TV9 Kannada News Highlights: ಹೆಚ್.ಡಿ. ದೇವೇಗೌಡ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಕಣ್ಣೀರು ಹಾಕಿದ ದೇವೇಗೌಡ
Karnataka News Today Highlights: ಕರ್ನಾಟಕದಾದ್ಯಂತ ಬರಗಾಲದ ತಲ್ಲಣ ಸೃಷ್ಟಿಯಾಗಿದ್ದು, ನೀರಿಗಾಗಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಚಿತ್ರದುರ್ಗ, ಯಾದಗಿರಿಯಲ್ಲೂ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ. ಮತ್ತೊಂದೆಡೆ, ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾಕಿ ಉಗ್ರರು ಬಹುಮಾನ ಘೋಷಿಸಿದ್ದಾರೆ. ಇಂದಿನ ರಾಜ್ಯದ ಹವಾಮಾನ ಮುನ್ಸೂಚನೆ ಹಾಗೂ ದೇಶ-ವಿದೇಶದ ಪ್ರಮುಖ ಸುದ್ದಿಗಳ ಕ್ಷಣಕ್ಷಣದ ಅಪ್ಡೇಟ್ಸ್ ಇಲ್ಲಿದೆ.

Breaking News Today Highlights in Kannada: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ರೈತರು ಹಾಗೂ ಕರಾವೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸರ್ಕಾರ ಕೇವಲ ಕುಡಿಯುವ ನೀರು ಬಿಡುಗಡೆ ಮಾಡಿದೆ. ಇತ್ತ ಯಾದಗಿರಿಯಲ್ಲಿ ಒಣಗುತ್ತಿರುವ ಬೆಳೆಗಳು, ಚಿತ್ರದುರ್ಗದಲ್ಲಿ ಬತ್ತಿದ ಬೋರ್‌ವೆಲ್‌ಗಳು ಹಾಗೂ ವಿಜಯನಗರದ ಮಳೆ ಅಭಾವ ರೈತರನ್ನು ಕಂಗಾಲುಗೊಳಿಸಿದೆ. ಬರ ಪರಿಹಾರಕ್ಕಾಗಿ ಡಿಸಿಎಂ ಪರಮೇಶ್ವರ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇನ್ನು ಕೊಪ್ಪಳದಲ್ಲಿ ಮಳೆಗಾಗಿ ಹರಕೆ ಹೊತ್ತ ಬೆನ್ನಲ್ಲೇ ಮಳೆರಾಯ ತಂಪೆರೆದಿದ್ದಾನೆ. ಕರ್ನಾಟಕದ ಕೆಲವೆಡೆ ವಾಡಿಕೆಗಿಂತ 3-5 ಡಿಗ್ರಿ ಹೆಚ್ಚಿರಲಿದೆ ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇತ್ತ ಜಾಗತಿಕವಾಗಿ, ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾಕಿ ಉಗ್ರ ಸಂಘಟನೆ 84 ಕೋಟಿ ರೂ. ಬಹುಮಾನ ಘೋಷಿಸಿದ್ದು ತೀವ್ರ ಆತಂಕ ಸೃಷ್ಟಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಆಸ್ಪತ್ರೆ ಬಳಿ ಕಣ್ಣೀರು ಹಾಕಿದ ದೇವೇಗೌಡ; ಇನ್ನು ಆ ದೇವರೇ ಕಾಪಾಡಬೇಕು ಎಂದ ಹೆಚ್‌ಡಿಕೆ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸದಸ್ಯರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ತೀವ್ರ ಗದ್ಗದಿತರಾಗಿ ಕಣ್ಣೀರು ಹಾಕಿದ್ದಾರೆ. ವೈದ್ಯರು ತಮ್ಮ ಕೈಮೀರಿ ಪ್ರಯತ್ನಿಸಿದ್ದಾರೆ, ಇನ್ನು ದೇವರೇ ಕಾಪಾಡಬೇಕು ಎಂದು ಕುಮಾರಸ್ವಾಮಿ ಭಾವುಕರಾಗಿದ್ದಾರೆ.
-
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆ ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಹವಾಮಾನ ಇಲಾಖೆಯು ನಾಳೆಗೆ ‘ಆರೆಂಜ್ ಅಲರ್ಟ್’ (Orange Alert) ಘೋಷಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ (PU) ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಅಧಿಕೃತ ಆದೇಶ ಹೊರಡಿಸಿದೆ.
-
-
ಕರ್ತವ್ಯದಲ್ಲಿದ್ದಾಗಲೇ ಕೆಎಸ್ಆರ್‌ಟಿಸಿ ಕಂಡಕ್ಟರ್‌ಗೆ ತೀವ್ರ ಹೃದಯಾಘಾತ
ಚಲಿಸುತ್ತಿದ್ದ ಸರ್ಕಾರಿ ಬಸ್‌ನಲ್ಲೇ ತೀವ್ರ ಹೃದಯಾಘಾತಕ್ಕೊಳಗಾದ ನಿರ್ವಾಹಕರೊಬ್ಬರನ್ನು ಬದುಕಿಸಲು ಚಾಲಕನು ಸಮಯಪ್ರಜ್ಞೆ ಮೆರೆದು ನೇರವಾಗಿ ಬಸ್ ಅನ್ನೇ ಆಸ್ಪತ್ರೆಯ ಆವರಣಕ್ಕೆ ನುಗ್ಗಿಸಿದರೂ, ಚಿಕಿತ್ಸೆ ಫಲಿಸದೇ ನಿರ್ವಾಹಕ ಕೊನೆಯುಸಿರೆಳೆದಿರುವ ಶೋಚನೀಯ ಘಟನೆ ಹುಬ್ಬಳ್ಳಿ ನಗರದಲ್ಲಿ ವರದಿಯಾಗಿದೆ.
-
ಬರೋಬ್ಬರಿ 339 ಕಾಮಗಾರಿ ಮಾಡದೇ 72 ಕೋಟಿ ಲೂಟಿ: KRIDL ಇಂಜಿನಿಯರ್ ಝೆಡ್.ಎಂ. ಚಿಂಚೋಳ್ಕರ್ ಅಮಾನತು
ಯಾವುದೇ ಕಾಮಗಾರಿಗಳನ್ನು ಮಾಡದೆಯೇ ನಕಲಿ ಬಿಲ್ ಸೃಷ್ಟಿಸಿ ಬರೋಬ್ಬರಿ 72 ಕೋಟಿ ರೂಪಾಯಿ ಸರ್ಕಾರದ ಹಣವನ್ನು ಅವ್ಯವಹಾರ ನಡೆಸಿದ ಆರೋಪದಡಿ ಜೈಲು ಪಾಲಾಗಿರುವ ಕೆ.ಆರ್.ಐ.ಡಿ.ಎಲ್. (KRIDL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಝೆಡ್.ಎಂ. ಚಿಂಚೋಳ್ಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಲೋಕಾಯುಕ್ತ ಪೊಲೀಸರು ಬಂಧಿಸಿದ ಬೆನ್ನಲ್ಲೇ KRIDL ವ್ಯವಸ್ಥಾಪಕ ನಿರ್ದೇಶಕರು (MD) ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
-
ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವತಿಗೆ ಸಹಾಯ ಮಾಡಲು ಹೋಗಿದ್ದಕ್ಕೆ ಹಿಂದೂ ಯುವಕನ ಮೇಲೆ ಭೀಕರ ಹಲ್ಲೆ
ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬಳಿಗೆ ಕಾಲೇಜು ಹಾಸ್ಟೆಲ್ ಪ್ರವೇಶಾತಿ ಪ್ರಕ್ರಿಯೆಗೆ ಸಹಾಯ ಮಾಡಲು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಹಿಂದೂ ಯುವಕನ ಮೇಲೆ 50ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಜನರು ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. “ಆಕೆ ನನಗೆ ತಂಗಿ ಇದ್ದಂತೆ” ಎಂದು ಯುವಕ ಗೋಗರೆದರೂ ಕೇಳದ ಉದ್ರಿಕ್ತ ಗುಂಪು ಧರ್ಮದ ಹೆಸರಿನಲ್ಲಿ ದಾಂಧಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
-
-
ಫಿಫಾ ವರ್ಲ್ಡ್ ಕಪ್ ಫೈನಲ್ ಹಿನ್ನೆಲೆ ಬೆಂಗಳೂರಲ್ಲಿ ಹೋಟೆಲ್, ರೆಸ್ಟೋರೆಂಟ್ ಅವಧಿ ವಿಸ್ತರಣೆ
ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾ ಹಬ್ಬವಾದ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ (FIFA World Cup) ಪ್ಲೇ-ಆಫ್ ಹಾಗೂ ಮಹಾ ಫೈನಲ್ ಪಂದ್ಯಗಳು ಜರುಗಲಿರುವ ಹಿನ್ನೆಲೆಯಲ್ಲಿ, ಸಿಲಿಕಾನ್ ಸಿಟಿಯ ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಕಾರ್ಯಾಚರಣೆಯ ಸಮಯವನ್ನು ವಿಸ್ತರಿಸಿ ವಿಶೇಷ ಆದೇಶ ಹೊರಡಿಸಿದೆ.
-
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಇಲ್ಲಿದೆ ನೋಡಿ ಸ್ಟೋರಿ
-
ಕರ್ನಾಟಕದ 4 ರೈಲ್ವೇ ನಿಲ್ದಾಣಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ಅವರು ಅಮೃತ ಭಾರತ್ ಯೋಜನೆಯಡಿ ನವೀಕೃತಗೊಂಡ ದೇಶದ 75 ರೈಲ್ವೇ ನಿಲ್ದಾಣಗಳನ್ನು ಉದ್ಘಾಟಿಸಿದ್ದು, ಇದರಲ್ಲಿ ಕರ್ನಾಟಕದ ಬಾದಾಮಿ, ಅಳ್ನಾವರ, ಕೊಪ್ಪಳ ಹಾಗೂ ಬಂಟ್ವಾಳ ನಿಲ್ದಾಣಗಳು ಕೂಡ ಸೇರಿವೆ. ಸ್ಥಳೀಯ ಸಂಸ್ಕೃತಿ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿ ನಿಲ್ದಾಣಗಳ ಕಟ್ಟದ ವಿನ್ಯಾಸ ಮಾಡಲಾಗಿದ್ದು, ವಿಶ್ವ ದರ್ಜೆಯ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಇವು ಹೊಂದಿವೆ. ಜೊತೆಗೆ ಡಿಜಿಟಲ್ ಸ್ಪರ್ಶ ಪಡೆದಿವೆ. ಇಲ್ಲಿದೆ ನೋಡಿ ಸ್ಟೋರಿ
-
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಸುತ್ತೇವೆ
ಕರ್ನಾಟಕದಲ್ಲಿ ಬಹು ದಿನಗಳಿಂದ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಬಹು ನಿರೀಕ್ಷಿತ ಸಚಿವ ಸಂಪುಟ ಪುನಾರಚನೆ ಅಥವಾ ಬದಲಾವಣೆ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಸುಪ್ರೀಂಕೋರ್ಟ್ ನೀಡಿರುವ ಗಡುವಿನ ಒಳಗಾಗಿ ಜಿ.ಬಿ.ಎ (ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಇತರ ಸ್ಥಳೀಯ ಸಂಸ್ಥೆಗಳ) ಚುನಾವಣೆಗಳನ್ನು ನಡೆಸಿ ಮುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಸಚಿವ ಸಂಪುಟದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ದೆಹಲಿ ನಾಯಕರು ಈ ಬಗ್ಗೆ ನಮಗೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಮತ್ತು ಅಗತ್ಯ ಮಾರ್ಗದರ್ಶನಗಳನ್ನು ಕೊಟ್ಟಿದ್ದಾರೆ.”
-
ಹೊಸ ಬಾಳಿಗೆ ಹೆಜ್ಜೆ ಇಟ್ಟ 15 ದಿನಕ್ಕೇ ನವ ವಧು ದುರಂತ ಅಂತ್ಯ
ನೂತನ ಜೀವನದ ನೂರಾರು ಕನಸುಗಳೊಂದಿಗೆ ಹೊಸ ಸಂಸಾರಕ್ಕೆ ಹೆಜ್ಜೆ ಇಟ್ಟಿದ್ದ ನವ ವಧುವೊಬ್ಬಳು ಮದುವೆಯಾದ ಕೇವಲ 15 ದಿನಗಳಲ್ಲೇ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಅತ್ಯಂತ ಕರುಣಾಜನಕ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೆಲ್ಮೆಟ್ ಧರಿಸದೇ ಇರುವುದೇ ಈ ಸಾವಿಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
-
ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಾಟರಿ ದಂಧೆ
ವಿಶ್ವಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾದ ಮುರುಡೇಶ್ವರ ದೇವಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ನಕಲಿ ಅದೃಷ್ಟ ಡ್ರಾ ನಡೆಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವನ್ನು ಮುರುಡೇಶ್ವರ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಪ್ರಮುಖ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.
-
ರೌಡಿಶೀಟರ್ ಮಂಜೇಶ್ ಕೊಲೆ ಪ್ರಕರಣದ ಎ1 ಆರೋಪಿ ಪರಮೇಶ್ ಬಂಧನ
ಹಾಸನದ ರೌಡಿಶೀಟರ್ ಮಂಜೇಶ್ ಹತ್ಯೆ ಪ್ರಕರಣದ ಎ1 ಆರೋಪಿ, ನಟೋರಿಯಸ್ ರೌಡಿ ಪರಮೇಶ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 2012ರಿಂದ ನಡೆಯುತ್ತಿದ್ದ ಗ್ಯಾಂಗ್ ವಾರ್ ವೈರತ್ವದ ಹಿನ್ನೆಲೆಯಲ್ಲಿ ಜೂನ್ 7ರಂದು ಈ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಸದ್ಯ ಬಂಧಿತರ ಒಟ್ಟು ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
-
ಮುರ್ಡೇಶ್ವರ ದೇವಸ್ಥಾನದ ಹೆಸರಲ್ಲಿ ಲಾಟರಿ ವಂಚನೆ: ಆರೋಪಿ ಬಂಧನ
ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನದ ಹೆಸರನ್ನು ದುರುಪಯೋಗಪಡಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ “ಅದೃಷ್ಟ ಡ್ರಾ” ನಡೆಸಿ ಜನರಿಗೆ ವಂಚಿಸುತ್ತಿದ್ದ ಬೀದರ್ ಮೂಲದ ನರಸಿಂಗ್ (32) ಎಂಬಾತನನ್ನು ಮುರ್ಡೇಶ್ವರ ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
-
ಇಂದು ರಾತ್ರಿ ಬೆಂಗಳೂರಿಗೆ ಸಿಎಂ ವಾಪಸ್
ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮೊನ್ನೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ. ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಹೈಕಮಾಂಡ್ ನಡೆಸಿದ ಮಹತ್ವದ ಸಭೆಯಲ್ಲಿ ಅವರು ಭಾಗವಹಿಸಿ, ಸಂಪುಟ ಸುಧಾರಣೆ ಹಾಗೂ ಪಕ್ಷದ ಸಂಘಟನೆ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ.
-
ಹುಬ್ಬಳ್ಳಿ: ಕರ್ತವ್ಯದಲ್ಲಿದ್ದ ಬಸ್ ಕಂಡಕ್ಟರ್ ಹೃದಯಾಘಾತದಿಂದ ಸಾವು
ಕೂಡಲಸಂಗಮದಿಂದ ಮಂಗಳೂರಿಗೆ ಹೋಗುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿರ್ವಾಹಕ ಅಯ್ಯಪ್ಪ ಬೆನ್ನೂರು (51) ಅವರಿಗೆ ಹೃದಯಾಘಾತ ಸಂಭವಿಸಿದೆ. ಚಾಲಕ ತಕ್ಷಣವೇ ಬಸ್ ಅನ್ನು ನೇರವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಲಾಯಿಸಿ ಬದುಕಿಸಲು ಶ್ರಮಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಗಲಕೋಟೆ ಜಿಲ್ಲೆ ಅಮೀನಗಡ ನಿವಾಸಿಯಾದ ಅಯ್ಯಪ್ಪ ಮೃತಪಟ್ಟಿದ್ದಾರೆ.
-
‘ಬಾಸ್’ ಸಿನಿಮಾ ಬಿಡುಗಡೆಗೆ ಇದ್ದ ಅಡೆತಡೆ ನಿವಾರಣೆ: ಹೈಕೋರ್ಟ್‌ನಲ್ಲಿ ಅರ್ಜಿ ವಜಾ
ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಕಥೆಯನ್ನೇ ಹೋಲುತ್ತದೆ ಎಂಬ ವಿವಾದಕ್ಕೆ ಕಾರಣವಾಗಿದ್ದ ‘ಬಾಸ್’ ಸಿನಿಮಾ ಬಿಡುಗಡೆಗೆ ಇದ್ದ ಅಡೆತಡೆ ನಿವಾರಣೆಯಾಗಿದೆ. ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ತನೀಷ್ ಶಿವಣ್ಣ ನಟನೆಯ ಹಾಗೂ ಲವ್ ನಿರ್ದೇಶನದ ಈ ಚಿತ್ರತಂಡ ಶೀಘ್ರದಲ್ಲೇ ಸಿನಿಮಾ ತೆರೆಗೆ ತರಲು ಸಜ್ಜಾಗಿದೆ.
