ಅಂತೂ ಬೆಂಗಳೂರಲ್ಲಿ ಮನೆ ಸಿಕ್ತು ಎಂದು ಫೋಟೋ ಹಂಚಿಕೊಂಡವನಿಗೆ ರೂಮಾ, ಜೈಲಾ ಎಂದ ನೆಟ್ಟಿಗರು!
ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಬಜೆಟ್‌ಗೆ ತಕ್ಕಂತೆ ಮನೆ ಸಿಗುವುದು ಕಷ್ಟ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ವೆಲ್ ಫರ್ನಿಶಡ್ ಮನೆ ಸಿಕ್ಕಿರುವ ಖುಷಿಯಲ್ಲಿ ಟ್ವೀಟ್ ಮಾಡಿದ್ದಾನೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ಫರ್ನಿಶಡ್ ಮನೆ ಸಿಕ್ಕಿರುವ ಖುಷಿಯಲ್ಲಿ ಟ್ವಿಟ್ಟರ್ನಲ್ಲಿ ಖುಚಿ ಹಂಚಿಕೊಂಡಿರುವ ವ್ಯಕ್ತಿ
- ಅಂತೂ ಬೆಂಗಳೂರಲ್ಲಿ ಮನೆ ಸಿಕ್ತು ಎಂದು ಚಿಕ್ಕ ರೂಮಿನ ಫೋಟೋ
- ಮನೆ ಫೋಟೋ ಹಂಚಿಕೊಂಡವನಿಗೆ ರೂಮಾ, ಜೈಲಾ ಎಂದು ಕಾಲೆಳೆದ ನೆಟ್ಟಿಗರು!
ಬೆಂಗಳೂರು: ಕೆಲಸ, ವಿದ್ಯಾಭ್ಯಾಸ, ವ್ಯಾಪಾರ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿಗೆ ಆಗಮಿಸುವವರ ಸಂಖ್ಯೆ ಹೆಚ್ಚೇ ಇದೆ. ಬಂದವರು ಪಿಜಿ, ಬಾಡಿಗೆ ಮನೆ ಹುಡುಕಿ ಜೀವನ ಕಟ್ಟಿಕೊಳ್ಳುತ್ತಾರೆ. ಆದರೆ ಬೆಂಗಳೂರಲ್ಲಿ ಇದೀಗ ಬಾಡಿಗೆ ಮನೆ ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ. ಬೆಂಗಳೂರಿನಲ್ಲಿ ಕೆಲಸ ಹುಡುಕುವುದಕ್ಕಿಂತ ಮನೆ ಹುಡುಕುವುದೇ ಒಂದು ದೊಡ್ಡ ತಲೆ ನೋವು. ಅದರಲ್ಲೂ ಬ್ಯಾಚುಲರ್ಸ್‌ಗೆ ಮನೆ ಹುಡುಕುವಷ್ಟರಲ್ಲೇ ಜೀವನವೇ ಬೇಡ ಅನ್ನಿಸಿಬಿಡುತ್ತೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಸಿಲಿಕಾನ್ ಸಿಟಿಯಲ್ಲಿ ನಂಗೆ ಅಂತೂ ಇಂತೂ ಫುಲ್ ಫರ್ನಿಶಡ್ ಮನೆ ಸಿಕ್ಕಿದೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ನಾನಾ ರೀತಿಯಾಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: House For Rent: ಬೆಂಗಳೂರಲ್ಲಿ ಬಾಡಿಗೆಗೆ ಮನೆ ಬೇಕೆ? ನೀವು ಐಐಟಿ, ಐಐಎಂನಲ್ಲಿ ಓದಿರಬೇಕು!
ಅಂತೂ ಕೊನೆಗೆ ಫರ್ನಿಶಡ್ ಮನೆ ಸಿಕ್ತು ಎಂದು ಮಂಥನ್ ಗುಪ್ತಾ ಎನ್ನುವರು ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಸಣ್ಣ ಬೀರು ಮತ್ತು ಟೇಬಲ್ ಹೊಂದಿರುವ ಪುಟ್ಟ ರೂಮಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಗೇಟೆಡ್ ಸೊಸೈಟಿ ಮತ್ತು 24×7 ಭದ್ರತೆಯಿದೆ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಇದಕ್ಕೆ 1,758 ಲೈಕ್ಸ್ ಬಂದಿದ್ದು, ಇನ್ನು ಹಲವರು ಕಮೆಂಟ್ಗಳ ಮೂಲಕ ಮಂಥನ್ ಗುಪ್ತಾನ ಕಾಲೆಳೆದಿದ್ದಾರೆ.
ಬಳಕೆದಾರರೊಬ್ಬರು ‘ಅಪಾರ್ಟ್‌ಮೆಂಟ್ ಮಾಲೀಕರಿಗೆ ರೂಮ್‌ಮೇಟ್ ಅಗತ್ಯವಿದೆಯೇ ‘ ಎಂದು ಪ್ರಶ್ನಿಸಿದ್ದರೆ, ಮತ್ತೊಬ್ಬ ವ್ಯಕ್ತಿ ‘ಇದು ಪರಿಪೂರ್ಣ ಜೈಲಿನಂತಿದೆ ಎಂದು ಕಮೆಂಟ್ ಮೂಲಕ ಕಾಲೆಳೆದಿದ್ದಾರೆ. ಇನ್ನೊಬ್ಬರು ರೂಮಿನಲ್ಲಿ ಏನಿಲ್ಲದಿದ್ದರೂ ಸೂರ್ಯನ ಬೆಳಕಂತೂ ಚೆನ್ನಾಗಿದೆ ಅನ್ಸುತ್ತೆ ಎಂದಿದ್ದಾರೆ. ಮತ್ತೊಬ್ಬರು ‘ನನ್ನ ಕೋಣೆ ಇದಕ್ಕಿಂತಲೂ ಚಿಕ್ಕದಾಗಿದೆ ನೀವು ಲಕ್ಕಿ’ ಎಂದು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ಮುಂಬೈ, ಗುರಂಗಾವ್ ಮೊದಲಾದ ನಗರಗಳಲ್ಲೂ ಜನರು ಇಂಥಹದ್ದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ




