
ಬೆಂಗಳೂರು, ಆಗಸ್ಟ್ 23: ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ನಿಂದ ಸಿದ್ಧತೆ ನಡೆದಿದೆ. ಕಳೆದ 5 ದಿನಗಳಿಂದ ವಿಧಾನಸಭೆ, ವಿಧಾನಪರಿಷತ್ನಲ್ಲಿ ನಿರಂತರ ಧರಣಿ ನಡೆಸುತ್ತಿರುವ ಮೈತ್ರಿ ಪಕ್ಷಗಳು ನಾಳೆಯೂ ಸದನದಲ್ಲಿ ಧರಣಿ ಮುಂದುವರಿಸಲು ತೀರ್ಮಾನಿಸಿವೆ. ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಮೈತ್ರಿ ನಾಯಕರು ರೂಪರೇಷೆಗೆ ನಿರ್ಧರಿಸಿದ್ದಾರೆ. ವಿಪಕ್ಷ ನಾಯಕ ಅಶೋಕ್ ಜತೆ ಮಾತುಕತೆ ಬಳಿಕ JDS ಶಾಸಕರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹೋರಾಟ ಮುಂದುವರಿಸಲು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಾಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕೋದಾಗಿ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿದ್ದು ಜಗಜ್ಜಾಹೀರಾಗಿದ್ದು, ಆ ಬಗ್ಗೆ ದಾಖಲೆ ನೀಡಿದ್ದೇವೆ. ನಾಳೆ ಬೆಳಗ್ಗೆ 9.30ಕ್ಕೆ ಫ್ರೀಡಂಪಾರ್ಕ್ನಿಂದ ಪ್ರತಿಭಟನಾ ಱಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಪ್ರತಿಭಟನಾ ಱಲಿ ಬಗ್ಗೆ ನಿನ್ನೆ ಹೆಚ್ಡಿಕೆ ಜೊತೆಗೂ ಚರ್ಚೆ ನಡೆಸಿದ್ದೇವೆ. ಅವರು ಕೂಡ ಪ್ರತಿಭಟನೆ ಮುಂದುವರಿಸಲು ಹೇಳಿದ್ದಾರೆ. ನಮ್ಮ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ನವರು ಧರಣಿ ಮಾಡಿದ್ದಾರೆ. ಅಕ್ರಮದ ಬಗ್ಗೆ ಜನ ಧ್ವನಿಎತ್ತಿದ್ದಕ್ಕೆ ಕಾಂಗ್ರೆಸ್ ಧರಣಿ ಮಾಡ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ಕೊಡ್ಬಹುದಾ? ಒಂದು ವೇಳೆ ಕೊಟ್ರೆ ಏನಾಗುತ್ತೆ?
ಮತ್ತೊಂದೆಡೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಪಾದಯಾತ್ರೆಗೆ ನಿರ್ಧರಿಸಿರುವ ಬಿಜೆಪಿಗರು, ಎರಡು ಮಾರ್ಗದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂಬಂಧ ಆಗಸ್ಟ್ 26ರಂದು ದಿನಾಂಕ ಮತ್ತು ಮಾರ್ಗವನ್ನು ಬಿಜೆಪಿ ಅಂತಿಮಗೊಳಿಸಲಿದೆ. ಸದ್ಯ ಜಗಳೂರು-ಕೂಡ್ಲಿಗಿ-ಸಂಡೂರು-ಕಂಪ್ಲಿ- ಬಳ್ಳಾರಿ ಗ್ರಾಮಾಂತರ- ಬಳ್ಳಾರಿ ಮತ್ತು ಜಗಳೂರು-ಮೊಳಕಾಲ್ಮೂರು-ಚಳ್ಳಕೆರೆ- ಕೂಡ್ಲಿಗಿ-ಬಳ್ಳಾರಿ ಗ್ರಾಮಾಂತರ- ಬಳ್ಳಾರಿ ಎಂಬ ಎರಡು ಮಾರ್ಗದ ಆಯ್ಕೆ ಮುಂದಿಟ್ಟುಕೊಳ್ಳಲಾಗಿದ್ದು, ಇದರಲ್ಲಿ ಒಂದು ಫೈನಲ್ ಆಗಲಿದೆ. ಈ ಬಗ್ಗೆ ಶ್ರೀರಾಮುಲು ರಾಜ್ಯ ನಾಯಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ ವಿಚಾರ ಸಂಬಂಧ ಬಿಜೆಪಿಗರ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಕಿಡಿ ಕಾರಿದ್ದಾರೆ. ಬಿಜೆಪಿಯವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ವಿಷಯ ಇಲ್ಲ. ಕೇಂದ್ರ ಸರ್ಕಾರದ 23 ಮಂತ್ರಿಗಳ ಮೇಲೆ ಪ್ರಕರಣಗಳು ಇವೆ. ಹೀಗಾಗಿ ಬಿಜೆಪಿಯವರು ಸಚಿವ ನಾಗೇಂದ್ರ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ. ನಾಗೇಂದ್ರ ಆರೋಪಿ ಅಷ್ಟೆ ಅಪರಾಧಿ ಅಲ್ಲ. ನಾನು ಎಲ್ಲೇ ಹೋದರು ಉತ್ತರಿಸುವೆ, ಇದು ಪ್ರಜಾಪ್ರಭುತ್ವ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.