-
ಕುಂದಾಪುರ: ಗ್ರಾ.ಪಂ. ಅಧಿಕಾರಿಗೆ ಜಾತಿನಿಂದನೆ, ತಂದೆ-ಮಗನ ಬಂಧನ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಎಸ್‌ಐಆರ್ ಫಾರಂ ಕೇಳಿದ ಗ್ರಾಮ ಆಡಳಿತ ಅಧಿಕಾರಿ ಪ್ರಕಾಶ್ ನಾಯ್ಕ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ ಆರೋಪದ ಮೇಲೆ ಪಳ್ಳಿ ಸುಲೇಮಾನ್ ಮತ್ತು ಆತನ ಮಗ ಶಫಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
-
ಶಿರಾ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಭರ್ಜರಿ ದಾಳಿ
ಇ-ಖಾತೆ, ಇ-ಸ್ವತ್ತು, ಹಕ್ಕುಪತ್ರ ವರ್ಗಾವಣೆ ಹಾಗೂ ಕಟ್ಟಡ ಪರವಾನಿಗೆ ನೀಡಲು ಭ್ರಷ್ಟಾಚಾರ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಶಿರಾ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಬೆಳಗ್ಗೆ 11:30ಕ್ಕೆ ದಾಳಿ ನಡೆಸಿದ್ದಾರೆ. ತುಮಕೂರು ಲೋಕಾಯುಕ್ತ ಎಸ್‌ಪಿ ನೇತೃತ್ವದಲ್ಲಿ ಇಬ್ಬರು ಡಿವೈಎಸ್‌ಪಿ, ನಾಲ್ವರು ಇನ್ಸ್‌ಪೆಕ್ಟರ್ ಸೇರಿದಂತೆ 10ಕ್ಕೂ ಹೆಚ್ಚು ಸಿಬ್ಬಂದಿ ಕಚೇರಿಯ ಪ್ರಮುಖ ದಾಖಲಾತಿಗಳನ್ನು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
-
ಮಂಡ್ಯ: ಇಂದು ಶ್ರೀರಂಗಪಟ್ಟಣಕ್ಕೆ ಯತ್ನಾಳ್ ಭೇಟಿ, ಬಿಗಿ ಭದ್ರತೆ
ವಿವಾದಿತ ಜಾಮಿಯಾ ಮಸೀದಿ (ಹನುಮ ದೇಗುಲ) ಹಿನ್ನೆಲೆಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇಂದು ಮಧ್ಯಾಹ್ನ 2:30ಕ್ಕೆ ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರ ಈ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮಸೀದಿ ಹಾಗೂ ದೇಗುಲದ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.
-
ಅಪಹರಣ ಪ್ರಕರಣ: ಮೂವರು ಆರೋಪಿಗಳ ಅರ್ಜಿ ಹೈಕೋರ್ಟ್ ವಜಾ
ಕೆ.ಆರ್.ನಗರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ರದ್ದು ಕೋರಿ ಆರೋಪಿಗಳಾದ ಸುಜಯ್, ಮಧು ಮತ್ತು ಮನುಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆರೋಪಿಗಳ ಪಾತ್ರದ ಕುರಿತು ಸಾಕ್ಷ್ಯ ವಿಚಾರಣೆ ಅಗತ್ಯವೆಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
-
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕೊಲೆ, ಆರೋಪಿ ಬಂಧನ
ದಕ್ಷಿಣ ಕನ್ನಡದ ಬಂಟ್ವಾಳದ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಚೇತನ್ ಎಂಬಾತ ತಲ್ವಾರ್‌ನಿಂದ ಕೊಚ್ಚಿ ಕೊಂದಿದ್ದಾನೆ. ಪ್ರೀತಿ ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿದ ಬಳಿಕ ಆಕೆಯ ತಂದೆಗೆ ಕರೆ ಮಾಡಿ ತಿಳಿಸಿದ್ದ ಪಾಗಲ್ ಪ್ರೇಮಿಯನ್ನು ಪೊಲೀಸರು ಕಾರು ಸಮೇತ ಬಂಧಿಸಿದ್ದಾರೆ. ಮತ್ತಷ್ಟು ಓದಿ
-
ದೇವನಹಳ್ಳಿ: ಹೆರಿಗೆಗೆ 10,000 ರೂ. ಲಂಚ ಕೇಳಿದ ಸರ್ಕಾರಿ ವೈದ್ಯನ ವಿರುದ್ಧ ಆಕ್ರೋಶ
