣ ವರ್ತಕರಿಗೆ ಸಂಪೂರ್ಣ ವಿನಾಯಿತಿ ಸಿಗಲಿದೆ.
ಬಾಗೇಪಲ್ಲಿ ಶಾಸಕ S.N.ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡರು ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ತಾಲೂಕು ಬಂದ್‌ಗೆ ಕರೆ ನೀಡಿದ್ದಾರೆ. ಪ್ರತಿಭಟನೆ ವೇಳೆ ಅಂಬರೀಶ್ ಎಂಬ ಬೆಂಬಲಿಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಮೋಜು-ಮಸ್ತಿಗಾಗಿ ಕಟ್ಟಡದ ಸೆಂಟ್ರಿಂಗ್ ಶೀಟ್, ಬೋರ್‌ವೆಲ್ ಕೇಬಲ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಬಡಗರಹಳ್ಳಿಯ ಪುನೀತ್ ಗೌಡ ಮತ್ತು ಕುಮಾರ್‌ನನ್ನು ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ 289 ಸೆಂಟ್ರಿಂಗ್ ಶೀಟ್, 40 ಕೆಜಿ ಕೇಬಲ್, ಬೈಕ್ ಮತ್ತು ಗುಡ್ಸ್ ವಾಹನ ಜಪ್ತಿ ಮಾಡಲಾಗಿದ್ದು, ಒಟ್ಟು 7 ಪ್ರಕರಣಗಳು ಬಯಲಾಗಿವೆ.
ಯಾದಗಿರಿಯ ಕಡೇಚೂರ್ ಕೈಗಾರಿಕಾ ಪ್ರದೇಶದ ‘ಸಿಲ್ ಲ್ಯಾಬೋರೇಟರಿ’ ಔಷಧ ಕಾರ್ಖಾನೆಯಲ್ಲಿ ಕೆಮಿಕಲ್ ಸೋರಿಕೆಯಾಗಿ, ವಿಷಗಾಳಿ ಉಸಿರಾಡಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಅಸ್ವಸ್ಥಗೊಂಡು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.
Published On - 9:15 am, Wed, 5 August 26