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ವೈದ್ಯ ರಾಮಚಂದ್ರ 10,000 ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ. ಹಣ ನೀಡದಿದ್ದಕ್ಕೆ ಕಿರುಕುಳ ನೀಡಿದ ವೈದ್ಯನ ವಿರುದ್ಧ ನವಜಾತ ಶಿಶುವಿನೊಂದಿಗೆ ಬಾಣಂತಿ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಪ್ರತಿಭಟಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
-
ಜಿಂದ್‌ನಲ್ಲಿ ದೇಶದ ಮೊದಲ ‘ಹೈಡ್ರೋಜನ್ ರೈಲಿ’ಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸಲಿರುವ ಭಾರತದ ಮೊಟ್ಟಮೊದಲ ‘ಹೈಡ್ರೋಜನ್ ಚಾಲಿತ ರೈಲಿ’ಗೆ ಹಸಿರು ನಿಶಾನೆ ತೋರಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಸಂಪೂರ್ಣ ಸ್ಥಳೀಯವಾಗಿ ತಯಾರಾದ ಈ ಪರಿಸರಸ್ನೇಹಿ ರೈಲು ಕೇವಲ ನೀರಿನ ಆವಿಯನ್ನು ಹೊರಸೂಸಲಿದ್ದು, ಶೂನ್ಯ ಇಂಗಾಲದ ಹೊರಸೂಸುವಿಕೆ ಹೊಂದಿದೆ. ಈ ಸಾಧನೆಯೊಂದಿಗೆ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದ ನಂತರ ಹೈಡ್ರೋಜನ್ ರೈಲು ಹೊಂದಿದ ವಿಶ್ವದ ಆಯ್ದ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ವೀಡಿಯೋ ನೋಡಿ
-
ಕಲಬುರಗಿ: ಖಾಸಗಿ ಶಾಲಾ ಬಸ್ ಹರಿದು ಐದು ವರ್ಷದ ಬಾಲಕ ಸಾವು
ಕಲಬುರಗಿಯ ಅಂಬಿಕಾ ನಗರದಲ್ಲಿ ರಸ್ತೆ ದಾಟುತ್ತಿದ್ದ ವೇದಾಂತ್ ಮಾಂಗ್ (5) ಎಂಬ ಬಾಲಕನ ಮೇಲೆ ಖಾಸಗಿ ಶಾಲಾ ಬಸ್ ಹರಿದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಸಂಚಾರಿ-1 ಠಾಣೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಜಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
-
Uttara Kannada Rain update: ಭಾರಿ ಮಳೆಗೆ ಗುಡ್ಡ ಕುಸಿತ, ಗೋಕರ್ಣ-ತದಡಿ ರಸ್ತೆ ಸಂಪರ್ಕ ಬಂದ್
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಗೋಕರ್ಣ-ತದಡಿ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಇದರಿಂದಾಗಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಸ್ಥಳದಲ್ಲಿ ರಸ್ತೆಗೆ ಬಿದ್ದಿರುವ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸಲಾಗಿದೆ.
-
ಚಾಮುಂಡಿಬೆಟ್ಟದಲ್ಲಿ ತಾಯಿ ದರ್ಶನ ಪಡೆದ ವಿಜಯಲಕ್ಷ್ಮಿ ದರ್ಶನ್
ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಪ್ರತಿ ವರ್ಷ ಕುಟುಂಬ ಸಮೇತ ಬರುತ್ತಿದ್ದ ಅವರು, ಈ ಬಾರಿ ದರ್ಶನ್ ಅನುಪಸ್ಥಿತಿಯಲ್ಲಿ ವಿವಿಐಪಿ ಸಾಲಿನಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
-
ಚಾಮುಂಡಿಬೆಟ್ಟದಲ್ಲಿ ಸಿಎಂ ಪತ್ನಿ ಉಷಾ ಶಿವಕುಮಾರ್ ಹರಕೆ ಸಲ್ಲಿಕೆ
ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿಗೆ ಸೀರೆ ಹರಕೆ ತೀರಿಸಿದ್ದಾರೆ. ಪತಿ ಸಿಎಂ ಆದ ಹಿನ್ನೆಲೆಯಲ್ಲಿ ತಾಯಿಯ ಮೂಲ ವಿಗ್ರಹಕ್ಕೆ ಪಿಂಕ್ ಮತ್ತು ಸಿಮೆಂಟ್ ಬಣ್ಣದ ರೇಷ್ಮೆ ಸೀರೆ ಉಡಿಸಿ ವಿಶೇಷ ಪೂಜೆ ಸಲ್ಲಿಸಿದರು.
-
ತುಮಕೂರು: ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ, ಇಬ್ಬರು ಸಾವು
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಎನ್‌ಎಚ್-48ರಲ್ಲಿ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿಯಾಗಿ ಛತ್ತೀಸ್‌ಗಢದ ಬಾರಿ ಲಾಲ್ (30) ಮತ್ತು ಗೋಲು (35) ಮೃತಪಟ್ಟಿದ್ದಾರೆ. ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದಾಗ ಮುಂಜಾನೆ ಈ ಅಪಘಾತ ಸಂಭವಿಸಿದ್ದು, ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಯುಎಸ್ ಚುನಾವಣೆ: ವಿದೇಶಿ ಹಸ್ತಕ್ಷೇಪದ ಬಗ್ಗೆ ಟ್ರಂಪ್ ಆರೋಪ
ಅಮೆರಿಕದ 2020ರ ಚುನಾವಣೆಯಲ್ಲಿ ಚೀನಾ, ರಷ್ಯಾ ಮತ್ತು ಇರಾನ್ ಹಸ್ತಕ್ಷೇಪ ಮಾಡಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಚೀನಾವು 220 ಮಿಲಿಯನ್ ಮತದಾರರ ದತ್ತಾಂಶ ಕಳವು ಮಾಡಿದ್ದು, ಇದಕ್ಕೆ ಎಫ್‌ಬಿಐ ಸೇರಿದಂತೆ ಸ್ಥಳೀಯ ಗುಪ್ತಚರ ಸಂಸ್ಥೆಗಳು ಸಹಕರಿಸಿವೆ ಎಂದು ವೈಟ್‌ಹೌಸ್‌ನಲ್ಲಿ ಟ್ರಂಪ್ ಹೇಳಿಕೆ ನೀಡಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.
-
Uttara Kannada Rain update: ಅಂಕೋಲಾ ತಾಲೂಕಿನ ಶಾಲೆಗಳಿಗೆ ಇಂದು ರಜೆ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾರಿ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು (ಜುಲೈ 17) ರಜೆ ಘೋಷಿಸಿ ಅಂಕೋಲಾ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಭಾರಿ ಮಳೆಯಿಂದಾಗಿ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ.
-
ನೀಟ್ ಯುಜಿ 2026 ಮರುಪರೀಕ್ಷೆ ಫಲಿತಾಂಶ ಪ್ರಕಟ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ್ದ ನೀಟ್ ಯುಜಿ ಮರುಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 20 ಲಕ್ಷ ಅಭ್ಯರ್ಥಿಗಳಲ್ಲಿ 11.21 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಆರ್ಯನ್ ಗುಪ್ತಾ ಮತ್ತು ಪಂಶುಲ್ ಬನ್ಸಾಲ್ ಜಂಟಿ ಪ್ರಥಮ ಸ್ಥಾನ ಗಳಿಸಿದ್ದು, ಶೇ.58ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ಕೌನ್ಸೆಲಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ. ಮತ್ತಷ್ಟು ಓದಿ
-
ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಡಗರ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ಪೂಜೆ ಆರಂಭವಾಗಿದೆ. ಭಕ್ತರಿಗಾಗಿ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಿದ್ದು, ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಒಂದು ಲಕ್ಷ ಲಾಡು ಪ್ರಸಾದ ಸಿದ್ಧಪಡಿಸಲಾಗಿದ್ದು, ಸುಗಮ ದರ್ಶನಕ್ಕಾಗಿ ಜಿಲ್ಲಾಡಳಿತದಿಂದ ಸೂಕ್ತ ಭದ್ರತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವೀಡಿಯೋ ನೋಡಿ
Published On - Jul 17,2026 8:18 AM




